ಪೊಲೀಸ್ ಅಂದ್ರೆ ಶಿಸ್ತು, ಪೊಲೀಸ್ ಅಂದ್ರೆ ಗತ್ತು ಗಮ್ಮತ್ತು, ಪೊಲೀಸ್ ಅಂದ್ರೆ ತಾಕತ್ತು. ಪೊಲೀಸ್ ಅಂದ್ರೆ ಖದರ್ ಇದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಇದೇ ಪೊಲೀಸ್ ಕುಟುಂಬದ ಭಾಗಿದಾರರಾಗಿರುವ ಒಂದು ತಂಡದ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ. ಅವರೇ ಪೊಲೀಸ್ ಇಲಾಖೆಯ ಬಲ, ಪೊಲೀಸ್ ಇಲಾಖೆಯ ಹೆಮ್ಮೆಯ ಶ್ವಾನದಳ (Police Dog Squad – Mysuru). ಹೌದು ಪೊಲೀಸರ ಹೆಗಲಿಗೆ ಹೆಗಲು ಕೊಟ್ಟು ಸಮಾಜದಲ್ಲಿ ಅಪರಾಧ ಚಟುವಟಿಕೆಗೆಳನ್ನು ಪತ್ತೆ ಹಚ್ಚುವ ಅಪರಾಧಿಗಳನ್ನು ಹೆಡೆಮುರಿ ಕಟ್ಟಲು ಮಹತ್ವದ ಪಾತ್ರ ವಹಿಸುವ ಶ್ವಾನದಳ ತನ್ನದೇ ಆದ ಮಹತ್ವವನ್ನು ಹೊಂದಿದೆ. ಸದ್ಯ ಪೊಲೀಸ್ ಇಲಾಖೆಯಲ್ಲಿ (Mysuru police) ಸ್ಪೋಟಕ ಪತ್ತೆಗೆ, ಮಾದಕದ್ರವ್ಯ ಪತ್ತೆಗೆ, ಅಪರಾಧ ಪತ್ತೆಗೆ ಶ್ವಾನಗಳನ್ನು ಬಳಸಿಕೊಳ್ಳಲಾಗುತ್ತದೆ. ಇನ್ನು ಲ್ಯಾಬ್, ಜರ್ಮನ್ ಶೆಫರ್ಡ್, ಡಾಬರ್ ಮ್ಯಾನ್ ಜಾತಿಯ ನಾಯಿಗಳಿಗೆ (Police Dog) ತರಬೇತಿ ನೀಡಿ ಶ್ವಾನದಳದಲ್ಲಿ ಸೇರಿಸಿಕೊಳ್ಳಲಾಗುತ್ತದೆ.
ಪೊಲೀಸ್ ಶ್ವಾನಗಳ ಬಗ್ಗೆ ನಾನು ಬರೆಯಲು ಮುಖ್ಯ ಕಾರಣ ಲೈಕಾ ಎಂಬ ಶ್ವಾನ. ಲ್ಯಾಬ್ ತಳಿಯ ಈ ಲೈಕಾ ಶ್ವಾನಕ್ಕೆ ಮಾತೊಂದು ಬರುತ್ತಿರಲಿಲ್ಲ ಅಷ್ಟೇ. ಅದನ್ನು ಹೊರತುಪಡಿಸಿದರೆ ಲೈಕಾ ಒಬ್ಬ ಯೋಧನಿಗೆ ಸರಿ ಸಮವಾಗಿತ್ತು. ಲೈಕಾ ಮೈಸೂರು ಜಿಲ್ಲಾ ಪೊಲೀಸ್‌ನ ಶ್ವಾನದದಳದ ಹಿರಿಯ ಸದಸ್ಯ. ಸದ್ಯ ಲೈಕಾ ಶ್ವಾನ ನೆನಪು ಮಾತ್ರ. 9 ವರೆ ವರ್ಷದ ಲೈಕಾ ವಯೋ ಸಹಜ ಅನಾರೋಗ್ಯದಿಂದ ಮೃತಪಟ್ಟಿದೆ. ಮೂರು ತಿಂಗಳ ಮರಿಯಾಗಿದ್ದಾಗ (puppy) ಇದನ್ನು ಪೊಲೀಸ್ ಇಲಾಖೆಗೆ ತರಲಾಗಿತ್ತು. 9 ತಿಂಗಳ ತರಬೇತಿ ನಂತರ ಲೈಕಾ ಇಲಾಖಾ ಕೆಲಸಕ್ಕೆ ತೊಡಗಿಸಿಕೊಂಡಿತ್ತು. ಪೊಲೀಸ್ ಇಲಾಖೆಗೆ ಸೇರಿ ಭರ್ತಿ 8 ವರ್ಷ ಸುದೀರ್ಘ ಸೇವೆ ಸಲ್ಲಿಸಿ ಲೈಕಾ ಹುತಾತ್ಮರ ಪಟ್ಟಿ ಸೇರಿದೆ.
