AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯಾ ಯೋಗ ಚಾಂಪಿಯನ್‌ಶಿಪ್: ಥೈಲ್ಯಾಂಡ್‌ನಲ್ಲಿ ಪ್ರಥಮ ಸ್ಥಾನ ಪಡೆದು ದೇಶಕ್ಕೆ ಕೀರ್ತಿ ತಂದ ಉಡುಪಿಯ ನಿಖಿಲ್ ಪೂಜಾರಿ!

ನಿರಂತರ ಪರಿಶ್ರಮ ಮತ್ತು ಯೋಗಾಸನದ ಮೇಲಿನ ಅಪಾರ ಪ್ರೀತಿಯಿಂದ ಕಾರ್ಕಳ ತಾಲೂಕಿನ ಕೆರ್ವಾಶೆಯ ಯುವಕ ನಿಖಿಲ್ ಎ. ಪೂಜಾರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಥೈಲ್ಯಾಂಡ್‌ನಲ್ಲಿ ನಡೆದ 'WFFYSI ಏಷ್ಯಾ ಯೋಗಾಸನ ಚಾಂಪಿಯನ್‌ಶಿಪ್‌'ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಿಖಿಲ್, 'Senior A' ವಿಭಾಗದ ಆರ್ಟಿಸ್ಟಿಕ್ ಸೊಲೊ ಹಾಗೂ ಸಾಂಪ್ರದಾಯಿಕ ಯೋಗ ಎರಡರಲ್ಲೂ ಪ್ರಥಮ ಸ್ಥಾನ ಪಡೆದು ಏಷ್ಯಾ ವೇದಿಕೆಯಲ್ಲಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಏಷ್ಯಾ ಯೋಗ ಚಾಂಪಿಯನ್‌ಶಿಪ್: ಥೈಲ್ಯಾಂಡ್‌ನಲ್ಲಿ ಪ್ರಥಮ ಸ್ಥಾನ ಪಡೆದು ದೇಶಕ್ಕೆ ಕೀರ್ತಿ ತಂದ ಉಡುಪಿಯ ನಿಖಿಲ್ ಪೂಜಾರಿ!
ನಿಖಿಲ್ ಪೂಜಾರಿ
ಅಕ್ಷತಾ ವರ್ಕಾಡಿ
|

Updated on: Sep 11, 2026 | 4:28 PM

Share

ನಿರಂತರ ಶ್ರಮ, ಕಠಿಣ ಅಭ್ಯಾಸ ಮತ್ತು ಯೋಗದ ಮೇಲಿನ ಅಪಾರ ಪ್ರೀತಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆರ್ವಾಶೆಯ ಯುವಕ ನಿಖಿಲ್ ಎ. ಪೂಜಾರಿ ಅವರನ್ನು ಇಂದು ಅಂತರಾಷ್ಟ್ರೀಯ ವೇದಿಕೆಯಲ್ಲಿ ಮಿಂಚುವಂತೆ ಮಾಡಿದೆ. ಥೈಲ್ಯಾಂಡ್‌ನಲ್ಲಿ ಇತ್ತೀಚೆಗೆ ನಡೆದ ‘ಏಷ್ಯಾ ಯೋಗಾಸನ ಚಾಂಪಿಯನ್‌ಶಿಪ್‌’ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಿಖಿಲ್, ಪ್ರಥಮ ಸ್ಥಾನ ಗಳಿಸುವ ಮೂಲಕ ದೇಶ ಹಾಗೂ ಹೆತ್ತವರ ಹೆಸರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.

ಬಾಲ್ಯದಿಂದಲೇ ಯೋಗದ ಕಡೆಗೆ ಒಲವು:

2006ರ ಡಿಸೆಂಬರ್ 3ರಂದು ಜನಿಸಿದ ನಿಖಿಲ್, ದಿವಂಗತ ಆನಂದ ಪೂಜಾರಿ ಹಾಗೂ ಕುಸುಮ ಪೂಜಾರಿ ದಂಪತಿಯ ಪುತ್ರ. ಅಜಯ್ ಮತ್ತು ದಿವ್ಯಾ ಅವರ ಕಿರಿಯ ಸಹೋದರ. ಬಾಲ್ಯದಿಂದಲೂ ಯೋಗಾಸನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ನಿಖಿಲ್, ಶಿಸ್ತಿನ ಅಭ್ಯಾಸದ ಮೂಲಕವೇ ಯೋಗ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಮೂಡಿಸಲು ಆರಂಭಿಸಿದರು.

ಶೈಕ್ಷಣಿಕ ಪ್ರಯಾಣ:

ನಿಖಿಲ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೆರ್ವಾಶೆ ಮೈನ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದರು. ನಂತರ ಮಿಯಾರಿನ ಮೊರಾರ್ಜಿ ದೇಸಾಯಿ ಆಂಗ್ಲಮಾಧ್ಯಮ ವಸತಿ ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದರು. ಬಳಿಕ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿ, ಪ್ರಸ್ತುತ ಮಂಗಳೂರಿನ ವಾಮಂಜೂರಿನ ಎಸ್.ಟಿ. ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಮುಂದುವರಿಸುತ್ತಿದ್ದಾರೆ.

