Mysuru Dasara, Navratri 2023 Celebration Highlights Updates: ಕರ್ನಾಟಕದಾದ್ಯಂತ ಶರನ್ನನವರಾತ್ರಿ (Navaratri) ಹಬ್ಬವನ್ನು ಭಕ್ತಿ-ಭಾವದಿಂದ ಆಚರಿಸಲಾಗುತ್ತಿದೆ. ನವರಾತ್ರಿಯ 9ನೇ ದಿನವಾದ ಇಂದು (ಅ.23) ನವಶಕ್ತಿಯರಲ್ಲಿ 9ನೇ ಅವತಾರವಾದ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ಪ್ರಾತಃಕಾಲದಿಂದಲೇ ನಾಡಿನ ದೇವಿ ದೇವಾಲಯಗಳಲ್ಲಿ ಪೂಜಾಕೈಕರ್ಯಗಳು ಆರಂಭವಾಗಿವೆ. ಇನ್ನು ಸೋಮವಾರ ಆಯುಧಪೂಜೆ ಆಗಿದ್ದು, ಜನರು ತಾವು ಕಾಯಕಕ್ಕೆ ಬಳಸುವ ವಸ್ತುಗಳನ್ನು ಪೂಜಿಸುತ್ತಿದ್ದಾರೆ. ನಾಡಹಬ್ಬ ದಸರಾವನ್ನು ಮೈಸೂರಿನಲ್ಲಿ ಸಾಕಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮೈಸೂರಿನಲ್ಲಿ (Mysore) ಹಬ್ಬದ ಸಂಭ್ರಮ ಕಳೆಗಟ್ಟಿದೆ. ಕಳೆದ ಎಂಟುದಿನಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯುತ್ತಿದೆ. ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ಆಯುಧ ಪೂಜೆ ಹಿನ್ನೆಲೆಯಲ್ಲಿ ಇಂದು ನಸುಕಿನ ಜಾವದಿಂದ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೆಟ್ಸ್ ಇಲ್ಲಿದೆ….
ವಿದ್ಯುತ್ ದೀಪಾಲಂಕಾರ ವೀಕ್ಷಣೆ ಬಳಿಕ ಸಿಎಂ ಸಿದ್ರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಮುಂದಿನ ವರುಷ ಮಳೆ, ಬೆಳೆಯಾದರೆ ಮೈಸೂರು ದಸರಾ ವಿಜೃಂಭಣೆಯಿಂದ ಮಾಡುತ್ತೇವೆ. ಈ ವರುಷ ಅರ್ಥಪೂರ್ಣವಾಗಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಮೈಸೂರಿನಾದ್ಯಂತ ರೌಂಡ್ಸ್ ಹಾಕುವ ಮೂಲಕ ಲೈಟಿಂಗ್ಸ್ ವೀಕ್ಷಣೆ ಮಾಡಿದ್ದಾರೆ. ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಭೈರತಿ ಸುರೇಶ್, ಡಾ.ಎಂ.ಸಿ.ಸುಧಾಕರ್ ಸಿಎಂ ಗೆ ಸಾಥ್ ನೀಡಿದ್ದಾರೆ. ಬಸವೇಶ್ವರ ವೃತ್ತದಿಂದ ಲೈಟಿಂಗ್ಸ್ ನೋಡಲು ತೆರಳಿದ್ದಾರೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2023 ಪ್ರಯುಕ್ತ ಪಂಜಿನ ಕವಾಯತು ಅಂತಿಮ ಸುತ್ತಿನ ತಾಲೀಮು ಮಾಡಲಾಯಿತು. ಬನ್ನಿ ಮಂಟಪ ಮೈದಾನದಲ್ಲಿ ಕಿಕ್ಕಿರಿದು ಜನಸ್ತೋಮ ಜಮಾಯಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಟಾರ್ಚ್ ಲೈಟ್ ಪರೇಡ್ ರಿಹರ್ಸಲ್ ಪ್ರಾರಂಭವಾಗಲಿದೆ.
