ಸತತ ಎರಡು ಬಾರಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಲಿಲ್ಲ. ಬದಲಿಗೆ ಮೈಸೂರು ಸಂಸ್ಥಾನದ 27ನೇ ಮಹರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಟಿಕೆಟ್ ನೀಡಿತು. ಯದುವೀರ್ ಒಡೆಯರ್ ಅವರಿಗೆ ಇದು ಮೊದಲ ಲೋಕಸಭೆ ಚುನಾವಣೆಯಾಗಿತ್ತು. ಮೊದಲ ಚುನಾವಣೆಯಲ್ಲೇ ಬಿಜೆಪಿ ಅಭ್ಯರ್ಥಿ ಯದುವೀರ ಒಡೆಯರ್ ಅವರು ಕಾಂಗ್ರೆಸ್ನ ಎಂ. ಲಕ್ಷ್ಮಣ ಅವರ ವಿರುದ್ಧ 1,39,262 ಮತಗಳ ಅಂತರದಿಂದ ಅಭೂತಪೂರ್ವ ಗೆಲವು ತಮ್ಮದಾಗಿಸಿಕೊಂಡಿದ್ದಾರೆ.
ಶ್ರೀಕಂಠದತ್ತ ಒಡೆಯರ್ ಮತ್ತು ಪ್ರಮೋದಾ ದೇವಿ ದಂಪತಿಗಳಿಗೆ ಮಕ್ಕಳಿಲ್ಲದ್ದರಿಂದ ಈ ನಿರ್ಧಾರ ಕೈಗೊಳ್ಳಬೇಕಾಯಿತು. ದಿ.ಶ್ರೀಕಂಠದತ್ತ ಒಡೆಯರು ನಿಧನರಾದ 14 ತಿಂಗಳ ಬಳಿಕ ಯದುವಂಶದ 27ನೆಯ ಉತ್ತರಾಧಿಕಾರಿಯಾಗಿ ಮಹಾರಾಣಿ ಪ್ರಮೋದಾದೇವಿಯವರು 2015ರ ಫೆಬ್ರವರಿ 23 ರಂದು ಯದುವೀರ್ ಅವರನ್ನು ದತ್ತುಪುತ್ರರಾಗಿ ಸ್ವೀಕರಿಸಿದರು.
ಯದುವೀರರ ಒಡೆಯರ್ ಅವರ ಮೊದಲ ಹೆಸರು ‘ಯದುವೀರ್ ಗೋಪಾಲರಾಜೇ ಅರಸ್’. ದತ್ತು ಸ್ವೀಕಾರ ಸಮಾರಂಭದ ಸಮಯದಲ್ಲಿ ಈ ಹೆಸರನ್ನು ಬದಲಾಯಿಸಲಾಯಿತು. ಯದುವೀರ ಒಡೆಯವರ್ ಅವರ ತಂದೆ ಬೆಟ್ಟದ ಕೋಟೆ ಅರಸು ಪರಂಪರೆಯವರು. ಜಯಚಾಮರಾಜ ಒಡೆಯರ ಮರಿಮಗ. ದಿ.ಶ್ರೀಕಂಠದತ್ತ ಒಡೆಯರ ಹಿರಿಯ ಸೋದರಿ ದಿ. ಗಾಯತ್ರಿ ದೇವಿ ಮತ್ತು ದಿ. ರಾಮಚಂದ್ರ ಅರಸ್ರ ಪುತ್ರಿ ತ್ರಿಪುರಸುಂದರೀದೇವಿ ಮತ್ತು ಸ್ವರೂಪ್ ಗೋಪಾಲರಾಜೇ ಅರಸ್ ಅವರ ಏಕೈಕ ಪುತ್ರ. ಯದುವೀರ್ ಅವರಿಗೆ ಓರ್ವ ಸೋದರಿ ‘ಜಯಾತ್ಮಿಕಾ’ ಇದ್ದಾರೆ.
ಮಹಾರಾಣಿ ಪ್ರಮೋದಾದೇವಿಯವರು ದತ್ತು ಪಡೆಯುವಾಗ ಯದುವೀರ್ ಅವರಿಗೆ 22 ವರ್ಷ. 2015ರ ಮೇ 28ರ ಗುರುವಾರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರಿತು. ಮೈಸೂರು ರಾಜವಂಶದ 27ನೇ ಅರಸರಾಗಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನವರಾತ್ರಿ ಸಂದರ್ಭದಲ್ಲಿ ಸಿಂಹಾಸನವೇರಿದ ಮೊದಲ ಬಾರಿಗೆ ಒಂಬತ್ತು ದಿನಗಳ ಕಾಲ ಖಾಸಗಿ ದರ್ಬಾರ್ ನಡೆಸಿಕೊಟ್ಟರು.
ನಂತರ ಯದುವೀರ್ ಅವರು 27 ಜೂನ್ 2016ರಲ್ಲಿ ತ್ರಿಶಿಖಾಕುಮಾರಿಯವರನ್ನು ಮದುವೆಯಾದರು. ತ್ರಿಶಿಖಾಕುಮಾರಿಯವರು ರಾಜಾಸ್ಥಾನದ ಡುಂಗರ್ಪುರ್ ರಾಜವಂಶದ ಹರ್ಷ್ ವರ್ಧನ್ ಸಿಂಗ್, ಮತ್ತು ಮಹೇಶ್ರಿ ಕುಮಾರಿಯವರ ಪುತ್ರಿ.
ಯದುವೀರ್ ಒಡೆಯರ್ ಅವರು ಬೆಂಗಳೂರಿನ ವಿದ್ಯಾನಿಕೇತನ್ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಿಕ್ಷಣ ಪೂರೈಸಿದರು. ಕೆನೆಡಿಯನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ 12ನೇ ತರಗತಿಯವರೆಗೆ ಓದಿದರು. ಬಳಿಕ ಅಮೆರಿಕದಲ್ಲಿ ಬಾಸ್ಟನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ಆಂಗ್ಲಭಾಷಾ ವಿಷಯಗಳಲ್ಲಿ ಬಿಎ ಪದವಿ ಪಡೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