Mysuru Dasara: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ತಯಾರಾಗುತ್ತಿದೆ ಮೈಸೂರು; ಸಿದ್ಧತೆ ಹೇಗಿದೆ?
ಮೈಸೂರಿನಲ್ಲಿ ದಸರಾಕ್ಕೆ ತಯಾರಿ ಜೋರಾಗಿದೆ. ಈ ನಡುವೆ ನಗರದ ಹಲವೆಡೆ ಪಾರ್ಕಿಂಗ್, ಸಂಚಾರ ವ್ಯವಸ್ಥೆಗಳಲ್ಲಿ ಬದಲಾವಣೆಗಳನ್ನೂ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಈ ಕುರಿತ ವರದಿ ಇಲ್ಲಿದೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಅರಮನೆಯ ಆವರಣದಲ್ಲಿ ಆನೆಗಳಿಗೆ ತಾಲೀಮು ನಡೆಸಲಾಗುತ್ತಿದ್ದು, ಅಂಬಾರಿ ಹೊರುವ ಗೋಪಾಲಸ್ವಾಮಿ ಆನೆಗೆ ಮರದ ಅಂಬಾರಿ ಹೊರಿಸಿ ತಾಲೀಮು ನೀಡಲಾಗುತ್ತಿದೆ. 900 ಕೆಜಿ ತೂಕ ಹೊರಿಸಿ ಗೋಪಾಲಸ್ವಾಮಿ ಆನೆಗೆ ಅಭ್ಯಾಸ ಮಾಡಿಸಲಾಗುತ್ತಿದ್ದು, ಅದಕ್ಕೆ ಕುಮ್ಕಿ ಆನೆಗಳಾದ ಚೈತ್ರಾ, ಕಾವೇರಿ ಸಾಥ್ ನೀಡುತ್ತಿದ್ದಾರೆ.
ಮತ್ತೊಂದು ಡಬ್ಬಲ್ ಡೆಕ್ಕರ್ ಬಸ್ ಆರಂಭಿಸಲು ಚಿಂತನೆ: ವಿಶ್ವವಿಖ್ಯಾತ ಮೈಸೂರು ದಸರಾ ವಿಶೇಷವಾಗಿ ಮತ್ತೊಂದು ಡಬಲ್ ಡೆಕ್ಕರ್ ಬಸ್ ಆರಂಭಿಸಲು ರಾಜ್ಯ ಪ್ರವಾಸೋದ್ಯಮ ನಿಗಮ ಚಿಂತನೆ ನಡೆಸಿದೆ. ಈಗಾಗಲೇ ಎರಡು ಅಂಬಾರಿ ಬಸ್ ಸಂಚಾರ ಆರಂಭಿಸಲಾಗಿದ್ದು, ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮತ್ತೊಂದು ಬಸ್ ಆರಂಭಿಸಲು ಚಿಂತನೆ ನಡೆಸಲಾಗಿದೆ. ದಸರಾ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು, ಬೆಳಗ್ಗೆ ಸಂಜೆ ಬಸ್‌ಗಳು ಸಂಚಾರ ನಡೆಸುತ್ತಿವೆ. ಆದ್ದರಿಂದ ದಸರಾ ಉದ್ಘಾಟನೆಗೂ ಮುನ್ನ ಮತ್ತೊಂದು ಅಂಬಾರಿ ಬಸ್ಸು ಕಾರ್ಯಾರಂಭ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ದಸರಾ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆ ಹೇಗಿರಲಿದೆ? ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಹಲವು ರಸ್ತೆಗಳಲ್ಲಿ ತಾತ್ಕಾಲಿಕವಾಗಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದು ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ. ಅಕ್ಟೋಬರ್ 7ರಿಂದ 15ರವರೆಗೆ ಸಂಜೆ 4ರಿಂದ ರಾತ್ರಿ 10ರವರೆಗೆ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ.
ಅರಮನೆಯ ಸುತ್ತಲಿನ ರಸ್ತೆಗಳು, ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ, ಕುಸ್ತಿ ಅಖಾಡ ಜಂಕ್ಷನ್, ಬಿ.ಎನ್.ರಸ್ತೆ ಜಯಚಾಮರಾಜ ಒಡೆಯರ್ ವೃತ್ತ, ಆಲ್ಬರ್ಟ್ ಪಿಕ್ಚರ್ ರಸ್ತೆ, ಚಾಮರಾಜ ಒಡೆಯರ್ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ನ್ಯೂ ಎಸ್.ಆರ್.ರಸ್ತೆ ಬಸವೇಶ್ವರ ವೃತ್ತ, ಚಾಮರಾಜ ಜೋಡಿ ರಸ್ತೆ, ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತದಲ್ಲಿ ಏಕಮುಖ ಸಂಚಾರಕ್ಕೆ ಆದೇಶ ನೀಡಲಾಗಿದೆ. ಇದರ ಜೊತೆಗೆ ಮೈಸೂರಿನ ಹಲವು ಪ್ರಮುಖ ರಸ್ತೆಗಳಲ್ಲಿ ಏಕ ಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ ಚಂದ್ರಗುಪ್ತ ತಿಳಿಸಿದ್ದಾರೆ.
ಕೆಲವು ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ: ಅಂಬಾವಿಲಾಸ ಅರಮನೆ ಸುತ್ತಮುತ್ತ, ಸಯ್ಯಾಜಿರಾವ್ ರಸ್ತೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಬಸವೇಶ್ವರ ವೃತ್ತ, ಪುರಂದರ ರಸ್ತೆ, ಬಿ.ರಾಚಯ್ಯ ವೃತ್ತದಿಂದ ಬಿ.ಎನ್.ರಸ್ತೆ ಜಂಕ್ಷನ್, ಶಿವರಾತ್ರಿ ರಾಜೇಂದ್ರ ವೃತ್ತದಿಂದ ಜಯಚಾಮರಾಜೇಂದ್ರ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆಯ ಜಯಚಾಮರಾಜೇಂದ್ರ ವೃತ್ತದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದವರೆಗೆ ಹಾಗೂ ಇನ್ನಿತರ ಹಲವು ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದೆ.
ಇದನ್ನೂ ಓದಿ:
ವಿಶ್ವವಿಖ್ಯಾತ ದಸರಾ ಮಹೋತ್ಸವ; ಮೈಸೂರಿನ ಕೆಲ ಪ್ರದೇಶಗಳಲ್ಲಿ ವಾಹನ ನಿಲುಗಡೆ ನಿಷೇಧ
ಬೆಳಗಾವಿ: 140 ಅಡಿ ಕಂದಕಕ್ಕೆ ಉರುಳಿ ಬಿದ್ದರೂ ಬದುಕಿ ಬಂದ ಯುವಕ; ಗೋಕಾಕ್ ಫಾಲ್ಸ್‌ನಲ್ಲಿ ಅಚ್ಚರಿ ಘಟನೆ