ದಿಲ್ಲಿಯಿಂದ ಡಿಕೆಶಿಗೆ ಕರೆ: ನಾಳೆ ಸಚಿವ ಸಂಪುಟ ವಿಸ್ತರಣೆ ಆಗುತ್ತಾ, ಇಲ್ವಾ?

ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ನಿಗೂಢವಾಗಿದೆ. ನಾಳೆ (ಆಗಸ್ಟ್ 03) ಸಂಜೆ ಪ್ರಮಾಣ ವಚನ ನಡೆಯುತ್ತಾ ಅನ್ನೋದಕ್ಕೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಸಚಿವರಾಗೋದು ಯಾರು? ಕೊನೆಯ ಕ್ಷಣದಲ್ಲಿ ಯಾರ ಹೆಸರು ಕಟ್ ಆಗುತ್ತೆ? ಹೈಕಮಾಂಡ್ ಪಟ್ಟಿ ಯಾವಾಗ ಬರುತ್ತೆ? ಎನ್ನುವ ಪ್ರಶ್ನೆಗಳು ಇನ್ನೂ ಹಾಗೆಯೇ ಉಳಿದಿವೆ. ಸಿಎಂ ಕಚೇರಿ ಮೌಖಿಕ ಸೂಚನೆ ಕೊಟ್ಟಿದೆಯಷ್ಟೇ. ಆದರೆ, ಅಧಿಕೃತ ಆದೇಶ ಮಾತ್ರ ಇನ್ನೂ ಹೊರಬಿದ್ದಿಲ್ಲ. ಹಾಗಾದ್ರೆ, ಸಚಿವ ಸಂಪುಟ ವಿಸ್ತರಣೆ ನಿಜಕ್ಕೂ ನಾಳೆ ನಡೆಯುತ್ತಾ? ಅಥವಾ ಮತ್ತೊಮ್ಮೆ ಮುಂದೂಡಿಕೆಯಾಗುತ್ತಾ..? ಈ ಸ್ಟೋರಿ ನೋಡಿ.

ದಿಲ್ಲಿಯಿಂದ ಡಿಕೆಶಿಗೆ ಕರೆ: ನಾಳೆ ಸಚಿವ ಸಂಪುಟ ವಿಸ್ತರಣೆ ಆಗುತ್ತಾ, ಇಲ್ವಾ?
Congress Leaders
Edited By:

Updated on: Aug 02, 2026 | 6:50 PM

ಬೆಂಗಳೂರು, (ಆಗಸ್ಟ್ 02): ಕರ್ನಾಟಕ (Karnataka) ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆಯ (cabinet expansion)  ಸಸ್ಪೆನ್ಸ್ ಇನ್ನೂ ಮುಂದುವರಿದಿದೆ. ಸೋಮವಾರ (ಆಗಸ್ಟ್ 03) ಸಂಜೆ ನಾಲ್ಕು ಗಂಟೆಗೆ ಪ್ರಮಾಣವಚನ ಕಾರ್ಯಕ್ರಮ ನಡೆಸುವ ಬಗ್ಗೆ ಮೌಖಿಕ ಮಾಹಿತಿ ನೀಡಲಾಗಿದೆ. ಆದರೆ, ಈವರೆಗೆ ಯಾವುದೇ ಲಿಖಿತ ಆದೇಶ ಲೋಕಭವನಕ್ಕೆ ತಲುಪಿಲ್ಲ. ಇದೇ ಕಾರಣಕ್ಕೆ ಅಧಿಕಾರಿಗಳೂ ಅಂತಿಮ ಸಿದ್ಧತೆಗೆ ಕೈ ಹಾಕಿಲ್ಲ. ಆದ್ರೆ ಸಿಎಂ ಡಿಕೆ ಶಿವಕುಮಾರ್ ಸಹ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಕೇವಲ ಮೌಖಿಕ ಮಾಹಿತಿಯ ಆಧಾರದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸುವುದು ಸಾಧ್ಯವಿಲ್ಲ ಅನ್ನೋದು ಲೋಕಭವನದ ಸ್ಪಷ್ಟ ನಿಲುವು. ಅಧಿಕೃತ ಪತ್ರ ಬಂದ ನಂತರವೇ ವೇದಿಕೆ, ಭದ್ರತೆ, ಪ್ರೋಟೋಕಾಲ್ ಸೇರಿದಂತೆ ಎಲ್ಲಾ ವ್ಯವಸ್ಥೆ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲೂ ತೀವ್ರ ಗೊಂದಲ ಮನೆ ಮಾಡಿದೆ. ಸೋಮಾವಾರ ಪ್ರಮಾಣವಚನ ಇದ್ಯಾ? ಇಲ್ಲವಾ? ಎನ್ನುವ ಪ್ರಶ್ನೆಗೆ ಅವರ ಬಳಿಯೂ ಉತ್ತರ ಇಲ್ಲ. ಆದರೂ, ರಾತ್ರಿ ವೇಳೆಯಾದರೂ ಹೈಕಮಾಂಡ್‌ನಿಂದ ಕರೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಬಹುತೇಕ ಆಕಾಂಕ್ಷಿಗಳು ಕಾದು ಕುಳಿತಿದ್ದಾರೆ. ನಾಳೆ 99 ಪರ್ಸೆಂಟ್ ಸಚಿವ ಸಂಪುಟ ವಿಸ್ತರಣೆ ಆಗುತ್ತೆ, ಇನ್ನೊಂದು ಪರ್ಸೆಂಟ್ ಏನ್ ಬೇಕಾದ್ರೂ ಆಗ್ಬೋದು ಅಂತಾ ಮಾಜಿ ಶಾಸಕ ಹೆಚ್​.ಸಿ.ಬಾಲಕೃಷ್ಣ ಹೇಳಿದ್ದಾರೆ. ಇನ್ನು ಸೋಮವಾರ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಆದ್ರೆ, ಸಿಎಂ ಡಿಕೆ ಶಿವಕುಮಾರ್ ಮಾತ್ರ ಯಾವುದು ಸುಳಿವು ಬಿಟ್ಟು ಕೊಟ್ಟಿಲ್ಲ.

