ಮೈಸೂರು: ದಸರಾ ಜಂಬೂ ಸವಾರಿಗೆ ಆನೆಗಳ ಆಯ್ಕೆ ಮಾಡಲಾಗಿದೆ. ಅರಣ್ಯಾಧಿಕಾರಿಗಳು 14 ಆನೆಗಳನ್ನು ಆಯ್ಕೆ ಮಾಡಿದ್ದಾರೆ. ಹೈಪವರ್ ಕಮಿಟಿ ಸಭೆಗೂ ಮುನ್ನ ಆನೆಗಳ ಆಯ್ಕೆ ಮಾಡಲಾಗಿದೆ. ಡಿಸಿಎಫ್ ಕರಿಕಾಳನ್ ನೇತೃತ್ವದಲ್ಲಿ ಆನೆಗಳ ಆಯ್ಕೆ ನಡೆದಿದ್ದು, ಬೆಂಗಳೂರಿನ ಮುಖ್ಯ ಅರಣ್ಯ ಕಚೇರಿಗೆ ಆನೆಗಳ ಪಟ್ಟಿ ರವಾನೆ ಆಗಿದೆ. ಸರಳ ದಸರಾ ಮಾಡಿದರೆ 7 ಆನೆ ಕರೆಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಇಲ್ಲವಾದರೆ 14 ಆನೆಗಳನ್ನೂ ಬಳಕೆ ಮಾಡಲಾಗುವ ಬಗ್ಗೆ ತಿಳಿದುಬಂದಿದೆ.
ವಿಶ್ವ ವಿಖ್ಯಾತ ದಸರಾ ಮಹೋತ್ಸವ 2021ರ ಜಂಬೂ ಸವಾರಿಗೆ ಆನೆಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಸದ್ಯ ವಿವಿಧ ಕ್ಯಾಂಪ್ಗಳಿಂದ 14 ಆನೆಗಳನ್ನ ಪಟ್ಟಿ ಮಾಡಿ ಬೆಂಗಳೂರಿನ ಮುಖ್ಯ ಅರಣ್ಯ ಕಚೇರಿಗೆ ಕಳುಹಿಸಲಾಗಿದೆ. ಸರಳ ದಸರಾ ಮಾಡಿದರೆ 7 ಆನೆಗಳನ್ನ ಕರೆಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಆನೆ ಕಾಡು, ದುಬಾರೆ, ಮತ್ತಿಗೋಡು, ಬಂಡೀಪುರ ಆನೆ ಶಿಬಿರದಿಂದ ಆನೆಗಳ ಆಯ್ಕೆ ಮಾಡಲಾಗಿದೆ. ಸದ್ಯ ವಿಕ್ರಮ್, ವಿಜಯಾ, ಅಭಿಮನ್ಯು, ಗೋಪಾಲಸ್ವಾಮಿ, ಭೀಮಾ, ಮಹೇಂದ್ರ, ಧನಂಜಯ, ಪ್ರಶಾಂತ್, ಗೋಪಿ, ಹರ್ಷ, ಕಾವೇರಿ, ಲಕ್ಷ್ಮಣ, ಚೈತ್ರಾ, ಮಹಾರಾಷ್ಟ್ರ ಭೀಮಾ ಆನೆಗಳನ್ನು ಆಯ್ಕೆ ಮಾಡಲಾಗಿದೆ.
ಸರಳ ದಸರಾವಾದರೆ 14 ಆನೆಗಳಲ್ಲಿ 7 ಆನೆಗಳು ನಾಡಿಗೆ ಕರೆಸಿಕೊಳ್ಳಲು ಚಿಂತನೆ ಇದೆ. ಕಳೆದ ವರ್ಷ 5 ಆನೆ ಕರೆಸಿಕೊಳ್ಳಲಾಗಿತ್ತು. ಈ ಬಾರಿ ಆನೆಗಳ ಆರೋಗ್ಯದ ಹಾಗೂ ಮುಂಜಾಗ್ರತ ದೃಷ್ಟಿಯಿಂದ ಎರಡು ಆನೆಗಳನ್ನ ಹೆಚ್ಚುವರಿಯಾಗಿ ಕರೆಸಿಕೊಳ್ಳಲು ನಿರ್ಧಾರ ಮಾಡಲಾಗಿದೆ.
ಈ ವರ್ಷ ಮೈಸೂರು ದಸರಾ ಆಚರಿಸುವುದಂತೂ ನಿಶ್ಚಿತ. ಆದರೆ ಕಳೆದ ಬಾರಿಯಂತೆ ಸರಳವಾಗಿ ಮಾಡಬೇಕೋ ಅಥವಾ ಇನ್ನೂ ಬೇರೆ ಮಾರ್ಪಾಡು ಮಾಡಿಕೊಳ್ಳಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಚರ್ಚೆ ನಡೆಸುತ್ತೇನೆ ಎಂದು ಮೈಸೂರಿನಲ್ಲಿ ಸಚಿವ ಎಸ್. ಟಿ.ಸೋಮಶೇಖರ್ ಆಗಸ್ಟ್ 7 ರಂದು ತಿಳಿಸಿದ್ದರು. ಕೊವಿಡ್ ಹೆಚ್ಚಾಗಲಿದೆಯೋ ಕಡಿಮೆ ಆಗಲಿದೆಯೇ ನೋಡುತ್ತೇವೆ. ಹೈ ಪವರ್ ಕಮಿಟಿಯಲ್ಲಿ ಮೈಸೂರು ದಸರಾ ಬಗ್ಗೆ ಚರ್ಚೆ ಮಾಡುತ್ತೇವೆ. ಕೊರೊನಾ ಸ್ಥಿತಿಗತಿ ಬಗ್ಗೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ಆನಂತರ ಒಂದು ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಸ್ಟ್ 9ರಂದು ಹೇಳಿದ್ದರು.
ಇದನ್ನೂ ಓದಿ: ಮೈಸೂರು ದಸರಾ ಆಚರಣೆ, ಕೊವಿಡ್ 3ನೇ ಅಲೆಯ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸುದ್ದಿಗೋಷ್ಠಿಯ ವಿವರ ಇಲ್ಲಿದೆ
Published On - 3:20 pm, Tue, 24 August 21