ಮಡಿಕೇರಿ: ನಿರಂತರವಾಗಿ ಸುರಿದ ಧಾರಾಕಾರ ಮಳೆಗೆ ಕೊಡಗು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಸೇತುವೆಯೊಂದು ಕುಸಿದು ಬಿದ್ದಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕೊಯನಾಡು ಗ್ರಾಮದಲ್ಲಿರುವ 50 ಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ ಕುಸಿದು ಬಿದ್ದಿದ್ದು, ಇದರಿಂದ ಮಡಿಕೇರಿ-ಮಂಗಳೂರು ಸಂಪರ್ಕ ಕಡಿತಗೊಂಡಿದೆ.
ಮಡಿಕೇರಿ-ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿನ ಸೇತುವೆ ಬಿರುಕು ಬಿಟ್ಟಿದ್ದು, ಅಡಿಪಾಯವೇ ಕುಸಿತಗೊಂಡಿದೆ. ಸೇತುವೆಯ ಕೆಳಭಾಗದಲ್ಲಿ ಪ್ರವಾಹದಿಂದ ಕೆಳಭಾಗದ ಮಣ್ಣು ಕೊಚ್ಚಿ ಹೋಗಿ ಬೃಹತ್ ಹೊಂಡ ಸೃಷ್ಟಿಯಾಗಿದೆ. ಪರಿಣಾಮವಾಗಿ ಯಾವುದೇ ಕ್ಷಣದಲ್ಲಿ ಸೇತುವೆ ಕುಸಿದು ಬೀಳುವ ಹಂತಕ್ಕೆ ನಿಂತುಬಿಟ್ಟಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಅಲ್ಲದೆ ಒಂದೊಮ್ಮೆ ಈ ಸೇತುವೆ ಕುಸಿದು ಬಿದ್ದರೆ ಮಡಿಕೇರಿ-ಮಂಗಳೂರು-ಮೈಸೂರು ಸಂಪರ್ಕ ಕಡಿತಗೊಳ್ಳಲಿದೆ.
ಗಡಿಭಾಗದಲ್ಲಿ ಪ್ರವಾಹ ಪರಿಸ್ಥಿತಿ, ಹಲವೆಡೆ ರಸ್ತೆ ಕುಸಿತ
ಮಂಗಳೂರು: ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾ ಗಡಿಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸಂಪಾಜೆಯ ಅರೇಕಲ್ಲು ಸೇರಿದಂತೆ ಹಲವೆಡೆ ರಸ್ತೆ ಕುಸಿತಗೊಂಡಿದೆ. ಕರಾವಳಿ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಅಲ್ಲಲ್ಲಿ ಪ್ರವಾಹ ಪರಿಸ್ಥಿತಿಗಳು ತಲೆದೋರುತ್ತಿವೆ. ಸಂಪಾಜೆಯ ಅರೇಕಲ್ಲು ಬಳಿ ರಸ್ತೆ ಕುಸಿತಗೊಂಡಿದ್ದಲ್ಲದೆ, ಅದೇ ಭಾಗದ ಅನೇಕ ಕಡೆಗಳಲ್ಲಿ ರಸ್ತೆ ಕುಸಿತಗಳು ಸಂಭವಿಸಿವೆ.
ಮಳೆ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ನದಿಗಳಲ್ಲಿ ನೀರಿನ ಹರಿವು ಕೂಡ ಹೆಚ್ಚುತ್ತಿದೆ. ಮಳೆಯಿಂದಾಗಿ ಧರೆಗುರುಳಿ ಸೇತುವೆ ಕಡೆಗೆ ನುಗ್ಗಿತ್ತಿದ್ದು, ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸ್ಥಳೀಯರು ಅಂತಹ ಮರಗಳನ್ನು ತೆರವುಗೊಳಿಸುವಲ್ಲಿ ನಿರತರಾಗಿದ್ದಾರೆ.
Published On - 1:28 pm, Thu, 4 August 22