ಸಿದ್ದರಾಮಯ್ಯ ಕಾರು ಮೇಲೆ ಮೊಟ್ಟೆ ಎಸೆತ: ಮಡಿಕೇರಿ ಚಲೋ ಬೃಹತ್ ಪಾದಯಾತ್ರೆಗೆ ಮುಂದಾದ ಅಭಿಮಾನಿಗಳು

| Updated By: ಆಯೇಷಾ ಬಾನು

Updated on: Aug 20, 2022 | 10:09 AM

ಮಡಿಕೇರಿ ಪ್ರವಾಸದ ವೇಳೆ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಹಿನ್ನೆಲೆ ಸಿದ್ದರಾಮಯ್ಯ ಬೆಂಬಲಿಗರು ಮಡಿಕೇರಿ ಚಲೋ ರೂಪುರೇಷೆ ತಯಾರಿ ಮಾಡಿಕೊಂಡಿದ್ದಾರೆ. ಇದೆ ಆಗಸ್ಟ್ 26ರಂದು ಮಡಿಕೇರಿ ಚಲೋ ಪಾದಯಾತ್ರೆಗೆ ಅಭಿಮಾನಿಗಳು ಸಿದ್ಧತೆ ನಡೆಸುತ್ತಿದ್ದಾರೆ.

ಸಿದ್ದರಾಮಯ್ಯ ಕಾರು ಮೇಲೆ ಮೊಟ್ಟೆ ಎಸೆತ: ಮಡಿಕೇರಿ ಚಲೋ ಬೃಹತ್ ಪಾದಯಾತ್ರೆಗೆ ಮುಂದಾದ ಅಭಿಮಾನಿಗಳು
ಮಡಿಕೇರಿ ಚಲೋ
Follow us on

ಮೈಸೂರು: ರಾಜ್ಯದಲ್ಲಿ ಸುರಿದ ಮಹಾ ಮಳೆ(Karnataka Rains) ಹಿನ್ನೆಲೆ ಮಳೆ ಹಾನಿ ಪ್ರದೇಶಗಳ ವೀಕ್ಷಣೆಗೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಕೊಡಗುಗೆ ಹೋಗಿದ್ದರು. ಈ ವೇಳೆ ಕೆಲ ಕಿಡಿಗೇಡಿಗಳು ಸಿದ್ದು ವಿರುದ್ಧ ಘೋಷಣೆ ಕೂಗಿ, ಅವರ ಕಾರಿನ ಮೇಲೆ ಮೊಟ್ಟೆ ದಾಳಿ ನಡೆಸಿದ್ರು. ಕಾರಿನಲ್ಲಿ ಕುಳಿತಿದ್ದ ಸಿದ್ದು ಮೇಲೆ ಸಾವರ್ಕರ್ ಫೋಟೋ ಹಾಕಿ ಆಕ್ರೋಶ ಹೊರಹಾಕಿದ್ರು. ಹೀಗಾಗಿ ಸಿದ್ದರಾಮಯ್ಯ ಬೆಂಬಲಿಗರು ಮಡಿಕೇರಿ ಚಲೋ ನಡೆಸಲು ಮುಂದಾಗಿದ್ದಾರೆ.

ಕಾಂಗ್ರೆಸ್ ಈಗ ಮತ್ತೊಂದು ಪಾದಯಾತ್ರೆಗೆ ಸಿದ್ಧತೆ ನಡೆಸುತ್ತಿದೆ. ಸಿದ್ದರಾಮಯ್ಯ ಹುಟ್ಟುಹಬ್ಬದ ಬಳಿಕ ಮಡಿಕೇರಿ ಚಲೋ ಬೃಹತ್ ಪಾದಯಾತ್ರೆಗೆ ಮೈಸೂರಿನಲ್ಲಿ ತಯಾರಿ ನಡೆಯುತ್ತಿದೆ. ಮಡಿಕೇರಿ ಪ್ರವಾಸದ ವೇಳೆ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಹಿನ್ನೆಲೆ ಸಿದ್ದರಾಮಯ್ಯ ಬೆಂಬಲಿಗರು ಮಡಿಕೇರಿ ಚಲೋ ರೂಪುರೇಷೆ ತಯಾರಿ ಮಾಡಿಕೊಂಡಿದ್ದಾರೆ. ಇದೆ ಆಗಸ್ಟ್ 26ರಂದು ಮಡಿಕೇರಿ ಚಲೋ ಪಾದಯಾತ್ರೆಗೆ ಅಭಿಮಾನಿಗಳು ಸಿದ್ಧತೆ ನಡೆಸುತ್ತಿದ್ದಾರೆ.

