R Dhruvanarayana Obituary: ಕಾಂಗ್ರೆಸ್​ನ ಸಾಮಾನ್ಯ ಕಾರ್ಯಕರ್ತನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷತನಕ ಆರ್​.ಧ್ರುವನಾರಾಯಣ ನಡೆದು ಬಂದ ದಾರಿ

|

Updated on: Mar 11, 2023 | 10:44 AM

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​.ಧ್ರುವನಾರಾಯಣ ಹೃದಯಾಘಾತದಿಂದ ನಿಧನರಾಗಿದ್ದು, 5 ದಶಕಗಳ ಸುದೀರ್ಘ ರಾಜಕೀಯ ಜೀವನ ಹೊಂದಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ 2 ಬಾರಿ ಸಂಸದರಾಗುವ ಮೂಲಕ ಜನಮನ್ನಣೆ ಗಳಿಸಿದ್ದರು.

R Dhruvanarayana Obituary: ಕಾಂಗ್ರೆಸ್​ನ ಸಾಮಾನ್ಯ ಕಾರ್ಯಕರ್ತನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷತನಕ ಆರ್​.ಧ್ರುವನಾರಾಯಣ ನಡೆದು ಬಂದ ದಾರಿ
ಕೆಪಿಸಿಸಿ ಅಧ್ಯಕ್ಷ ಆರ್​. ಧ್ರುವನಾರಾಯಣ
Follow us on

ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​.ಧ್ರುವನಾರಾಯಣ (KPCC Working President R Dhruvanarayana) ರಕ್ತಸ್ರಾವದಿಂದ ಇಂದು (ಮಾ.11) ಬೆಳಿಗ್ಗೆ 6:30ಕ್ಕೆ ನಿಧನರಾಗಿದ್ದಾರೆ. ಅಪಾರ ಜನಮನ್ನಣೆ ಗಳಿಸಿದ್ದ ಇವರ ನಿಧನದಿಂದ ಕಾಂಗ್ರೆಸ್​ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಧ್ರುವನಾರಾಯಣ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​, ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಮತ್ತು ಶಾಸಕ ಸತೀಶ್​ ಜಾರಕಿಹೋಳಿ ಸಂತಾಪ ಸೂಚಿಸಿದ್ದಾರೆ.  ಧ್ರುವನಾರಾಯಣ  2 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿ ಆಯ್ಕೆ ಆಗಿದ್ದರು.

ಧ್ರುವನಾರಾಯಣ ಆರಂಭಿಕ ಜೀವನ

1961 ಜುಲೈ 31ರಂದು ಚಾಮರಾಜನಗರ (Chamrajnagar) ಜಿಲ್ಲೆಯ ಹೆಗ್ಗವಾಡಿ ಗ್ರಾಮದಲ್ಲಿ ಹೆಗ್ಗವಾಡಿಯ ರಂಗಸ್ವಾಮಿ ಮತ್ತು ತಾಯಮ್ಮ ದಂಪತಿಯ ಪುತ್ರನಾಗಿ ಜನಿಸಿದ್ದ ಧ್ರುವನಾರಾಯಣ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಬಿಎಸ್​​ಸಿ ಕೃಷಿ ಪದವಿ ಪಡೆದುಕೊಂಡಿದ್ದರು. ಧ್ರುವನಾರಾಯಣ ಅವರಿಗೆ ಮೂವರು ಸಹೋದರಿಯರು ಇದ್ದಾರೆ. ಧ್ರುವನಾರಾಯಣ ಅವರ ಪತ್ನಿ ವೀಣಾ ಧೃವನಾರಾಯಣ್. ದಂಪತಿಗೆ ಇಬ್ಬರು ಪುತ್ರರಿದ್ದು, ಹಿರಿಯ ಮಗ ದರ್ಶನ್ ಹೈಕೋರ್ಟ್​​ನಲ್ಲಿ ವಕೀಲರಾಗಿ ಪ್ರಾಕ್ಟಿಸ್ ಮಾಡುತ್ತಿದ್ದಾರೆ. ಕಿರಿಯ ಮಗ ದೃವನ್ ಬಿಎಸ್​​ಸಿ ವ್ಯಾಸಂಗ ಮಾಡುತ್ತಿದ್ದಾರೆ.

ಧ್ರುವನಾರಾಯಣ ರಾಜಕೀಯ ಜೀವನ

1983ರಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್​ಗೆ (Congress) ಸೇರ್ಪಡೆಗೊಂಡಿದ್ದರು. 1999ರಲ್ಲಿ ಸಂತೇಮರಹಳ್ಳಿ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎ.ಆರ್. ಕೃಷ್ಣಮೂರ್ತಿ ಅವರ ಎದುರು ಪರಾಜಿತರಾದರು. ಆದರೆ ಇದೇ ಎ.ಆರ್. ಕೃಷ್ಣಮೂರ್ತಿ ಅವರ ಎದುರು 2004ರಲ್ಲಿ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 1 ಮತದ ಅಂತದರಲ್ಲಿ ಗೆದ್ದು ಇತಿಹಾಸ ರಚನೆ ಮಾಡಿದ್ದರು.

2008ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಗಳಿಂದ ಶಾಸಕರಾಗಿ ಜಯ ಗಳಿಸಿದ್ದರು. 2009ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರು. 2014ರಲ್ಲಿ ಚಾಮರಾಜನಗರದಿಂದ 2ನೇ ಬಾರಿ ಸಂಸದರಾಗಿ ಜಯಗಳಿದರು. 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಸದ್ಯ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಚೆಯುಳ್ಳವರಾಗಿದ್ದ ಇವರು, ನಂಜನಗೂಡು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ಧ್ರುವನಾರಾಯಣ ಸಂಸದರಾಗಿದ್ದ ವೇಳೆ ಅನುದಾನ ಬಳಕೆ ವಿಚಾರದಲ್ಲೂ ಉತ್ತಮ ಹೆಸರು ಪಡೆದಿದ್ದರು.

Published On - 10:02 am, Sat, 11 March 23