ಸುಮ್ಸುಮ್ನೆ ರೆಮ್ಡಿಸಿವಿರ್ ಬರೆದರೆ ವೈದ್ಯರ ವಿರುದ್ಧ ಕ್ರಮ; ಕರ್ನಾಟಕದಲ್ಲಿ ರೆಮ್ಡಿಸಿವಿರ್ ಸಮಸ್ಯೆ ಒಪ್ಪಿಕೊಂಡ ಆರೋಗ್ಯ ಸಚಿವ ಕೆ.ಸುಧಾಕರ್
ಕರ್ನಾಟಕದಲ್ಲಿ 3 ಲಕ್ಷಕ್ಕೂ ಅಧಿಕ ಕೊವಿಡ್ ಸಕ್ರಿಯ ಪ್ರಕರಣಗಳಿವೆ. ಬಹುತೇಕ ರೋಗಿಗಳಿಗೆ ರೆಮ್ಡಿಸಿವಿರ್ ಸೂಚಿಸುತ್ತಿದ್ದಾರೆ. ಒಬ್ಬೊಬ್ಬ ರೋಗಿಗೆ 6 ವಯಲ್ಸ್ ಬರೆಯಲಾಗುತ್ತಿದೆ. ರಾಜ್ಯಕ್ಕೆ ಕೇಂದ್ರದಿಂದ ಹಂಚಿಕೆಯಾದ ರೆಮ್ಡಿಸಿವಿರ್ ಇನ್ನೂ ತಲುಪಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ರೆಮ್ಡಿಸಿವಿರ್ ಇಂಜೆಕ್ಷನ್ ಬೇಡಿಕೆಗೆ ತಕ್ಕಷ್ಟು ಲಭ್ಯವಿಲ್ಲ ಎಂದು ಸಚಿವ ಸುಧಾಕರ್ ಒಪ್ಪಿಕೊಂಡಿದ್ದಾರೆ. ರಾಜ್ಯದಲ್ಲಿ ಮೂರು ಪ್ರಮುಖ ಕಾರಣಗಳಿಂದ ರೆಮ್ಡಿಸಿವಿರ್ ಕೊರತೆ ಆಗಿದೆ. ನಮಗೆ 1.20 ಲಕ್ಷ ರೆಮ್ಡಿಸಿವಿರ್ ಸೋಸ್ ಅಲಾಟ್ ಆಗಿದೆ. ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಕೊವಿಡ್ ಸಕ್ರಿಯ ಪ್ರಕರಣಗಳಿವೆ. ಬಹುತೇಕ ರೋಗಿಗಳಿಗೆ ರೆಮ್ಡಿಸಿವಿರ್ ಸೂಚಿಸುತ್ತಿದ್ದಾರೆ. ಒಬ್ಬೊಬ್ಬ ರೋಗಿಗೆ 6 ವಯಲ್ಸ್ ಬರೆಯಲಾಗುತ್ತಿದೆ. ಕೇಂದ್ರದಿಂದ ಹಂಚಿಕೆಯಾದ ವಯಲ್ಸ್ ಇನ್ನೂ ಸಿಕ್ಕಿಲ್ಲ. ರಾಜ್ಯಕ್ಕೆ ಇನ್ನೂ 20 ಸಾವಿರ ವಯಲ್ಸ್ ತಲುಪೇ ಇಲ್ಲ. ಕೆಲ ಡ್ರಗ್ಸ್ ಕಂಪನಿಗಳು ಈವರೆಗೆ ರೆಮ್ಡಿಸಿವಿರ್ ನೀಡಿಲ್ಲ. ಹೀಗಾಗಿ ರೆಮ್ಡಿಸಿವಿರ್ ಇಂಜೆಕ್ಷನ್ ಕೊರತೆ ಎದ್ದು ಕಾಣ್ತಿದೆ ಎಂದು ರಾಜ್ಯದಲ್ಲಿ ರೆಮ್ಡಿಸಿವಿರ್ ಔಷಧಿಯ ಅಲಭ್ಯತೆಯನ್ನು ಸುಧಾಕರ್ ಒಪ್ಪಿಕೊಂಡರು.