ಮಡಿಕೇರಿ ಚಲೋ

ಬಳ್ಳಾರಿ ಪಾದಯಾತ್ರೆಯ ಮಾದರಿಯಲ್ಲಿ ಈ ಪಾದಯಾತ್ರೆಯನ್ನು ಆಯೋಜಿಸಲು ಚಿಂತನೆ ನಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. ‘ನಮ್ಮ ನಡಿಗೆ ಮಡಿಕೇರಿ ಕಡೆಗೆ’ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ನಡೆಯಲಿದ್ದು ಈ ಮೂಲಕ ಮತ್ತಷ್ಟು ವರ್ಚಸ್ಸು ಹೆಚ್ಚಿಸಿಕೊಳ್ಳಲು ಸಿದ್ದರಾಮಯ್ಯ ಪ್ಲ್ಯಾನ್ ಮಾಡಿದ್ದಾರೆ. ಮಾಜಿ ಸಚಿವ ಡಾ ಹೆಚ್ ಸಿ ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್, ಶಾಸಕ ಡಾ. ಯತಿಂದ್ರ ಸೇರಿ ಹಲವರಿಂದ ಕಾರ್ಯಕ್ರಮದ ರೂಪುರೇಷೆ ತಯಾರಿಸಲಾಗುತ್ತಿದೆ.

ಮೈಸೂರಿನಲ್ಲಿ ಭುಗಿಲೆದ್ದ ಕಾಂಗ್ರೆಸ್ ಆಕ್ರೋಶ

ಇನ್ನು ಸಿದ್ದರಾಮಯ್ಯ ಕಾರಿಗೆ ಮೊಟ್ಟಿ ಹೊಡೆದ ಹಿನ್ನೆಲೆ ಸಿದ್ದು ತವರು ಜಿಲ್ಲೆ ಮೈಸೂರಿನಲ್ಲಿ ಕೈ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟಿಸಿದ್ರು. ಮೈಸೂರಿನ ಕೋರ್ಟ್‌ ಬಳಿ ನಾಥೂರಾಮ್‌ ಗೋಡ್ಸೆ ಮತ್ತು ಸಾವರ್ಕರ್‌ ಭಾವಚಿತ್ರ ಸುಟ್ಟು ಆಕ್ರೋಶ ಹೊರಹಾಕಿದ್ರು. ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನ ನಡುರಸ್ತೆಯಲ್ಲೇ ತಡೆಯಲಾಯ್ತು. ಈ ವೇಳೆ ರಸ್ತೆಯಲ್ಲೇ ಮೊಟ್ಟೆ ಹೊಡೆದು ಕಿಡಿಕಾರಿದ್ರು. ಮೈಸೂರಿನ ಗಾಂಧಿ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಲಾಯ್ತು.

ಹಾವೇರಿಯಲ್ಲಿ ಖಾಕಿ ಜೊತೆ ಕೈ ಕಿತ್ತಾಟ! ಎಸ್‌ಪಿ ಎಂಟ್ರಿ!

ಹಾವೇರಿಯಲ್ಲಿ ಕಾಂಗ್ರೆಸ್ ಆಕ್ರೋಶ ಮುಗಿಲುಮುಟ್ಟಿತ್ತು. ಟೈರ್‌ಗೆ ಬೆಂಕಿ ಹಚ್ಚೋ ವಿಚಾರವಾಗಿ, ಪೊಲೀಸರು ಮತ್ತು ಕೈ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ತಳ್ಳಾಟ, ನೂಕಾಟದಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಪೊಲೀಸರ ನೇಮ್‌ಪ್ಲೇಟ್‌ಗಳು ಕಿತ್ತುಹೋದ್ವು. ಇದೇ ವೇಳೆ ಪೊಲೀಸರು, ಮೂವರು ಕೈ ಕಾರ್ಯಕರ್ತರನ್ನ ವಶಕ್ಕೆ ಪಡೆದ್ರು. ಇದ್ರಿಂದ ಮತ್ತಷ್ಟು ರೊಚ್ಚಿಗೆದ್ದ ಕಾಂಗ್ರೆಸ್ಸಿಗರು, ಕೈಗೆ ಕಲ್ಲೆತ್ತಿಕೊಂಡು ಆಕ್ರೋಶ ಹೊರಹಾಕಿದ್ರು. ಪ್ರತಿಭಟನಾ ಸ್ಥಳಕ್ಕೆ ಎಸ್‌ಪಿ ಹನುಮಂತರಾಯಪ್ಪ ಎಂಟ್ರಿಕೊಟ್ರು.

Published On - 9:13 am, Sat, 20 August 22