ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಯುಧ ಪೂಜೆ ಸಂಭ್ರಮ ಮನೆ ಮಾಡಿದೆ. ವಿಶ್ವವಿಖ್ಯಾತ ದಸರಾ ಹಬ್ಬಕ್ಕಾಗಿ ಮಧುವಣಗಿತ್ತಿಯಂತೆ ಸಿಂಗಾರಗೊಂಡಿರುವ ಮೈಸೂರು ಹೆಜ್ಜೆ ಹೆಜ್ಜೆಗೂ ಮನಸೆಳೆಯುತ್ತಿದೆ. ಗಜಪಡೆಗಳ ತಾಲೀಮು.. ಝಗಮಗಿಸುತ್ತಿರುವ ಪ್ಯಾಲೇಸ್.. ಪ್ರವಾಸಿಗರ ದಂಡು.. ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು ನಿಜಕ್ಕೂ ನಯನ ಮನೋಹರ.
ಮೈಸೂರು ಅರಮನೆಯಲ್ಲಿಂದು ಆಯುಧ ಪೂಜೆ ಸಡಗರ
ಅಂದಹಾಗೆ ಮೈಸೂರು ಅರಮನೆಯಲ್ಲಿ ರಾಜ ಪರಂಪರೆಯ ಆಯುಧ ಪೂಜೆ ನಡೆದಿದೆ. ಆಯುಧ ಪೂಜೆ ನಿಮಿತ್ತ ಬೆಳಗ್ಗೆ 5.30ರಿಂದ ಅರಮನೆಯಲ್ಲಿ ಪೂಜಾ ವಿಧಿ ವಿಧಾನಗಳು ಆರಂಭವಾಗಿವೆ. ನಂತರ 7.45ರ ಸುಮಾರಿಗೆ ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ರಾಜರ ಆನೆ, ಕುದುರೆ, ಹಸು, ಪಟ್ಟದ ಕತ್ತಿ ಪಲ್ಲಕ್ಕಿ ಸೇರಿ ಎಲ್ಲಾ ಆಯುಧಗಳನ್ನು ತಂದು ಪೂಜೆ ಮಾಡಲಾಗಿದೆ. ಪೂರ್ಣಕುಂಭ ಹೊತ್ತ ಮಹಿಳೆಯರು ಜೊತೆಗೆ ರಾಜಪರಿವಾರದವರು ಭಾಗಿಯಾಗಿರುವ ಮೆರವಣಿಗೆ ಸೋಮೇಶ್ವರ ದೇಗುಲ ತಲುಪಿದೆ. ಇಲ್ಲಿ ವಿಶೇಷ ಪೂಜೆ ಸಲ್ಲಿಸಿ ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆ ಕಲ್ಯಾಣಮಂಟಪಕ್ಕೆ ಮೆರವಣಿಗೆ ಆಗಮಿಸಿದೆ. ಗ ಬೆಳಗ್ಗೆ 11.02 ರಿಂದ 11.22ರ ಶುಭ ಮುಹೂರ್ತದಲ್ಲಿ ಯದುವೀರ ಕೃಷದತ್ತ ಚಾಮರಾಜ ಒಡೆಯರ್ ಆಯುಧಪೂಜೆ ಪೂಜೆಯನ್ನು ನೆರವೇರಿಸಿದ್ದಾರೆ. ತಮ್ಮ ಪೂರ್ವಿಕರು ಬಳಸುತ್ತಿದ್ದ ಕತ್ತಿ, ಗುರಾಣಿ ಈಟಿ ಸೇರಿದಂತೆ ರಾಜಮನೆತನದ ಆಯುಧಗಳಿಗೆ ಪೂಜೆ ಸಲ್ಲಿಸಲಾಗಿದೆ. ಇದರ ಜೊತೆಗೆ ರಾಜಪರಿವಾರದ ಆನೆ ಕುದುರೆ ಹಸು ಪಲ್ಲಕ್ಕಿ ಕಾರುಗಳಿಗೂ ಪೂಜೆ ಸಲ್ಲಿಸಿದ್ದಾರೆ.
ಇನ್ನು ಯದುವೀರ ಕೃಷದತ್ತ ಚಾಮರಾಜ ಒಡೆಯರ್ ಪೂಜೆ ನಂತರ ಕೋಡಿ ಸೋಮೇಶ್ವರ ದೇವಾಲಯಕ್ಕೆ ಪಟ್ಟದ ಕತ್ತಿ, ಪಲ್ಲಕ್ಕಿ ತಂದು ಪೂಜೆ ನೆರವೇರಿಸಲಾಯಿತು. ಕೋಡಿ ಸೋಮೇಶ್ವರ ದೇವಾಲಯದಲ್ಲಿ ಯದುವಂಶ ಪ್ರಾರಂಭವಾಗಿದ್ದು, ಈ ಕಾರಣದಿಂದಲೇ ಅಲ್ಲೆ ಮೊದಲ ಪೂಜೆ ಹಾಗೂ ಕೊನೆ ಪೂಜೆ ಕೂಡ ಎಂದು ಅರಮನೆ ಪುರೋಹಿತ ಸುಬ್ರಮಣ್ಯ ತಿಳಿಸಿದ್ದರು. ಗಜಪಡೆ ಪೂಜೆಯಲ್ಲಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಕುಟುಂಬ ಭಾಗಿತ್ತು. ಡಿಸಿಎಫ್ ಕರಿಕಾಳನ್, ಡಿಸಿಎಫ್ ಕಮಲ ಕರಿಕಾಳನ್ ಸೇರಿ ಹಲವು ಅಧಿಕಾರಿಗಳು ಉಪಸ್ಥಿತಿರಿದ್ದರು.
