ಡಿಕೆ ಬ್ರದರ್ಸ್ ಬುಡಕ್ಕೆ ನ್ಯಾಷನಲ್ ಹೆರಾಲ್ಡ್ ಪ್ರಕರಣ: ಇಡಿ ಚಾರ್ಜ್ಶೀಟ್ಗೆ ಹೇಳಿದ್ದೇನು?
National Herald Case:ನ್ಯಾಷನಲ್ ಹೆರಾಲ್ಡ್ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. ಭಾರೀ ಸದ್ದು ಮಾಡಿದ್ದ ನ್ಯಾಷನಲ್ ಹೆರಾಲ್ಡ್ ಪ್ರಕರಣ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಡಿಕೆ ಸುರೇಶ್ ಬುಡಕ್ಕೆ ಬಂದು ನಿಂತಿದೆ. ಈ ಸಂಬಂಧ ಡಿಕೆ ಬ್ರದರ್ಸ್ಗೆ ಇಡಿ ಸಂಕಷ್ಟ ಎದುರಾಗುವಾಗ ಸಾಧ್ಯತೆಗಳಿವೆ. ಇನ್ನು ಫಂಡ್ ನೀಡಿರುವ ಬಗ್ಗೆ ಡಿಕೆಶಿ ಹಾಗೂ ಸುರೇಶ್ ಒಪ್ಪಿಕೊಂಡಿದ್ದಾರೆ. ಹಾಗಾದ್ರೆ, ಇಬ್ಬರು ಏನೆಲ್ಲಾ ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.

ನವದೆಹಲಿ/ಬೆಂಗಳೂರು, (ಮೇ 23): ನ್ಯಾಷನಲ್ ಹೆರಾಲ್ಡ್ ಪ್ರಕರಣ (National Herald Case) ಈಗ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹಾಗೂ ಮಾಜಿ ಸಂಸದ ಡಿಕೆ ಸುರೇಶ್ (DK Suresh) ಬುಡಕ್ಕೆ ಬಂದಿದೆ. ಯಂಗ್ ಇಂಡಿಯಾಗೆ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ 2.5 ಕೋಟಿ ರೂ. ದೇಣಿಗೆ ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ED) ಚಾರ್ಜ್ ಶೀಟ್ ನಲ್ಲಿ ಇಬ್ಬರ ಹೆಸರು ಉಲ್ಲೇಖಿಸಿದೆ ಎಂದು ತಿಳಿದುಬಂದಿದೆ. ಹೀಗಾಗಿ ಡಿಕೆ ಬ್ರದರ್ಸ್ಗೆ ಇಡಿ ಸಂಕಷ್ಟ ಎದುರಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಹೋದರರು, ನಾನು 25 ಲಕ್ಷ, ನನ್ನ ತಮ್ಮ ಡಿ.ಕೆ.ಸುರೇಶ್ 25 ಲಕ್ಷ ಕೊಟ್ಟಿದ್ದಾನೆ. ನಮ್ಮ ಪಕ್ಷ ನಡೆಸುತ್ತಿದ್ದ ಪತ್ರಿಕೆಗೆ ದೇಣಿಗೆ ಕೊಟ್ಟರೆ ತಪ್ಪೇನು? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಡಿಕೆ ಶಿವಕುಮಾರ್ ಹೇಳಿದ್ದೇನು?
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿಕೆ ಶಿವಕುಮಾರ್, ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ನಾವು 50 ಲಕ್ಷ ರೂ. ಹಣ ಕೊಟ್ಟಿದ್ದೇವೆ. ನಾನು 25 ಲಕ್ಷ, ನನ್ನ ತಮ್ಮ ಡಿ.ಕೆ.ಸುರೇಶ್ 25 ಲಕ್ಷ ಕೊಟ್ಟಿದ್ದಾನೆ. ನಮ್ಮ ಪಕ್ಷ ನಡೆಸುತ್ತಿದ್ದ ಪತ್ರಿಕೆಗೆ ದೇಣಿಗೆ ಕೊಟ್ಟರೆ ತಪ್ಪೇನು? ಟ್ರಸ್ಟ್ ವತಿಯಿಂದಲೂ ನ್ಯಾಷನಲ್ ಹೆರಾಲ್ಡ್ಗೆ ದೇಣಿಗೆ ನೀಡಿದ್ದೇವೆ. ನಾವೇನು ಕದ್ದು ದೇಣಿಗೆ ಕೊಟ್ಟಿದ್ದೀವಾ? ಸಂಪಾದನೆ ಮಾಡಿದ ಆಸ್ತಿಯಿಂದ ರಾಜಾರೋಷವಾಗಿಯೇ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: National Herald Case: ರಾಜೀವ್ ಗಾಂಧಿ ಪುಣ್ಯ ತಿಥಿಯಂದೇ ಸೋನಿಯಾ ಗಾಂಧಿ, ರಾಹುಲ್ಗೆ ಇಡಿ ಶಾಕ್
