ಮಠದ ಉತ್ತರಾಧಿಕಾರಿ ನೇಮಿಸಲು ರಾಜಕಾರಣಿಗಳು ಹೋಗಲ್ಲ; ರಾಜಕೀಯಕ್ಕೆ ಮಠಾಧೀಶರು ಬರಬೇಡಿ: ಹೆಚ್.ವಿಶ್ವನಾಥ್
ಸ್ವಾಮೀಜಿ, ಸಾಧು ಸಂತರು ಕೂಡ ಸಂವಿಧಾನದಡಿ ಬರುತ್ತಾರೆ. ಸಂವಿಧಾನಕ್ಕಿಂತ ದೊಡ್ಡವರಿಲ್ಲ, ಸಂವಿಧಾನವೇ ಸಾರ್ವಭೌಮ. ಯಡಿಯೂರಪ್ಪ ಬದಲಾವಣೆಗೆ ಮುಖ್ಯ ಕಾರಣ ಭ್ರಷ್ಟಾಚಾರ. ಮಠಾಧೀಶರು ಬಸವಣ್ಣನವರನ್ನು ಓದಿದ್ದಾರೆಂದು ಭಾವಿಸುತ್ತೇನೆ: ವಿಶ್ವನಾಥ್
ಮೈಸೂರು: ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ವಿವಿಧ ಮಠಾಧೀಶರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೆನ್ನಿಗೆ ನಿಂತಿದ್ದು, ಬಿಎಸ್‌ವೈ ಹೋದರೆ ಶೂನ್ಯ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಮೈಸೂರಿನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ (BJP MLC H.Vishwanath), ಶೂನ್ಯ ಎಲ್ಲಿಯೂ ಇಲ್ಲ. ಸ್ವಾಮೀಜಿಗಳು ಶಿವೈಕ್ಯರಾದಾಗ ರಾಜಕಾರಣಿಗಳು ಮಾತಾಡ್ತಾರಾ? ಉತ್ತರಾಧಿಕಾರಿ ಬಗ್ಗೆ ರಾಜಕಾರಣಿಗಳು ಮಾತನಾಡುತ್ತಾರಾ? ಯಡಿಯೂರಪ್ಪ (BS Yediyurappa) ಅವರ ಗೌರವಯುತ ನಿರ್ಗಮನಕ್ಕೆ ಹೈಕಮಾಂಡ್ ಸೂಚಿಸಿದೆ. ಆದರೆ ಸ್ವಾಮೀಜಿಗಳು ಇದನ್ನು ಕ್ಲಿಷ್ಟ ಮಾಡ್ತಿದ್ದಾರೆ. ಬಿಎಸ್‌ವೈರನ್ನು ಅವಮಾನ, ಅಪಮಾನಕ್ಕೆ ಸಿಲುಕಿಸುತ್ತಿದ್ದಾರೆ. ರಾಜಕಾರಣ (Politics) ಎಂದೂ ಸ್ವಾಮೀಜಿಗಳ ಕೈಗೆ ಹೋಗಬಾರದು. ಸ್ವಾಮೀಜಿಗಳು (Religious Leaders) ನಡೆದಾಡುವ ದೇವರಾಗಬೇಕು, ನಡೆದಾಡುವ ರಾಜಕಾರಣಿಗಳಾಗಬಾರದು ಎಂದು ತಿರುಗೇಟು ನೀಡಿದ್ದಾರೆ.
ಸ್ವಾಮೀಜಿ, ಸಾಧು ಸಂತರು ಕೂಡ ಸಂವಿಧಾನದಡಿ ಬರುತ್ತಾರೆ. ಸಂವಿಧಾನಕ್ಕಿಂತ ದೊಡ್ಡವರಿಲ್ಲ, ಸಂವಿಧಾನವೇ ಸಾರ್ವಭೌಮ. ಯಡಿಯೂರಪ್ಪ ಬದಲಾವಣೆಗೆ ಮುಖ್ಯ ಕಾರಣ ಭ್ರಷ್ಟಾಚಾರ. ಮಠಾಧೀಶರು ಬಸವಣ್ಣನವರನ್ನು ಓದಿದ್ದಾರೆಂದು ಭಾವಿಸುತ್ತೇನೆ ಎಂದ ಅವರು ಬಸವಣ್ಣ ಅವರು ಬಿಜ್ಜಳನ ಆಸ್ಥಾನದಲ್ಲಿ ತೆಗೆದುಕೊಂಡ ಪ್ರತಿಜ್ಞಾವಿಧಿಯನ್ನು ಉದಾಹರಿಸಿದ್ದಾರೆ. ಬಸವಣ್ಣನ ಪ್ರತಿಜ್ಞಾವಿಧಿ ಎಲ್ಲರಿಗೂ ಮಾರ್ಗದರ್ಶನವಾಗುತ್ತೆ. ಆದರೆ, ಈಗ ಮಠಾಧೀಶರು ಜನರಿಗೆ ಯಾವ ಸಂದೇಶ ರವಾನಿಸುತ್ತಿದ್ದೀರಿ? ಭ್ರಷ್ಟಾಚಾರದ ಪರವಾಗಿ ಶ್ರೀಗಳು ಸಂದೇಶ ಕೊಡುತ್ತಿದ್ದೀರಾ? ಸ್ವಾಮೀಜಿಗಳು ಬೀದಿಗೆ ಬಂದು ಮಾತಾಡಿ ಅನ್ನೋದು ತಪ್ಪು. ಯಾವುದೇ ರಾಜಕಾರಣಿಗೂ ಇದು ಶೋಭೆ ತರುವುದಿಲ್ಲ ಎಂದ ವಿಶ್ವನಾಥ್ ಶರಣ ಸಾಹಿತ್ಯದ ಉದಾಹರಣೆ ನೀಡಿದ್ದಾರೆ.
