“ಹೇಳಲ್ಲ, ಮಾಡಿ ತೋರಿಸ್ತೀನಿ”: ಮಸೀದಿ ಬಳಿ ಗಣೇಶ ಮೆರವಣಿಗೆ, ಪಟಾಕಿ ಹೊಡೆಯುವಂತಿಲ್ಲ ಎಂದ ಇನ್ಸ್‌ಪೆಕ್ಟರ್ ಧನಂಜಯ್

ಮೈಸೂರಿನಲ್ಲಿ ಗಣೇಶ ಮೆರವಣಿಗೆ ಮಾರ್ಗಕ್ಕೆ ಪೊಲೀಸರು ಷರತ್ತು ವಿಧಿಸಿದ್ದು, ಮಸೀದಿ ಬಳಿ ಸಾಗದಂತೆ ಇನ್ಸ್‌ಪೆಕ್ಟರ್ ಧನಂಜಯ್ ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆ ವೈರಲ್ ಆಗಿದ್ದು, ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಣೇಶ ಚತುರ್ಥಿಗೆ ಮಾತ್ರ ಇಂತಹ ನಿಯಮ ಏಕೆ ಎಂದು ಪ್ರಶ್ನಿಸಿ, ಕಾನೂನು ಸುವ್ಯವಸ್ಥೆ ಎಲ್ಲರಿಗೂ ಒಂದೇ ಆಗಿರಬೇಕು ಎಂದು ಒತ್ತಾಯಿಸಿದ್ದಾರೆ.

ಹೇಳಲ್ಲ, ಮಾಡಿ ತೋರಿಸ್ತೀನಿ: ಮಸೀದಿ ಬಳಿ ಗಣೇಶ ಮೆರವಣಿಗೆ, ಪಟಾಕಿ ಹೊಡೆಯುವಂತಿಲ್ಲ ಎಂದ ಇನ್ಸ್‌ಪೆಕ್ಟರ್ ಧನಂಜಯ್
ಮೈಸೂರು ಗಣೇಶ ಮೆರವಣಿಗೆ
Edited By:

Updated on: Sep 12, 2026 | 2:45 PM

ಮೈಸೂರು, ಸೆ.12: ಟಿ. ನರಸೀಪುರದಲ್ಲಿ ಗಣೇಶ ಚತುರ್ಥಿಯ ಸಡಗರದ ನಡುವೆಯೇ ಗಣೇಶ ಮೆರವಣಿಗೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ನಿರ್ಬಂಧಗಳು ಮತ್ತು ಇನ್ಸ್‌ಪೆಕ್ಟರ್‌ನ ಎಚ್ಚರಿಕೆಯ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಲಿಂಕ್ ರಸ್ತೆಯಲ್ಲಿರುವ ಮಸೀದಿ ಬಳಿ ಗಣೇಶ ಮೆರವಣಿಗೆ ಸಾಗದಂತೆ ಪೊಲೀಸರು ಷರತ್ತು ವಿಧಿಸಿದ್ದು, ಇದನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಇನ್ಸ್‌ಪೆಕ್ಟರ್ ಧನಂಜಯ್ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಅವರ “ನನ್ನ ಗಮನಕ್ಕೆ ಬಂದರೆ ಹೇಳಲ್ಲ, ಮಾಡಿ ತೋರಿಸ್ತೀನಿ” ಎಂಬ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ದೊಡ್ಡಮಟ್ಟದ ಸಂವಾದಕ್ಕೆ ಕಾರಣವಾಗಿದೆ.

ಗಣೇಶ ಹಬ್ಬದ ಸಮಯದಲ್ಲಿ ಸಾಮೂಹಿಕ ಗಣಪತಿ ಪ್ರತಿಷ್ಠಾಪನೆ, ವಿಸರ್ಜನೆ ಮತ್ತು ಮೆರವಣಿಗೆಗಳು ಸರ್ವೇಸಾಮಾನ್ಯವಾಗಿ ನಡೆಯುತ್ತವೆ. ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸಾಕಷ್ಟು ನಿಯಮಗಳನ್ನು ರೂಪಿಸಿವೆ. ಈ ನಿಯಮಗಳನ್ನು ಜಾರಿಗೊಳಿಸುವುದು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ. ಆದರೆ, ಟಿ. ನರಸೀಪುರದ ಇನ್ಸ್‌ಪೆಕ್ಟರ್ ಧನಂಜಯ್ ಅವರು ನೀಡಿದ ಈ ನಿರ್ದಿಷ್ಟ ಎಚ್ಚರಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಮೆರವಣಿಗೆಯ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದ ಯುವಕರನ್ನು ಪೊಲೀಸ್ ಠಾಣೆಗೆ ಕರೆಸಿ, ನಿಯಮಗಳನ್ನು ಪಾಲಿಸುವಂತೆ ಎಚ್ಚರಿಸುವ ಸಂದರ್ಭದಲ್ಲಿ, ಮಸೀದಿ ಮುಂದೆ ಮೆರವಣಿಗೆ ಸಾಗದಂತೆ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಮಸೀದಿ ಹತ್ತಿರ ಪಟಾಕಿ ಹೊಡೆಯುವುದು ಸೇರಿದಂತೆ ಯಾವುದೇ ಪ್ರಚೋದನಕಾರಿ ಕೃತ್ಯಗಳನ್ನು ಸಹಿಸುವುದಿಲ್ಲ, ಹಬ್ಬವು ಹಬ್ಬದಂತೆ ಇರಬೇಕು ಮತ್ತು ಇತರ ಧರ್ಮೀಯರ ಭಾವನೆಗಳನ್ನು ಗೌರವಿಸಬೇಕು ಎಂದು ಅವರು ತಿಳಿಸಿದ್ದಾರೆ.

