ಯೂಟ್ಯೂಬ್​ನಲ್ಲಿ ನೋಡಿ ಕಿರು ವ್ಯವಹಾರ ಆರಂಭಿಸಿದ ಮೈಸೂರು ಮಹಿಳೆ; ಉತ್ತಮ ಸ್ಪಂದನೆ

|

Updated on: Apr 11, 2023 | 7:42 PM

ಮೈಸೂರಿನಜಯನಗರದ ಶ್ವೇತಾ ತಿಲಕ್ ಕುಮಾರ್ ಎಂಬವರು ಬೇಸಗೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಹೊಸ ವ್ಯವಹಾರವೊಂದನ್ನು ಆರಂಭಿಸಿ ಯಶಸ್ವಿಯಾಗಿದ್ದಾರೆ.

ಯೂಟ್ಯೂಬ್​ನಲ್ಲಿ ನೋಡಿ ಕಿರು ವ್ಯವಹಾರ ಆರಂಭಿಸಿದ ಮೈಸೂರು ಮಹಿಳೆ; ಉತ್ತಮ ಸ್ಪಂದನೆ
ಮೈಸೂರಿನ ಜಯನಗರದಲ್ಲಿ ಮಜ್ಜಿಗೆ ಮಾರಾಟದಲ್ಲಿ ನಿರತರಾಗಿರುವ ಶ್ವೇತಾ ತಿಲಕ್ ಕುಮಾರ್
Image Credit source: Times of India
Follow us on

ಮೈಸೂರು: ಮಹಿಳಾ ಉದ್ಯಮಶೀಲತೆ, ಮಹಿಳಾ ಸಬಲೀಕರಣದಂತಹ ವಿಚಾರಗಳು ದುರ್ಬಲ ವರ್ಗಗಳ ಹೆಚ್ಚಿನ ಮಹಿಳೆಯರನ್ನು ತಲುಪದಿದ್ದರೂ ಅನೇಕರು ಜೀವನದಲ್ಲಿ ಸಣ್ಣ ಆಲೋಚನೆಗಳ ಮೂಲಕ ದೊಡ್ಡ ಬದಲಾವಣೆಗಳನ್ನು ಮಾಡಿ ಯಶಸ್ವಿ ಉದ್ಯಮಿಗಳಾಗಿ ಗುರುತಿಸಿಕೊಂಡಿದ್ದಾರೆ. ಈ ಮೂಲಕ ಸ್ವಾವಲಂಬಿಗಳಾಗಿದ್ದಾರೆ. ಇದಕ್ಕೆ ಉದಾಹರಣೆಯಾಗಿ, ಮೈಸೂರಿ(Mysuru) ಜಯನಗರದ ಶ್ವೇತಾ ತಿಲಕ್ ಕುಮಾರ್ ಎಂಬವರು ಬೇಸಗೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಹೊಸ ವ್ಯವಹಾರವೊಂದನ್ನು (Small Business) ಆರಂಭಿಸಿದ್ದಾರೆ.

ಇಬ್ಬರು ಮಕ್ಕಳ ತಾಯಿಯಾಗಿರುವ ಶ್ವೇತಾಗೆ ಕುಟುಂಬದ ಹೊಣೆಗಾರಿಕೆಯಿಂದಾಗಿ ವರ್ಷದಲ್ಲಿ ಒಂದೆರಡು ಉದ್ಯೋಗ ತ್ಯಜಿಸಬೇಕಾಗಿ ಬಂದಿತ್ತು. ಆದಾಗ್ಯೂ, ಅವರು ತಮ್ಮ ಕುಟುಂಬದ ಆರ್ಥಿಕ ಅಗತ್ಯಗಳನ್ನು ಬೆಂಬಲಿಸಲು ಹೊಸ ವಿಧಾನವನ್ನು ಕಂಡುಹಿಡಿದಿದ್ದಾರೆ. ಬಿಸಿಲಿನ ಧಗೆಯನ್ನು ಗಮನದಲ್ಲಿಟ್ಟುಕೊಂಡು, ಅವರು ಮಿನರಲ್ ವಾಟರ್ ಬಳಸಿ ರಾಗಿ ಅಂಬಲಿ ಮತ್ತು ಮಜ್ಜಿಗೆ ನೀರು ತಯಾರಿಸಿ ಮಾರಾಟ ಮಾಡಲು ಪ್ರಾರಂಭಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಇದರಿಂದಾಗಿ ಕುಟುಂಬಕ್ಕೆ ಹಣಕಾಸಿನ ನೆರವು ಒದಗಿಸಲು ಸಾಧ್ಯವಾಗುತ್ತಿದೆ. ಯೂಟ್ಯೂಬ್​ನಲ್ಲಿ ವಿಡಿಯೋ ನೋಡಿ ಈ ವ್ಯವಹಾರ ಆರಂಭಿಸಲು ಯೋಚಿಸಿದೆ ಎಂದು ಶ್ವೇತಾ ತಿಳಿಸಿದ್ದಾರೆ.

