ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ 300 ಕೋಟಿ ರೂ. ಅಕ್ರಮ: ತನಿಖೆ ಶುರು ಮಾಡಿದ ಸಿಬಿಐ
KSOU Scam:ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಶಿಕ್ಷಣ ಸಂಸ್ಥೆಗಳಿಂದ ಭಾರೀ ಗೋಲ್ಮಾಲ್ ನಡೆದಿದೆ. 300 ಕೋಟಿ ರೂಪಾಯಿಗೂ ಅಧಿಕ ಹಣ ದುರುಪಯೋಗಕ್ಕೆ ಸಂಬಂಧಿಸಿ ಸಿಬಿಐ ಎಫ್ಐಆರ್ ದಾಖಲಿಸಿ ತನಿಖೆ ಶುರು ಮಾಡಿದೆ.
ನವದೆಹಲಿ/ಮೈಸೂರು, (ಅಕ್ಟೋಬರ್ .06): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) (Karnataka State Open University) ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವ ಯೋಜನೆಯಡಿ ಸುಮಾರು 300 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ದುರ್ಬಳಕೆ ಮಾಡಿರುವ ಆರೋಪ ಮೇಲೆ ಅಧಿಕಾರಿಗಳ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿದೆ.
ಮೈಸೂರು (Mysuru) ಮೂಲದ ಮುಕ್ತ ವಿಶ್ವವಿದ್ಯಾಲಯವು ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವ ಯೋಜನೆಯನ್ನು ಇಡೀ ದೇಶ ಹಾಗೂ ವಿದೇಶಗಳಲ್ಲಿಯೂ ಆರಂಭಿಸಿದೆ. 2013-14 ಮತ್ತು 2014-15ನೇ ಸಾಲಿನ ಹಣಕಾಸಿನ ವರ್ಷದಲ್ಲಿ ವಿಶ್ವವಿದ್ಯಾಲಯದ ಆಯವ್ಯಯ ವರದಿ ಪರಿಶೀಲನೆ ವೇಳೆ ಇದು ಬೆಳಕಿಗೆ ಬಂದಿದೆ. ಸಹಭಾಗಿತ್ವ ಸಂಸ್ಥೆಗಳಿಂದ ಜಮೆಯಾಗಬೇಕಿದ್ದ 50 ಕೋಟಿ ರೂ. ಆಯವ್ಯಯ ವರದಿಯಲ್ಲಿ ಕಾಣೆಯಾಗಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: 2029ರ ವರೆಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಮಾನ್ಯತೆ ಮುಂದುವರಿಸಲು ಯುಜಿಸಿ ಆದೇಶ
ಸಹಭಾಗಿತ್ವ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಂದ ದಾಖಲಾತಿ, ಪರೀಕ್ಷೆ ಹಾಗೂ ಇತರ ಶುಲ್ಕವಾಗಿ ಹಣವನ್ನು ಸಂಗ್ರಹಿಸಿವೆ. ಈ ಮೊತ್ತವನ್ನು ಸಂಸ್ಥೆಗಳು ಮುಕ್ತ ವಿಶ್ವವಿದ್ಯಾಲಯಕ್ಕೆ ಜಮೆ ಮಾಡಬೇಕು. ಆದರೆ ಕೆಲವು ಸಂಸ್ಥೆಗಳು ಜಮೆ ಮಾಡುವ ಹಣದಲ್ಲಿ ವ್ಯತ್ಯಾಸ ಮಾಡಿವೆ. 2009-10ರಿಂದ 2012-13ನೇ ಶೈಕ್ಷಣಿಕ ವರ್ಷದಲ್ಲಿಯೂ ಸುಮಾರು 250 ಕೋಟಿ ರೂ. ಜಮೆಯಾಗಿಲ್ಲ. ಹಾಗೇ 2013-14ರಿಂದ 2014-15ರ ಆರ್ಥಿಕ ವರ್ಷದಲ್ಲಿ 50 ಕೋಟಿ ರೂ. ಕಾಣೆಯಾಗಿದೆ. ಎಂದು ಲೆಕ್ಕಪರಿಶೋಧನೆ ವೇಳೆ ತಿಳಿದು ಬಂದಿದೆ’ ಎಂದು ವರದಿ ಹೇಳಿದೆ.
ಈ ಭಾರಿ ಮೊತ್ತ ತಾಳೆಯಾಗದಿರುವ ಬಗ್ಗೆ ಮುಕ್ತ ವಿಶ್ವವಿದ್ಯಾಲಯದ ನಿರ್ದೇಶಕ ಮಂಡಳಿ, ತಕ್ಷಣ ರಾಜ್ಯ ಸರ್ಕಾರದ ಗಮನಕ್ಕೆ ತಂದಿತ್ತು. ಬಳಿಕ ರಾಜ್ಯ ಸರ್ಕಾರವು 2009-10 ರಿಂದ 2015-16 ರವರೆಗಿನ ಅವಧಿಯಲ್ಲಿ ಕೆಎಸ್‌ಒಯು, ಮೈಸೂರು ಮತ್ತು ಅದರ ಸಹಯೋಗದ ಸಂಸ್ಥೆಗಳಿಂದ ಭಾರತದಾದ್ಯಂತ ಶುಲ್ಕದ ದುರುಪಯೋಗದ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ಕೋರಿತ್ತು.
ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:22 am, Fri, 6 October 23