ಮೈಸೂರು: ಜಿಲ್ಲೆ ಹೇಳಿ ಕೇಳಿ ಸಾಂಸ್ಕೃತಿಕ ನಗರಿ. ಪ್ರವಾಸಿಗರ ಸ್ವರ್ಗ. ಆದರೆ ಇದೀಗ ಮೈಸೂರು ಸಾವಿನ ನಗರಿ ಕೊರೊನಾದ ಸ್ವರ್ಗವಾಗಿದೆ. ಇದಕ್ಕೆ ಕಾರಣ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣ. ಕೊರೊನಾ ಮುಕ್ತವಾಗಿದ್ದ ಮೈಸೂರು ಇದೀಗ ಕೊರೊನಾ ಹಾಟ್ಸ್ಪಾಟ್ ಆಗಿದೆ. ಅದರಲ್ಲೂ ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದು ಜಿಲ್ಲಾಡಳಿತದ ತಲೆ ನೋವಿಗೆ ಕಾರಣವಾಗಿದೆ. ಕೊರೊನಾ ಸೋಂಕಿನ ಸಂಖ್ಯೆ ಪ್ರತಿದಿನ 2 ಸಾವಿರದ ಗಡಿ ದಾಟಿದೆ. ಪ್ರತಿದಿನ 10ಕ್ಕೂ ಹೆಚ್ಚು ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಮೈಸೂರು ಜಿಲ್ಲೆಯ ಕೊರೊನಾ ಮಾಹಿತಿ
ಕಳೆದ 27 ದಿನದಲ್ಲಿ 184 ಕೊರೊನಾ ಸೋಂಕಿತರು ಬಲಿಯಾಗಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 89,822. ಒಟ್ಟು ಗುಣಮುಖಗೊಂಡವರು 71,977. ಸಕ್ರಿಯ ಪ್ರಕರಣಗಳ ಸಂಖ್ಯೆ 16,591. ಒಟ್ಟು ಕೊರೊನಾದಿಂದ ಸಾವನ್ನಪ್ಪಿದರು 1,254 ಕ್ಕೆ ಏರಿದೆ.
ಗ್ರಾಮೀಣ ಪ್ರದೇಶದಲ್ಲೂ ಹೆಚ್ಚಿದ ಕೊರೊನಾ
ಹೆಚ್.ಡಿ.ಕೋಟೆ 184, ಹುಣಸೂರು 131, ಕೆ ಆರ್ ನಗರ 217, ಮೈಸೂರು ನಗರ 1,633, ಮೈಸೂರು ತಾಲೂಕು 214, ನಂಜನಗೂಡು 148, ಪಿರಿಯಾಪಟ್ಟಣ 91 ಮತ್ತು ಟಿ ನರಸೀಪುರದಲ್ಲಿ 172 ಕೊರೊನಾ ಸೋಂಕಿತರು ಇದ್ದಾರೆ.
ಅಂಕಿ ಅಂಶಗಳನ್ನು ನೋಡಿದರೆ ಭೀತಿ ಹೆಚ್ಚಾಗುತ್ತದೆ. ಕೊರೊನಾ ಕಠಿಣ ನಿಯಮಗಳನ್ನು ಜಾರಿಗೊಳಿಸಿದ ನಂತರ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಬಹುದೆಂದು ಎಲ್ಲರೂ ಭಾವಿಸಿದ್ದರು. ಆದರೆ ಎಲ್ಲರ ಊಹೆ ಸುಳ್ಳಾಗಿದೆ. ಕೊರೊನಾ ಕರ್ಫ್ಯೂ ಜಾರಿಯಾದರು ಕೊರೊನಾವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಇನ್ನು ಮೈಸೂರಿನಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಕೊರೊನಾ ಎರಡನೇ ಅಲೆಯ ವೇಗಕ್ಕೆ ತಡೆ ಹಾಕಲು ಸಾಧ್ಯವಾಗುತ್ತಿಲ್ಲ.
ಕೊರೊನಾ ಎರಡನೇ ಅಲೆ ಹೆಚ್ಚಾಗಲು ಪ್ರಮುಖ ಕಾರಣ
ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಾಗಲು ಸಾಕಷ್ಟು ಕಾರಣಗಳಿದೆ. ಮೊದಲ ಅಲೆಯಲ್ಲಿ ಇದ್ದ ಗಂಭೀರತೆ ಎರಡನೇ ಅಲೆಯಲ್ಲಿ ಇಲ್ಲ.