ಹೆಟಿರೋ ಡ್ರಗ್ಸ್ ಕಂಪನಿ 19 ಸಾವಿರ ಬಾಟಲಿ (ವಯಲ್ಸ್) ರೆಮ್ಡಿಸಿವಿರ್ ನೀಡಿದೆ. ಹೆಟಿರೋ ಡ್ರಗ್ಸ್ ಕಂಪನಿಯು ನಿಗದಿಯಂತೆ 18 ಸಾವಿರ ವಯಲ್ಸ್ ಕೊಡಬೇಕಿತ್ತು. ಈವರೆಗೆ ಕೊಟ್ಟಿಲ್ಲ. ‘ಜ್ಯುಬಿಲೆಂಟ್’ ಕಂಪೆನಿಯು ಈವರೆಗೆ ಒಂದೇ ಒಂದು ವಯಲ್ಸ್ ಕೊಟ್ಟಿಲ್ಲ. ಈ ಎರಡು ಕಂಪನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ರೆಮ್ಡಿಸಿವಿರ್ ಕೊರತೆ ಬಗ್ಗೆ ಫನಾ ಅಧ್ಯಕ್ಷರ ಜೊತೆಗೆ ಸಭೆ ನಡೆಸುತ್ತೇವೆ. ದೇಶದಲ್ಲಿ 8 ಕಂಪನಿ ರೆಮ್ಡಿಸಿವಿರ್ ತಯಾರು ಮಾಡುತ್ತವೆ. ಕರ್ನಾಟಕದಲ್ಲಿ 3 ಲಕ್ಷ ಕೊರೊನಾ ಸಕ್ರಿಯ ಪ್ರಕರಣಗಳಿವೆ. ರೆಮ್ಡಿಸಿವಿರ್ ಯಾರಿಗೆ ಬೇಕು, ಬೇಡ ಎಂದು ಹೇಳಿದ್ದೇವೆ. ಆದರೂ ಆಸ್ಪತ್ರೆಗಳವರ ಚೀಟಿ ವ್ಯವಹಾರ ಕಡಿಮೆಯಾಗಿಲ್ಲ. ಕೆಲವರಿಗೆ ಮನೆಯಲ್ಲೇ ರೆಮ್ಡಿಸಿವಿರ್ ನೀಡ್ತಿರುವ ಮಾಹಿತಿ ಬಂದಿದೆ. ಮನೆಯಲ್ಲೇ ರೆಮ್ಡಿಸಿವಿರ್ ಪಡೆಯೋದು ಅಪಾಯಕಾರಿ. ಅನಗತ್ಯವಾಗಿ ಮನೆಯಲ್ಲಿ ರೆಮ್ಡಿಸಿವಿರ್ ದಾಸ್ತಾನು ತಪ್ಪು. ಅನಗತ್ಯವಾಗಿ ರೆಮ್ಡಿಸಿವಿರ್ ಬರೆದರೆ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕೊವಿಡ್ ಕೇರ್ ಸೆಂಟರ್ ಸ್ಥಾಪಿಸುವುದಾಗಿ ಸುಧಾಕರ್ ಹೇಳಿದರು. ಈ ಕೇಂದ್ರಗಳ ಜವಾಬ್ದಾರಿಯನ್ನು ಕೆಎಎಸ್ ಅಧಿಕಾರಿಗಳಿಗೆ ನೀಡಲಾಗುವುದು. ನಾಳೆಯಿಂದ ವೆಬ್ ಪೋರ್ಟಲ್ ಪ್ರಾರಂಭ ಮಾಡುತ್ತಿದ್ದೇವೆ. ರಾಜ್ಯದ ದಂತ ವೈದ್ಯರು, ನಿವೃತ್ತ ವೈದ್ಯರು, ಪದವೀಧರರು ಈ ಪರಿಸ್ಥಿತಿಯಲ್ಲಿ ಜನತೆಯ ನೆರವಿಗೆ ಧಾವಿಸಬೇಕು. ನಿವೃತ್ತ ವೈದ್ಯರು ಸ್ವಪ್ರೇರಣೆಯಿಂದ ಹೆಸರು ನೋಂದಾಯಿಸಬೇಕು. ಅಗತ್ಯ ಇದ್ದರೆ ಭತ್ಯೆ, ವಿಶೇಷ ಸರ್ಟಿಫಿಕೆಟ್ ನೀಡುತ್ತೇವೆ ಎಂದು ಸಚಿವರು ತಿಳಿಸಿದರು.