ಹಣ ಕೊಟ್ಟಿರುವುದನ್ನು ಒಪ್ಪಿಕೊಂಡ ಡಿಕೆ ಸುರೇಶ್
ಇನ್ನು ಈ ಬಗ್ಗೆ ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯಿಸಿ, ಯಂಗ್ ಇಂಡಿಯಾ ಟ್ರಸ್ಟ್ ಗೆ ಹಣ ಕೊಟ್ಟಿದ್ದೇವೆ. ಎರಡು, ಎರಡೂವರೆ ಕೋಟಿ ರೂ. ಹಣ ಕೊಟ್ಟಿದ್ದೇವೆ. ಈ ಸಂಬಂಧ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇವೆ. ನಾವು ಕೊಟ್ಟಿಲ್ಲ ಅಂತ ಹೇಳುತ್ತಿಲ್ಲ. ದುರುದ್ದೇಶ ಪೂರ್ವಕವಾಗಿ ಆರೋಪ ಮಾಡುತ್ತಿದ್ದು, ನಮ್ಮ ಕಾಂಗ್ರೆಸ್ ನಾಯಕರ ಮೇಲೆ ಹೊರಿಸುವ ಪ್ರಯತ್ನ ಚಾರ್ಜ್‌ಶೀಟ್ ನಲ್ಲಿ ಮಾಡಿದ್ದಾರೆ. ನಾವು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ಇದು ರಾಜಕೀಯ ಪೂರಿತವಾದ ಪ್ರಕರಣ. ಸೋನಿಯಾ ಗಾಂಧಿಯವರ ಟ್ರಸ್ಟ್ ಅಲ್ಲ. ಯಂಗ್ ಇಂಡಿಯಾ ಸಂಸ್ಥೆಗೆ ಕೊಟ್ಟಿರೋದು. ಅವರು ವೈಯುಕ್ತಿಕವಾಗಿ ಹಣ ಬಳಸಿಕೊಂಡಿಲ್ಲ. ಅದು ಟ್ರಸ್ಟ್ ಗೆ ಬಳಕೆಯಾಗಿದೆ. ಇಡಿಯವರಿಗೂ ಎಲ್ಲ ಮಾಹಿತಿ ಕೊಟ್ಟಿದ್ದೇವೆ. ಇದರಲ್ಲಿ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ಹೇಳಿದರು.
ದೇಣಿಗೆ ಮೂಲ ಕೆದಕಿದ್ದ ಇಡಿ
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ತನಿಖೆ ನಡೆಸಿದ್ದ ಇಡಿ ಅಧಿಕಾರಿಗಳು , ದೇಣಿಗೆ ನೀಡಿದ್ದ ಮೂಲವನ್ನು ಕೆದಕಿದ್ದು, ಈ ಸಂಬಂಧ 2022ರ ನವೆಂಬರ್ ನಲ್ಲಿ ಡಿಕೆ ಸರೇಶ್ ಅವರನ್ನು ವಿಚಾರಣೆಗೊಳಪಡಿಸಿತ್ತು. ಎರಡು ದಿನಗಳ ವಿಚಾರಣೆ ವೇಳೆ ಡಿಕೆ ಸುರೇಶ್ ಸಹ ದೇಣಿಗೆ ನೀಡಿದ ಹಣದ ಮೂಲದ ದಾಖಲೆಗಳನ್ನು ಇಡಿ ಮುಂದಿಟ್ಟಿದ್ದರು. ಇದರ ಬೆನ್ನಲ್ಲೇ ಇದೀಗ ಈ ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದ ಚಾರ್ಜ್ಶೀಟ್ನಲ್ಲಿ ಇಡಿ ಅಧಿಕಾರಿಗಳು, ಡಿಸಿಎಂ ಡಿಕೆ ಶಿವಕುಮಾರ್, ಡಿಕೆ ಸುರೇಶ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೆಸರು ಉಲ್ಲೇಖ ಮಾಡಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಕೇಸ್ ಹಿನ್ನೆಲೆ
ನ್ಯಾಷನಲ್ ಹೆರಾಲ್ಡ್ ಒಂದು ಇಂಗ್ಲಿಷ್ ದಿನಪತ್ರಿಕೆಯಾಗಿದೆ. ಇದನ್ನು 1938ರಲ್ಲಿ ಜವಾಹರಲಾಲ್ ನೆಹರು ಸ್ಥಾಪಿಸಿದ್ದು, ಇದನ್ನು AJL ಪ್ರಕಾಶಿಸುತ್ತಿತ್ತು, ಜೊತೆಗೆ ಕೌಮಿ ಆವಾಜ್ (ಉರ್ದು) ಮತ್ತು ನವಜೀವನ್ (ಹಿಂದಿ) ಪತ್ರಿಕೆಗಳನ್ನೂ ಪ್ರಕಾಶಿಸಿತು. 