ಮೈಸೂರು, ಅ.16: ವಿಶ್ವವಿಖ್ಯಾತ ನಾಡ ಹಬ್ಬ ದಸರಾ ಮಹೋತ್ಸವಕ್ಕೆ (Mysuru Dasara 2023) ನಿನ್ನೆ ಚಾಮುಂಡಿ ಬೆಟ್ಟದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ವಿಧ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ನಿನ್ನೆಯಿಂದ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ಅಂಬಾ ವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್ ಗತಕಾಲದ ವೈಭವವನ್ನು ಮರುಕಳಿಸಿದೆ. ಇಂದು ದಸರಾ ಸಂಭ್ರಮ ಎರಡನೇ ದಿನಕ್ಕೆ ಕಾಲಿಟ್ಟಿದ್ದು ದಸರಾ ಅಂಗವಾಗಿ ಇಂದು ನಡೆಯುವ ಕಾರ್ಯಕ್ರಮಗಳ ವಿವರ ಇಲ್ಲಿದೆ.
ಬೆಳಗ್ಗೆ 6.30ಕ್ಕೆ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮೀಣ ಯೋಗ & ಸಾಮೂಹಿಕ ಯೋಗಾಭ್ಯಾಸ ನಡೆಯಲಿದೆ. ಶಾಸಕ ದರ್ಶನ್ ಧ್ರುವನಾರಾಯಣ ಯೋಗಾಭ್ಯಾಸ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 9.30ಕ್ಕೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಅಂಬಾವಿಲಾಸ ಅರಮನೆ ಎದುರು ನಡೆಯುವ ರಂಗೋಲಿ ಸ್ಪರ್ಧೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಲಿದ್ದಾರೆ. ಜೆ.ಕೆ.ಗ್ರೌಂಡ್ನಲ್ಲಿ ಬೆಳಗ್ಗೆ 11 ಗಂಟೆಗೆ ಮಹಿಳಾ ದಸರಾ-2023ಕ್ಕೆ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಲಿದ್ದಾರೆ. ಹಾಗೂ ವಸ್ತು ಪ್ರದರ್ಶನ & ಮಾರಾಟ ಮೇಳಕ್ಕೆ ಚಾಲನೆ ನೀಡಲಿದ್ದಾರೆ.
ಬೆಳಗ್ಗೆ 11ಕ್ಕೆ ಲಲಿತ ಕಲೆ & ಕರಕುಶಲ, ಮಕ್ಕಳು ಚಿತ್ರ ಬಿಡಿಸುವ ಸ್ಪರ್ಧೆ ನಡೆಯಲಿದ್ದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಹೆಚ್.ಸಿ ಮಹದೇವಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಗರದ ಕರ್ನಾಟಕ ಕಲಾಮಂದಿರ ಹೊರ ಆವರಣದಲ್ಲಿ ಸ್ಪರ್ಧೆ ನಡೆಯಲಿದೆ. ಕರ್ನಾಟಕ ಕಲಾಮಂದಿರ ಒಳ ಆವರಣದಲ್ಲಿ ಬೆ.11.30ಕ್ಕೆ ಕಾವ್ಯ ಸಂಭ್ರಮ, ಹಾಸ್ಯ-ಮಟುಕು-ಜಾನಪದ ಕಾರ್ಯಕ್ರಮ ನಡೆಯಲಿದ್ದು ಪ್ರಸಿದ್ಧ ಕವಿ ಜಯಂತ ಕಾಯ್ಕಿಣಿ ಉದ್ಘಾಟಿಸಲಿದ್ದಾರೆ.
ಬೆಳಗ್ಗೆ 11ಗಂಟೆಗೆ ಮಾನಸ ಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಚಿಗುರು ಕವಿಗೋಷ್ಠಿ ಮತ್ತು ಮಹಿಳಾ ಕವಿಗೋಷ್ಠಿ ನಡೆಯಲಿದ್ದು ಖ್ಯಾತ ಕವಯತ್ರಿ ಸವಿತಾ ನಾಗಭೂಷಣ್ರಿಂದ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಬೆಳಗ್ಗೆ 11 ಗಂಟೆಗೆ ಜಗನ್ಮೋಹನ ಅರಮನೆಯಲ್ಲಿ ಮಕ್ಕಳ ದಸರಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಪ್ರಾಥಮಿ&ಪ್ರೌಡ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಚಾಲನೆ ನೀಡಲಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ಮೈಸೂರು ಪ್ರವಾಸ ಕೈಗೊಂಡಿದ್ದು ಇಂದು ಎರಡನೇ ದಿನ ಕೂಡ ಮೈಸೂರಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಮೈಸೂರಿನ ಯುವರಾಜ ಕಾಲೇಜು ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯುವ ಯುವರಾಜ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 4ಕ್ಕೆ ಸಿದ್ಧಾರ್ಥ ನಗರದ ಕನಕ ಸಮುದಾಯ ಭವನದಲ್ಲಿ ನಡೆಯಲಿರುವ ನೂತನ ಶಾಸಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