ಮೈಸೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ(Nagarahole Tiger Reserve Park) ಸಫಾರಿಗೆ ತೆರಳಿದ್ದ ವೇಳೆ ಗಾಯಗೊಂಡಿದ್ದ ಆನೆ ಮರಿ ಕಂಡು ಮರುಗಿದ್ದರು. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೆ ಪತ್ರ ಬರೆದು ಆನೆ ಮರಿಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಅದರಂತೆಯೇ ಚಿಕಿತ್ಸೆಯಲ್ಲಿದ್ದ ಆನೆ ಮರಿ ಸದ್ಯ ನಾಪತ್ತೆಯಾಗಿದ್ದೆ. ಅಚ್ಚರಿಯಂಬಂತೆ ಆನೆ ಮರಿ ಜೊತೆ ತಾಯಿ ಆನೆ ಕೂಡ ನಾಪತ್ತೆಯಾಗಿದೆ. ತಾಯಿ ಆನೆ ತನ್ನ ಮರಿ ಆನೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದೆ ಎಂದು ಊಹಿಸಲಾಗುತ್ತಿದೆ.
ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಗಾಯಗೊಂಡಿದ್ದ ಆನೆ ಮರಿಗೆ ರಾಹುಲ್ ಗಾಂಧಿ ಮನವಿ ಮೇರೆಗೆ ಆನೆ ಮರಿಯನ್ನು ಹುಡುಕಿ ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದ ಆನೆ ಮರಿ ಇದೀಗ ದಿಢೀರ್ ನಾಪತ್ತೆಯಾಗಿದೆ. ಇನ್ನು ಘಟನೆ ಸಂಬಂಧ ನಾಗರಹೊಳೆ ಡಿಸಿಎಫ್ ಹರ್ಷ ಕುಮಾರ್ ಚಿಕ್ಕನರಗುಂದ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಆನೆ ಮರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿತ್ತು. ಸಿಎಂ ಸೂಚನೆ ನಂತರ ಆನೆ ಮರಿ ಹಾಗೂ ತಾಯಿ ಆನೆಯನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಿದ್ದೆವು. ಆನೆ ಮತ್ತು ಆನೆ ಮರಿಯನ್ನು ಸೆರೆ ಹಿಡಿದಿರಲಿಲ್ಲ. ಚಿಕಿತ್ಸೆ ನೀಡಿ ನಿಗಾದಲ್ಲಿ ಇಡಲಾಗಿತ್ತು. ತಾಯಿ ಆನೆಗೆ ಮರಿ ಮೇಲೆ ಅಪಾರ ಪ್ರೀತಿ. ಸಾಕಷ್ಟು ಹರಸಾಹಸದಿಂದ 1 ಗಂಟೆಗೂ ಹೆಚ್ಚು ಕಾಲ ಮರಿಗೆ ಚಿಕಿತ್ಸೆ ನೀಡಿದ್ದೀವಿ. ಆನೆ ಮರಿ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿತ್ತು. ಈ ಬಗ್ಗೆ ನಿರಂತರವಾಗಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತಿತ್ತು. ಚಿಕಿತ್ಸೆ ನಂತರ ಆನೆ ಮತ್ತು ಮರಿಯನ್ನು ಕಾಡಿನಲ್ಲಿ ನಿಗಾದಲ್ಲಿ ಇರಿಸಲಾಗಿತ್ತು. ಈಗ ಆನೆ ಮತ್ತು ಮರಿ ಕಾಣಿಸುತ್ತಿಲ್ಲ ಅರಣ್ಯದ ಒಳಗೆ ಹೋಗಿರಬಹುದು. ಗಸ್ತು ತಿರುಗುವ ವೇಳೆ ಈ ಬಗ್ಗೆ ನಿಗಾ ವಹಿಸಲು ಸೂಚಿಸಲಾಗಿದೆ. ಮರಿ ಮತ್ತು ತಾಯಿಯ ಚಲನವಲನದ ಬಗ್ಗೆ ಕಾಡಿನಲ್ಲೇ ನಿರಂತರವಾಗಿ ನಿಗಾ ಇಡಲಾಗುವುದು ಎಂದರು. ಇದನ್ನೂ ಓದಿ: ನಿಮ್ಮ ಮನವಿ ನನಗೆ ತಲುಪಿದೆ, ನಿಮ್ಮ ಕಳಕಳಿಯನ್ನ ಪ್ರಶಂಸಿಸುತ್ತೇನೆ: ರಾಹುಲ್ ಗಾಂಧಿ ಪತ್ರಕ್ಕೆ ಸ್ಪಂದಿಸಿದ ಸಿಎಂ ಬೊಮ್ಮಾಯಿ
A mother’s love.