* ಸೋಂಕಿತರ ಸಂಪರ್ಕದಿದ ಹರಡುತ್ತಿದೆ ಮಹಾಮಾರಿ
ಮೈಸೂರಿನಲ್ಲಿ ಕೊರೊನಾ ಸೋಂಕು ಹೆಚ್ಚಾಗಲು ಮುಖ್ಯ ಕಾರಣ ಸೋಂಕಿತರನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯಾಧಿಕಾರಿಗಳು ವಿಫಲರಾಗಿದ್ದಾರೆ. ಪ್ರತಿದಿನ ವರದಿಯಾಗುತ್ತಿರುವ ಕೊರೊನಾ ಪ್ರಕರಣಗಳಲ್ಲಿ ಸಂಪರ್ಕಿತರಿಂದ ಹರಡುತ್ತಿರುವ ಸೋಂಕಿನದ್ದೇ ಸಿಂಹಪಾಲು. ಶೇಕಡ 80ರಷ್ಟು ಸಂಪರ್ಕದಿಂದಲೇ ಸೋಂಕು ಹರಡುತ್ತಿದೆ. ಮೊದಲ ಅಲೆಯಲ್ಲಿ ಸೋಂಕಿತರ ಬಗ್ಗೆ ತೀವ್ರ ನಿಗಾ ಇಡಲಾಗಿತ್ತು. ಸೋಂಕಿತರಾದವರನ್ನು ತಕ್ಷಣ ಸಂಪರ್ಕಿಸಿ ಅವರಿಗೆ ಅವಶ್ಯಕತೆ ಇರುವ ಮಾರ್ಗದರ್ಶನ ನೀಡುವುದು ಹಾಗೂ ಕ್ವಾರಂಟೈನ್ ಮಾಡಲಾಗುತ್ತಿತ್ತು. ಜೊತೆಗೆ ಅವಶ್ಯಕತೆ ಇದ್ದರೆ ಆ ರಸ್ತೆ ಅಥವಾ ಮನೆಯನ್ನು ಸೀಲ್ಡೌನ್ ಮಾಡಲಾಗುತಿತ್ತು. ಮೊಬೈಲ್ ಟ್ರ್ಯಾಕ್ ಮಾಡಿ ಅವರು ಮನೆಯಿಂದ ಹೊರಬರದಂತೆ ಎಚ್ಚರ ವಹಿಸಲಾಗಿತ್ತು. ಆದರೆ ಈ ಬಾರಿ ಆ ರೀತಿಯ ಯಾವುದೇ ಕೆಲಸವಾಗುತ್ತಿಲ್ಲ. ಸೋಂಕಿತರು ಬೇಕಾಬಿಟ್ಟಿ ಓಡಾಡಿಕೊಂಡಿದ್ದಾರೆ
* ಮಾಸ್ಕ್ ಧರಿಸಲ್ಲ ಸಾಮಾಜಿಕ ಅಂತರವೂ ಇಲ್ಲ
ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದರು, ಮೊದಲ ಅಲೆಯಲ್ಲಿ ಇದ್ದ ಗಂಭೀರತೆ ಈ ಬಾರಿ ಕಾಣುತ್ತಿಲ್ಲ. ಜನರ ಅನಗತ್ಯ ಓಡಾಟಕ್ಕೆ ಸಂಪೂರ್ಣ ತಡೆ ಬಿದ್ದಿಲ್ಲ. ಮಾರುಕಟ್ಟೆಗಳಲ್ಲಿ ಅಗತ್ಯ ವಸ್ತುಗಳ ಖರೀದಿ ಸಮಯದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಮಾಸ್ಕ್ ಸಮರ್ಪಕವಾಗಿ ಧರಿಸುತ್ತಿಲ್ಲ. ಇದರಿಂದ ಸೋಂಕು ವ್ಯಾಪಾಕವಾಗಿ ಹರಡುತ್ತಿದೆ. ಪೊಲೀಸರಿಗೆ ತಪಾಸಣೆ ವೇಳೆ ಕುಂಟು ನೆಪ ಹೇಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪೊಲೀಸರಿಗೋಸ್ಕರ ಮಾಸ್ಕ್ ಧರಿಸುವುದು, ಖಾಕಿ ಕಾಣಿಸಿದಾಗ ಸಾಮಾಜಿಕ ಅಂತರ ನಿಯಮಗಳನ್ನು ಪಾಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.
ರಾಜ್ಯ ಸರ್ಕಾರದ ನಿಯಮಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ನಾವು ಎಲ್ಲಾ ಕಡೆಗಳಲ್ಲೂ ಕ್ರಮ ವಹಿಸಿದ್ದೇವೆ. ಪ್ರತಿದಿನ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ಸಹಾ ವಸೂಲಿ ಮಾಡಲಾಗುತ್ತಿದೆ. ಹೀಗಾಗಲೇ ಸಾವಿರಾರು ವಾಹನಗಳನ್ನು ವಶಕ್ಕೆ ಪಡೆದಿದ್ದೇವೆ. ಜನರ ಓಡಾಟ ಕಡಿಮೆಯಾಗದಿರುವುದು ನಮ್ಮ ಗಮನಕ್ಕೂ ಬಂದಿದೆ. ಎಲ್ಲರೂ ಒಂದಲ್ಲ ಒಂದು ಕಾರಣ ಹೇಳಿ ಹೊರಗೆ ಬರುತ್ತಾರೆ. ನಾನು ಜನರಲ್ಲಿ ಮನವಿ ಮಾಡುವುದು ಇಷ್ಟೇ. ಅಗತ್ಯ ಕೆಲಸ ಇದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ ಇಲ್ಲ ಮನೆಯಲ್ಲಿ ಸುರಕ್ಷಿತವಾಗಿರಿ ಎಂದು ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಅಭಿಪ್ರಾಯಪಟ್ಟಿದ್ದಾರೆ.