ದೇವರಾಜ ಮೊಹಲ್ಲಾಲ್ಲಿರುವ ಹಜರತ್ ಇಮಾಮ್ಬಷ ವಲಿ ದರ್ಗಾಗೆ ತೆರಳಿ ಗಜಪಡೆಗಳು ನಮಿಸಿವೆ. ದರ್ಗಾದಲ್ಲಿ ಧೂಪ ಹಾಕಿ ದೃಷ್ಟಿ ತೆಗೆದು ಪ್ರಾರ್ಥನೆ ಮಾಡಲಾಗಿದೆ. ಪ್ರತಿ ವರ್ಷ ಜಂಬೂಸವಾರಿಗೂ ಮುನ್ನ ದರ್ಗಾಗೆ ಗಜಪಡೆ ಆಗಮಿಸುತ್ತವೆ ಆ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ರಾಜರ ಕಾಲದಿಂದಲೂ ಈ ಪದ್ದತಿ ನಡೆದು ಬಂದಿದೆ.
ಏರ್ ಶೋ ಬಹಳ ಚೆನ್ನಾಗಿತ್ತು. ಕಳೆದ ಬಾರಿ ದೆಹಲಿಗೆ ಹೋದಾಗ ರಕ್ಷಣಾ ಸಚಿವರನ್ನ ಭೇಟಿಯಾಗಿ ಏರ್ ಆಯೋಜನೆ ಬಗ್ಗೆ ಮಾತಾನಾಡಿದ್ದೆ. ಪಾಪ ಅವರು ಕೂಡ ಕೂಡಲೇ ಸ್ಪಂದಿಸಿದ್ದರು. ಕೂಡಲೇ ವಾಯುಪಡೆಗೆ ಸೂಚನೆ ನೀಡಿದ್ದರು. ಅದರಂತೆ ಇಂದು ಆಯೋಜನೆ ಆಗಿದೆ. ಏರ್ ಶೋ ಕೂಡ ಚೆನ್ನಾಗಿ ಆಗಿದೆ. ಜನ ಕೂಡ ಸಂತಸ ಪಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಾಗಲಕೋಟೆ: ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ವೆಂಕಟರಮಣ ರಥೋತ್ಸವ ನಡೆದಿದ್ದು, ಜನರು ಕಣ್ತುಂಬಿಕೊಂಡಿದ್ದಾರೆ. ತೇರದಾಳ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥೋತ್ಸವ ಮೆರವಣಿಗೆ ಮಾಡಲಾಗಿದ್ದು, ರಥೋತ್ಸವಕ್ಕೆ ರಾಜ್ಯ, ಹೊರ ರಾಜ್ಯದಿಂದ ನೂರಾರು ಭಕ್ತರು ಆಗಮಿಸಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2023 ಪ್ರಯುಕ್ತ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಏರ್ಶೋ ಆರಂಭವಾಗಿದೆ. ವೈಮಾನಿಕ ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಿಸುತ್ತಿದ್ದಾರೆ.
ಮೈಸೂರಿನಲ್ಲಿ ದಸರಾ ಏರ್ ಶೋಗೆ ಕ್ಷಣಗಣನೆ ಶುರುವಾಗಿದ್ದು, 4 ಘಂಟೆಗೆ ಆರಂಭವಾಗಲಿದೆ. ಬನ್ನಿ ಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ.
ವಿಜಯಪುರ: ನಾಡಿನೆಲ್ಲೆಡೆ ಇಂದು ವಿಜಯದಶಮಿ ಆಯುಧ ಪೂಜೆ ಹಬ್ಬದ ಸಂಭ್ರಮ ಹಿನ್ನೆಲೆ ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಮಾಡಲಾಗಿದೆ. ಪೊಲೀಸ್ ಠಾಣೆಯಲ್ಲಿದ್ದ ಶಸ್ತ್ರಾಸ್ತ್ರ, ವಾಹನಗಳಿಗೆ ಪೊಲೀಸರಿಂದ ಪೂಜೆ ಮಾಡಿ, ಬಳಿಕ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2023 ಪ್ರಯುಕ್ತ ಆಯುಧ ಪೂಜಾ ಕೈಂಕರ್ಯವನ್ನು ಯದುವೀರ್ ಒಡೆಯರ್ ನೆರವೇರಿಸಿದ್ದಾರೆ. ಸುಮಾರು 1 ಗಂಟೆ ಕಾಲ ಸವಾರಿ ತೊಟ್ಟಿಯಲ್ಲಿ ಆಯುಧ ಪೂಜೆ ನಡೆಯಿತು. ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಫಿರಂಗಿಗಳು, ರಾಜಮನೆತನದವರು ಬಳಸುತ್ತಿದ್ದ ಕಾರುಗಳಿಗೆ ಪೂಜೆ ಸಲ್ಲಿಸಲಾಗಿದೆ. ಬಳಿಕ ನಾಡಗೀತೆಗೆ ಗೌರವ ಸಲ್ಲಿಸುವ ಮೂಲಕ ವಿಶೇಷ ಪೂಜೆ ಪೂರ್ಣಗೊಂಡಿತು.