ಈಗ ಸ್ವಾಮೀಜಿಗಳು ಯಡಿಯೂರಪ್ಪ ಪರ ನಿಂತಿದ್ದಾರೆ. ಆದರೆ, ಕೊರೊನಾ ಸಮಯದಲ್ಲಿ ಯಾವ ಸ್ವಾಮೀಜಿಗಳೂ ಬರಲಿಲ್ಲ. ಎಲ್ಲರೂ ಮಠಗಳ ಬಾಗಿಲನ್ನು ಹಾಕಿಕೊಂಡರು. ಜನರ ಸಮಸ್ಯೆ ಬಗೆಹರಿಸಲು ಬರದ ಸ್ವಾಮೀಜಿಗಳು ದಯಮಾಡಿ ಈಗ ರಾಜಕಾರಣದಲ್ಲಿ ಹುಯಿಲೆಬ್ಬಿಸಬಾರದು ಎಂದು ವಿಶ್ವನಾಥ್ ಹೇಳಿದ್ದಾರೆ. ಸುತ್ತೂರು ಶ್ರೀಗಳು, ಆದಿ ಚುಂಚನಗಿರಿ ಸ್ವಾಮಿಗಳು, ಮೂರು ಸಾವಿರ ಮಠದವರ ಬಗ್ಗೆ ಗೌರವ ಇದೆ. ದಯಮಾಡಿ ಎಲ್ಲಾ ಸ್ವಾಮಿಗಳೂ ಗೌರವ ಉಳಿಸಿಕೊಳ್ಳಬೇಕು. ರಾಜಕಾರಣ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
ಜನತಂತ್ರ ಹಾದಿ ತಪ್ಪಿದಾಗ ಎಲ್ಲರೂ ಎಚ್ಚರಿಸುತ್ತಾರೆ. ವಿಪಕ್ಷ, ಸಂಘ ಸಂಸ್ಥೆ, ಮಠಾಧೀಶರು ಬುದ್ಧಿ ಹೇಳುತ್ತಾರೆ. ಧರ್ಮಾಧಿಕಾರಿಗಳು ವ್ಯಕ್ತಿಯ ನಾಯಕತ್ವ ಪರ ನಿಲ್ಲುವುದು ಎಷ್ಟು ಸರಿ? ರಾಜಕಾರಣಿಗಳಿಗಿಂತ ಮೀರಿ ಪಾತ್ರ ನಿರ್ವಹಣೆ ಎಷ್ಟು ಸರಿ? ವೀರಶೈವ ಧರ್ಮ ಸರ್ವಧರ್ಮ ಬಸವೇಶ್ವರ ಧರ್ಮವಾಗಿದೆ. ಎಲ್ಲಾ ಸಮುದಾಯಕ್ಕೂ ಮಠ ಮಾನ್ಯಗಳಿವೆ. ಮಠ ಮಾನ್ಯಗಳು ರಾಜಕೀಯ ಕೇಂದ್ರವಲ್ಲ. ಮಠ, ಧರ್ಮಾಧಿಕಾರಿಗಳು ಸಮಾಜದ ಭಾಗವಾಗಬೇಕು. ರಾಜಕಾರಣ ಅಧಿಕಾರದ ಭಾಗವಾಗಬಾರದು. ಏಕ ವ್ಯಕ್ತಿ, ಪಕ್ಷದ ಪರ ಧರ್ಮಾಧಿಕಾರಿಗಳು ನಿಲ್ಲಬಾರದು. ಧರ್ಮಾಧಿಕಾರಿಗಳನ್ನ ತಮಗಾಗಿ ಬೀದಿಗೆ ತಂದದ್ದು ಸರಿಯಲ್ಲ ಬೀದಿಗೆ ಬಂದದ್ದು ಧರ್ಮಾಧಿಕಾರಿಗಳಿಗೂ ಒಳ್ಳೆಯದಲ್ಲ. ಕಾಗಿನೆಲೆ ಪೀಠದ ಸ್ವಾಮಿಗಳು ಬಾಲಿಶವಾಗಿ ಮಾತನಾಡಿದರು. ಮಠಾಧೀಶರನ್ನ ಕೈ ಮುಗಿದು ಕೇಳುವೆ. ಧರ್ಮದಲ್ಲಿ ರಾಜಕಾರಣ ಇರಬಾರದು. ಆದರೆ ಈಗ ಧರ್ಮದಲ್ಲಿ ರಾಜಕಾರಣವನ್ನ ನೋಡುವ ಪರಿಸ್ಥಿತಿ ಬಂದಿದೆ ಇದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
(BJP MLC H VIshwanath opposes supporting statements of Religious leaders on BS Yediyurappa)
ಇದನ್ನೂ ಓದಿ: ಬಾಂಬೆ ಟೀಂನ ಯಾರನ್ನೂ ಮಂತ್ರಿ ಮಾಡ್ಬೇಡಿ; ಬಿಜೆಪಿ ಕಟ್ಟಿದ್ದು ಯಡಿಯೂರಪ್ಪ ಅಲ್ಲ, ಅವರು ಮುನ್ಸಿಪಾಲ್ಟಿ ನಾಯಕ: ಹೆಚ್.ವಿಶ್ವನಾಥ್