2008ರಲ್ಲಿ ಆರ್ಥಿಕ ತೊಂದರೆಯಿಂದಾಗಿ AJL ಪತ್ರಿಕೆಯನ್ನು ಸ್ಥಗಿತಗೊಳಿಸಿತು, ಆಗ 90.25 ಕೋಟಿ ರೂ. ಸಾಲವನ್ನು ಕಾಂಗ್ರೆಸ್ ಪಕ್ಷದಿಂದ ಪಡೆದಿತ್ತು. ಬಿಜೆಪಿ ಸುಬ್ರಮಣಿಯನ್ ಸ್ವಾಮಿ ಅವರು, ಕಾಂಗ್ರೆಸ್ ಪಕ್ಷವು AJLಗೆ ನೀಡಿದ 90.25 ಕೋಟಿ ಸಾಲವನ್ನು ಯಂಗ್ ಇಂಡಿಯಾ (YIL) ಕಂಪನಿಗೆ 50 ಲಕ್ಷಕ್ಕೆ ವರ್ಗಾಯಿಸಿತು ಎಂದು ಆರೋಪಿಸಿದ್ದರು. YILನಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿಯವರು ಶೇ.76ರಷ್ಟು ಷೇರುಗಳನ್ನು ಹೊಂದಿದ್ದಾರೆ. ಈ ವರ್ಗಾವಣೆಯ ಮೂಲಕ AJLನ 2,000 ಕೋಟಿಗಿಂತಲೂ ಹೆಚ್ಚು ಮೌಲ್ಯದ ಆಸ್ತಿಗಳನ್ನು YIL “ದುರುದ್ದೇಶದಿಂದ” ತನ್ನ ವಶಕ್ಕೆ ತೆಗೆದುಕೊಂಡಿತು ಎಂದು ಆರೋಪ. ಈ ವಹಿವಾಟು ವಂಚನೆ, ವಿಶ್ವಾಸ ದ್ರೋಹ, ಮತ್ತು ಹಣದ ಅಕ್ರಮ ವರ್ಗಾವಣೆ ಗೆ ಸಂಬಂಧಿಸಿದೆ ಎಂದು ದೂರಲಾಗಿದೆ.
2014ರಲ್ಲಿ ದೆಹಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗೋಮತಿ ಮನೋಚಾ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿದರು, YIL ಒಂದು “ನಕಲಿ” ಕಂಪನಿಯಾಗಿ ಸಾರ್ವಜನಿಕ ಹಣವನ್ನು ವೈಯಕ್ತಿಕ ಉಪಯೋಗಕ್ಕೆ ಬಳಸಲಾಗಿದೆ ಎಂದು ಆರೋಪ. 2015ರಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿಯವರಿಗೆ ಪಟಿಯಾಲಾ ಹೌಸ್ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತು. ಜಾರಿ ನಿರ್ದೇಶನಾಲಯ (ED) 2014ರಿಂದ ಈ ಕೇಸ್‌ನಲ್ಲಿ ಹಣದ ಅಕ್ರಮ ವರ್ಗಾವಣೆ ತನಿಖೆ ನಡೆಸುತ್ತಿದೆ. 2023ರಲ್ಲಿ 751.9 ಕೋಟಿ ಮೌಲ್ಯದ AJL ಆಸ್ತಿಗಳನ್ನು ಜಪ್ತಿ ಮಾಡಿದೆ.
2025ರ ಏಪ್ರಿಲ್‌ನಲ್ಲಿ ED ಸೋನಿಯಾ, ರಾಹುಲ್, ಮತ್ತು ಸ್ಯಾಮ್ ಪಿತ್ರೋಡಾ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿತು. ಕಾಂಗ್ರೆಸ್ ಪಕ್ಷವು ಈ ಆರೋಪಗಳನ್ನು ರಾಜಕೀಯ ಪ್ರೇರಿತ ಎಂದು ಕರೆದು, YIL ಒಂದು “ಲಾಭರಹಿತ” ಕಂಪನಿಯಾಗಿದ್ದು, ಯಾವುದೇ ಆರ್ಥಿಕ ಲಾಭವನ್ನು ಒದಗಿಸಿಲ್ಲ ಎಂದು ವಾದಿಸಿದೆ.
AJL ಆಸ್ತಿಗಳನ್ನು ವರ್ಗಾಯಿಸಲಾಗಿಲ್ಲ, ಮತ್ತು ಸಾಲವನ್ನು ಷೇರುಗಳಾಗಿ ಪರಿವರ್ತಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. 2025ರ ಮೇ 21ರಂದು, ED ದೆಹಲಿ ನ್ಯಾಯಾಲಯಕ್ಕೆ ಸೋನಿಯಾ ಮತ್ತು ರಾಹುಲ್ ಗಾಂಧಿಯವರು ₹142 ಕೋಟಿ ಅಪರಾಧ ಆದಾಯವನ್ನು ಪಡೆದಿದ್ದಾರೆ ಎಂದು ಆರೋಪಿಸಿದೆ, ಮತ್ತು ಈ ಕೇಸ್‌ನ ಮುಂದಿನ ವಿಚಾರಣೆ ಜುಲೈ 2025ಕ್ಕೆ ನಿಗದಿಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:24 pm, Fri, 23 May 25