ವೇದಿಕೆಯಲ್ಲೇ ಅಸ್ವಸ್ಥಗೊಂಡ ಮಹಿಳಾ ಕಾರ್ಯಕರ್ತೆ: ನೆರವಿಗೆ ಧಾವಿಸಿದ ಮೋದಿ; ಪ್ರಧಾನಿ ನಡೆಗೆ ಮೆಚ್ಚುಗೆ
ಮುಖ್ಯಾಂಶಗಳು
- ಪ್ರಧಾನಮಂತ್ರಿಯಲ್ಲ ‘ಪ್ರಧಾನ ಸೇವಕ' ಅಂತಾ ಸಾಬೀತುಪಡಿಸಿದ ಮೋದಿ
- ಕಾರ್ಯಕ್ರಮದ ವೇಳೆ ಮಹಿಳಾ ಕಾರ್ಯಕರ್ತೆ ಆರೋಗ್ಯ ವಿಚಾರಿಸಿದ ಪ್ರಧಾನಿ
- ಪ್ರಧಾನಿ ಮೋದಿ ಅವರ ಮಾನವೀಯ ನಡೆಗೆ ಮೆಚ್ಚುಗೆ
ಕಾಸ್ಮೋಸ್ ಮೈಸೂರು ತಾರಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾನವೀಯತೆ ಮೆರೆದಿದ್ದಾರೆ. ಅಸ್ವಸ್ಥಗೊಂಡಿದ್ದ 70 ವರ್ಷದ ಬಿಜೆಪಿ ಕಾರ್ಯಕರ್ತೆ ಪ್ರೇಮಾ ಕೆ ಅವರ ಆರೋಗ್ಯವನ್ನು ಸ್ವತಃ ವಿಚಾರಿಸಿದ ಮೋದಿ, ಚಿಕಿತ್ಸೆಗೆ ಸೂಚನೆ ನೀಡಿದರು. ಅವರ ಈ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಮೈಸೂರು, ನವೆಂಬರ್ 13: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾನವೀಯ ನಡೆ ಮೂಲಕ ಗಮನ ಸೆಳೆದಿದ್ದಾರೆ. ಕಾಸ್ಮೋಸ್ ಮೈಸೂರು ತಾರಾಲಯ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ನಂಜನಗೂಡಿನ 70 ವರ್ಷದ ಬಿಜೆಪಿ ಕಾರ್ಯಕರ್ತೆ ಪ್ರೇಮಾ.ಕೆ ಅವರು ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬೀಳುವ ಸ್ಥಿತಿಯಲ್ಲಿದ್ದರು. ಇದನ್ನು ಗಮನಿಸಿದ ಪ್ರಧಾನಿ ಮೋದಿ ತಕ್ಷಣ ಕಾರ್ಯಕರ್ತೆಯ ನೆರವಿಗೆ ಧಾವಿಸಿ, ಖುದ್ದಾಗಿ ಆರೋಗ್ಯ ವಿಚಾರಿಸಿದರು. ಅಲ್ಲದೆ, ಮಹಿಳೆಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಸೂಚಿಸಿದ್ದಲ್ಲದೆ, ತಮ್ಮ ವೈದ್ಯರಿಗೂ ಅವರ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ನಿರ್ದೇಶನ ನೀಡಿದರು. ಈ ಮೂಲಕ ಅವರು ಪ್ರಧಾನಮಂತ್ರಿಯಲ್ಲ, ಪ್ರಧಾನ ಸೇವಕ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಸದ್ಯ ಪ್ರೇಮಾ ಅವರು ನಂಜನಗೂಡಿನ ತಮ್ಮ ಸ್ವಗೃಹ ತಲುಪಿದ್ದು, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ ಅವರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
