ಭೂ ಹಗರಣ ಆರೋಪ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಶಾಸಕ ಸಾರಾ ಮಹೇಶ್
ಸಾರಾ ಮಹೇಶ್ ಭೂ ಕಬಳಿಕೆ ಮಾಡಿದ್ದಾರೆ ಎಂದು ರೋಹಿಣಿ ಸಿಂಧೂರಿ ಬಿಂಬಿಸಿದ್ದರು. ಈ ಕಾರಣ ಅವರ ವಿರುದ್ದ ಮಾನ ನಷ್ಟ ಮೊಕದ್ದಮೆ ಹೂಡಲಾಗಿದೆ.
ಮೈಸೂರು: ಮೈಸೂರು ಡಿಸಿ ಆಗಿದ್ದಾಗ ಐಎಎಸ್ ಅಧಿಕಾರಿ ರೋಹಿಣಿಯಿಂದ ಹಲವು ಅಕ್ರಮಗಳನ್ನು ಬಯಲು ಮಾಡಿದ್ದಕ್ಕೆ ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಈ ಸಂಬಂಧ ರೋಹಿಣಿ ವಿರುದ್ಧ ಮಾನನಷ್ಟ ಕೇಸ್ ದಾಖಲು ಮಾಡುವುದಾಗಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮೈಸೂರಿನಲ್ಲಿ ಹೇಳಿಕೆ ನೀಡಿದರು. ನಗರದಲ್ಲಿ ಶಾಸಕ ಸಾ. ರಾ ಮಹೇಶ್, ವಕೀಲ್ ಅರುಣ್ ಕುಮಾರ್ ಜಂಟಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಜಿಲ್ಲಾಧಿಕಾರಿ ಐಶಾರಾಮಿ ಜೀವನ ನಡೆಸಿದ್ದಾರೆ. ಸರ್ಕಾರಿ ಹಣ ರ್ದುವಿನಿಯೋಗ, ಕೋವಿಡ್ ಸಂದರ್ಭದ ಕಾರ್ಯವೈಖರಿ ಪ್ರಾಮಾಣಿಕವಾಗಿ ಕೆಲಸ ಮಾಡದೆ ಬೇಜವಾಬ್ದಾರಿ ವರ್ತನೆ ಮಾಡಿದ್ದು, ಇದರಿಂದ ಸಾವಿರಾರು ಜನರಿಗೆ ಸಮಸ್ಯೆಯಾಗಿದೆ.
ಇದನ್ನು ಮುಚ್ಚಿ ಹಾಕಲು ಟೆಸ್ಟಿಂಗ್ ಸಂಖ್ಯೆ ಸಾವಿನ ಸಂಖ್ಯೆ ಕಡಿಮೆ ತೋರಿಸಿದ್ದರು. ಈ ಬಗ್ಗೆ ಚೀಪ್ ಸೆಕ್ರೆಟರಿ ವರದಿ ನಂತರ ವರ್ಗಾವಣೆ ಮಾಡಿದ್ದು, ವರ್ಗಾವಣೆ ಬೇಡ ಅಮಾನತು ಮಾಡುವಂತೆ ಒತ್ತಾಯಿಸಿದ್ದೆ. ಇದೇ ಕಾರಣಕ್ಕೆ ನನ್ನ ವಿರುದ್ದ ಭೂ ಹಗರಣದ ಆರೋಪ ಮಾಡಲಾಗಿದೆ. ಭೂ ಅಕ್ರಮದಿಂದ ನನ್ನ ವರ್ಗಾವಣೆ ಅಂತಾ ಬಿಂಬಿಸಲು ಹೊರಟಿದ್ದರು. ಈಗಾಗಲೇ ಆರ್ ಸಿ ಈ ಬಗ್ಗೆ ವರದಿ ನೀಡದ್ದಾರೆ. ಸರ್ಕಾರ ಉನ್ನತಮಟ್ಟದ ತನಿಖೆ ನಡೆಸುತ್ತಿದೆ. ಅದರ ವರದಿ ಕೂಡ ಬರಲಿದೆ. ನಾನು ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದೇ. ಅದರಂತೆ ಮೈಸೂರು ನ್ಯಾಯಾಲಯದಲ್ಲಿ ರೋಹಿಣಿ ಸಿಂಧೂರಿ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ಮೈಸೂರಿನಲ್ಲಿ ಶಾಸಕ ಸಾ.ರಾ ಮಹೇಶ್ ಹೇಳಿದರು.
