ಕಾರವಾರ: ಏಷ್ಯಾದ ಎರಡನೇ ಅತೀ ದೊಡ್ಡ ನೌಕಾನೆಲೆಗೆ ಜಾಗ ಕೊಟ್ಟು ಭೂಮಿ ಕಳೆದುಕೊಂಡವರು ಉತ್ತರ ಕನ್ನಡ ಜಿಲ್ಲೆಯ ಜನ. ದೇಶದ ಅತಿ ದೊಡ್ಡ ಅಣುಸ್ಥಾವರಗಳ ಪೈಕಿ ಒಂದಾದ ಕೈಗಾ ಅಣುಸ್ಥಾವರವಿರುವುದು ಇದೇ ಜಿಲ್ಲೆಯಲ್ಲಿ. ಹೀಗೆ ಸರ್ಕಾರದ ದೊಡ್ಡದೊಡ್ಡ ಯೋಜನೆಗಳು ಸಾಕಾರವಾಗಿರುವ ಈ ಜಿಲ್ಲೆಯಲ್ಲಿ ಒಂದೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಲ್ಲ.
ಏಕೆಂದರೆ, ಮೊನ್ನೆಮೊನ್ನೆ ತಾನೇ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರ ಕಾರು ಅಂಕೋಲಾ ತಾಲೂಕಿನ ಹೊಸಕಂಬಿ ಬಳಿ ಅಪಘಾತವಾಯ್ತು. ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೇ ಗೋವಾಕ್ಕೆ ಕರೆದೊಯ್ಯಬೇಕಾಯಿತು. ಜಿಲ್ಲೆಯ ಆಸ್ಪತ್ರೆಗಳ ಸ್ಥಿತಿಗತಿ ಮತ್ತು ಆಸ್ಪತ್ರೆಗಳಿಲ್ಲದೇ ಇಲ್ಲಿನ ಸ್ಥಳೀಯರು ಎಂದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.
ಒಂದು ವಾಡಿಕೆ ಮಾತಿದೆ. ಕಾಲಿಗೊಂದು ನಾಕಿಂಚು ಮುಳ್ಳು ಹೊಕ್ಕರೂ, ಕಣ್ಣಿಗೊಂದು ಚಿಕ್ಕ ಕಸಬಿದ್ರೂ ಮಣಿಪಾಲದ ಕೆಎಂಸಿಗೋ, ಮಂಗಳೂರಿನ ಎಜೆ, ವೆನ್ಲಾಕ್, ಇಲ್ಲ ದೇರಳಕಟ್ಟೆಯನ್ನೋ ಕಾಣಬೇಕು ಮರಾಯ್ರೆ. ಈ ಊರಿನ ಜನತೆಗೆ ರೋಗ ಒಂದು ಕೊಡದೇ ಕಾಪಾಡೋ ದೇವ್ರೆ ಅಂತಾ ಮೊನ್ನೆ ಯಾರೋ ಮಾತಾಡುತ್ತಿದ್ದುದನ್ನ ಕೇಳಿದ ನೆನಪು. ಇದು ಕೇವಲ ವಾಡಿಕೆ ಮಾತಷ್ಟೇ ಅಲ್ಲ, ಉತ್ತರ ಜಿಲ್ಲೆಯ ನಿಜವಾದ ವಸ್ತುಸ್ಥಿತಿ.