I felt so sad to see this beautiful elephant with her injured little baby fighting for its life. pic.twitter.com/65yMB37fCD
— Rahul Gandhi (@RahulGandhi) October 5, 2022
ಘಟನೆ ಹಿನ್ನೆಲೆ
ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ನಾಗರಹೊಳೆಯಲ್ಲಿ ಸಫಾರಿಗೆ ತೆರಳಿದ್ದರು. ಈ ವೇಳೆ ರಾಹುಲ್ ಗಾಂಧಿ ಗಾಯಗೊಂಡ ಆನೆ ಮರಿಯನ್ನು ನೋಡಿ ಮರುಗಿ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು. ತಾಯಿಯ ಜೊತೆಗಿದ್ದ ಆನೆ ಮರಿಯ ಬಾಲ ಮತ್ತು ಸೊಂಡಿಲಿಗೆ ಗಾಯಗಳಾಗಿವೆ. ಅದು ಜೀವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. ಈ ಆನೆ ಮರಿಗೆ ತುರ್ತಾಗಿ ವೈದ್ಯಕೀಯ ನೆರವು ಬೇಕಿದೆ. ಆನೆ ಮರಿಗೆ ಚಿಕಿತ್ಸೆ ನೀಡಿ, ಅದನ್ನು ರಕ್ಷಿಸುವ ವಿಚಾರದಲ್ಲಿ ರಾಜಕೀಯ ಗಡಿಗಳನ್ನು ಮೀರಿ ನಾನು ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಸರಿಯಾದ ಚಿಕಿತ್ಸೆ ಲಭಿಸಿದರೆ ಆ ಮರಿಯು ಜೀವಂತವಾಗಿ ಉಳಿಯುತ್ತದೆ ಎನ್ನುವ ವಿಶ್ವಾಸವಿದೆ. ಈ ಆನೆ ಮರಿಯ ಜೀವ ಉಳಿಸಲು ನೀವು ಸಕಾಲಕ್ಕೆ ನೆರವು ನೀಡುತ್ತೀರಿ ಎಂಬ ಭರವಸೆ ಇದೆ ಎಂದು ರಾಹುಲ್ ಪತ್ರದಲ್ಲಿ ಉಲ್ಲೇಖಿಸಿದ್ದರು.
ಇದಕ್ಕೆ ಸ್ಪಂದಿಸಿದ ಸಿಎಂ ಬೊಮ್ಮಾಯಿ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆನೆ ಮತ್ತು ಆನೆ ಮರಿಯನ್ನು ಹುಡುಕಿ ಚಿಕಿತ್ಸೆ ನೀಡುವಂತೆ ಸೂಚಿಸಿದ್ದರು. ಸಿಎಂ ಸೂಚನೆ ಮೇರೆಗೆ ಸಿಬ್ಬಂದಿ ಆನೆ ಮತ್ತು ಆನೆ ಮರಿಯನ್ನು ಪತ್ತೆ ಮಾಡಿ ಅವುಗಳಿಗೆ ಚಿಕಿತ್ಸೆ ನೀಡಿ ನಿಗಾದಲ್ಲಿ ಇಡಲಾಗಿತ್ತು. ಆದ್ರೆ ಈಗ ಆನೆ ಮತ್ತು ಆನೆ ಮರಿ ಎರಡೂ ನಾಪತ್ತೆಯಾಗಿದೆ ಮರಿ ಆನೆ ತಾಯಿಯ ಮಡಿಲು ಸೇರಿ ತಮ್ಮ ಹೊಸ ಜೀವನ ಆರಂಭಿಸಿವೆ.