ಸೆ.1ರಿಂದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ UDF ಪರಿಷ್ಕರಣೆ: ಹೊರಡುವ,ಬರುವ ಪ್ರಯಾಣಿಕರಿಗೆ ಎಷ್ಟು ಶುಲ್ಕ?

ಬೆಂಗಳೂರಿನ ಕೆಂಪೇಗೌಡ ಅಂತಾರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) ಹೋಗುವ ಮತ್ತು ಬಂದಿಳಿಯುವ ಪ್ರಯಾಣಿಕರಿಗೆ ಅನ್ವಯವಾಗುವಂತೆ ಹೊಸ ಸುಂಕದ (Tariff) ರಚನೆಗೆ ಎಇಆರ್‌ಎ (AERA) ಅಧಿಕೃತ ಅನುಮೋದನೆ ನೀಡಿದೆ. ಹೀಗಾಗಿ ಸೆಪ್ಟೆಂಬರ್ 1ರಿಂದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ UDF ಪರಿಷ್ಕರಣೆ ಮಾಡಲಾಗುತ್ತಿದೆ. ಹಾಗಾದ್ರೆ, ದೇಶೀಯ ಪ್ರಯಾಣಿಕರಿಗೆ ಎಷ್ಟು? ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಎಷ್ಟು ಎನ್ನುವ ವಿವರ ಇಲ್ಲಿದೆ.

ಸೆ.1ರಿಂದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ UDF ಪರಿಷ್ಕರಣೆ:  ಹೊರಡುವ,ಬರುವ ಪ್ರಯಾಣಿಕರಿಗೆ ಎಷ್ಟು ಶುಲ್ಕ?
Bengaluru Airport
Edited By:

Updated on: Aug 22, 2026 | 4:50 PM

ದೇವನಹಳ್ಳಿ, (ಆಗಸ್ಟ್ 22): ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda international airport) ಸೆಪ್ಟೆಂಬರ್ 1 2026 ರಿಂದ ಪರಿಷ್ಕೃತ ಬಳಕೆದಾರ ಅಭಿವೃದ್ಧಿ ಶುಲ್ಕ (UDF) ಜಾರಿಗೆ ಬರಲಿದೆ. ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ(AERA), 2026-27ರಿಂದ 2030-31ರ ನಾಲ್ಕನೇ ನಿಯಂತ್ರಣ ಅವಧಿಗೆ ಹೊಸ ಟ್ಯಾರಿಫ್ ಆದೇಶ ಹೊರಡಿಸಿದೆ. ಹೊಸ ದರ ಜಾರಿಗೆ ಬರುವವರೆಗೂ ದೇಶೀಯ ಹಾಗೂ ಅಂತರಾಷ್ಟ್ರೀಯ ನಿರ್ಗಮನ ಪ್ರಯಾಣಿಕರಿಗೆ ಈಗಿರುವ UDF ದರವೇ ಮುಂದುವರಿಯಲಿದೆ.

  • ಸೆಪ್ಟೆಂಬರ್ 1ರಿಂದ ದೇಶೀಯ ಪ್ರಯಾಣಿಕರಿಗೆ‌: ನಿರ್ಗಮನ UDF — 300 ರೂಪಾಯಿ, ಆಗಮನ UDF — 125 ರೂ.
  • ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ : ನಿರ್ಗಮನ UDF — 997 ರೂ., ಆಗಮನ UDF — 426 ರೂ.

ಈ ದರಗಳು ಆಗಸ್ಟ್ 2029ರವರೆಗೆ ಅನ್ವಯವಾಗಲಿವೆ. ಬಳಿಕ ಟರ್ಮಿನಲ್-2 ಫೇಸ್ – 2 ಸೇರಿದಂತೆ ಪ್ರಮುಖ ಯೋಜನೆಗಳ ಕಾಮಗಾರಿ ಪೂರ್ಣಗೊಂಡ ನಂತರ ಟ್ಯಾರಿಫ್‌ನಲ್ಲಿ ಬದಲಾವಣೆ ಮಾಡಲಾಗುತ್ತದೆ.
ಹೊಸ ಆದೇಶದ ಪ್ರಮುಖ ಬದಲಾವಣೆ ಎಂದರೆ ಇದೇ ಮೊದಲ ಬಾರಿಗೆ ಆಗಮನ ಮತ್ತು ನಿರ್ಗಮನ ಎರಡೂ ಪ್ರಯಾಣಿಕರಿಂದ UDF ವಸೂಲಿ ಮಾಡಲಾಗುತ್ತದೆ. ದೇಶದ ಪ್ರಮುಖ ಹಾಗೂ ಹೊಸದಾಗಿ ಆರಂಭಗೊಂಡ ವಿಮಾನ ನಿಲ್ದಾಣಗಳಲ್ಲಿ ಅನುಸರಿಸಲಾಗುತ್ತಿರುವ ಮಾದರಿಯನ್ನೇ ಇಲ್ಲಿ ಅಳವಡಿಸಲಾಗಿದೆ. ಆದರೆ ಒಟ್ಟಾರೆ UDF ಹೆಚ್ಚಳವಾಗುವುದಿಲ್ಲ ಎಂದು BIAL ಸ್ಪಷ್ಟಪಡಿಸಿದೆ.