ವಿಶಿಷ್ಟ ಜಿಲ್ಲೆಯಲ್ಲಿ ಜನರ ಆರೋಗ್ಯಕ್ಕಿಲ್ಲ ಬೆಲೆ
ಉತ್ತರ ಕನ್ನಡ ಜಿಲ್ಲೆಯನ್ನು ಕರಾವಳಿ, ಮಲೆನಾಡು, ಅರೆಮಲೆನಾಡು ಹೀಗೆ ಮೂರು ವಿಭಾಗಗಳಾಗಿ ಗುರುತಿಸಬಹುದು. ಕಲೆ, ಸಂಸ್ಕೃತಿ, ಭಾಷೆ, ಜನಾಂಗ ಎಲ್ಲದರಲ್ಲೂ ವೈವಿಧ್ಯತೆ ಹೊಂದಿರೋ ಜಿಲ್ಲೆ. ಬುದ್ಧಿವಂತರ ಜಿಲ್ಲೆ ಎಂಬ ಹೆಗ್ಗಳಿಕೆಗೂ ಕಾರಣವಾದ ಜಿಲ್ಲೆ ಇದು. ಆದರೆ ಇಲ್ಲಿ ಯಾರಿಗಾದ್ರೂ ಅಪಘಾತವಾಯ್ತು ಅಥವಾ ದುರಂತ ಸಂಭವಿಸಿತು ಅಂದರೆ, ಅವರನ್ನು ಆ ದೇವರೇ ಕಾಪಾಡಬೇಕು.
ಜಿಲ್ಲೆಗೆ ಒಂದಾದರೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವುದು ಇಲ್ಲಿನ ಜನರ ಬಹು ಕಾಲದ ಬೇಡಿಕೆ. ಆದ್ರೆ ಈ ಬಹುಕಾಲದ ಬೇಡಿಕೆಗೆ ಇನ್ನೂ ಕೂಡ ಮನ್ನಣೆ ಸಿಕ್ಕಿಲ್ಲ. ಈಗಾಗಲೇ ಸರ್ಕಾರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಿದೆ ಅನ್ನೊ ಮಾತಿನ ನಡುವೆಯೂ ಅದು ಆಗೋದು ಯಾವಾಗ. ಅಕ್ಕಪ್ಕಕದ ಬೆಳಗಾವಿ, ಧಾರವಾಡ, ಮಣಿಪಾಲ್, ಮಂಗಳೂರಲ್ಲಿ ಸಾಧ್ಯವಾಗಿರುವುದು ಉತ್ತರ ಕನ್ನಡದಲ್ಲಿ ಯಾಕೆ ಸಾಧ್ಯವಿಲ್ಲ ಎನ್ನುವ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಕೂಡ ಅದರ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಕಾರು ಅಪಘಾತದ ನಂತರವಂತೂ ಈ ಚರ್ಚೆ ಮತ್ತಷ್ಟು ಇಂಬು ಪಡೆದುಕೊಂಡಿದೆ.
ಪಕ್ಕದ ಉಡುಪಿ ಜಿಲ್ಲೆಯಲ್ಲಿ ನಲವತ್ತಕ್ಕೂ ಹೆಚ್ಚು ಆಸ್ಪತ್ರೆಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೊಂಭತ್ತೆರಡು ಖಾಸಗಿ ಸೇರಿದಂತೆ ನೂರಕ್ಕೂ ಮೀರಿ, ಸ್ಪೆಷಾಲಿಟಿ ಆಸ್ಪತ್ರೆ, 7ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳು ಇವೆ. ಉತ್ತಮ ಗುಣಮಟ್ಟದ ಆಸ್ಪತ್ರೆಗಳ ವಿಚಾರದಲ್ಲಿ ರಾಜ್ಯದಲ್ಲೇ ವಿಶಿಷ್ಟ ಹೆಸರಿದೆ.