ಮೈಸೂರು: ಅರಮನೆಯಲ್ಲಿ ಆಯುಧ ಪೂಜಾ ಕಾರ್ಯ ಆರಂಭವಾಗಿದ್ದು, ಕಲ್ಯಾಣ ಮಂಟಪದ ಆವರಣದಲ್ಲಿ ಆಯುಧಗಳಿಗೆ ಪೂಜೆ ಮಾಡಲಾಗುತ್ತಿದೆ. ರಾಜ ಯಧುವೀರ್ ಒಡೆಯರ್ ಅರಮನೆ ಸಂಪ್ರದಾಯದಂತೆ ಆಯುಧಗಳಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಕತ್ತಿ ಗುರಾಣಿ, ಫಿರಂಗಿ ಸೇರಿದಂತೆ ಎಲ್ಲಾ ಶಸ್ತ್ರಾಸ್ತ್ರಗಳಿಗೆ ಪೂಜೆ ಮಾಡುತ್ತಿದ್ದಾರೆ. ಆಯುಧಗಳಿಗೆ ಪೂಜೆ ಸಲ್ಲಿಸಿದ ಬಳಿಕ ಪಟ್ಟದ ಹಸು, ಪಟ್ಟದ ಆನೆ, ಪಟ್ಟದ ಕುದುರೆಗೆ ಪೂಜೆ.
ರಾಜ ಮನೆತನದ ವಾಹನಗಳಿಗೂ ಪೂಜೆ ಸಲ್ಲಿಸಲಾಗುದೆ. ಪೂಜೆ ಕಾರ್ಯಗಳನ್ನು ಪ್ರಮೋದ ದೇವಿ ಒಡೆಯರ್, ತ್ರಿಷಿಕಾ ಒಡೆಯರ್, ಆದ್ಯವೀರ್ ನೋಡುತ್ತಾ ನಿಂತಿದ್ದಾರೆ.
ಮೈಸೂರು: ಅಂಬಾವಿಲಾಸ ಅರಮನೆಯಲ್ಲಿ ಆಯುಧಪೂಜೆ ನಡೆಯುತ್ತಿದೆ. ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಸವಾರಿ ತೊಟ್ಟಿಗೆ ಆಗಮಿಸಿದ್ದು, ರಾಜ ಯದುವೀರ್ ಒಡೆಯರ್ ಪೂಜೆ ನೆರವೇರಿಸಲಿದ್ದಾರೆ. ಅರಮನೆಯ ಖಾಸಾ ಆಯುಧಗಳು ಹಾಗೂ ಕಾರುಗಳಿಗೂ ಪೂಜೆ ಮಾಡಲಿದ್ದಾರೆ.