ಲೈಕಾ ಮೈಸೂರು ಜಿಲ್ಲಾ ಪೊಲೀಸ್ ತಂಡದಲ್ಲಿ ಸ್ಪೋಟಕ ಪತ್ತೆ ದಳದ ಸಕ್ರಿಯವಾಗಿದ್ದ ಶ್ವಾನ. 2014ರಲ್ಲಿ ಜನಿಸಿದ ಲೈಕಾ 2014 ರಲ್ಲೇ ಪೊಲೀಸ್ ಇಲಾಖೆ ಸೇರಿತು. ಲೈಕಾಗೆ ಸ್ಪೋಟಕ ಪತ್ತೆ ಬಗ್ಗೆ ತರಬೇತಿ ನೀಡಲಾಯಿತು. ಲೈಕಾ ಎಷ್ಟರಮಟ್ಟಿಗೆ ಅದರಲ್ಲಿ ಪರಿಣಿತಿ ಹೊಂದಿತ್ತು ಎಂದರೆ ಪೊಲೀಸ್ ಇಲಾಖೆ ಸೇರಿದ ಮೊದಲ ವರ್ಷವೇ ಸ್ಪೋಟಕ ಪತ್ತೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿತು. ಇದಾದ ನಂತರ ಲೈಕಾ ತಿರುಗಿ ನೋಡಲೇ ಇಲ್ಲ. ರಾಷ್ಟ್ರಪತಿಗಳ ಕಾರ್ಯಕ್ರಮ, ಪ್ರಧಾನಿಗಳ ಕಾರ್ಯಕ್ರಮ ಕೇಂದ್ರ ಸಚಿವರ ಕಾರ್ಯಕ್ರಮ ಸಿಎಂ ಕಾರ್ಯಕ್ರಮ ಸಚಿವರ ಕಾರ್ಯಕ್ರಮ, ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳೇ ಅಗಲಿ ಅಲ್ಲಿ ಲೈಕ್ ಕೆಲಸಕ್ಕೆ ಹಾಜರಾಗುತಿತ್ತು. ಸಣ್ಣ ಗೊಂದಲಕ್ಕೂ ಆಸ್ಪದ ಕೊಡದೇ ತನ್ನ ಕರ್ತವ್ಯ ನಿರ್ವಹಿಸುತ್ತಿತ್ತು. ಒಂದಲ್ಲ ಎರಡಲ್ಲ ಬರೋಬ್ಬರಿ 275 ಕಾರ್ಯಕ್ರಮಗಳಲ್ಲಿ ಸೇವೆ ಸಲ್ಲಿಸಿದ್ದ ಕೀರ್ತಿ ಲೈಕಾದು. ಇಲಾಖೆಗೆ ದುಡಿದು ಹುತಾತ್ಮನಾದ ಲೈಕಾಗೆ ಸಕಲ ಸರ್ಕಾರಿ ಗೌರವಗಳನ್ನು ನೀಡಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೈಸೂರು ಜಿಲ್ಲಾ ಪೊಲೀಸ್ ಡಾಗ್ ಕೆನಲ್ ಆವರಣದಲ್ಲಿ ಅಂತ್ಯಕ್ರಿಯೆ ಮಾಡಲಾಯ್ತು. ಈ ವೇಳೆ ಲೈಕಾಗೆ ಗನ್ ಸೆಲ್ಯೂಟ್ ( ಗಾಡ್ ಆಫ್ ಆನರ್ ) ನೀಡಲಾಯ್ತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಮರ್ಪಿಸಲಾಯ್ತು. ಖುದ್ದು ಮೈಸೂರು ಜಿಲ್ಲಾ ಎಸ್ ಪಿ ಸೀಮಾ ಲಾಟ್ಕರ್, ಅಡಿಷನಲ್ ಎಸ್ ಪಿ ನಂದಿನಿ ಭಾಗವಹಿಸಿ ಅಂತಿಮ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು. ಇನ್ನು ಇನ್ಸಪೆಕ್ಟರ್‌ಗಳು ಇತರ ಶ್ವಾನಗಳ ತರಬೇತುದಾರರು ಲೈಕಾ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು
ಶ್ವಾನ ಅಂದ್ರೆ ನಿಯತ್ತಿಗೆ ಮತ್ತೊಂದು ಹೆಸರು. ಪುರಾಣಗಳಲ್ಲಿ ಇತಿಹಾಸದಲ್ಲಿ ಶ್ವಾನಗಳ ಸಾಹಸದ ಯಶೋಗಾಥೆಗಳು ಹೆಚ್ಚು ಹೆಚ್ಚು ದಾಖಲಾಗಿದೆ. ರಾಜ್ಯದ ಪೊಲೀಸ್ ಪಡೆಯಲ್ಲಿ ಶ್ವಾನದಳ 54 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ. 1956 ರಲ್ಲಿ ಮೈಸೂರು ರಾಜ್ಯ ರಚನೆಯೊಂದಿಗೆ, ರಾಜ್ಯದಾದ್ಯಂತ ಪೊಲೀಸ್ ಚಟುವಟಿಕೆಗಳು ಮತ್ತು ಘಟಕಗಳನ್ನು ಬಲಪಡಿಸಲಾಯಿತು. ಬೆಂಗಳೂರು ಕಮಿಷನರೇಟ್ 1963 ರಲ್ಲಿ ಕಾರ್ಯಾಚರಣೆ ಪ್ರಾರಂಭಿಸಿತು. ಕರ್ನಾಟಕ ಪೊಲೀಸ್ ಕಾಯ್ದೆ1965 ರಿಂದ ಜಾರಿಗೆ ಬಂದಿತು. ಈ ವೇಳೆ ಶ್ವಾನದಳಕ್ಕೆ ಬೇಡಿಕೆ ಇತ್ತು. ಬಳಿಕ 1968 ರಲ್ಲಿ ಮದ್ರಾಸ್ ಪೋಲಿಸ್ ನಿವೃತ್ತ ಅಧಿಕಾರಿ ಜೆ ಬಿ ಸ್ಯಾಮುಯಲ್ ಅವರು ಕರ್ನಾಟಕದಲ್ಲಿ ಶ್ವಾನ ದಳವನ್ನು ಪ್ರಾರಂಭಿಸಿದರು. 1975ರಲ್ಲಿ ಎಲ್ಲಾ ಜಿಲ್ಲೆಗಳಿಗೂ ಶ್ವಾನದಳವನ್ನು ವಿಸ್ತರಿಸಲಾಯ್ತು. ಶ್ವಾನಗಳು ಶಿಸ್ತಿನ ಸಿಪಾಯಿಗಳು. ಹೀಗಾಗಿ ಶ್ವಾನ ದಳ ಇಲಾಖೆಯ ಶಕ್ತಿಯಾಗಿದೆ.
