ಅಗತ್ಯಕ್ಕೆ ತಕ್ಕಂತೆ ವೈದ್ಯಕೀಯ ಸೌಲಭ್ಯ ಹೆಚ್ಚಳ, ಖಾಸಗಿ ಆಸ್ಪತ್ರೆಗಳಿಂದ ರೆಮ್​ಡೆಸಿವರ್​ಗೆ ಅನಗತ್ಯ ಬೇಡಿಕೆ: ಹೈಕೋರ್ಟ್​ಗೆ ರಾಜ್ಯ ಸರ್ಕಾರ ಮಾಹಿತಿ

| Updated By: ಆಯೇಷಾ ಬಾನು

Updated on: Apr 29, 2021 | 1:39 PM

ಮಾರ್ಚ್​ 11ರ ನಂತರ ರಾಜ್ಯದ ಆಸ್ಪತ್ರೆಗಳಲ್ಲಿ 22,001ಆಕ್ಸಿಜನ್ ಬೆಡ್, 1248 ಹೆಚ್ಎಫ್ಎನ್​ಸಿ ಬೆಡ್, 701 ಐಸಿಯು, 1548 ವೆಂಟಿಲೇಟರ್ ಬೆಡ್​ಗಳನ್ನು ಹೆಚ್ಚಿಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಆಸ್ಪತ್ರೆಗಳಲ್ಲೂ ಬೆಡ್ ಹೆಚ್ಚಳ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮಾಹಿತಿ ನೀಡಿದೆ.

ಅಗತ್ಯಕ್ಕೆ ತಕ್ಕಂತೆ ವೈದ್ಯಕೀಯ ಸೌಲಭ್ಯ ಹೆಚ್ಚಳ, ಖಾಸಗಿ ಆಸ್ಪತ್ರೆಗಳಿಂದ ರೆಮ್​ಡೆಸಿವರ್​ಗೆ ಅನಗತ್ಯ ಬೇಡಿಕೆ: ಹೈಕೋರ್ಟ್​ಗೆ ರಾಜ್ಯ ಸರ್ಕಾರ ಮಾಹಿತಿ
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಉಲ್ಬಣಿಸಿದ ಕಾರಣ ಸೋಂಕಿತರ ಸಂಖ್ಯೆ ಲೆಕ್ಕಾಚಾರಕ್ಕೂ ಮೀರಿ ಹೆಚ್ಚಳವಾಗಿದೆ. ವೈದ್ಯಕೀಯ ಸೌಲಭ್ಯಗಳಲ್ಲಿ ಉಂಟಾಗಿರುವ ಏರುಪೇರು ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದಿದೆ. ಈ ಸಂಬಂಧ ಉಚ್ಛ ನ್ಯಾಯಾಲಯಕ್ಕೆ ಉತ್ತರ ಒದಗಿಸಿರುವ ರಾಜ್ಯ ಸರ್ಕಾರ ರಾಜ್ಯದ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯಗಳ ಪ್ರಮಾಣವನ್ನು ಹೆಚ್ಚಿಸಿರುವುದಾಗಿ ತಿಳಿಸಿದೆ. ಮಾರ್ಚ್​ 11ರ ನಂತರ ರಾಜ್ಯದ ಆಸ್ಪತ್ರೆಗಳಲ್ಲಿ 22,001ಆಕ್ಸಿಜನ್ ಬೆಡ್, 1248 ಹೆಚ್ಎಫ್ಎನ್​ಸಿ ಬೆಡ್, 701 ಐಸಿಯು, 1548 ವೆಂಟಿಲೇಟರ್ ಬೆಡ್​ಗಳನ್ನು ಹೆಚ್ಚಿಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಆಸ್ಪತ್ರೆಗಳಲ್ಲೂ ಬೆಡ್ ಹೆಚ್ಚಳ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.

ಜತೆಗೆ, ವೈದ್ಯಕೀಯ ಶಿಕ್ಷಣ ಇಲಾಖೆ ಆಸ್ಪತ್ರೆಗಳಲ್ಲೂ ಬೆಡ್ ಹೆಚ್ಚಳ ಮಾಡಲಾಗಿದೆ. 9405 ಆಕ್ಸಿಜನ್ ಬೆಡ್, 646 ವೆಂಟಿಲೇಟರ್, 570ರಷ್ಟು ಹೆಚ್​ಎಫ್​ಎನ್ ಬೆಡ್ ಹೆಚ್ಚಿಸಲಾಗಿದೆ. ಕಮಾಂಡ್ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಬೆಡ್​ಗಾಗಿ‌ ಮನವಿ ಮಾಡಲಾಗಿದ್ದು ಹಜ್ ಭವನ್, ಪಶುವೈದ್ಯ ಕಾಲೇಜಿನಲ್ಲಿ ತಲಾ 100 ಬೆಡ್ ವ್ಯವಸ್ಥೆ ಮಾಡಲಾಗಿದೆ. ಇನ್ನೂ 1500 ಬೆಡ್ ಸೃಷ್ಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೈಕೋರ್ಟ್​ಗೆ ರಾಜ್ಯ ಸರ್ಕಾರ ತಿಳಿಸಿದೆ. ಗಂಭೀರ ಸೋಂಕಿತರಿಗಷ್ಟೇ ಆಕ್ಸಿಜನ್ ಬೆಡ್, ರೆಮ್​ಡಿಸಿವರ್ ಪೂರೈಕೆ ಮಾಡುತ್ತಿರುವುದಾಗಿಯೂ ಈ ಸಂದರ್ಭದಲ್ಲಿ ಹೇಳಿಕೆ ನೀಡಿದೆ.