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಸಿಎಂ ಮೈಸೂರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಬೆಂಗಳೂರಿನಿಂದ ರಸ್ತೆ ಮೂಲಕ ಪ್ರಯಾಣ ಆರಂಭಿಸಿ ಮೈಸೂರಿಗೆ ತಲುಪಲಿದ್ದಾರೆ. ಮಹಾರಾಣಿ ವಿಜ್ಞಾನ ಕಾಲೇಜಿನ ಹಾಸ್ಟೆಲ್ಗೆ ಭೇಟಿ ನೀಡಲಿದ್ದಾರೆ. ನಂತರ ಇಂದು ಸಂಜೆ 4 ಗಂಟೆಗೆ ನಡೆಯುವ ವೈಮಾನಿಕ ಪ್ರದರ್ಶನ ವೀಕ್ಷಣೆ ಮಾಡಲಿದ್ದಾರೆ. ಮಂಗಳವಾರ ಬೆಳಗ್ಗೆ 8.30ಕ್ಕೆ ಸುತ್ತೂರು ಶಾಖಾ ಮಠಕ್ಕೆ ತೆರಳಲಿದ್ದಾರೆ. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡಿಬೆಟ್ಟಕ್ಕೆ ತೆರಳಲಿದ್ದಾರೆ. ಅ.24 ಮಧ್ಯಾಹ್ನ 1.46ಕ್ಕೆ ನಂದಿ ಧ್ವಜಕ್ಕೆ ಪೂಜೆ ನೆರವೇರಿಸಲಿದ್ದಾರೆ. ಸಂಜೆ 4.40ಕ್ಕೆ ವಿಜಯದಶಮಿ ಮೆರವಣಿಗೆ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ. ರಾತ್ರಿ 7.30ಕ್ಕೆ ಪಂಜಿನ ಕವಾಯತು ವೀಕ್ಷಿಸಲಿದ್ದಾರೆ. ಅ.25ರಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಅ.25ರಂದು ಸಂಜೆ ಮೈಸೂರಿನಿಂದ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರು ಆಯುಧಪೂಜೆ, ವಿಜಯದಶಮಿ ಹಬ್ಬದ ಶುಭಾಶಯ ತಿಳಿಸಿದರು. ನಾಡಿನ ಜನತೆಗೆ ಆಯುಧ ಪೂಜೆ, ವಿಜಯದಶಮಿ ಹಬ್ಬದ ಶುಭಾಶಯಗಳು. ನಾಡದೇವತೆ ಚಾಮುಂಡೇಶ್ವರಿ ತಾಯಿ ಸಕಲ ಭಕ್ತರಿಗೆ ಆರೋಗ್ಯ, ಆಯಸ್ಸು ನೆಮ್ಮದಿ ಕರುಣಿಸಿ ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಲಿ ಎಂದು ಪ್ರಾರ್ಥಿಸ್ತೇನೆ ಎಂದು ಟ್ವಿಟರ್ ಮೂಲಕ ಶುಭಾಶಯ ತಿಳಿಸಿದರು.
ಬೆಂಗಳೂರು: ಮೈಸೂರು ದಸರಾ ಜೊತೆಗೆ ಬೆಂಗಳೂರು ದಸರಾ ಹಬ್ಬಕ್ಕೂ ಭದ್ರತೆ ಹೆಚ್ಚಿದೆ. ಮಂಗಳವಾರ ನಡೆಯುವ ಅದ್ಧೂರಿ ದಸರಾ ರಥಗಳ ಮೆರವಣಿಗೆಗೆ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಆರ್.ಟಿ.ನಗರದ ಮಠದಹಳ್ಳಿ ಮೈದಾನಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಭದ್ರತೆಗೆ ಬರೋಬ್ಬರಿ 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಹೆಬ್ಬಾಳ, ಡಿ.ಜೆ.ಹಳ್ಳಿ ಸೇರಿ ಹಲವೆಡೆಯಿಂದ ದೇವರ ರಥಗಳು ಬರಲಿವೆ. ಹಲವು ಕಾರ್ಯಕ್ರಮ ಹಿನ್ನೆಲೆಯಲ್ಲೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿಲಿದ್ದಾರೆ. ಉತ್ತರ ವಿಭಾಗದ ಡಿಸಿಪಿ ಸೈದುಲ್ಲಾ ಅದಾವತ್ ನೇತೃತ್ವದಲ್ಲಿ ಎಸಿಪಿ, ಪಿಐ, ಪಿಎಸ್ಐಗಳು ಸೇರಿದಂತೆ 2000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ದಸರಾ ಹಬ್ಬದ ಭದ್ರತೆಗೆ 10ಕ್ಕೂ ಹೆಚ್ಚು ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
