ಮೈಸೂರು ಜಿಲ್ಲಾಡಳಿತದ ವಿರುದ್ಧ ಅಸಹಕಾರ ಚಳವಳಿಗೆ ಮುಂದಾದ ಹೋಟೆಲ್, ಲಾಡ್ಜ್ ಮಾಲೀಕರ ಸಂಘ; ಕಾರಣವೇನು?

| Updated By: shivaprasad.hs

Updated on: Oct 03, 2021 | 2:18 PM

ಮೈಸೂರು: ದಸರಾ ಸಮೀಪಿಸುತ್ತಿರುವಂತೆಯೇ ಜಿಲ್ಲಾಡಳಿತಕ್ಕೆ ಅಸಹಕಾರದ ಮೂಲಕ ಪ್ರತಿಭಟನೆ ನಡೆಸಲು ನಗರದ ಹೋಟೆಲ್ ಮತ್ತು ಲಾಡ್ಜ್ ಮಾಲಿಕರ ಸಂಘ ತೀರ್ಮಾನಿಸಿದೆ.

ಮೈಸೂರು ಜಿಲ್ಲಾಡಳಿತದ ವಿರುದ್ಧ ಅಸಹಕಾರ ಚಳವಳಿಗೆ ಮುಂದಾದ ಹೋಟೆಲ್, ಲಾಡ್ಜ್ ಮಾಲೀಕರ ಸಂಘ; ಕಾರಣವೇನು?
ಸಾಂಕೇತಿಕ ಚಿತ್ರ
Follow us on

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಪ್ರಾರಂಭವಾಗುವ ಮುನ್ನವೇ ಅಸಮಾಧಾನ ಸ್ಫೋಟಗೊಂಡಿದೆ. ಹೋಟೆಲ್, ಲಾಡ್ಜ್ ಮಾಲೀಕರ ಸಂಘವು 2019ನೇ ಸಾಲಿನ ಬಿಲ್ ಪಾವತಿಸಿಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ಆರೋಪಿಸಿದೆ. 2019ರ ಸಾಲಿನ ವಿವಿಧ ಹೋಟೆಲ್, ಲಾಡ್ಜ್​​ಗಳ ಸುಮಾರು ₹ 50 ಲಕ್ಷಕ್ಕೂ ಹೆಚ್ಚು ಮೊತ್ತದ ಬಾಕಿ ಬಿಲ್​ಅನ್ನು ಜಿಲ್ಲಾಡಳಿತ ಪಾವತಿಸಿಲ್ಲ. ಎಷ್ಟೇ ಮನವಿ ಮಾಡಿದರು ಬಾಕಿ ಹಣವನ್ನು ಜಿಲ್ಲಾಡಳಿತ  ನೀಡಿಲ್ಲ. ಆದ್ದರಿಂದ ಈ ಬಾರಿ ಜಿಲ್ಲಾಡಳಿತಕ್ಕೆ ರೂಮ್​ ನೀಡದೇ, ಅಸಹಕಾರ ಚಳವಳಿಗೆ ಚಿಂತನೆ ನಡೆಸಲಾಗಿದೆ ಎಂದು ಟಿವಿ9ಗೆ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿಕೆ ನೀಡಿದ್ದಾರೆ.

ಮೈಸೂರಿನ ಉತ್ತನಹಳ್ಳಿ ಗ್ರಾಮದ ದೇಗುಲದ ಬಳಿ ಬಾರ್ ತೆರೆಯಲು ಗ್ರಾಮಸ್ಥರ ವಿರೋಧ:
ಮೈಸೂರಿನ ಉತ್ತನಹಳ್ಳಿ ಗ್ರಾಮದ ಜ್ವಾಲಾತ್ರಿಪುರ ಸುಂದರಿ ದೇಗುಲದ ಬಳಿ ಬಾರ್ ತೆರೆಯುವುದರ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ದೇಗುಲದ ಬಳಿ ಬಾರ್ ಬೇಡ. ಬೇರೆಡೆ ಮಾಡಿಕೊಳ್ಳಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಸ್ಥಾನದ ಸ್ವಾಗತ ಕಮಾನು ಬಳಿ ಬಾರ್ ತೆರೆಯಲು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕು ಮೂಲದ ಉದ್ಯಮಿಯೊಬ್ಬರಿಂದ ಸಿದ್ಧತೆ ನಡೆಸಲಾಗಿತ್ತು. ಯಾವುದೇ ಕಾರಣಕ್ಕೂ ದೇವಸ್ಥಾನದ ಬಳಿ ಬಾರ್ ಬೇಡ ಎಂದು ಗ್ರಾಮಸ್ಥರು ಪ್ರತಿಭಟನೆಯ ಮುಖಾಂತರ ಒತ್ತಾಯಿಸಿದ್ದಾರೆ.

