ಮೈಸೂರಿನಂತಹ ಮಹಾನಗರದಲ್ಲೇ ವಾಹನ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಲು ಹೆಣಗಾಟ
ವಾಹನಗಳ ಫಿಟ್‌ನೆಸ್ ಪ್ರಮಾಣಪತ್ರ ಪಡೆಯಲು ಮೈಸೂರಿನ ವಾಹನ ಮಾಲೀಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಸಾರಿಗೆ ಇಲಾಖೆಯ ಹೊಸ ನಿಯಮದಿಂದ ಒಂದೇ ಆಟೋಮೆಟಿವ್ ಕೇಂದ್ರದಲ್ಲಿ ದಿನಕ್ಕೆ ಕೇವಲ 50 ವಾಹನಗಳ ಪರೀಕ್ಷೆ ಮಾತ್ರ ಸಾಧ್ಯವಾಗುತ್ತಿದೆ. ಇದರಿಂದಾಗಿ ನೂರಾರು ವಾಹನ ಮಾಲೀಕರು ಆರ್‌ಟಿಒ ಕಚೇರಿಯಲ್ಲಿ ದೀರ್ಘ ಸಾಲುಗಳಲ್ಲಿ ನಿಂತು ಪರೀಕ್ಷೆಗೆ ಕಾಯುತ್ತಿದ್ದಾರೆ. ಫಿಟ್‌ನೆಸ್ ಪ್ರಮಾಣಪತ್ರವಿಲ್ಲದೆ ವಾಹನಗಳನ್ನು ರಸ್ತೆಗೆ ಇಳಿಸಿದರೆ ದಂಡ ವಿಧಿಸಲಾಗುತ್ತಿದೆ.

ಮೈಸೂರು, ಮೇ 23: ಮೈಸೂರಿನ (Mysore) ವಾಹನ ಮಾಲೀಕರು ಕಳೆದ 15 ದಿನಗಳಿಂದ ವಾಹನ ಸವಾರರು ತಮ್ಮ ವಾಹನದ ಫಿಟ್‌ನೆಸ್ ಪ್ರಮಾಣಪತ್ರ (Vehicle fitness certificate) ಪಡೆಯಲಾಗದೆ ಸಮಸ್ಯೆಗೆ ಸಿಲುಕಿದ್ದಾರೆ. ಸಾರಿಗೆ ಇಲಾಖೆಯ ಹೊಸ ನಿಯಮದ ಪ್ರಕಾರ ಆಟೋಮೆಟಿವ್ ಸೆಂಟರ್‌ನಲ್ಲಿ ವಾಹನಗಳ ಪರೀಕ್ಷೆ ನಡೆಸಿ ಫಿಟ್‌ನೆಸ್ ಪ್ರಮಾಣಪತ್ರ ಪಡೆಯಬೇಕಾಗಿದೆ. ಮೊದಲು ಮ್ಯಾನ್ಯುಯಲ್ ಆಗಿ ಪರೀಕ್ಷೆ ನಡೆಸಿ ಫಿಟ್‌ನೆಸ್ ಪ್ರಮಾಣಪತ್ರ ನೀಡಲಾಗುತ್ತಿತ್ತು. ಇದೀಗ ಅದಕ್ಕೆ ಬ್ರೇಕ್ ಬಿದ್ದಿದೆ.
