ಚುನಾವಣಾ ಸೋಲಿನಿಂದ ಹೊರಬಾರದ ಸೋಮಣ್ಣ: ಬಸವ ಜಯಂತಿ ಕಾರ್ಯಕ್ರಮದಲ್ಲಿ ಸ್ವಪಕ್ಷದ ನಾಯಕರ ವಿರುದ್ಧವೇ ಅಸಮಾಧಾನ

| Updated By: ರಮೇಶ್ ಬಿ. ಜವಳಗೇರಾ

Updated on: Oct 08, 2023 | 6:32 PM

ಮಾಜಿ ಸಚಿವ, ಬಿಜೆಪಿ ನಾಯಕ ವಿ, ಸೋಮಣ್ಣ ಅವರು ಕಳೆದ ವಿಧಾನಸಭಾ ಚುನಾವಣೆ ಸೋಲಿನಿಂದ ಆಚೆ ಬಂದಿಲ್ಲ. ಯಾಕಂದ್ರೆ ಇಂದು ಮೈಸೂರಿನಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲೂ ಸಹ ಸೋಮಣ್ಣ ತಮ್ಮ ಸೋಲಿನ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೇ ಸ್ವಪಕ್ಷ ಹಾಗೂ ಸ್ವ ಸಮುದಾಯದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟಕ್ಕೂ ಸೋಮಣ್ಣ ಏನೆಲ್ಲಾ ಹೇಳಿದ್ದಾರೆ ಎನ್ನುವ ವಿವರ ಈ ಕೆಳಗಿನಂತಿದೆ.

ಚುನಾವಣಾ ಸೋಲಿನಿಂದ ಹೊರಬಾರದ ಸೋಮಣ್ಣ: ಬಸವ ಜಯಂತಿ ಕಾರ್ಯಕ್ರಮದಲ್ಲಿ ಸ್ವಪಕ್ಷದ ನಾಯಕರ ವಿರುದ್ಧವೇ ಅಸಮಾಧಾನ
ವಿ ಸೋಮಣ್ಣ
Follow us on

ಮೈಸೂರು, (ಅಕ್ಟೋಬರ್ 08): ಮಾಜಿ ಸಚಿವ ವಿ ಸೋಮಣ್ಣ (V Somanna) ಅವರು ವಿಧಾನಸಭಾ ಚುನಾವಣೆ (karnataka Assembly Elections 2023)  ಸೋಲಿನಿಂದ ಆಚೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ತಮ್ಮ ಸೋಲಿನ ಬಗ್ಗೆ ಪದೇ ಪದೇ ಬಹಿರಂಗ ವೇದಿಕೆಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಹೌದು..ಇಂದು(ಭಾನುವಾರ) ಮೈಸೂರಿನ (Mysuru) ಕಲಾಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲೂ ಸಹ ತಮ್ಮ ಸೋಲಿನ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಲ್ಲದೇ :ನಮ್ಮವರೇ ನಮ್ಮ ಕಾಲು ಎಳೆಯುವುದು ಬಿಡಬೇಕು ಎಂದು ಹೇಳುವ ಮೂಲಕ ವರುಣಾ ಸೋಲಿಗೆ ಪರೋಕ್ಷವಾಗಿ ತಮ್ಮ ವೀರಶೈವ ಲಿಂಗಾಯತ ಸಮಾಜವನ್ನು ದೂರಿದ್ದಾರೆ.

ಬಿಜೆಪಿಗೆ ಬರುವವರೆಗೆ ನಾನು ಸೋತೆ ಇರಲಿಲ್ಲ. ಬಿಜೆಪಿಗೆ ಬಂದಾಗಿನಿಂದ ನಾನು 4-5 ಬಾರಿ ಸೋತೆ. ಶ್ರೀನಿವಾಸ್ ಸಾಹೇಬ್ರೆ ನಾನು ಸೋತೆ ಇಲ್ಲ. ಕಾಂಗ್ರೆಸ್​ನಲ್ಲಿ ನಿಂತು ಗೆದ್ದಿದ್ದೇನೆ. ಹಾಗೇ ಸ್ವತಂತ್ರ ಅಭ್ಯರ್ಥಿಯಾಗಿ 2 ಬಾರಿ ಗೆದ್ದಿದ್ದೇನೆ . ಬಿಜೆಪಿ ಬಂದು ಸೋತೆ . ನಾನು ಏನಾಗಿಬಿಡುತ್ತೇನೆ ಎನ್ನುವ ಭಯದಲ್ಲಿ ಸೋಲಿಸಿದರು ಎಂದು ಹೇಳಿದರು. ಈ ಮೂಲಕ ಪರೋಕ್ಷವಾಗಿ ಸ್ವಪಕ್ಷ ಬಿಜೆಪಿ ನಾಯಕರ ವಿರುದ್ಧವೇ ಕಿಡಿಕಾರಿದರು.