ದಸರಾ ಮುನ್ನವೇ ಪ್ರವಾಸಿಗರಿಂದ ಭರ್ತಿಯಾದ ಮೈಸೂರು:
ವೀಕೆಂಡ್​ನಲ್ಲಿ ಮೈಸೂರಿಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಾದ ಅರಮನೆ, ಮೃಗಾಲಯಕ್ಕೆ ಜನಸಾಗರ ಹರಿದುಬಂದಿದೆ. ನಿನ್ನೆ ಮೃಗಾಲಯಕ್ಕೆ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದು, ಅರಮನೆಗೆ 9 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ.

ಮೈಸೂರಿನ ನಿರಂಜನ ಮಠದ ಉಳಿವಿಗಾಗಿ ಮುಂದುವರಿದ ಹೋರಾಟ; ಹಲವು ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಪ್ರತಿಭಟನೆ
ಮೈಸೂರಿನ  ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ನಿರಂಜನ ಮಠದ ಉಳಿವಿಗಾಗಿ ಹೋರಾಟ ಮುಂದುವರೆದಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಬಸವಸೇನೆ, ಬಸವ ಬಳಗಗಳ ಒಕ್ಕೂಟ ಸೇರಿ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ವಿವಿಧೆಡೆಗಳಿಂದ ನೂರಾರು ಜನರು ಪ್ರತಿಭಟನೆಗೆ ಆಗಮಿಸಿದ್ದು, ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯುತ್ತಿದೆ. ಮೈಸೂರಿನ ಜೆ.ಎಸ್.ಎಸ್ ಮಹಾ ವಿದ್ಯಾಪೀಠದ ಜಗಜ್ಯೋತಿ ಬಸವೇಶ್ವರರ ಪುತ್ಥಳಿಯಿಂದ ಮೆರವಣಿಗೆ ಪ್ರಾರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಲಿದ್ದು, ನಿರಂಜನ ಮಠದವರೆಗೂ ಮೆರವಣಿಗೆ ನಡೆಯಲಿದ್ದು, ವೀರಶೈವ ಲಿಂಗಾಯತ ಸಮುದಾಯದ ಹಲವು ಮುಖಂಡರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ.

ಅಕ್ಟೋಬರ್ 5ರಂದು ಮಹಿಷ ದಸರಾ ನಡೆಸಲು ಸಿದ್ಧತೆ:
ಮೈಸೂರಿನಲ್ಲಿ ಅಕ್ಟೋಬರ್ 5ರಂದು ಮಹಿಷ ದಸರಾ ನಡೆಸಲು ಸಿದ್ಧತೆ ನಡೆಸಲಾಗಿದೆ. ಈ ಕುರಿತು ಮಹಿಷ ದಸರಾ ಆಚರಣಾ ಸಮಿತಿಯಿಂದ ಆಹ್ವಾನ ಪತ್ರಿಕೆ ತಯಾರಿಸಲಾಗಿದ್ದು, ಅಶೋಕಪುರಂನಲ್ಲಿ ಪುಷ್ಪಾರ್ಚನೆ, ವಿಚಾರ ಸಂಕಿರಣ, ಮೆರವಣಿಗೆ ನಡೆಯಲಿದೆ. ಬುದ್ಧ ವಿಹಾರದಿಂದ ಅಶೋಕಪುರಂ ಪಾರ್ಕ್​ವರೆಗೆ ಮೆರವಣಿಗೆ ನಡೆಯಲಿದೆ.

ಇದನ್ನೂ ಓದಿ:

West Bengal By-Election Results ಚುನಾವಣಾ ಫಲಿತಾಂಶದ ನಂತರ ಸಂಭ್ರಮಾಚರಣೆ ಬೇಡ: ಪಶ್ಚಿಮ ಬಂಗಾಳ ಸರ್ಕಾರಕ್ಕೆ ಚುನಾವಣಾ ಆಯೋಗ ಸೂಚನೆ

Mysuru Dasara: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ತಯಾರಾಗುತ್ತಿದೆ ಮೈಸೂರು; ಸಿದ್ಧತೆ ಹೇಗಿದೆ?

Published On - 1:43 pm, Sun, 3 October 21