ಲಸಿಕೆ ಪಡೆದ 28 ದಿನದೊಳಗೆ ರಕ್ತದಾನ ಮಾಡುವಂತಿಲ್ಲ, ರಕ್ತದ ಕೊರತೆ ನೀಗಿಸಲು ಲಸಿಕೆ ಪಡೆಯುವ ಮುನ್ನವೇ ಯುವಕರು ರಕ್ತದಾನ ಮಾಡಿ

| Updated By: ಆಯೇಷಾ ಬಾನು

Updated on: Apr 29, 2021 | 12:05 PM

ಲಸಿಕೆ ತೆಗೆದುಕೊಂಡ ನಂತರ 28 ದಿನಗಳ ಕಾಲ ರಕ್ತ ನೀಡಲು ಸಾಧ್ಯವಿಲ್ಲವಾದ್ದರಿಂದ ತುರ್ತು ಸಂದರ್ಭದಲ್ಲಿ ಗಂಭೀರ ಸಮಸ್ಯೆಗಳು ತಲೆದೋರಬಹುದು. ಅಪಘಾತಕ್ಕೆ ಒಳಗಾದವರು, ನ್ಯುಮೋನಿಯಾ ರೋಗಿಗಳು ಹಾಗೂ ಗರ್ಭಿಣಿಯರಿಗೆ ರಕ್ತದ ಅವಶ್ಯಕತೆ ಬೀಳಲಿದ್ದು ರಕ್ತವನ್ನು ಶೇಖರಿಸಿಡಲು ರಕ್ತದಾನಿಗಳು ಸಹಕರಿಸಬೇಕು: ಡಾ.ಮಂಜುನಾಥ್

ಲಸಿಕೆ ಪಡೆದ 28 ದಿನದೊಳಗೆ ರಕ್ತದಾನ ಮಾಡುವಂತಿಲ್ಲ, ರಕ್ತದ ಕೊರತೆ ನೀಗಿಸಲು ಲಸಿಕೆ ಪಡೆಯುವ ಮುನ್ನವೇ ಯುವಕರು ರಕ್ತದಾನ ಮಾಡಿ
ಪ್ರಾತಿನಿಧಿಕ ಚಿತ್ರ
Follow us on

ಮೈಸೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಲೆಕ್ಕಾಚಾರಕ್ಕೂ ಮೀರಿ ಹಾನಿ ಉಂಟು ಮಾಡುತ್ತಿದ್ದು, ಆರೋಗ್ಯ ವ್ಯವಸ್ಥೆಯನ್ನು ಅಲುಗಾಡಿಸುತ್ತಿದೆ. ಸದ್ಯ ಸೋಂಕು ನಿಯಂತ್ರಣಕ್ಕೆ ಲಸಿಕೆಯೇ ಪರಿಣಾಮಕಾರಿ ಮಾರ್ಗ ಎಂಬ ಅಭಿಪ್ರಾಯವನ್ನು ಬಹುತೇಕ ತಜ್ಞರು ವ್ಯಕ್ತಪಡಿಸಿದ್ದು, ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಡುವೆ ಯುವ ಸಮೂಹ ಕೊರೊನಾ ಲಸಿಕೆ ತೆಗೆದುಕೊಳ್ಳಲಾರಂಭಿಸಿದರೆ ಇನ್ನೊಂದು ಸಮಸ್ಯೆ ಎದುರಾಗುವ ಸಾಧ್ಯತೆ ಕಂಡುಬಂದಿದೆ. ಕೊರೊನಾ ಲಸಿಕೆ ಪಡೆದ 28 ದಿನ ಯಾರೂ ರಕ್ತದಾನ ಮಾಡುವಂತಿಲ್ಲ ಎಂದು ವೈದ್ಯರು ಹೇಳಿದ್ದು, ಲಸಿಕೆ ಪಡೆಯುವುದಕ್ಕೂ ಮುನ್ನ ರಕ್ತದಾನ ಮಾಡಿ ರಕ್ತದ ಕೊರತೆ ನೀಗಿಸಿ ಎಂದು ಮೈಸೂರು ಜಿಲ್ಲಾ ರಕ್ತನಿಧಿ ಕೇಂದ್ರದಿಂದ ಜಾಗೃತಿ ಮೂಡಿಸಲಾಗುತ್ತಿದೆ.