ರೋಹಿಣಿ ಸಿಂಧೂರಿ ವಿರುದ್ಧ ಒಂದು ಕೋಟಿ ರೂ ಮಾನನಷ್ಟ ಮೊಕದ್ದಮೆ:
ಸಾರಾ ಮಹೇಶ್ ಭೂ ಅಕ್ರಮ ಮಾಡಿದ್ದಾರೆ ಎಂಬ ರೋಹಿಣಿ ಸಿಂಧೂರಿ ಆಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಸಾರಾ ಮಹೇಶ್ ಭೂ ಕಬಳಿಕೆ ಮಾಡಿದ್ದಾರೆ ಎಂದು ರೋಹಿಣಿ ಸಿಂಧೂರಿ ಬಿಂಬಿಸಿದ್ದರು. ಈ ಕಾರಣ ಅವರ ವಿರುದ್ದ ಮಾನ ನಷ್ಟ ಮೊಕದ್ದಮೆ ಹೂಡಲಾಗಿದೆ ಎಂದು ಸಾ.ರಾ ಮಹೇಶ್ ಪರ ವಕೀಲ ಅರುಣ್ ಕುಮಾರ್ ಹೇಳಿಕೆ ನೀಡಿದರು. ಮಾನನಷ್ಟ ಮೊಕದ್ದಮೆ ಹೂಡುವ ಮುನ್ನ ರೋಹಿಣಿ ಸಿಂಧೂರಿ ಅವರಿಗೆ ಲೀಗಲ್ ನೋಟೀಸ್ ಕೊಟ್ಟಿದ್ದೇವು. ನೋಟೀಸ್ಗೆ ರೋಹಿಣಿ ಸಿಂಧೂರಿ ಅವರು ಉತ್ತರ ಕೊಟ್ಟಿದ್ದಾರೆ.
ಸಾರಾ ಮಹೇಶ್ ವಿರುದ್ದ ಮಾತಾಡಿರೋ ಧ್ವನಿ ತಮ್ಮದೆ ಎಂದು ಒಪ್ಪಿಕೊಂಡಿದ್ದಾರೆ. ಇದು ಖಾಸಗಿ ಸಂಭಾಷಣೆ ಎಂದು ಹೇಳಿದ್ದಾರೆ. ಇದೇ ಉತ್ತರದ ಆಧಾರದ ಮೇಲೆ ಒಂದು ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡಿದ್ದೇವೆ. ಎರಡನೇ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ರೋಹಿಣಿ ಸಿಂಧೂರಿಗೆ ನೋಟೀಸ್ ಜಾರಿಯಾಗಿದೆ. ಅಕ್ಟೋಬರ್ 20 ರೊಳಗೆ ರೋಹಿಣಿ ಸಿಂಧೂರಿ ಉತ್ತರ ಕೊಡಬೇಕು ಎಂದು ವಕೀಲ ಅರುಣ್ ಕುಮಾರ್ ಹೇಳಿಕೆ ನೀಡಿದರು.
ಗೋಮುಖ ಅಧಿಕಾರಿ ಮುಖವಾಡ ಕಳಚದೇ ಬಿಡಲ್ಲ: ಸಾ.ರಾ.ಮಹೇಶ್
ಈ ಕುರಿತು ಮಾತನಾಡಿದ ಸಾ.ರಾ.ಮಹೇಶ್, ನಾನು ರಾಜಕಾರಣ ಬೇಕಾದರೂ ಬಿಡುತ್ತೇನೆ ಆದರೆ ಇಂಥ ಗೋಮುಖ ಅಧಿಕಾರಿ ಮುಖವಾಡ ಕಳಚದೇ ಬಿಡಲ್ಲ. ಜನರು ಬಹಳ ಬೇಗ ಅಧಿಕಾರಿಗಳ ಮಾತು ನಂಬುತ್ತಾರೆ. ರಾಜಕಾರಣಿಗಳ ಮೇಲೆ ಜನರು ಅನುಮಾನ ಪಡುತ್ತಾರೆ. ಇದರ ಸತ್ಯಾಸತ್ಯತೆ ಎಲ್ಲರಿಗೂ ಗೊತ್ತಾಗಬೇಕು ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:32 pm, Sun, 11 September 22