ಇದನ್ನೂ ನೋಡಿ: ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಕನಕಪುರ ರಸ್ತೆಯ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ: ಸಚಿವ ಎಂಬಿ ಪಾಟೀಲ್ ಮಾಹಿತಿ

ಈಗ ದೇಶೀಯ ನಿರ್ಗಮನ ಪ್ರಯಾಣಿಕರಿಂದ ವಿಧಿಸಲಾಗುತ್ತಿರುವ 550 ರೂ. ಬದಲಿಗೆ, ಆಗಮನ ಮತ್ತು ನಿರ್ಗಮನ ಸೇರಿ ಹೊಸ ವ್ಯವಸ್ಥೆಯಲ್ಲಿ ಒಟ್ಟು 425 ರೂ. ಆಗಲಿದೆ. ಅದೇ ರೀತಿ, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಈಗಿರುವ 1,500 ರೂ. ಬದಲಿಗೆ ಆಗಮನ ಮತ್ತು ನಿರ್ಗಮನ ಸೇರಿ ಒಟ್ಟು 1,423 ರೂ ಆಗಲಿದೆ.

ಕೆಂಪೇಗೌಡ ವಿಮಾನ ನಿಲ್ದಾಣದ ವಿಸ್ತರಣೆಯ ಭಾಗವಾಗಿ ಟರ್ಮಿನಲ್ – 2 ಫೇಸ್ – 2, T2 ಫೇಸ್ – 2 ಏಪ್ರನ್, ಏರ್‌ಫೀಲ್ಡ್ ಕಾಮಗಾರಿ, ರಸ್ತೆ ಹಾಗೂ ಲ್ಯಾಂಡ್‌ಸೈಡ್ ಮೂಲಸೌಕರ್ಯ ಸೇರಿದಂತೆ ಹಲವು ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಯೋಜನೆಗಳು ಪೂರ್ಣಗೊಂಡು, ಕಾರ್ಯಾರಂಭ ಮಾಡಿ ಪ್ರಯಾಣಿಕರ ಬಳಕೆಗೆ ಬಂದ ಬಳಿಕ, AERA ನಿಗದಿಪಡಿಸಿರುವ ಪ್ರಕ್ರಿಯೆಯಂತೆ ಸಂಬಂಧಿತ ಹೆಚ್ಚುವರಿ ಟ್ಯಾರಿಫ್‌ಗಳನ್ನು ಜಾರಿಗೊಳಿಸಲಾಗುತ್ತದೆ.

ಬೆಂಗಳೂರಿನ ವೇಗವಾಗಿ ಬೆಳೆಯುತ್ತಿರುವ ವಾಯುಯಾನ ಅಗತ್ಯಗಳಿಗೆ ಅನುಗುಣವಾಗಿ ಮುಂಚಿತವಾಗಿಯೇ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವುದು ತಮ್ಮ ಉದ್ದೇಶವಾಗಿದೆ ಎಂದು BIAL ತಿಳಿಸಿದೆ. ಸುರಕ್ಷಿತ, ಪರಿಣಾಮಕಾರಿ ಹಾಗೂ ಅತ್ಯುತ್ತಮ ಪ್ರಯಾಣಿಕ ಅನುಭವದೊಂದಿಗೆ ಬೆಂಗಳೂರಿನ ಹಾಗೂ ಕರ್ನಾಟಕದ ಭವಿಷ್ಯದ ಬೆಳವಣಿಗೆಗೆ ಅಗತ್ಯವಿರುವ ಸಾಮರ್ಥ್ಯ ಮತ್ತು ಸಂಪರ್ಕ ವ್ಯವಸ್ಥೆ ನಿರ್ಮಿಸಲು ಬದ್ಧವಾಗಿರುವುದಾಗಿ BIAL ವಕ್ತಾರರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us