ಮೈಸೂರಿಗರಿಂದ ಸರಳ ದರಸಾ ಆಚರಣೆ
ಮತ್ತೊಂದೆಡೆ ಈ ಸರಳಾ ದಸರಾ ಹಿನ್ನಲೆಯಲ್ಲಿ ಜನರು ಕೂಡ ಸರಳವಾಗಿ ಆಯುಧ ಪೂಜೆಯನ್ನ ಆಚರಿಸ್ತಾ ಇದಾರೆ. ಕೊರೊನಾ ಇರೊದರಿಂದ ಜನರೇ ಈ ಬಾರಿ ಆರೋಗ್ಯ ದೃಷ್ಟಿಯಿಂದ ಆಯುಧ ಪೂಜೆಯನ್ನು ಸರಳವಾಗಿ ಮನೆಯಲ್ಲೇ ಪೂಜೆಗಳನ್ನ ಮಾಡಿ, ವಾಹನಗಳಿಗೆ ಅಲಂಕಾರವನ್ನ ಮಾಡಿ ದೇವಸ್ಥಾನಕ್ಕೆ ಬಂದು ಪೂಜೆಗಳನ್ನ ಮಾಡಿಸ್ತಿದಾರೆ.
ಮೈಸೂರಿನ ಸಿಟಿ ಮಾರ್ಕೆಟ್ನಲ್ಲಿ ಈ ಬಾರಿ ತಕ್ಕ ಮಟ್ಟಿನ ವ್ಯಾಪರ ನಡೆದಿದೆ. ಆದ್ರೆ ಕೊರೊನಾ ಮುಂಚಿನ ವ್ಯಾಪಾರ ಈಗ ಇಲ್ಲ ಆದ್ರೂ ಕೂಡ ಜನ ಸಂಪ್ರದಾಯವನ್ನ ಬಿಡದೆ ಸರಳವಾಗಿ ಆಯುಧ ಪೂಜೆಯನ್ನ ಆಚರಿಸುತ್ತಿದ್ದಾರೆ.
ಮಾವುತರು, ಕಾವಾಡಿಗಳು, ಸಿಬ್ಬಂದಿ ಉಪಾಹಾರ ಬಡಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಮಾವುತರು, ಕಾವಾಡಿಗಳು, ಅರಣ್ಯ ಇಲಾಖೆ ಸಿಬ್ಬಂದಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಪಹಾರದ ವ್ಯವಸ್ಥೆ ಮಾಡಿಸಿದ್ದು ಅರಮನೆ ಆವರಣದಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಶೋಭಾ ಕರಂದ್ಲಾಜೆ ಉಪಹಾರ ಬಡಿಸಿದ್ದಾರೆ. ಮಸಾಲೆ ದೋಸೆ, ಇಡ್ಲಿ, ಚಟ್ನಿ, ಸಾಂಬರ್, ವೆಜೆಟೆಬಲ್ ಪಲಾವ್, ದಂಬರೋಟು ಖಾರ ಪೊಂಗಲ್, ಹುಳಿ ಗೊಜ್ಜು,ಉದ್ದಿನ ವಡೆ, ತರಕಾರಿ ಉಪ್ಪಿಟ್ಟು ಬಡಿಸಿದ್ದಾರೆ. ಅಲ್ಲದೆ ಶೋಭಾ ಕರಂದ್ಲಾಜೆ ದಸರಾ ಆನೆಗಳಿಗೆ ಪೂಜೆ ಸಲ್ಲಿಸಿ ಆನೆಗಳಿಗೆ ಕಬ್ಬು ಬೆಲ್ಲ ತಿನ್ನಿಸಿದ್ದಾರೆ.
ಇದನ್ನೂ ಓದಿ: Ayudha Puja: ರಾಜ್ಯಾದ್ಯಂತ ಆಯುಧ ಪೂಜೆ ಸಂಭ್ರಮ, ತುಂಬಿ ತುಳುಕುತ್ತಿವೆ ಮಾರುಕಟ್ಟೆಗಳು
Published On - 10:08 am, Thu, 14 October 21