ಇದನನ್ನೂ ಓದಿ: ಬಿಜೆಪಿ-ಜೆಡಿಎಸ್​​ ಮೈತ್ರಿ ಹಿಂದಿನ ಉದ್ದೇಶ ಬಹಿರಂಗಪಡಿಸಿದ ಮಾಜಿ ಸಚಿವ CP ಯೋಗೇಶ್ವರ್

ಶರಣರ ಆದರ್ಶಗಳನ್ನ ನಾವು ಬಸವ ಕಲ್ಯಾಣಕ್ಕೆ ಹೋದಾಗ ನೆನಪಿಸಿಕೊಳ್ಳುತ್ತೇವೆ. ಹಲವಾರು ವರ್ಷಗಳಿಂದ ಬಸವಕಲ್ಯಾಣಕ್ಕೂ ನನಗೂ ಸಂಬಂಧ ಇದೆ. ಬಸವಣ್ಣನವರ ಆದರ್ಶಪ್ರಾಯವಾದ ಚಿಂತನೆ ಈಗಲೂ ಇದೆ. ಅನೇಕ ವಿಚಾರ ಮಾತನಾಡಿದರೆ ಕೆಲವರಿಗೆ ಕಸಿವಿಸಿಯಾಗುತ್ತೆ. ಒಂದು ಸಣ್ಣ ಅಪಾಚಾರ ಮಾಡದೆ ಬೆಂಗಳೂರಿನಲ್ಲಿ ಜೀವನ ನಡೆಸುತ್ತಿದ್ದೇನೆ. ಇದಕ್ಕೆ ಕಾರಣ ನಮ್ಮ ಗುರುಗಳು ಎಂದರು.

ಮೈಸೂರಿನಲ್ಲಿ ದೊಡ್ಡ ಮಟ್ಟದ ಚಿಂತನ ಶಿಬಿರಗಳು ನಡೆಯುತ್ತಿರುತ್ತವೆ. ದೇಶಕ್ಕೆ ಮಾದರಿ ನಮ್ಮ ಅನುಭವ ಮಂಟಪ ಅಂತ ದೇಶದ ಪ್ರಧಾನಿ ಹೇಳುತ್ತಾರೆ. ಬುದ್ಧವಂತರಿದ್ದರೆ ಅವರನ್ನ ಮೂಲೆ ಗುಂಪು ಮಾಡುವ ಕೆಲಸ ನಡೆಯುತ್ತಿದೆ. ನಮ್ಮವರೇ ನಮ್ಮ ಕಾಲು ಎಳೆಯುವುದು ಬಿಡಬೇಕು ಎಂದು ಹೇಳಿದರು.

ಬಿಹಾರದಲ್ಲಿ ಜಾತಿ ಗಣತಿ‌ ಬಿಡುಗಡೆ ವಿಚಾರವಾಗಿ ಮಾತನಾಡಿ, ಕರ್ನಾಟಕದಲ್ಲಿ ಜಾತಿ ಗಣತಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. 2015ರಲ್ಲಿ ಜಾತಿ ಗಣತಿ ವರದಿಯನ್ನ ನೋಡಿದ್ರೆ ಆಶ್ಚರ್ಯ ಆಗುತ್ತದೆ. ಈ ಸಮಾಜವನ್ನ ಕವಲುದಾರಿಯಲ್ಲಿ ಹೋಗುವ ಸಾಧ್ಯತೆ ಇದೆ. ಬಸವ ಜಯಂತಿ ಕಾರ್ಯಕ್ರಮ ಎರಡು ದಿನ ನಡೆದಿದೆ. ಬೇರೆಯದನ್ನ ಬಿಟ್ಟು ಅರ್ಹತೆ ಇದೆ ಅಂತಹರಿಗೆ ಅವಕಾಶ ಕೊಡಿ. ನೀವುಗಳು ಒಗ್ಗಟ್ಟಾಗಬೇಕು. ಇಲ್ಲ ಅಂದ್ರೆ ಹೇಳೋರೋ ಕೇಳೋರೊ ಇಲ್ಲದಂತಾಗುತ್ತದೆ ಎಂದರು.

ನಮ್ಮಲ್ಲಿ ಎಲ್ಲವೂ ಇದೆ. ಅವಕಾಶ ಬಂದಾಗ ಕಣ್ಮುಚ್ಚಿ ಕುಳಿತುಕೊಳ್ಳುತ್ತೇವೆ. ನಾನು ನಿಷ್ಠುರವಾಗಿ ಮಾತನಾಡುತ್ತೇನೆ. ಅದರಿಂದ ಏನಾಗಿದೆ ಎಂಬ ಬಗ್ಗೆ ಚರ್ಚೆ ಬೇಡ. ಕಷ್ಟ ಪಟ್ಟು ಬೆಂಗಳೂರಿನಲ್ಲಿ ಬೆಳೆದಿದ್ದೇನೆ. ಕೆಲಸಗಾರರು ಎಂಬ ಭಾವನೆ ಇದೆ. ಗೋವಿಂದರಾಜನಗರ ಯಾಕೆ ಬಿಟ್ರಿ ಎಂದು ತಮಿಳುನಾಡಿಗೆ ಹೋಗಿದ್ದಾಗ ಅಲ್ಲಿನ ಮಂತ್ರಿ ಕೇಳಿದ್ರು. ನಾನು ಬಿಡಲಿಲ್ಲ, ನನ್ನನ್ನ ಬೇರೆ ಕ್ಷೇತ್ರಕ್ಕೆ ಕಳುಹಿಸಿದ್ರು ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.

ಕರುಣಾ ನಿಧಿ 9 ಭಾರಿ ಗೆದಿದ್ದಾರೆ. ಪ್ರತಿ ಭಾರಿಯೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಅದೇ ರೀತಿ ಮುಂದೆ ನೀವು ಬೇರೆ ಬೇರೆ ಕ್ಷೇತ್ರಕ್ಕೆ ಹೋಗಿ. ಸೋಲಿನಿಂದ ದೃತಿಗೆಡಬೇಡಿ ಎಂದು ಸಲಹೆ ನೀಡಿದ್ರು ಎಂದು ಹೇಳುವ ಮೂಲಕ ಸೋಮಣ್ಣ ಮತ್ತೆ ಬೇರೆ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವ ಸುಳಿವು ನೀಡಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