ಆಟೋಮೆಟಿವ್ ಸೆಂಟರ್ ಮೂಲಕ ಪರೀಕ್ಷೆಗೆ ವಾಹನ ಸವಾರರ ಅಭ್ಯಂತರ ಇಲ್ಲ. ಅದರೆ, ಮೈಸೂರಿನಲ್ಲಿ ಕೇವಲ ಒಂದೇ ಒಂದು ಆಟೋಮೆಟಿವ್ ಸೆಂಟರ್ ಇದೆ. ಇಲ್ಲಿ ಪ್ರತಿನಿತ್ಯ 150 ರಿಂದ 200 ವಾಹನಗಳ ಮಾಲೀಕರು ಫಿಟ್‌ನೆಸ್ ಪ್ರಮಾಣಪತ್ರ ಪಡೆಯಲು ಬರುತ್ತಾರೆ. ಆದರೆ, ಹೊಸ ನಿಯಮದ ಪ್ರಕಾರ ಆಟೋಮೆಟಿವ್ ಸೆಂಟರ್‌ನಲ್ಲಿ ಒಂದು ದಿನಕ್ಕೆ ಕೇವಲ 50 ವಾಹನಗಳ ಪರೀಕ್ಷೆ ಮಾತ್ರ ಮಾಡಲಾಗುತ್ತದೆ. ಉಳಿದ 100ಕ್ಕೂ ಹೆಚ್ಚು ವಾಹನ ಮಾಲೀಕರು ಆರ್ಟಿಓ ಕಚೇರಿಗೆ ಅಲೆದು ಅಲೆದು ಸಾಕಾಗಿದ್ದಾರೆ.
ಫಿಟ್‌ನೆಸ್ ಸರ್ಟಿಫಿಕೇಟ್ ಇಲ್ಲದೆ ವಾಹನ ರಸ್ತೆಗಿಳಿಸಲು ಸಾಧ್ಯವಿಲ್ಲ. ಒಂದು ವೇಳೆ ಫಿಟ್‌ನೆಸ್ ಪ್ರಮಾಣಪತ್ರ ಇಲ್ಲದೆ ವಾಹನಗಳನ್ನು ರಸ್ತೆಗೆ ಇಳಿಸಿದ್ರೆ ಪೊಲೀಸರು ಅಥವಾ ಆರ್ಟಿ ಅಧಿಕಾರಿಗಳು ದಂಡ ಹಾಕುತ್ತಾರೆ. ಹೀಗಾಗಿ ವಾಹನ ಮಾಲೀಕರು ಅಡ್ಡಕತ್ತರಿಗೆ ಸಿಲುಕಿದ್ದಾರೆ. ಇದು ಹೀಗೆ ಮುಂದುವರಿದರೆ ಆರ್ಟಿಓ ಕಚೇರಿ ಮುಂದೆ ವಾಹನ ನಿಲ್ಲಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಫಿಟ್ನೆಸ್ ಪ್ರಮಾಣಪತ್ರ ಪಡೆಯುವುದು ಯಾವಾಗಿಂದ ಜಾರಿ
ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಇಲಾಖೆಯು 2018ರ ಅಕ್ಟೋಬರ್ 25ರಂದು ಮೋಟಾರು ವಾಹನಗಳ (ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ ಮತ್ತು ಎಮರ್ಜೆನ್ಸಿ ಬಟನ್) ನಿಯಮ 2018 ಅನ್ನು ರೂಪಿಸಿತ್ತು. ಇವುಗಳನ್ನು 2024ರ ನವೆಂಬರ್ 30ರ ಒಳಗೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವು 2023ರ ನವೆಂಬರ್ 23ರಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು.
ಇದನ್ನೂ ಓದಿ: ಅವರ ಜಮೀನುಗಳಿಗೆ ಬೆಲೆ ಏರಬಹುದು: ರಾಮನಗರ ಹೆಸರು ಬದಲಾವಣೆಗೆ ಡಿಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಕಿಡಿ
ರಾಜ್ಯ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ನಿರ್ದೇಶನದ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಆಯುಕ್ತರು 2023ರ ನವೆಂಬರ್ 27ರಂದು ಲೋಕೇಶನ್ ಟ್ರ್ಯಾಕಿಂಗ್ ಡಿವೈಸ್ ಮತ್ತು ಎಮರ್ಜೆನ್ಸಿ ಟ್ರ್ಯಾಕಿಂಗ್ ಬಟನ್ ಅಳವಡಿಸಿದ್ದರೆ ಮಾತ್ರ ಫಿಟ್ನೆಸ್ ಸರ್ಟಿಫಿಕೇಟ್ ನೀಡುವಂತೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Fri, 23 May 25