ಮೈಸೂರು: ದಸರಾ ವಜ್ರ ಮುಷ್ಟಿ ಕಾಳಗಕ್ಕೆ ಚಾಮರಾಜನಗರದ ವೆಂಕಟೇಶ್ ಜಟ್ಟಿ ಆಯ್ಕೆಯಾಗಿದ್ದಾರೆ. ವೆಂಕಟೇಶ್ ಜಟ್ಟಿ, ಪುಟ್ಟರಂಗ ಜಟ್ಟಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ದಸರಾ ಜಂಬೂಸವಾರಿ ದಿನದಂದು ಮೈಸೂರು ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ನಡೆಯಲಿರುವ ವಜ್ರಮುಷ್ಟಿ ಕಾಳಗ ನಡೆಯಲಿದೆ. ವಜ್ರಮುಷ್ಟಿ ಕಾಳಗದ ಬಳಿಕ ಯದುವೀರ್ ಒಡೆಯರ್ ಅವರು ಬನ್ನಿ ಪೂಜೆಗೆ ತೆರಳಲಿದ್ದಾರೆ. ಚಾಮರಾಜನಗರದಲ್ಲಿ ಜಟ್ಟಿಗಳ ಸಾಂಪ್ರದಾಯಿಕ ಪೂಜೆ ಬಳಿಕ ವೆಂಕಟೇಶ್ ಜಟ್ಟಿ ಮೈಸೂರು ಅರಮನೆಗೆ ತೆರಳಲಿದ್ದಾರೆ.
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದ ಕೇಂದ್ರ ಬಿಂದು ಗಜಪಡೆಯ ಮಾವುತರು ಮತ್ತು ಕಾವಾಡಿಗಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅರಮನೆ ಆವರಣದಲ್ಲಿ ಉಪಾಹಾರ ವ್ಯವಸ್ಥೆ ಮಾಡಿದರು. ಸಿದ್ದಗೊಂಡ ವಿಶೇಷ ಉಪಾಹಾರವನ್ನು ಮಾವುತರು ಮತ್ತು ಕಾವಾಡಿಗಳಿಗೆ ಶೋಭಾ ಕರಂದ್ಲಾಜೆ ಬಡಿಸಿದರು. ಸಚಿವೆಗೆ ಸಂಸದ ಪ್ರತಾಪ್ ಸಿಂಹ ಹಾಗೂ ಸ್ಥಳಿಯ ಬಿಜೆಪಿ ಮುಖಂಡರು ಸಾಥ್ ನೀಡಿದರು.
ಮೈಸೂರು: ನಾಡಿನೆಲ್ಲೆಡೆ ಆಯುಧಪೂಜೆ ಸಡಗರ ಸಂಭ್ರಮ ಮನೆ ಮಾಡಿದೆ. ಮೈಸೂರಿನಲ್ಲಿ ಇಂದು ತ್ರಿಬಲ್ ಧಮಾಕ. ಅರಮನೆಯಲ್ಲಿ ರಾಜಪರಂಪರೆ ಆಯುಧ ಪೂಜೆ ನಡೆಯುತ್ತಿದೆ. ಸಂಜೆ 4 ಗಂಟೆಗೆ ವೈಮಾನಿಕ ಪ್ರದರ್ಶನ ನಡೆಯಲಿದೆ. ವೈಮಾನಿಕ ಪ್ರದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ರಾತ್ರಿ 7 ಗಂಟೆಗೆ ಪಂಜಿನ ಕವಾಯತು ರಿಹರ್ಸಲ್ ನಡೆಯಲಿದೆ.
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರಿಗೆ ತೆರಳಲಿದ್ದಾರೆ. ಮೈಸೂರಿನಲ್ಲಿ ನಡೆಯುವ ಏರ್ ಶೋ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಿಂದ ನಿರ್ಗಮಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಸಾಥ್ ನೀಡಲಿದ್ದಾರೆ. ಇಡೀ ದಿನ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ಮಂಗಳವಾರ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ.
