ಮೈಸೂರು: ಜೆಡಿಎಸ್ ಶಾಸಕ ಸಾರಾ ಮಹೇಶ್ (SaRa Mahesh) ವಿರುದ್ಧ ಭೂ ಒತ್ತುವರಿ ಆರೋಪ ಮಾಡಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಸಂಧಾನ ನಡೆಸಿದ್ದು, ಶಾಸಕರ ಕ್ಷಮೆ ಕೇಳಿದ್ದಾರೆ ಎಂದು ವರದಿಯಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕರು, ಎಲ್ಲವನ್ನೂ ಜನತೆಯ ಮುಂದಿಟ್ಟಿದ್ದೇನೆ. ಸರ್ಕಾರಕ್ಕೂ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದೇನೆ. ಯಾರೂ ಕ್ಷಮೆ ಕೇಳಬೇಕು ಎಂದು ನಾನು ಹೇಳಿಲ್ಲ ಎಂದು ಹೇಳಿದ್ದಾರೆ. ಹಿರಿಯ ಐಎಎಸ್ ಅಧಿಕಾರಿ ಮಣಿವಣ್ಣನ್ ಮಧ್ಯಸ್ಥಿಕೆಯಲ್ಲಿ ಸಾರಾ ಮಹೇಶ್ ಜೊತೆ ರೋಹಿಣಿ ಸಿಂಧೂರಿ ಸಂಧಾನಕ್ಕೆ ಪ್ರಯತ್ನಿಸಿದ್ದಾರೆ. ಸಾರಾ ಮಹೇಶ್ ಅವರು ರೋಹಿಣಿ ಸಿಂಧೂರಿ ವಿರುದ್ದ ಸಾಲು ಸಾಲು ಆರೋಪ ಮಾಡಿ ತನಿಖೆಗೆ ಆಗ್ರಹಿಸಿ ಪಟ್ಟು ಹಿಡಿದಿದ್ದರು. ಈ ಮಧ್ಯೆ, ಬೆಳಗಾವಿ ಅಧಿವೇಶನದ ವೇಳೆ ಸಾರಾ ಮಹೇಶ್ ಜೊತೆ ಸಂಧಾನಕ್ಕೆ ರೋಹಿಣಿ ಸಿಂಧೂರಿ ಮುಂದಾಗಿದ್ದರು ಎನ್ನಲಾಗಿದೆ.
ಸಾರಾ ಮಹೇಶ್ ಅವರನ್ನು ಭೇಟಿಯಾದ ನಂತರ ವಾಟ್ಸ್ಆ್ಯಪ್ನಲ್ಲಿ ಸುದೀರ್ಘ ಸಂದೇಶ ಕಳುಹಿಸಿದ್ದ ರೋಹಿಣಿ ಸಿಂಧೂರಿ, ನಿಮ್ಮ ಜಾಗದ ವಿಚಾರದ ಸರ್ವೆಗೆ ನಾನು ದಿಶಾ ಆಪ್ ನೋಡಿ ಆದೇಶಿಸಿದ್ದೆ. ನಾನು ನನ್ನ ಕೆಲಸ ಮಾಡಿದ್ದೇನೆ ದಯವಿಟ್ಟು ತಪ್ಪು ತಿಳಿಯಬೇಡಿ. ಇದು ಕೇವಲ ಕೆಲಸದ ವಿಚಾರ ಇದರಲ್ಲಿ ವೈಯಕ್ತಿಕ ವಿಚಾರ ಏನೂ ಇಲ್ಲ ಎಂದು ಬರೆದಿದ್ದಾರೆ ಎನ್ನಲಾಗಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸಾರಾ ಮಹೇಶ್, ನನ್ನ ಮೇಲೆ ಅವರು ಆರೋಪ ಮಾಡಿದ್ದರು. ಸರ್ಕಾರ ನನ್ನ ಮೇಲೆ ಹೇಗೆ ನಿರ್ದಾಕ್ಷಿಣ್ಯವಾಗಿ ತನಿಖೆ ಮಾಡಿ ವರದಿ ಸಲ್ಲಿಸಿದೆಯೋ ಹಾಗೆಯೇ ಈಗ ಅವರ ಮೇಲೆಯೂ ಕ್ರಮ ಕೈಗೊಳ್ಳಬೇಕಲ್ವಾ? ಆದರೆ ನಾನು ಯಾವುದಕ್ಕೂ ಒತ್ತಾಯಿಸಿಲ್ಲ. ಎಲ್ಲವನ್ನೂ ಜನತೆ ಮುಂದಿಟ್ಟಿದ್ದೇನೆ. ಲಿಖಿತ ರೂಪದಲ್ಲಿ ಉತ್ತರಿಸಿದ್ದೇನೆ. ಅದಾದ ಮೇಲೆ ಮೊನ್ನೆ ಸಚಿವ ಮಾಧುಸ್ವಾಮಿ ಅವರು ಕರೆಸಿ ಚರ್ಚೆ ಮಾಡಿದರು. ನನಗೆ ಯಾರೂ ಕ್ಷಮೆ ಕೇಳಬೇಕು ಅಥವಾ ಯಾರನ್ನೂ ಕ್ಷಮೆ ಕೇಳಿಸಬೇಕೆಂದು ಇಲ್ಲ ಎಂದು ಹೇಳಿದ್ದಾರೆ.
ರೋಹಿಣಿ ಸಿಂಧೂರಿ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದಾಗ ಸಾರಾ ಮಹೇಶ್ ಜತೆ ಸಂಘರ್ಷ ಮಾಡಿಕೊಂಡಿದ್ದರು. ಬಳಿಕ ಅವರ ಮೇಲೆ ಸಾರಾ ಮಹೇಶ್ ಮಾನನಷ್ಟ ಮೊಕದ್ದಮೆಯನ್ನೂ ದಾಖಲಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:59 pm, Sat, 18 February 23