ಈ ಹೇಳಿಕೆಯು ರಾಜಕೀಯ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಗುರಿಯಾಗಿದೆ. ಮಾಜಿ ಸಂಸದ ಪ್ರತಾಪ್ ಸಿಂಹ, ಹಾಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಈ ನಿರ್ಬಂಧಗಳನ್ನು ವಿರೋಧಿಸಿದ್ದಾರೆ. “ಗಣೇಶ ಚತುರ್ಥಿ ಮತ್ತು ಗಣಪತಿ ಮೆರವಣಿಗೆಗೆ ಮಾತ್ರ ಈ ರೀತಿಯ ನೀತಿ-ನಿಯಮಗಳನ್ನು ಏಕೆ ರೂಪಿಸಲಾಗುತ್ತದೆ?” ಎಂದು ಅವರು ಪ್ರಶ್ನಿಸಿದ್ದಾರೆ. ಕಾನೂನು ಸುವ್ಯವಸ್ಥೆ ಎಲ್ಲರಿಗೂ ಒಂದೇ ರೀತಿ ಇರಬೇಕು ಎಂದು ಒತ್ತಾಯಿಸಿರುವ ನಾಯಕರು, ಹಿಂದಿನ ಗಣೇಶ ಮೆರವಣಿಗೆಗಳು ಶಾಂತಿ ಸುವ್ಯವಸ್ಥೆಯಿಂದಲೇ ನಡೆದಿವೆ ಮತ್ತು ಯಾವುದೇ ಗಲಭೆಗಳು ನಡೆದ ನಿದರ್ಶನಗಳಿಲ್ಲ ಎಂದು ಹೇಳಿದ್ದಾರೆ. “ಬೇರೆಯವರಿಗೆ ಒಂದು ಕಾನೂನು, ನಮಗೆ ಒಂದು ಕಾನೂನು ಏಕೆ ಮಾಡ್ತೀರಾ?” ಎಂಬುದು ಅವರ ಪ್ರಮುಖ ಆಕ್ಷೇಪಣೆಯಾಗಿದೆ.

ಇದನ್ನೂ ಓದಿ: ಬೆಂಗಳೂರು-ನೆಲಮಂಗಲ ಹೆದ್ದಾರಿಯಲ್ಲಿ ಭಾರಿ ವಾಹನ ದಟ್ಟಣೆ: ರಜೆ ಹಿನ್ನೆಲೆ 4 ಕಿಮೀಗೂ ಹೆಚ್ಚು ಟ್ರಾಫಿಕ್ ಜಾಮ್, ಆಂಬುಲೆನ್ಸ್ ಸಿಲುಕಿ ಪರದಾಟ

ಇನ್ಸ್‌ಪೆಕ್ಟರ್ ಧನಂಜಯ್ ಅವರು ನಿಯಮಗಳನ್ನು ವಿವರಿಸಿದ ಬಗ್ಗೆ ಯಾವುದೇ ತಕರಾರು ಇಲ್ಲ. ಆದರೆ, ನಿರ್ದಿಷ್ಟವಾಗಿ ಒಂದು ಮಾರ್ಗದಲ್ಲಿ ಮಾತ್ರ ಸಾಗಬೇಕು ಮತ್ತು ಇನ್ನೊಂದು ಮಾರ್ಗದಲ್ಲಿ ಸಾಗಬಾರದು ಎಂದು ಎಚ್ಚರಿಕೆ ನೀಡಿರುವುದು ಚರ್ಚೆಗೆ ಮುಖ್ಯ ಕಾರಣವಾಗಿದೆ. ಮೆರವಣಿಗೆಗೆ ತೆರಳುವ ಮಾರ್ಗಗಳ ಬಗ್ಗೆ ಸಮಿತಿಗಳು ಪೊಲೀಸರಿಗೆ ಮಾಹಿತಿ ನೀಡಬೇಕು ಮತ್ತು ನಿಗದಿತ ಮಾರ್ಗದಲ್ಲಿ ಮಾತ್ರ ಸಾಗಬೇಕು ಎಂಬ ಸೂಚನೆಯನ್ನು ಪೊಲೀಸರು ನೀಡಿದ್ದಾರೆ. ಟೌನ್‌ನಲ್ಲಿರುವ ಕೆಲವರು ಲಿಂಕ್ ರೋಡ್‌ನಲ್ಲಿರುವ ಮಸೀದಿ ಮುಂದೆಯೇ ಹೋಗಬೇಕು ಎಂದು ಹಠ ಮಾಡುತ್ತಿರುವುದಾಗಿಯೂ ವರದಿಯಾಗಿದೆ. ಈ ಘಟನೆ ಮೈಸೂರಿನಲ್ಲಿ ಹಬ್ಬದ ಸಂಭ್ರಮದ ನಡುವೆ ಶಾಂತಿ ಸುವ್ಯವಸ್ಥೆ ಕಾಪಾಡುವ ಪ್ರಯತ್ನ ಮತ್ತು ಧಾರ್ಮಿಕ ಭಾವನೆಗಳ ಸೂಕ್ಷ್ಮತೆಗಳ ಕುರಿತು ಗಂಭೀರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us