ಇದನ್ನೂ ಓದಿ: ಬಿಜೆಪಿ ರಾಜ್ಯ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ: ಯಾವೆಲ್ಲ ಪ್ರಮುಖ ವಿಷಯಗಳು ಚರ್ಚೆ?

ದೆಹಲಿ ಮಟ್ಟದಲ್ಲೂ ಇನ್ನೂ ಮುಗಿದಿಲ್ಲ ಕಸರತ್ತು

ದೆಹಲಿ ಮಟ್ಟದಲ್ಲೂ ಇನ್ನೂ ಕಸರತ್ತು ಮುಗಿದಿಲ್ಲ. ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡುವೆ ಕೆಲ ಹೆಸರುಗಳ ಬಗ್ಗೆ ಇನ್ನೂ ಸಂಪೂರ್ಣ ಒಮ್ಮತ ಮೂಡಿಲ್ಲ ಎನ್ನಲಾಗುತ್ತಿದೆ. ಕೊನೆಯ ಕ್ಷಣದಲ್ಲಿ ಕೆಲವು ಅಚ್ಚರಿಯ ಹೆಸರುಗಳು ಪಟ್ಟಿಗೆ ಸೇರುವ ಸಾಧ್ಯತೆಯೂ ಇರುವುದರಿಂದ ಹಿರಿಯ ನಾಯಕರಲ್ಲೂ ಆತಂಕ ಹೆಚ್ಚಾಗಿದೆ. ಇದರ ಮಧ್ಯೆ ಹೈಕಮಾಂಡ್​​​​ನಿಂದ ಸಿಎಂ ಡಿಕೆ ಶಿವಕುಮಾರ್​​​ಗೆ ಬರೆಬಂದಿದ್ದು, ಇಂದು ಮತ್ತೊಂದು ಸುತ್ತು ಎಐಸಿಸಿ ನಾಯಕರ ಅಂತಿಮ ಚರ್ಚೆ ಆಗಲಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ ಪಟ್ಟಿ ರವಾನಿಸುವುದಾಗಿ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಕೆ.ಸಿ. ವೇಣುಗೋಪಾಲ್ ಹಾಗೂ ಸುರ್ಜೇವಾಲ ಬೆಂಗಳೂರಿಗೆ ಯಾವಾಗ ಬರುತ್ತಾರೆ ಅನ್ನೋದರ ಬಗ್ಗೆಯೂ ಇನ್ನೂ ಅಧಿಕೃತ ಮಾಹಿತಿ ಇಲ್ಲ. ಇಬ್ಬರೂ ಬಂದು ಸಿಎಂಗೆ ಅಂತಿಮ ಪಟ್ಟಿ ನೀಡುತ್ತಾರಾ? ಅಥವಾ ಎಐಸಿಸಿಯೇ ಅಧಿಕೃತವಾಗಿ ಸಚಿವರ ಪಟ್ಟಿಯನ್ನು ಪ್ರಕಟಿಸುತ್ತಾ? ಎನ್ನುವುದೂ ಇನ್ನೂ ನಿಗೂಢವಾಗಿಯೇ ಉಳಿದಿದೆ.