ಈ ಬಗ್ಗೆ ಟಿವಿ9 ಮೂಲಕ ಜನರಲ್ಲಿ ಮನವಿ ಮಾಡಿರುವ ಡಾ.ಮಂಜುನಾಥ್, ಲಸಿಕೆ ಪಡೆಯುವ ಮುನ್ನ ರಕ್ತದಾನಿಗಳು ಸ್ವಯಂಪ್ರೇರಿತರಾಗಿ ರಕ್ತ ದಾನ ಮಾಡಿ. ಲಸಿಕೆ ತೆಗೆದುಕೊಂಡ ನಂತರ 28 ದಿನಗಳ ಕಾಲ ನೀವು ರಕ್ತ ನೀಡಲು ಸಾಧ್ಯವಿಲ್ಲವಾದ್ದರಿಂದ ತುರ್ತು ಸಂದರ್ಭದಲ್ಲಿ ಗಂಭೀರ ಸಮಸ್ಯೆಗಳು ತಲೆದೋರಬಹುದು. ಅಪಘಾತಕ್ಕೆ ಒಳಗಾದವರು, ನ್ಯುಮೋನಿಯಾ ರೋಗಿಗಳು ಹಾಗೂ ಗರ್ಭಿಣಿಯರಿಗೆ ರಕ್ತದ ಅವಶ್ಯಕತೆ ಬೀಳಲಿದ್ದು ರಕ್ತವನ್ನು ಶೇಖರಿಸಿಡಬೇಕಾದ ಅನಿವಾರ್ಯತೆ ಇದೆ. ಈ ಕಾರಣದಿಂದ ರಕ್ತದಾನಿಗಳು ಸಹಕರಿಸಬೇಕು ಎಂದು ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಲಾಕ್​ಡೌನ್ ಆದಾಗ ಸಮಸ್ಯೆ ಆಗಿತ್ತು
ಕೊರೊನಾ ನಿಯಂತ್ರಣಕ್ಕಾಗಿ ಮೊದಲ ಹಂತದಲ್ಲಿ ಲಾಕ್​ಡೌನ್ ಆದಾಗ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗದೇ ಸಮಸ್ಯೆ ಆಗಿತ್ತು. ಈ ಬಾರಿ ಫೆಬ್ರವರಿ ತಿಂಗಳಲ್ಲೂ ತೊಂದರೆ ಉಂಟಾಗಿತ್ತು. ಜತೆಗೆ, ಕೊರೊನಾ ಪಾಸಿಟಿವ್ ಆಗಿ ಗುಣಮುಖರಾದವರೂ ನಾನಾ ಕಾರಣಗಳಿಂದ ರಕ್ತದಾನ ಮಾಡುವಂತಿಲ್ಲವಾದ್ದರಿಂದ ರಕ್ತದ ಕೊರತೆ ಎದುರಾದರೆ ಸಮಸ್ಯೆ ಆಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಯುವಕರು ಲಸಿಕೆ ಸ್ವೀಕರಿಸುವ ಮುನ್ನವೇ ರಕ್ತದಾನ ಮಾಡಿ ಎಂದು ವೈದ್ಯರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:
ಕೊರೊನಾ ನೆಗೆಟಿವ್ ಬಂದರೂ ನಿಮ್ಮಲ್ಲಿ ಕೆಲವು ಪ್ರಶ್ನೆಗಳಿರಬಹುದು, ಅವೆಲ್ಲದಕ್ಕೂ ಉತ್ತರ ಇಲ್ಲಿದೆ 

ಮಹಿಳೆಯರು ಮುಟ್ಟಿನ ಅವಧಿಯಲ್ಲಿ ಕೊರೊನಾ ಲಸಿಕೆ ತೆಗೆದುಕೊಳ್ಳಬಾರದಾ?-ಇಲ್ಲಿದೆ ನೋಡಿ ಸತ್ಯಾಂಶ