ಮೈಸೂರು, ಅ.5: ದಸರಾ ಮಹೋತ್ಸವದ (Mysuru Dasara 2023) ಅಂಗವಾಗಿ ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಬಯಲು ರಂಗಮಂದಿರದಲ್ಲಿ ಅ.6 ರಿಂದ 13 ರವರೆಗೆ ಯುವ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಸುಮಾರು 12,000 ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಯುವ ಸಂಭ್ರಮ ಉಪಸಮಿತಿ ಆಯೋಜಿಸಿರುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಸ್ಯಾಂಡಲ್ವುಡ್ ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ಭಾಗವಹಿಸಲಿದ್ದಾರೆ.
ಬರ ಪರಿಸ್ಥಿತಿ ಕಾರಣದಿಂದಾಗಿ ಈ ವರ್ಷ ಕಾರ್ಯಕ್ರಮದ ಬಜೆಟ್ ಅನ್ನು ಕಡಿಮೆ ಮಾಡಲಾಗಿದೆ. ಕಳೆದ ವರ್ಷ 2.3 ಕೋಟಿ ರೂ. ಬಜೆಟ್ನಲ್ಲಿ ಕಾರ್ಯಕ್ರಮ ನಡೆಸಲಾಗಿತ್ತು.
ಸಮಿತಿಯ ಉಪ ವಿಶೇಷ ಅಧಿಕಾರಿಯಾಗಿರುವ ಪೊಲೀಸ್ ವರಿಷ್ಠಾಧಿಕಾರಿ ಸೀಮ್ ಲಾಟ್ಕರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕರ್ನಾಟಕದಾದ್ಯಂತದ ವಿವಿಧ ಕಾಲೇಜುಗಳಿಂದ 400 ತಂಡಗಳು ಎಂಟು ದಿನಗಳ ಕಾಲ ಸಾಂಸ್ಕೃತಿಕ ಪ್ರದರ್ಶನಗಳಲ್ಲಿ ಭಾಗವಹಿಸಲಿವೆ. ಪ್ರತಿದಿನ ಸರಾಸರಿ 30 ತಂಡಗಳು ಪ್ರದರ್ಶನ ನೀಡಲಿದ್ದು, ಪ್ರತಿ ತಂಡದ ಪ್ರದರ್ಶನಕ್ಕೆ ಕನಿಷ್ಠ 5 ನಿಮಿಷಗಳನ್ನು ನಿಗದಿ ಮಾಡಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂದ ಮಹಿಷ ದಸರಾ ವಿವಾದ: ಅ. 13ರಂದು ಚಾಮುಂಡಿ ಬೆಟ್ಟ ಚಲೋಗೆ ಪ್ರತಾಪ್ ಸಿಂಹ ಕರೆ
ವಿದ್ಯಾರ್ಥಿಗಳ ತಂಡಕ್ಕೆ ಚಂದ್ರಯಾನ -3 ರ ಯಶಸ್ಸಿನ ಹಿನ್ನೆಲೆಯಲ್ಲಿ ವೈಜ್ಞಾನಿಕ ಪ್ರಗತಿಗೆ ಮೈಸೂರು ಮಹಾರಾಜರ ಕೊಡುಗೆ, ಭಾರತೀಯ ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕದ ಏಕೀಕರಣ ಮತ್ತು ನಕಲಿ ಸುದ್ದಿಗಳ ಪರಿಣಾಮಗಳು ಮತ್ತು ಅದರ ನಿಯಂತ್ರಣ ಸೇರಿದಂತೆ 20 ವಿಭಿನ್ನ ವಿಷಯಗಳನ್ನು ನೀಡಲಾಗಿದೆ.
ಉಪಸಮಿತಿಯ ಕಾರ್ಯದರ್ಶಿಯಾಗಿರುವ ಮೈಸೂರು ವಿವಿ ರಿಜಿಸ್ಟ್ರಾರ್ ವಿ.ಆರ್.ಶೈಲಜಾ ಮಾತನಾಡಿ, ಒಟ್ಟು 250 ತಂಡಗಳು ಮೈಸೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಬಂದಿದ್ದು, ಉಳಿದವು ಕರ್ನಾಟಕದ ವಿವಿಧ ಭಾಗಗಳಿಂದ ಬಂದಿವೆ. ನಗರದ ಹೊರಗಿನ ತಂಡಗಳಿಗೆ ವಸತಿ ಮತ್ತು ಊಟವನ್ನು ಒದಗಿಸಲಾಗುವುದು ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:43 am, Thu, 5 October 23