ಬಳ್ಳಾರಿ: ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ಖಡಕ್ ಡೈಲಾಗ್ಗಳಿಂದಲೇ ತೆಲುಗು ಚಿತ್ರರಂಗರದಲ್ಲಿ ಸದ್ದು ಮಾಡಿದವರು. ಅಪಾರ ಪ್ರಮಾಣದ ಅಭಿಮಾನಿಗಳನ್ನ ಹೊಂದಿರುವ ನಟ ಬಾಲಕೃಷ್ಣಗೆ ಗಣಿನಾಡು ಬಳ್ಳಾರಿಯಲ್ಲೂ ಅಭಿಮಾನಿಗಳಿದ್ದಾರೆ. ಅದರಲ್ಲೂ ಬಾಲಕೃಷ್ಣರಂತೆಯೇ ವೇಷಭೂಷಣಗಳೊಂದಿಗೆ ಅವರನ್ನೇ ಹೋಲುವ ಅಪ್ಪಟ ಅಭಿಮಾನಿಯೊಬ್ಬರು ಇದ್ದು, ಅವರನ್ನು ಬಳ್ಳಾರಿ ಬಾಲಯ್ಯ ಎಂದೇ ಕರೆಯಲಾಗುತ್ತಿತ್ತು. ಸದ್ಯ ಬಳ್ಳಾರಿ ಬಾಲಯ್ಯ ಎಂದೇ ಹೆಸರುವಾಸಿಯಾಗಿದ್ದ ವೆಂಕಟೇಶ್ವರ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಕೊವಿಡ್ ಸೋಂಕಿಗೆ ಒಳಗಾಗಿದ್ದ ವೆಂಕಟೇಶ್ವರ್ ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದಾರೆ. ಬಳ್ಳಾರಿಯ ಮಿಲ್ಲರ್ ಪೇಟೆ ನಿವಾಸಿಯಾಗಿದ್ದ ವೆಂಟಕೇಶ್ವರ್ ಅವರಿಗೆ ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರನಿದ್ದಾರೆ.
ಬಾಲಕೃಷ್ಣ ಅವರ ಯಾವುದೇ ಚಿತ್ರ ಬಿಡುಗಡೆಯಾಗಲೀ ಮೊದಲ ಶೋನಲ್ಲಿ ಬಳ್ಳಾರಿ ಬಾಲಯ್ಯ ಇರುತ್ತಿದ್ದರು. ಸಿನಿಮಾದಲ್ಲಿ ಬಾಲಕೃಷ್ಣ ಧರಿಸಿರುವ ವೇಷ ಭೂಷಣಗಳ ಮಾದರಿಯಲ್ಲಿಯೇ ವೆಂಕಟೇಶ್ವರ್ ಉಡುಪು ಧರಿಸಿ ಎಲ್ಲರ ಗಮನ ಸೆಳೆಯುತ್ತಿದ್ದರು.
ವೆಂಕಟೇಶ್ವರ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಯ ಸಾವಿಗೆ ನಟ ಬಾಲಕೃಷ್ಣ ಕಂಬನಿ ಮಿಡಿದಿದ್ದಾರೆ. ಅಷ್ಟೇ ಅಲ್ಲದೇ ವೆಂಕಟೇಶ್ವರ್ ಪುತ್ರ ಹಾಗೂ ಪತ್ನಿಯೊಂದಿಗೆ ದೂರವಾಣಿ ಮುಖಾಂತರ ಮಾತನಾಡಿರುವ ಬಾಲಕೃಷ್ಣ ಸಾಂತ್ವನ ಹೇಳಿದ್ದಾರೆ.
ಇದನ್ನೂ ಓದಿ:
ಹಸೆಮಣೆ ಏರಬೇಕಿದ್ದ ವರ ಕೊರೊನಾಗೆ ಬಲಿ; ಬೆಂಗಳೂರಿನಲ್ಲಿ 28 ವರ್ಷದ ಯುವಕನ ಸಾವು