ಬೆಂಬಲಿಗರಲ್ಲಿ ಗೊಂದಲ

ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಹಲವು ಶಾಸಕರ ಬೆಂಬಲಿಗರು ನಾಳೆ ಬೆಂಗಳೂರಿಗೆ ಹೊರಡಲು ಸಿದ್ಧತೆ ನಡೆಸಿದ್ದರು. ಆದರೆ, ಇನ್ನೂ ಯಾವುದೇ ಅಧಿಕೃತತೆ ಇಲ್ಲದ ಕಾರಣ, ಸದ್ಯಕ್ಕೆ ಬೆಂಗಳೂರಿಗೆ ಬಾರದಂತೆ ಹಲವು ಆಕಾಂಕ್ಷಿಗಳೇ ತಮ್ಮ ಬೆಂಬಲಿಗರಿಗೆ ಸಂದೇಶ ರವಾನಿಸಿದ್ದಾರೆ.

ಸೋಮವಾರ ಬಿಟ್ರೆ ಬುಧವಾರ ಸಂಪುಟ ವಿಸ್ತರಣೆ

ಇದು ಸಚಿವ ಸಂಪುಟ ವಿಸ್ತರಣೆಗೆ ಮೂರನೇ ಬಾರಿ ನಿಗದಿಯಾಗಿರುವ ಮುಹೂರ್ತ. ಒಂದು ವೇಳೆ ನಾಳೆಯೂ ಕಾರ್ಯಕ್ರಮ ನಡೆಯದೇ ಹೋದರೆ, ಬುಧವಾರಕ್ಕೆ ಮತ್ತೆ ಮುಂದೂಡುವ ಸಾಧ್ಯತೆಯ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಆಕಾಂಕ್ಷಿಗಳ ಆತಂಕವೂ ಹೆಚ್ಚಾಗಿದೆ. ಸಚಿವ ಸಂಪುಟ ವಿಸ್ತರಣೆಗೆ ವೇದಿಕೆ ಸಿದ್ಧವಾಗಿದೆ ಅನ್ನೋ ಸಂದೇಶ ಹೊರಬಿದ್ದಿದ್ರೂ, ಅಧಿಕೃತ ಆದೇಶ ಮಾತ್ರ ಇನ್ನೂ ಹೊರಬಿದ್ದಿಲ್ಲ. ಸಚಿವರಾಗೋವರ ಪಟ್ಟಿಯೂ ಫೈನಲ್ ಆಗಿಲ್ಲ. ಹೈಕಮಾಂಡ್‌ನಿಂದ ಅಂತಿಮ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕವೇ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ. ಸೋಮವಾರ ಸಂಜೆ ಪ್ರಮಾಣ ವಚನ ನಡೆಯುತ್ತಾ? ಅಥವಾ ಮತ್ತೊಮ್ಮೆ ಮುಂದೂಡಿಕೆಯಾಗುತ್ತಾ? ಅನ್ನೋ ಕುತೂಹಲವೇ ಈಗ ರಾಜ್ಯ ರಾಜಕೀಯದ ಕೇಂದ್ರಬಿಂದುವಾಗಿದೆ.
Karnataka Cabinet Expansion: ನಾಳೆ ಬೆಳಗ್ಗೆ 10ಕ್ಕೆ ಸಂಪುಟಕ್ಕೆ ಸೇರುವವರ ಪಟ್ಟಿ ಫೈನಲ್?
ಒಟ್ಟಿನಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಘೋಷಣೆ ಸಮೀಪದಲ್ಲಿದೆ ಎಂಬ ವಾತಾವರಣ ನಿರ್ಮಾಣವಾಗಿದ್ದರೂ, ಅಧಿಕೃತ ಸ್ಪಷ್ಟತೆ ಮಾತ್ರ ಇನ್ನೂ ಇಲ್ಲ. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಹಿಡಿದು ಅವರ ಬೆಂಬಲಿಗರವರೆಗೂ ಎಲ್ಲರ ಕಣ್ಣು ಈಗ ದೆಹಲಿ ಮತ್ತು ಸಿಎಂ ಕಚೇರಿಯತ್ತ ನೆಟ್ಟಿದೆ. ಕೊನೆಯ ಕ್ಷಣದಲ್ಲಿ ಯಾವ ತೀರ್ಮಾನ ಹೊರಬೀಳುತ್ತೆ ಅನ್ನೋದು ಮುಂದಿನ ಕೆಲ ಗಂಟೆಗಳಲ್ಲಿ ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:49 pm, Sun, 2 August 26

Loading...
Unable to load recommendations.
Follow Us