ಇಬ್ಬರು ಚಿಕ್ಕ ಮಕ್ಕಳನ್ನು ಹೊಂದಿರುವುದರಿಂದ ಅವರನ್ನು ನೋಡಿಕೊಳ್ಳುವುದಕ್ಕಾಗಿ ಮತ್ತು ಇಡೀ ದಿನವನ್ನು ಮನೆಯ ಹೊರಗೆ ವಿನಿಯೋಗಿಸಲು ಸಾಧ್ಯವಾಗದ ಕಾರಣ ಒಂದೆರಡು ಕೆಲಸಗಳನ್ನು ತೊರೆಯಬೇಕಾಯಿತು. ನನ್ನ ಪತಿ ಚಹಾ ಮಾರಾಟಗಾರ. ಆದರೆ, ಬೇಸಿಗೆಯಲ್ಲಿ ಚಹಾ, ಕಾಫಿಗೆ ಹೆಚ್ಚು ಬೇಡಿಕೆ ಇರುವುದಿಲ್ಲ. ಹಾಗಾಗಿ, ಹಣ ಸಂಪಾದಿಸಲು ವಿಭಿನ್ನವಾಗಿ ಏನನ್ನಾದರೂ ಮಾಡಲು ಯೋಚಿಸಿದೆ. ಆಗ ಯೂಟ್ಯೂಬ್‌ನಲ್ಲಿ, ಮಿನರಲ್‌ ವಾಟರ್‌ ಬಳಸಿ ರಾಗಿ ಅಂಬಲಿ ಮತ್ತು ಮಜ್ಜಿ ನೀರು ತಯಾರಿಸುವ ವಿಡಿಯೋ ನೋಡಿ ಆಯೋಚನೆ ಬಂದಿತ್ತು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮದುವೆಗೂ ತಟ್ಟಿದ ಚುನಾವಣೆ ನೀತಿ ಸಂಹಿತೆ ಬಿಸಿ: ಸಾಮಗ್ರಿಗಳನ್ನು ಬುಕ್​​ ಮಾಡಲು ಹೋದರೆ ಅನುಮತಿ ಕೇಳಿದ ಅಂಗಡಿ ಮಾಲೀಕ

ನನ್ನ ಈ ಯೋಜನೆಗೆ ಕುಟುಂಬದ ಬೆಂಬಲ ಸಿಕ್ಕಿತು. ಕಳೆದ ಮೂರು ವಾರಗಳಿಂದ ನಾನು ಈ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದೇನೆ. ನಾವು ಮಿನರಲ್ ವಾಟರ್ ಬಳಸುತ್ತಿರುವುದರಿಂದ ಬೇಡಿಕೆಯೂ ಚೆನ್ನಾಗಿದೆ. ಉತ್ತಮ ವಹಿವಾಟು ನಡೆಯುತ್ತಿದೆ ಎಂದು ಶ್ವೇತಾ ತಿಳಿಸಿದ್ದಾರೆ.

ಈ ವ್ಯವಹಾರದ ಮೂಲಕ ಕೆಲವೇ ಗಂಟೆಗಳಲ್ಲಿ ನಾನು 700 ರೂ.ನಿಂದ 750 ರೂ.ರವರೆಗೆ ಗಳಿಸಲು ಸಾಧ್ಯವಾಗುತ್ತದೆ. ಅದರಲ್ಲಿ ವೆಚ್ಚವನ್ನು ಕಡಿತಗೊಳಿಸಿದ ನಂತರ ಸುಮಾರು 500 ರೂ. ಲಾಭ ಉಳಿಯುತ್ತದೆ ಎಂದು ಅವರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಈ ವ್ಯವಹಾರಕ್ಕಾಗಿ ಇಡೀ ದಿನ ಮನೆಯಿಂದ ಹೊರಗಿರುವುದೂ ಬೇಕಾಗಿಲ್ಲ. ಮನೆ ವ್ಯವಹಾರಗಳನ್ನು, ಕೆಲಸಗಳನ್ನು ನಿಭಾಯಿಸಿಕೊಂಡೇ ಇದನ್ನು ಮಾಡಲು ಸಾಧ್ಯವಾಗುತ್ತಿದೆ ಎಂದು ಶ್ವೇತಾ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