ಇನ್ನು ಪೊಲೀಸ್ ಇಲಾಖೆಯ ಶ್ವಾನಗಳನ್ನು ರೆಡಿ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಮೊದಲು ಶ್ವಾನದ ಮನಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಮಾತನಾಡುವ, ಯೋಚನೆ ಮಾಡುವ ಹಾಗೂ 24 ಗಂಟೆ ಜೊತೆಗಿರುವ ಮನುಷ್ಯರ ಮನಸ್ಥಿತಿ ಅರ್ಥ ಮಾಡಿಕೊಳ್ಳುವುದೇ ದುಸ್ತರವಾಗಿರುವಾಗ ಮಾತನಾಡದ ಶ್ವಾನಗಳ ಮನಸ್ಥಿತಿ ಅರ್ಥ ಮಾಡಿಕೊಳ್ಳುವುದು ಎಷ್ಟು ಕಷ್ಟ ಅನ್ನೋದನ್ನು ಬಾಯಿ ಬಿಟ್ಟು ಹೇಳುವ ಅವಶ್ಯಕತೆ ಇಲ್ಲವೆಂದು ಭಾವಿಸುತ್ತೇನೆ. ಇಂತಹ ಹತ್ತು ಹಲವು ಸವಾಲುಗಳನ್ನು ಎದುರಿಸಿ ಒಬ್ಬ ತರಬೇತುದಾರ ಶ್ವಾನವನ್ನು ಸಿದ್ದಪಡಿಸುತ್ತಾನೆ. ಇನ್ನು ಒಮ್ಮೆ ಶ್ವಾನ ಒಬ್ಬ ತರಬೇತುದಾರನಿಗೆ ಹೊಂದಿಕೊಳ್ಳುತ್ತದೋ ಅಲ್ಲಿಗೆ ಮುಗಿಯಿತು. ಅಸಲಿ ಸವಾಲು ಆರಂಭವಾಗುವುದೇ ಅಲ್ಲಿ. ಯಾಕಂದ್ರೆ ಬಹುತೇಕ ಶ್ವಾನಗಳು ತಮ್ಮ ತರಬೇತುದಾರ ಅಲ್ಲದೆ ಬೇರೆ ಯಾರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ.
ಹೇಳಿ ಕೇಳಿ ಅವು ಟ್ರೈನ್ಡ್ ಡಾಗ್. ಅದೇನೋ ಹೇಳ್ತಾರಲ್ಲ ಹುಲಿ ಹಸಿದಿದ್ದರು ಹುಲ್ಲು ತಿನ್ನಲ್ಲ ಅನ್ನೋ ರೀತಿ, ಶ್ವಾನಗಳು ತಮ್ಮ ತರಬೇತುದಾರನ ಹೊರತುಪಡಿಸಿ ಯಾರ ಮಾತು ಕೇಳಲ್ಲ. ಅಸಲಿ ಗಮ್ಮತ್ತು ಅಂದರೆ ಆ ತರಬೇತುದಾರ ತನ್ನ ಮನೆಯವರಿಗಿಂತ ಹೆಚ್ಚು ಕಾಳಜಿ, ಪ್ರೀತಿ, ಸಮಯ ಈ ಶ್ವಾನಕ್ಕೆ ಕೊಡಬೇಕಾಗುತ್ತದೆ. ಉದಾಹರಣೆಗೆ ಒಂದು ವೇಳೆ ತರಬೇತುದಾರನ ಮಗ, ಮಗಳನ್ನು ನಿರಂತರವಾಗಿ ಶಾಲೆಗೆ ಕರೆದುಕೊಂಡು ಹೋಗುವುದು ಬಿಡುವುದು ಮಾಡುತ್ತಿದ್ದು, ಯಾವತ್ತಾದರೂ ಒಂದು ದಿನ ಆರೋಗ್ಯ ಸಮಸ್ಯೆ ಅಥವಾ ಅನ್ಯ ಕಾರಣದಿಂದ ಹೋಗಲು ಸಾಧ್ಯವಾಗದಿದ್ದರೆ ಬೇರೆಯವರಿಗೆ ಆ ಕೆಲಸ ವಹಿಸಬಹುದು. ಮನೆಯವರಿಗೆ ಹುಷಾರಿಲ್ಲದಿದ್ದರೆ ಸಂಬಂಧಿಯೋ, ಸ್ನೇಹಿತರೋ ಯಾರ ಜೊತೆಯಾದ್ರೂ ಆಸ್ಪತ್ರೆ, ಕ್ಲಿನಿಕ್‌ಗೆ ಕಳುಹಿಸಬಹುದು. ಆದ್ರೆ ಶ್ವಾನದ ವಿಚಾರದಲ್ಲಿ ನೋ ವೇ ಚಾನ್ಸೇ ಇಲ್ಲ. ಊಟ, ತಿಂಡಿ, ನಿದ್ದೆ, ಒನ್, ಟೂ, ಆಸ್ಪತ್ರೆ ಸೇರಿ ಎಲ್ಲವೂ ತರಬೇತುದಾರನೇ ಮಾಡಿಸಬೇಕು.