ದೊಡ್ಡ ಜಿಲ್ಲೆ ಉತ್ತರ ಕನ್ನಡ
ಇಂಥ ಜಿಲ್ಲೆಯ ಗುಣವಂತೆಯಲ್ಲಿ ಬೈಕ್ ಉರುಳಿ ಏಟಾದವನನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಬೇಕು. ಶಿರಸಿಯಲ್ಲಿ ಬ್ರೈನ್ ಹ್ಯಾಮರೇಜ್ ಆದವನನ್ನು ಮಣಿಪಾಲಕ್ಕೆ ತರಬೇಕು. ಹೊನ್ನಾವರದಲ್ಲಿ ನಸುಕಿನಲ್ಲಿ ಹೃದಯಾಘಾತವಾದರೆ ಮಂಗಳೂರಿಗೆ ಒಯ್ಯಬೇಕು. ಕಾರವಾರ ಜೋಯ್ಡಾ ಆಸ್ಪತ್ರೆಯಲ್ಲಿ ಚಿಕ್ಕ ಆಕ್ಸಿಡೆಂಟ್ ಆಗಿ ಕಾಲೋ ಇಲ್ಲ ಕೈ ಕಳೆದುಕೊಡರೆ ವಾಣಿಜ್ಯ ನಗರಿ ಹುಬ್ಬಳ್ಳಿಗೋ ಶಿವಮೊಗ್ಗೆಯ ಮೆಗ್ಗಾನ್ಗೋ ಬರಬೇಕು. ಇಂಥ ಹಲವಾರು ಉದಾಹರಣೆಗಳೂ ಇವೆ.
ಮಣಿಪಾಲ ಮಂಗಳೂರು, ಶಿವಮೊಗ್ಗೆಯ ಮೆಗ್ಗಾನ್, ಹುಬ್ಬಳ್ಳಿಯ ಕಿಮ್ಸ್, ಗೋವಾದ ಖಾಸಗಿ ಆಸ್ಪತ್ರೆಗಳಿಗೆ ಉತ್ತರಕನ್ನಡ ಜಿಲ್ಲೆಯ ಜನತೆ ಹೋಗುತ್ತಾರೆ. ಜಿಲ್ಲೆಯಲ್ಲಿ ಏನಾದ್ರೂ ಸರ್ಕಾರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಿದ್ರೆ ಇಲ್ಲಿನ ಜನ ಅಲ್ಲಿಯ ಆಸ್ಪತ್ರೆಗಳಿಗೆ ಕಳೆದುಕೊಂಡು ಬಿಡುತ್ತಾರೆ ಎನ್ನುವ ಮಾತು ಕೂಡ ಬಲವಾಗಿ ಕೇಳಿ ಬರುತ್ತಿದೆ. ಇಲ್ಲಿನ ಎಂಎಲ್ಎಗಳು ಅದೆಷ್ಟೇ ಕೇಳಿಕೊಂಡರೂ ದೊಡ್ಡ ಬಂಡವಾಳಶಾಹಿಗಳ ಆಟದ ಮುಂದೆ ಪ್ರಯೋಜನಕ್ಕೆ ಬರುತ್ತಿಲ್ಲ ಎನ್ನುವ ಮಾತು ಕೂಡ ಎಂಎಲ್ಎಗಳ ಆಪ್ತರ ಮೂಲದಿಂದಲೇ ಕೇಳಿ ಬರುತ್ತಿವೆ.
ಧುರೀಣರ ನಾಡಲ್ಲಿಲ್ಲ ಸೂಕ್ತ ಆಸ್ಪತ್ರೆ
ದಿವಂಗತ ರಾಮಕೃಷ್ಣ ಹೆಗಡೆಯಂಥ ಮುತ್ಸದಿ ರಾಜಕಾರಣಿಗಳು ಜಿಲ್ಲೆಯಲ್ಲಿದ್ದರು. ದೆಹಲಿ ಮಟ್ಟದಲ್ಲೂ ಕೈ ಹೊಂದಿರುವ ಆರ್.ವಿ.ದೇಶಪಾಂಡೆ, ಸತತ 5 ಬಾರಿ ಸಂಸದರಾಗಿ ಕೇಂದ್ರ ಕೌಶಲ್ಯಾಭಿವೃದ್ದಿ ಸಚಿವರೂ ಆಗಿದ್ದ ಅನಂತ್ ಕುಮಾರ ಹೆಗಡೆ, ಮಾರ್ಗರೇಟ್ ಆಳ್ವಾ, ಮಾಜಿ ಮಂತ್ರಿ ಮತ್ತು ಹಾಲಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಹಿಂದೆ ಕಾಂಗ್ರೆಸ್ನಲ್ಲಿದ್ದು ಅನರ್ಹಗೊಂಡು ಈಗ ಮತ್ತೆ ಗೆದ್ದು ಯಡಿಯೂರಪ್ಪನವರ ಮಂತ್ರಿ ಮಂಡಲದಲ್ಲಿ ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವರು ಮತ್ತು ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಶಿವರಾಮ್ ಹೆಬ್ಬಾರ್ರಂಥ ಧುರೀಣರ ಜಿಲ್ಲೆಯಲ್ಲಿ ಒಂದೇ ಒಂದು ಆಸ್ಪತ್ರೆ ಇಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯ ತಾಲೂಕು ಆಸ್ಪತ್ರೆಗಳಂತೂ ನೆಗಡಿ, ಜ್ವರ, ಶೀತ ತಲೆನೋವು, ಕೆಮ್ಮಿನಂಥ ಕಾಯಿಲೆಗಳಿಗೆ ಸೀಮಿತ. ಮಹಿಳೆಯೊಬ್ಬರ ಹೆರಿಗೆಗೂ ಯೋಗ್ಯವಿಲ್ಲದ ಸ್ಥಿತಿ ಅಲ್ಲಿದೆ. ದೇವಾಲಯಗಳೆಲ್ಲಾ ದೊಡ್ಡದಿವೆ. ಆದ್ರೆ ದೇವರೇ ಇಲ್ಲ ಅನ್ನುವ ಪರಿಸ್ಥಿತಿ. ಹೆರಿಗೆ ನೋವೆಂದು ತುರ್ತಾಗಿ ಅಲ್ಲಿಗೆ ಹೋದರೂ ಅಲ್ಲಿ ನುರಿತ ನರ್ಸ್ ಇದ್ರೆ ಆಕೆಯ ಪುಣ್ಯ. ಯಾರಿಗೇ ಹೇಳಬೇಕು ಇದನ್ನೆಲ್ಲಾ?
ಇಂಥ ಆಸ್ಪತ್ರೆಗಳು ಬೇಕು
ಸುಸಜ್ಜಿತ ಸಲಕರಣೆ, ಸಲಕರಣೆ ಉಪಯೋಗಿಸಿಕೊಂಡು ಚಿಕಿತ್ಸೆ ನೀಡಬಲ್ಲ, ರೋಗವನ್ನು ಕಂಡುಹಿಡಿಯಬಲ್ಲ ವೈದ್ಯರು. ತುರ್ತು ಸಂದರ್ಭದಲ್ಲಿ ಪ್ರಾಣ ಹೋಗದಂತೆ ಕಾಪಾಡಿಕೊಂಡು ನಂತರ ಚಿಕಿತ್ಸೆ ಮುಂದುವರಿಸುವ ವ್ಯವಸ್ಥೆ ಇರುವ ಆಸ್ಪತ್ರೆಗಳು ಬೇಕು. ಒಂದೇ ಸೂರಿನಡಿ ಗೈನಾಕಾಲಾಜಿಸ್ಟ್, ಕಾರ್ಡಿಯೊ ಥೆರಪಿ ಸರ್ಜನ್, ನೆಪ್ರೋಲಜಿ, ನ್ಯೂರೋ ಸರ್ಜರಿ, ಪ್ಲಾಸ್ಟಿಕ್ ಸರ್ಜರಿ, ಎಂಡೋಕ್ರಿನಾಲಜಿ, ಆಕೋಸರ್ಜರಿ, ಜಿಐ ಸರ್ಜರಿ, ಗ್ಯಾಸ್ಟ್ರೋ ಎಂಟೋಲಜಿ.. ಹೀಗೆ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸುವ ಹಲವು ತಜ್ಞರು ಒಂದೇ ಸೂರಿನಡಿ ಲಭ್ಯವಿರಬೇಕು. ಡ್ಯೂಟಿ ವೈದ್ಯರು ದಿನದ 24 ಗಂಟೆಯೂ ಆಸ್ಪತ್ರೆಯಲ್ಲಿ ಲಭ್ಯವಿರಬೇಕು. ಇದನ್ನೇ ತಾನೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅನ್ನೋದು? ಇಂಥ ಒಂದಾದರೂ ಆಸ್ಪತ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲ್ಲ.