ಕಾಲ್ಸೆಂಟರ್ ಮೂಲಸೌಕರ್ಯ ಅಭಿವೃದ್ಧಿ ICMRನಿಂದ ಪಾಸಿಟಿವ್ ವರದಿ ಬಂದ ಬಳಿಕ ಎಲ್ಲರಿಗೂ ಇನ್ನು ಮುಂದೆ ಕರೆ ಮಾಡಲಾಗುವುದು. ಕೊರೊನಾ ಸೋಂಕಿತರಿಗೆ ವೈದ್ಯಕೀಯ ಸಲಹೆ ನೀಡಲಾಗುತ್ತದೆ. ರೋಗ ಲಕ್ಷಣ ಹೊಂದಿರುವವರನ್ನು ಮಾಹಿತಿ ಪಡೆದ ನಂತರ ಏಳು ಭಾಗಗಳಾಗಿ ವಿಂಗಡಣೆ ಮಾಡಲಾಗುವುದು. ರೋಗ ಲಕ್ಷಣ ಇರುವವರಿಗೆ ಅಲ್ಲಿಯೇ ಟ್ರಯಾಜಿಂಗ್ ಆಗುತ್ತೆ. ಆಸ್ಪತ್ರೆಗೆ ಕಳುಹಿಸಬೇಕು ಎಂಬುವವರನ್ನು ವಿಂಗಡಿಸಲಾಗುತ್ತದೆ. ಆಸ್ಪತ್ರೆ ಅಗತ್ಯ ಇಲ್ಲದವರಿಗೆ ಹೋಂ ಐಸೋಲೇಷನ್ಗೆ ಸಲಹೆ ನೀಡಲಾಗುವುದು. ಇಲ್ಲವಾದರೆ ಕೊವಿಡ್ ಕೇರ್ ಸೆಂಟರ್ಗೆ ಕಳುಹಿಸಲಾಗುತ್ತದೆ ಎಂದು ವಿವರಿಸಿದರು.
ಪಾಸಿಟಿವ್ ಬಂದ ಬಳಿಕ ಸೋಂಕಿತರನ್ನು ಸಂಪರ್ಕಿಸಲು ಸಾಧ್ಯವಾಗದಿದ್ದರೆ ಅಂತಹವರ ಮಾಹಿತಿಯನ್ನು ಪೊಲೀಸರಿಗೆ ನೀಡಲಾಗುತ್ತದೆ. ಸುಮಾರು ಶೇಕಡಾ 20ರಷ್ಟು ಸೋಂಕಿತರ ಪತ್ತೆ ಹಚ್ಚಲು ಆಗುತ್ತಿಲ್ಲ. ಬೆಂಗಳೂರಲ್ಲಿ ಎಂಟು ವಲಯ ಮಾಡಿ, ಸೋಂಕಿತರ ನಿರ್ವಹಣೆ ಹೊಣೆಯನ್ನು ನೀಡುತ್ತೇವೆ. ಮನೆಯಲ್ಲಿರುವವರೂ ಮಾಹಿತಿ ನೀಡಿ, ಸಲಹೆ ಪಡೆಯಬಹುದು. ಕಾಲ್ ಸೆಂಟರ್ಗೆ ಈ ಬಾರಿ ಹೆಚ್ಚಿನ ಜನ ಬೇಕಾಗುತ್ತದೆ. ಇದಕ್ಕಾಗಿ ದೊಡ್ಡ ದೊಡ್ಡ ಐಟಿ ಸಂಸ್ಥೆಯವರ ಸಹಕಾರ ಕೇಳಿದ್ದೇವೆ. 8000 ಜನ ನಮಗೆ ಆಪ್ತಮಿತ್ರ ಸಹಾಯವಾಣಿಗೆ ಬೇಕು. ಪ್ರತಿ ರೋಗಿ ಜತೆ 8-10 ನಿಮಿಷ ಮಾತನಾಡಿ ಸಲಹೆ ನೀಡಬೇಕಾಗುತ್ತದೆ ಎಂದು ಸುಧಾಕರ್ ನುಡಿದರು.
ಜಿಲ್ಲೆಗಳಿಗೆ ಭೇಟಿ ಕರ್ನಾಟಕ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ 2ನೇ ಅಲೆ ತೀವ್ರವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಪರಿಸ್ಥಿತಿ ಅವಲೋಕಿಸಿ, ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಗುರುವಾರ ಮತ್ತು ಶುಕ್ರವಾರ (ಏಪ್ರಿಲ್ 28-29) ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರವಾಸ ಮಾಡಲಿದ್ದಾರೆ. ಬೀದರ್ಗೆ ಗುರುವಾರ ಮತ್ತು ಕಲಬುರಗಿಗೆ ಶುಕ್ರವಾರ ಸಚಿವರಉ ಭೇಟಿ ನೀಡಿ, ಸೋಂಕಿತರಿಗೆ ಸಿಗುತ್ತಿರುವ ಸೌಲಭ್ಯಗಳ ಮಾಹಿತಿ ಪಡೆದುಕೊಳ್ಳಲಿದ್ದಾರೆ.
(Dont Prescribe Remdesivir unnecessarily warns Karanataka Health Minister K Sudhakar)
ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ ಇಂದು 39,047 ಜನರಿಗೆ ಕೊರೊನಾ ಸೋಂಕು, 137 ಸಾವು