ಮೈಸೂರು: ಆಯುಧಪೂಜೆ ನಿಮಿತ್ತ ಕೋಡಿ ಸೋಮೇಶ್ವರ ದೇವಸ್ಥಾನದಲ್ಲಿ ಪೂಜೆ ಮುಕ್ತಾಯವಾಗಿದೆ. ಇದೀಗ ಚಿನ್ನದ ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿ ಮೆರವಣಿಗೆ ಮೂಲಕ ಅರಮನೆಗೆ ವಾಪಸಾಗಲಿದೆ. ಪಟ್ಟದ ಆನೆ ಪಟ್ಟದ ಹಸು ಪಟ್ಟದ ಕುದುರೆ ರಾಜಪರಿವಾರದವರು ಮೆರವಣಿಗೆಯಲ್ಲಿ ಸಾಗಿ ಬರಲಿದ್ದಾರೆ.
ಮೈಸೂರು: ಇಂದು ನಾಡಿನೆಲ್ಲೆಡೆ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದೆ. ಮೈಸೂರು ಅರಮನೆಯಲ್ಲೂ ರಾಜ ಪರಂಪರೆ ಆಯುಧ ಪೂಜೆಯ ಕೈಂಕರ್ಯಗಳು ಆರಂಭವಾಗಿವೆ. ಬೆಳಗ್ಗೆ 5.30ಕ್ಕೆ ಚಂಡಿಹೋಮದೊಂದಿಗೆ ಪೂಜಾ ವಿಧಿವಿಧಾನಗಳು ಪ್ರಾರಂಭವಾಗಿವೆ. ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳಿಗೆ ಪೂಜೆ. ಬೆಳಗ್ಗೆ 6 ಗಂಟೆ 5 ನಿಮಿಷದಿಂದ 6.15ಕ್ಕೆ ಅರಮನೆಯ ಕೋಡಿ ಸೋಮೇಶ್ವರ ದೇಗುಲಕ್ಕೆ ಖಾಸಾ ಆಯುಧಗಳು ರವಾನೆ ಮಾಡಲಾಗಿತ್ತು. ಬೆಳಗ್ಗೆ 7.15ಕ್ಕೆ ಖಾಸಾ ಆಯುಧಗಳು ದೇಗುಲದಿಂದ ಅರಮನೆಗೆ ವಾಪಸ್ ಆಗಿವೆ. ಬೆಳಗ್ಗೆ 9.30ಕ್ಕೆ ಚಂಡಿಹೋಮ ಪೂರ್ಣಾಹುತಿ ಕಾರ್ಯಕ್ರಮ ನಡೆಯುತ್ತದೆ. ಬೆಳಗ್ಗೆ 11.45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟಣದ ಆನೆ, ಕುದುರೆ, ಹಸು ಆಗಮಿಸುತ್ತವೆ. ಮಧ್ಯಾಹ್ನ 12.20ರಿಂದ ಮೈಸೂರು ಅರಮನೆಯಲ್ಲಿ ಆಯುಧಪೂಜೆ ಆರಂಭವಾಗುತ್ತದೆ. ಅರಮನೆಯಲ್ಲಿ ಮಧ್ಯಾಹ್ನ 12.45ರವರೆಗೆ ಆಯುಧಪೂಜೆ ನಡೆಯುತ್ತವೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧಗಳಿಗೆ ಪೂಜೆ ಮಾಡುತ್ತಾರೆ. ಸಂಜೆ ಖಾಸಗಿ ದರ್ಬಾರ್ ನಂತರ ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ ಮಾಡಲಾಗುತ್ತದೆ. ಬಳಿಕ ಅಂಬಾವಿಲಾಸದಲ್ಲಿ ದಪ್ತಾರ್ ಪೂಜೆ ಕಾರ್ಯಕ್ರಮ ನಡೆಯುತ್ತದೆ. ಮಹಾಸನ್ನಿಧಾನದಲ್ಲಿ ಯದುವೀರರಿಂದ ಅಮಲದೇವಿ ದರ್ಶನ ಪಡೆಯುತ್ತಾರೆ. ಈ ಮೂಲಕ ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಮುಕ್ತಾಯಗೊಳ್ಳುತ್ತದೆ.
Published On - 7:45 am, Mon, 23 October 23