
ಕೋಲಾರ: ಕೃಷಿ ತಿದ್ದುಪಡಿ ಕಾಯ್ದೆ ವಾಪಸ್‌ಗೆ ಆಗ್ರಹಿಸಿ ರೈತರು ಭಾರತ್ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುತ್ತಿದೆ. ರಾಜ್ಯದ ಹಲವು ಕಡೆ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ನಡುವೆ ಕೋಲಾರ ನಗರದ ಪಲ್ಲವಿ ವೃತ್ತದಲ್ಲಿ ರೈತರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
ರಸ್ತೆ ಮೇಲೆ ಬಜ್ಜಿ, ಬೋಂಡ, ಕಾಫಿ, ಟೀ, ಅನ್ನ ಮಾಡಿ ಸೇವಿಸುತ್ತಿದ್ದಾರೆ. ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತೆಂಗಿನ ಚಿಪ್ಪು ಜೊತೆ ಗುದ್ದಲಿ ಹಿಡಿದು ಪ್ರತಿಭಟನೆ:
ಮೈಸೂರಿನ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ರೈತರು ಮತ್ತು ಪ್ರಗತಿಪರ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿನೂತನವಾಗಿ ತೆಂಗಿನ ಚಿಪ್ಪು ಜೊತೆ ಗುದ್ದಲಿ ಹಿಡಿದು ಬಸ್ ತಡೆದು ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ರಸ್ತೆ ಮೇಲೆ ಕುಳಿತ ಹೋರಾಟ ಮಾಡುತ್ತಿದ್ದಾರೆ.
ಶರ್ಟ್ ಬಿಚ್ಚಿ ಉರುಳು ಸೇವೆ ಮಾಡಿದ ರೈತ:
ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು ಬಸ್ ನಿಲ್ದಾಣದ ಮುಂಭಾಗದಲ್ಲಿ ರೈತರು ಶರ್ಟ್ ಬಿಚ್ಚಿ ಉರುಳು ಸೇವೆ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಭಾರತ್ ಬಂದ್ ಬೆಂಬಲಿಸಿ ದಾವಣಗೆರೆಯಲ್ಲಿ ರೈತ, ಕಾರ್ಮಿಕ ಸಂಘಟನೆಗಳಿಂದ ಧರಣಿ ನಡೆಸಲಾಗುತ್ತಿದೆ. ಈ ವೇಳೆ ಹದಡಿ ರಸ್ತೆಯಲ್ಲಿ ಪ್ರಧಾನಿಯ ಪ್ರತಿಕೃತಿ ದಹಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೊಮ್ಯಾಟೊ ರಸ್ತೆಗೆ ಸುರಿದು ಪ್ರತಿಭಟನೆ:
ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಚಿಕ್ಕಬಳ್ಳಾಪುರದಲ್ಲಿ ಟೊಮ್ಯಾಟೊ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಲಾಗಿದೆ.ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ನಡೆಯುತ್ತಿದೆ.
ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರ ರಣಕಹಳೆ, ಸಿಲಿಕಾನ್ ಸಿಟಿಗೆ ತಟ್ಟದ ಬಂದ್ ಬಿಸಿ
Published On - 7:34 am, Tue, 8 December 20