ಈ ಪೈಕಿ ಹೃದಯತಜ್ಞ, ಮಿದುಳು ಸಂಬಂಧಿ ಮತ್ತು ಕಿಡ್ನಿ ಸಂಬಂಧಿ ವೈದ್ಯರಿದ್ದು ಅದಕ್ಕೆ ಬೇಕಾದ ಉಪಕರಣಗಳಿದ್ದರೆ ಅದನ್ನು ಸ್ಪೆಷಾಲಿಟಿ ಎಂದು ಗುರುತಿಸಬಹುದು. ಇನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿರುವ ವೈದ್ಯರು ಎಂಬಿಬಿಎಸ್, ಎಂಡಿ, ಡಿಎಚ್ ಮತ್ತು ಎಂಎಚ್ ಕೋರ್ಸ್ ಓದಿರಬೇಕು. ಅಂತಾ ಸ್ಪೆಷಲಿಸ್ಟ್ ವೈದ್ಯರು ಕನಿಷ್ಠ ಪಕ್ಷ ಮೂರು ಲಕ್ಷ ಸಂಬಳ ಪಡೆಯುತ್ತಾರೆ ಅಂತಾರೆ ಕಾರವಾರದ ಕ್ರಿಮ್ಸ್ ಸರ್ಕಾರಿ ಆಸ್ಪತ್ರೆಯ ಡೀನ್ ಡಾ.ಗಜಾನನ ನಾಯಕ್.
ಸರ್ಕಾರ ಇವರ ವೆಚ್ಚ ಭರಿಸುತ್ತಾ? ಜನತೆಯ ಪ್ರಾಣ ಕಾಪಾಡೋ ಜವಾಬ್ದಾರಿ ಸರ್ಕಾರಕ್ಕಿದ್ರೆ ಭರಿಸಲೇಬೇಕು ಅಂತಾರೆ ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು.
ರಸ್ತೆಗಳ ದುರವಸ್ಥೆಯಿಂದ ಅಪಘಾತ
ಉತ್ತರ ಕನ್ನಡ ಭೌಗೊಳಿಕವಾಗಿ ವಿಶಿಷ್ಟವಾದುದು. ಕರಾವಳಿ ಭಾಗದ ಭಟ್ಕಳದಿಂದ ಇದೇ ಜಿಲ್ಲೆಯ ಇನ್ನೊಂದು ತುದಿ ತಲುಪುವುದಕ್ಕೆ ಕನಿಷ್ಠ 5ರಿಂದ 6 ಗಂಟೆಗಳ ಸಮಯ ಹಿಡಿಯುತ್ತದೆ. ಅದರಲ್ಲೂ ಶೇ 80ರಷ್ಟು ಅರಣ್ಯ ಪ್ರದೇಶದಿಂದ ಕೂಡಿರುವ ಜಿಲ್ಲೆಯಲ್ಲಿ ಮಳೆಗಾಲದಲ್ಲಂತೂ ಯಾವ ರಸ್ತೆಯಲ್ಲಿ ಬಂಡೆಗಲ್ಲು ಉರುಳಿ ಬಿದಿರುತ್ತವೋ, ಎಲ್ಲಿ ಮರಮಟ್ಟು ಬಿದ್ದು ರಸ್ತೆ ಬಂದ್ ಆಗಿರುತ್ತೋ ಎನ್ನುವುದನ್ನ ಹೇಳುವುದಕ್ಕೆ ಸಾಧ್ಯವಿಲ್ಲ. ಅದರಲ್ಲೂ ಜಿಲ್ಲೆಯ ಕರಾವಳಿ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಮತ್ತು ಜೋಯಿಡಾ, ಶಿರಸಿ ಹೆದ್ದಾರಿಗಳಲ್ಲೂ ಅಪಘಾತ ವಲಯಗಳೇ ಹೆಚ್ಚಿದ್ದು ಆಗಾಗ ದುರ್ಘಟನೆ ಸಂಭವಿಸುತ್ತಲೇ ಇರುತ್ತವೆ. ಇನ್ನು ಈ ಅಪಘಾತ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ಸಿಗದೇ ಸಾವನ್ನಪ್ಪಿದ ಪ್ರಕರಣ ಅದೆಷ್ಟೋ. ಹಾಗಾಗಿ ಇಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯತೆ ಇಲ್ಲಿ ತೋರುತ್ತದೆ.
ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕೆಂದು ಮಂಗಳೂರು ಮೂಲದ ದುಬೈ ಉದ್ಯಮಿ ಬಿ.ಆರ್ ಶೆಟ್ಟಿ ಕೂಡ ತಮ್ಮ ಟ್ರಸ್ಟ್ ಮೂಲಕ ಆಸ್ಪತ್ರೆ ಆರಂಭಿಸಲು ಮುಂದಾಗಿ ಸ್ಥಳ ಪರಿಶೀಲನೆ ನಡೆಸಿದ್ದರು. ಇನ್ನೇನು ಕನಸು ನನಸಾಗಬಹುದು ಎನ್ನುವ ಹಂತದಲ್ಲಿ ಬಿ.ಆರ್.ಶೆಟ್ಟರ ಸಂಸ್ಥೆಯ ಬಗ್ಗೆ ಕೇಳಿಬಂದ ಆರ್ಥಿಕ ಹಿನ್ನಡೆ ಸುದ್ದಿಯು ಆ ಆಸೆಗೆ ತಣ್ಣೀರೆರಚಿತು.
ಶಾಸಕಿ ರೂಪಾಲಿ ಮನವಿಗೆ ಮುಖ್ಯಮಂತ್ರಿ ಸಮ್ಮತಿ
ಅಂಕೋಲಾ ಮತ್ತು ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕಿ ಮತ್ತು ಇಲ್ಲಿನ ಜಿಲ್ಲಾಧಿಕಾರಿಗಳು ಮಾತ್ರ ಪದೇಪದೇ ಸರ್ಕಾರಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ತುರ್ತುಚಿಕಿತ್ಸಾ ಕೇಂದ್ರ (ಟ್ರಾಮಾ ಸೆಂಟರ್) ಬೇಕು ಎಂದು ಪತ್ರ ಬರೆಯುತ್ತಲೇ ಇದ್ದಾರೆ. ಆದರೆ ಅಧಿಕಾರದಲ್ಲಿದ್ದಾಗ ಕುಮಾರಸ್ವಾಮಿಯವರು. ಇತ್ತೀಚೆಗಷ್ಟೇ ಆರೋಗ್ಯ ಸಚಿವ ಸ್ಥಾನದಿಂದ ಬದವಾವಣೆಯಾದ ಶ್ರೀರಾಮುಲು ಅವರು ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ನೀಡುವ ಬಗ್ಗೆ ಟ್ವೀಟ್ ಮಾಡಿದ್ದನ್ನ ಹೊರತುಪಡಿಸಿ ಮತ್ತಾವುದೇ ಬೆಳವಣಿಗೆ ನಡೆದಿಲ್ಲ.
ಕಳೆದ ವಾರವಷ್ಟೇ ಶಾಸಕಿ ರೂಪಾಲಿ ನಾಯಕ್ ಅವರ ಪತ್ರಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಕಾದಂತೆ ಅಗತ್ಯ ಕ್ರಮವಹಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿರುವ ಪ್ರತಿ ಮತ್ತೆ ಶಾಸಕಿ ರೂಪಾಲಿ ಅವರ ಕೈ ಸೇರಿದೆ. ಆದ್ರೆ ಅಷ್ಟಕ್ಕೆ ಮಾಧ್ಯಮ ಹೇಳಿಕೆ ನೀಡಿದ ರೂಪಾಲಿ ನಾಯಕ್ ಇದು ನನ್ನ ಬಹುಕಾಲದ ಬೇಡಿಕೆ. ಮುಖ್ಯಮಂತ್ರಿಗಳು ಇದಕ್ಕೆ ಸಮ್ಮತಿ ಸೂಚಿಸಿದ್ದು ಕನಸು ನನಸಾಗುವ ಸಮಯ ಬಂದೇ ಬಿಡ್ತು ಅಂತಾ ಪ್ರತಿಕ್ರಿಯಿಸಿದ್ದಾರೆ. ಆದ್ರೆ ಯಾವಾಗ ಅನ್ನುವುದು ಇಲ್ಲಿ ಪ್ರಶ್ನೆಯಾಗಿದೆ.