ಅಲ್ಲದೇ, ರಾಜ್ಯದಲ್ಲಿ ರೆಮ್‌ಡಿಸಿವಿರ್ ಪೂರೈಕೆ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದು, ಕೇಂದ್ರದಿಂದ ರಾಜ್ಯಕ್ಕೆ 1,22,000 ರೆಮ್​ಡಿಸಿವಿರ್ ಹಂಚಿಕೆ‌ ಆಗಿದೆ. ಇಲ್ಲಿಯವರೆಗೆ ಇಷ್ಟು ರೆಮ್​ಡಿಸಿವಿರ್ ರಾಜ್ಯಕ್ಕೆ ಹಂಚಲಾಗಿದೆ. ನಿತ್ಯ 20 ಸಾವಿರಕ್ಕೂ ಹೆಚ್ಚು ರೆಮ್​ಡಿಸಿವಿರ್​ಗೆ ಬೇಡಿಕೆಯಿದ್ದು, ವೆಬ್​ಸೈಟ್​ನಲ್ಲಿ ರೆಮ್​ಡಿಸಿವಿರ್ ಮಾಹಿತಿ‌ಯನ್ನು ಹಂಚಿಕೊಳ್ಳಲಾಗಿದೆ. ವಾರ್ ರೂಮ್​ನಲ್ಲಿ ರೆಮ್​ಡಿಸಿವಿರ್​ಗಾಗಿ ಅಧಿಕಾರಿ ನೇಮಕ ಮಾಡಲಾಗಿದ್ದು, 38,420 ರೆಮ್​ಡಿಸಿವಿರ್ ಈಗಾಗಲೇ ಸ್ಟಾಕ್ ಇದೆ ಎಂದು ಸರ್ಕಾರಿ ವಕೀಲ ವಿಕ್ರಮ್ ಹುಯಿಲಗೋಳ್ ಹೈಕೋರ್ಟ್​ಗೆ ಮಾಹಿತಿ ಒದಗಿಸಿದ್ದಾರೆ.

ಇದೇ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಿಂದ ಅನಗತ್ಯವಾಗಿ ರೆಮ್​ಡಿಸಿವಿರ್​ಗೆ ಬೇಡಿಕೆ ಬರುತ್ತಿದೆ ಎಂಬ ಆರೋಪವೂ ಕೇಳಿಬಂದಿದ್ದು, ಅಗತ್ಯವಿಲ್ಲದಿದ್ದರೂ ಸೋಂಕಿತರಿಗೆ ರೆಮ್​ಡಿಸಿವಿರ್ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಂದ ಅನಗತ್ಯವಾಗಿ ವಾಟ್ಸಾಪ್,‌ ಎಸ್ಎಂಎಸ್, ಇ-ಮೇಲ್ ಮೂಲಕ ಬೇಡಿಕೆ ಬರುತ್ತಿದೆ. ಖಾಸಗಿ ‌ಆಸ್ಪತ್ರೆಗಳೇ ಸೋಂಕಿತರಿಗೆ ರೆಮ್​ಡಿಸಿವಿರ್ ಪೂರೈಸಲಿ ಎಂದು ಸರ್ಕಾರಿ ವಕೀಲ ವಿಕ್ರಮ್ ಹುಯಿಲಗೋಳ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:
ಕೊರೊನಾ ಸಕ್ರಿಯ ಪ್ರಕರಣಗಳನ್ನು ಹೊಂದಿದ ರಾಜ್ಯಗಳ ಪೈಕಿ ಕರ್ನಾಟಕಕ್ಕೆ 2ನೇ ಸ್ಥಾನ; ಮರಣ ಪ್ರಮಾಣದಲ್ಲಿ 3ನೇ ಸ್ಥಾನ 

ಸುಮ್​ಸುಮ್ನೆ ರೆಮ್​ಡಿಸಿವಿರ್ ಬರೆದರೆ ವೈದ್ಯರ ವಿರುದ್ಧ ಕ್ರಮ; ಕರ್ನಾಟಕದಲ್ಲಿ ರೆಮ್​ಡಿಸಿವಿರ್ ಸಮಸ್ಯೆ ಒಪ್ಪಿಕೊಂಡ ಆರೋಗ್ಯ ಸಚಿವ ಕೆ.ಸುಧಾಕರ್