ಬೆಂಗಳೂರು: ಮಾರ್ಚ್ 03ರಂದು ಬಿ.ಸಿ. ಪಾಟೀಲ್ ಆರೋಗ್ಯ ಸಿಬ್ಬಂದಿಯನ್ನು ತಮ್ಮ ಮನೆಗೆ ಕರೆಸಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರು. ಸಚಿವರ ಈ ನಡೆಗೆ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಬಳಿಕ ಸಂಜೆ ವೇಳೆಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾತನಾಡಿ ಕೊರೊನಾ ಮಾರ್ಗಸೂಜಿ ಪ್ರಕಾರ ಯಾವುದೇ ವ್ಯಕ್ತಿಯ ಮನೆಗಳಿಗೆ ಹೋಗಿ ಲಸಿಕೆ ಹಾಕುವಂತಿಲ್ಲ. ಕೊರೊನಾ ಲಸಿಕೆ ಕೇವಲ ಆಸ್ಪತ್ರೆಗಳಲ್ಲಿ ಮಾತ್ರ ನೀಡಬೇಕು ಎಂದು ಸ್ಪಷ್ಟನೆ ನೀಡಿದ್ದರು. ಸದ್ಯ ಸಚಿವ ಬಿ.ಸಿ.ಪಾಟೀಲ್ ಅವರು ಹಾವೇರಿಯಲ್ಲಿರುವ ತಮ್ಮ ಮನೆಯಲ್ಲೇ ಲಸಿಕೆ ಪಡೆದ ವಿಚಾರಕ್ಕೆ ಸಂಬಂಧಿಸಿ ಜಿಲ್ಲಾ ಆರ್‌ಸಿಹೆಚ್(RCH) ಡಾ.ಜಯಾನಂದ್‌ಗೆ ನೋಟಿಸ್ ಜಾರಿಯಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ನೋಟಿಸ್ ಜಾರಿ ಮಾಡಿದ್ದಾರೆ. ಕೊವಿಡ್ ಲಸಿಕೆ ಕೇವಲ ಆರೋಗ್ಯ ಸಂಸ್ಥೆಗಳಲ್ಲಿ ನೀಡಬೇಕು. ಈ ಬಗ್ಗೆ ಹಲವು ಸಭೆಗಳಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೂ ಮನೆಗೆ ಹೋಗಿ ಲಸಿಕೆ ನೀಡುವುದಕ್ಕೆ ಕಾರಣವೇನು? ಈ ಘಟನೆ ಇಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಘನತೆಗೆ ಕುಂದು ತಂದಿದೆ. ಇದು ಅಧಿಕಾರಿಗಳ ನಿರ್ಲಕ್ಷ್ಯತನವಾಗಿದ್ದು ಆಕ್ಷೇಪಾರ್ಹ. ಈ ಲೋಪಕ್ಕೆ ಕಾರಣ ನೀಡುವಂತೆ ಡಾ.ಜಯಾನಂದ್‌ಗೆ ಅರುಂಧತಿ ಚಂದ್ರಶೇಖರ್ ನೋಟಿಸ್ ಜಾರಿ ಮಾಡಿದ್ದಾರೆ. ಇನ್ನು ತಪ್ಪಾಗಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ನೋಟಿಸ್ನಲ್ಲಿ ಎಚ್ಚರಿಕೆ ಕೊಟ್ಟಿದ್ದಾರೆ.
ದೇಶಾದ್ಯಂತ ಆರಂಭವಾದ ಮತ್ತೊಂದು ಹಂತದ ವ್ಯಾಕ್ಸಿನೇಷನ್ನ ಮೊದಲ ದಿನವಾದ ಮಾರ್ಚ್.01ರಂದು ಸ್ವತ: ಪ್ರಧಾನಿ ಮೋದಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ಹೋಗಿ ಕೊರೊನಾ ಲಸಿಕೆ ಪಡೆಯೋ ಮೂಲಕ 130 ಕೋಟಿ ಜನರಿಗೆ ಲಸಿಕೆ ಪಡೆಯಲು ಪ್ರೇರೇಪಿಸಿದ್ದರು. ಆಸ್ಪತ್ರೆ ಬರುವ ಜನರಿಗೆ ಅಡಚಣೆ ಆಗಬಾರದೆಂದು ಮೋದಿ ಬೆಳಗ್ಗೆಯೇ ಆಸ್ಪತ್ರೆಗೆ ಭೇಟಿ ನೀಡಿ ಲಸಿಕೆ ಪಡೆದಿದ್ದರು. ಆದ್ರೆ ರಾಜ್ಯದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಹಾಗೂ ಕುಟುಂಬ ಸಹ ಲಸಿಕೆ ಹಾಕಿಸಿಕೊಂಡಿದ್ದು ಸಚಿವರ ದೌಲತ್ತಿಗೆ ಆಕ್ರೋಶ ವ್ಯಕ್ತವಾಗಿತ್ತು. ಮಾರ್ಚ್ 02ರಂದು ಬಿ.ಸಿ. ಪಾಟೀಲ್ ಆಸ್ಪತ್ರೆಗೆ ಹೋಗದೆ ಹಾವೇರಿ ಜಿಲ್ಲೆ ಹಿರೇಕೆರೂರಿನ ತಮ್ಮ ನಿವಾಸಕ್ಕೆ ಆರೋಗ್ಯ ಸಿಬ್ಬಂದಿಯನ್ನು ಕರೆಸಿ ಮನೆಯಲ್ಲೇ ಲಸಿಕೆ ಪಡೆದಿದ್ದರು.
ಸಚಿವರ ಈ ನಡೆ ಅಸಮಾಧಾನ ಉಂಟು ಮಾಡಿತ್ತು. ಎಲ್ಲಾರಿಗೂ ಆಸ್ಪತ್ರೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಸೂಚನೆ ನೀಡಲಾಗಿದೆ. ಆದ್ರೆ ಸಚಿವ ಬಿ.ಸಿ.ಪಾಟೀಲ್ ತಮ್ಮದೇ ನಿಯಮವನ್ನು ರೂಪಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೇ ವಿಚಾರಕ್ಕೆ ಸಂಬಂಧಿಸಿ ಇಂದು ಜಿಲ್ಲಾ ಆರ್‌ಸಿಹೆಚ್ ಡಾ.ಜಯಾನಂದ್‌ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ನೋಟಿಸ್ ಜಾರಿ ಮಾಡಿದ್ದಾರೆ.
ಇದನ್ನೂ ಓದಿ: ಮನೆಗೇ ಬಂದು ಲಸಿಕೆ ಹಾಕಿದ ಆರೋಗ್ಯ ಸಿಬ್ಬಂದಿ.. ಸಚಿವ ಬಿ.ಸಿ. ಪಾಟೀಲ್ರಿಂದ ಇದೆಂಥಾ ದರ್ಬಾರ್..?