ಬಜೆಟ್ ಮೇಲೆ ಆಸೆಗಣ್ಣು
ಶಾಸಕಿಯ ಮನವಿಗೇನೋ ಮುಖ್ಯಮಂತ್ರಿ ಸಹಮತ ಸೂಚಿಸಿದ್ದು ಸತ್ಯ. ಆದರೆ ಇದು ಅಧಿಕೃತ ಘೋಷಣೆಯಲ್ಲ. ಈಗಾಗಲೇ ಜಿಲ್ಲಾಡಳಿತ ಮಾಡಿದ ಅಂದಾಜಿನ ಪ್ರಕಾರ ಕಾರವಾರ ಮೆಡಿಕಲ್ ಕಾಲೇಜನ್ನೇ ಮೇಲ್ದರ್ಜೆಗೇರಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮಾಡಲಾಗುತ್ತದೆ. ಈಗಿರುವ 600 ಬೆಡ್ಗಳ ಜೊತೆ ಮತ್ತೆ 450 ಬೆಡ್ ಸೇರಿಸಿ ವಿಸ್ತರಿಸುವ ಯೋಜನೆಯಿದೆ. ಅದಕ್ಕೆ ₹ 120 ಕೋಟಿ ಹಣ ಅಗತ್ಯವಿದೆ. ಮುಂಜೂರು ಮಾಡುವಂತೆ ವಿನಂತಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ.ಕೆ ಹರೀಶ್ ಕುಮಾರ್, ಈ ಬಾರಿ ಸುಸಜ್ಜಿತ ಆಸ್ಪತ್ರೆ ಆಗಿಯೇ ಆಗುತ್ತೆ ಎನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈಗ ಎಲ್ಲರ ಚಿತ್ತ ಮುಂದಿನ ಬಜೆಟ್ ಮೇಲಿದೆ. ಮುಖ್ಯಮಂತ್ರಿಗಳು ಆ ಅನುದಾನವನ್ನು ಬಜೆಟ್ನಲ್ಲಿ ಘೋಷಣೆ ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಮೂಲ ಸೌಕರ್ಯದಲ್ಲಿ ಮೊದಲ ಸ್ಥಾನ ಆರೋಗ್ಯ ಸೇವೆಗೆ ಸಿಗಬೇಕು. ಅದನ್ನೇ ಕೊಡಮಾಡದಿದ್ದರೆ ಸರಕಾರವೂ ಜನಪ್ರತಿನಿಧಿಗಳೂ ಯೋಗ್ಯತೆ ಕಳೆದುಕೊಳ್ಳುತ್ತಾರೆ ಎಂದು ಬರಹಗಾರ ಗೋಪಾಲಕೃಷ್ಣ ಕುಂಟಿನಿ ಉತ್ತರ ಕರ್ನಾಟಕದ ಆಸ್ಪತ್ರೆಗಳ ಸ್ಥಿತಿಗತಿಗಳ ಬೇಸರ ವ್ಯಕ್ತಪಡಿಸಿ ಬರೆದುಕೊಂಡಿರುವ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ರಸ್ತೆಗಳ ದುಸ್ಥಿತಿ ಬಿಟ್ಟುಬಿಡಿ, ಒಂದಾದರೂ ಸುಸಜ್ಜಿತ ಆಸ್ಪತ್ರೆ ಬೇಡವೇ?