ಇಂತಹ ಶ್ವಾನಗಳಿಗೆ ಸರ್ಕಾರ ಕೋಟಿ ಕೋಟಿ ಖರ್ಚು ಮಾಡುತ್ತದೆ. 1968 ರಲ್ಲಿ ಮೊದಲ ತಂಡದಲ್ಲಿ ಕೇವಲ ಆರು ಶ್ವಾನಗಳಿದ್ದವು. ಮಾಹಿತಿಯ ಪ್ರಕಾರ ಸದ್ಯ ರಾಜ್ಯದಲ್ಲಿ 245 ಶ್ವಾನಗಳು ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕರ್ನಾಟಕ ಸರ್ಕಾರ ಶ್ವಾನದಳಕ್ಕೆ ವಾರ್ಷಿಕ ನಿರ್ವಹಣೆಗಾಗಿ 2.4 ಕೋಟಿ ರೂ. ಖರ್ಚು ಮಾಡುತ್ತದೆ. ಘಟಕ ಪ್ರತಿ ನಾಯಿಗೆ ಸುಮಾರು 1.1 ಲಕ್ಷ ರೂಪಾಯಿಯೊಂದಿಗೆ ವರ್ಷಕ್ಕೆ ಖರ್ಚಾಗುತ್ತದೆ. ಮೈಸೂರು ಘಟಕದಲ್ಲಿರುವ 10 ಶ್ವಾನಗಳಿಗೆ ಹುಬ್ಬಳ್ಳಿ-ಧಾರವಾಡದಲ್ಲಿರುವ ಆರು ಶ್ವಾನಗಳಿಗೆ ಮತ್ತು ಮಂಗಳೂರಿನಲ್ಲಿ ನಾಲ್ಕು ಶ್ವಾನಗಳಿಗೆ ಕ್ರಮವಾಗಿ 11.8 ಲಕ್ಷ, 7.1 ಲಕ್ಷ ಮತ್ತು 4.3 ಲಕ್ಷ ರೂ. ಖರ್ಚು ಮಾಡಲಾಗುತ್ತದೆ.
ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (KSISF), ಸಿಟಿ ಆರ್ಮ್ಡ್ ರಿಸರ್ವ್ (CAR) ಮತ್ತು ಆಂಟಿ-ನಕ್ಸಲ್ ಫೋರ್ಸ್ (ANF) ಸೇರಿದಂತೆ ವಿಶೇಷ ಘಟಕಗಳು ಶ್ವಾನಪಡೆಯನ್ನು ಹೊಂದಿವೆ. CARನಲ್ಲಿ 10 ಶ್ವಾನಗಳಿವೆ, ಎಲ್ಲಾ ಬೆಲ್ಜಿಯನ್ ಮಾಲಿನೋಯಿಸ್ ತಳಿಗಳಾಗಿವೆ. ಇವುಗಳ ನಿರ್ವಹಣೆಗೆ ವಾರ್ಷಿಕ 11.2 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಕೆಎಸ್‌ಐಎಸ್‌ಎಫ್ 12 ನಾಯಿಗಳನ್ನು ಹೊಂದಿದೆ ಇವುಗಳ ನಿರ್ವಹಣೆಗೆ ರೂ. 13.2 ಲಕ್ಷ ಮತ್ತು ಎಎನ್‌ಎಫ್ ಎಂಟು ನಾಯಿಗಳನ್ನು ನೋಡಿಕೊಳ್ಳುತ್ತದೆ. ಇದು ವರ್ಷಕ್ಕೆ ರೂ. 8.9 ಲಕ್ಷ ಖರ್ಚು ಮಾಡುತ್ತದೆ. ಅದಕ್ಕೆ ತಿಳಿದವರು ಹೇಳಿರುವುದು ಪ್ರತಿ ನಾಯಿಗೂ ಒಂದು ದಿನ ಬರುತ್ತದೆ ಅಂತಾ.