ಸಾಧನೆಗೆ ಬೆನ್ನೆಲುಬಾದ ಮಾರ್ಗದರ್ಶಕರು:

ನಿಖಿಲ್ ಅವರ ಈ ಸಾಧನೆಯ ಹಿಂದೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತುದಾರರ ಪಾತ್ರ ದೊಡ್ಡದಾಗಿದೆ. ಮಿಯಾರು ಮೊರಾರ್ಜಿ ದೇಸಾಯಿ ಶಾಲೆಯ ದೈಹಿಕ ಶಿಕ್ಷಕರಾದ ಜಗದೀಶ್ ಎಚ್. ಹಾಗೂ ಕಾರ್ಕಳದ ದೈಹಿಕ ಶಿಕ್ಷಕ ನರೇಂದ್ರ ಕಾಮತ್ ನಿಖಿಲ್ ಅವರ ಆರಂಭಿಕ ಯೋಗ ಪಯಣಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಪ್ರಸ್ತುತ ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ (PED) ವನೀಶಾ ರೋಡ್ರಿಗಸ್ ಹಾಗೂ ಸಹಾಯಕ ಪಿಇಡಿ ಸುಧೀರ್ ಎಂ. ಅವರ ಪ್ರೋತ್ಸಾಹ ಮತ್ತು ತರಬೇತಿಯಲ್ಲಿ ನಿಖಿಲ್ ತಮ್ಮ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕಾಲೇಜಿನಲ್ಲಿ ರಾತ್ರಿ ಕಾವಲುಗಾರನ ಕೆಲಸ ಮಾಡುತ್ತಲೇ ಓದಿ ಸತತ 3 ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡ ಸಾಧಕ!

ರಾಜ್ಯ, ರಾಷ್ಟ್ರದಿಂದ ಏಷ್ಯಾದ ಮಟ್ಟಕ್ಕೆ ಬೆಳೆದ ಪ್ರತಿಭೆ:

ಮೂರು ಬಾರಿ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದ ನಿಖಿಲ್, 2026ರಲ್ಲಿ ಉತ್ತರಾಖಂಡದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯ Artistic Solo ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದರು. ಈ ಗೆಲುವು ಅವರಿಗೆ ಅಂತರಾಷ್ಟ್ರೀಯ ವೇದಿಕೆಗೆ ಬಾಗಿಲು ತೆರೆಯಿತು.

ಥೈಲ್ಯಾಂಡ್‌ನಲ್ಲಿ ಭಾರತಕ್ಕೆ ಪ್ರಥಮ ಸ್ಥಾನ:

ಥೈಲ್ಯಾಂಡ್‌ನಲ್ಲಿ ನಡೆದ World Fitness Federation of Yogasana Sports International (WFFYSI) ಏಷ್ಯಾ ಯೋಗ ಚಾಂಪಿಯನ್‌ಶಿಪ್‌ನ Senior A ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ನಿಖಿಲ್, ಅದ್ಭುತ ಪ್ರದರ್ಶನ ನೀಡಿದರು. Artistic Solo ಹಾಗೂ ಸಾಂಪ್ರದಾಯಿಕ ಯೋಗ (Traditional Yogasana) ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದಾರೆ.

ರಾಜ್ಯಮಟ್ಟದ ಸ್ಪರ್ಧೆಗಳಿಂದ ಆರಂಭವಾದ ನಿಖಿಲ್ ಅವರ ಪಯಣ, ರಾಷ್ಟ್ರಮಟ್ಟದ ಗೆಲುವಿನ ಮೂಲಕ ಏಷ್ಯಾ ವೇದಿಕೆಗೆ ತಲುಪಿ, ಇದೀಗ ಥೈಲ್ಯಾಂಡ್‌ನಲ್ಲಿ ಭಾರತದ ಪರವಾಗಿ ಪ್ರಥಮ ಸ್ಥಾನ ಪಡೆಯುವವರೆಗೆ ಬಂದಿದೆ. ನಿಖಿಲ್ ಅವರ ಈ ಸಾಧನೆಯ ಹಿಂದೆ ಅವರ ನಿರಂತರ ಪರಿಶ್ರಮ, ಶಿಸ್ತು, ಆತ್ಮವಿಶ್ವಾಸ ಮತ್ತು ಯೋಗಾಸನದ ಮೇಲಿನ ಆಸಕ್ತಿ ಪ್ರಮುಖ ಕಾರಣವಾಗಿದೆ. ಅವರ ಸಾಧನೆಯಿಂದ ಕೆರ್ವಾಶೆ ಗ್ರಾಮದ ಕೀರ್ತಿಯೂ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us