ಸಾವಿನ ಆತಂಕ
ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಜೊತೆಗೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಹೆಚ್ಚು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣ, ಕೊನೆ ಕ್ಷಣದಲ್ಲಿ ಸೋಂಕಿತರು ಆಸ್ಪತ್ರೆಗೆ ಬರುತ್ತಿದ್ದಾರೆ. ಅದರೊಳಗೆ ಸಮಯ ಮೀರಿ ಹೋಗಿ ಸೋಂಕಿತ ಸಾವಿನ ಕದ ತಟ್ಟಿರುತ್ತಾನೆ. ಮತ್ತೊಂದು ಪ್ರಮುಖ ಕಾರಣ ಸೋಂಕಿತರ ಸಾವಿನ ಸಂಖ್ಯೆಯಾಗಲು ಅನಗತ್ಯ ಭಯ ಹಾಗೂ ಶಿಫಾರಸ್ಸು ಮಾಡಿ ಬೆಡ್ ಬ್ಲಾಕ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತರಿಗೆ ಎಲ್ಲರಿಗೂ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇರುವುದಿಲ್ಲ. ಯಾವುದೇ ಗುಣ ಲಕ್ಷಣಗಳು ಇಲ್ಲದವರು ಆರೋಗ್ಯದಲ್ಲಿ ಸಮಸ್ಯೆ ಇಲ್ಲದವರು ಮನೆಯಲ್ಲೇ ಪ್ರತ್ಯೇಕವಾಗಿ ಇರಬಹುದು. ಆದರೆ ಕೆಲವರು ಈ ರೀತಿ ಮಾಡದೆ ಅನಗತ್ಯವಾಗಿ ಭಯಭೀತರಾಗಿ ತಮ್ಮ ಪ್ರಭಾವ ಬಳಸಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದರಿಂದ ನೈಜವಾಗಿ ಅವಶ್ಯಕತೆಯಿರುವ ಕೊರೊನಾ ಸೋಂಕಿತರಿಗೆ ಸೂಕ್ತ ಸಮಯಕ್ಕೆ ಬೆಡ್ ಸಿಗುತ್ತಿಲ್ಲ. ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿದ್ದಾರೆ.
ಜನರು ಕೊನೆ ಕ್ಷಣದವರೆಗೂ ಕಾಯಬಾರದು. ಸೋಂಕಿನ ಗುಣಲಕ್ಷಣಗಳು ಕಂಡುಬಂದ ತಕ್ಷಣ ಹತ್ತಿರದ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. ಆಗ ನಾವು ಸೋಂಕು ಹರಡುವುದು ಮತ್ತು ಸಾವಿನ ಪ್ರಮಾಣವನ್ನು ತಡೆಗಟ್ಟಬಹುದಾಗಿದೆ. ಇನ್ನು ಕೊರೊನಾ ಪಾಸಿಟಿವ್ ಆದ ತಕ್ಷಣ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇಲ್ಲ. ಯಾರು ಭಯಭೀತರಾಗಬಾರದು. ಸೋಂಕಿತರಿಗೆ ಚಿಕಿತ್ಸೆ ನೀಡಲು ಎಲ್ಲಾ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಯಾರು ಹೆದರುವ ಅವಶ್ಯಕತೆ ಇಲ್ಲ. ಸುಮ್ಮನೆ ಆಸ್ಪತ್ರೆಗೆ ದಾಖಲಾಗುವ ಬದಲು ಅವಶ್ಯಕತೆ ಇದ್ದರೆ ಮಾತ್ರ ಆಸ್ಪತ್ರೆಗೆ ದಾಖಲಾಗಿ. ಈ ಮೂಲಕ ಎಲ್ಲರಿಗೂ ಚಿಕಿತ್ಸೆ ಸಿಗಲು ಸಹಕರಿಸಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.
ಸೋಂಕು ತಡೆಗಟ್ಟಲು ಶತಪ್ರಯತ್ನ
ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಡಿಮೆ ಮಾಡಲು ಶತಪ್ರಯತ್ನ ಮುಂದುವರೆದಿದೆ. ಜಿಲ್ಲಾ ಸಚಿವರು, ಜಿಲ್ಲಾಡಳಿತ ವೈದ್ಯರು ಅವಿರತ ಪ್ರಯತ್ನ ನಡೆಸುತ್ತಿದ್ದಾರೆ. ಸರ್ಕಾರ ಜಿಲ್ಲಾಡಳಿತ ಯಾವುದೇ ನೀತಿ ನಿಯಮಗಳನ್ನು ಜಾರಿಗೊಳಿಸಿದರು ಅದು ಯಶಸ್ವಿಯಾಗಬೇಕಾದರೆ ಜನರ ಸಹಕಾರ ಅತ್ಯಗತ್ಯ. ಹೀಗಾಗಿ ಜನರು ಇದನ್ನು ಅರ್ಥಮಾಡಿಕೊಂಡು ಕೊವಿಡ್ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಈ ಮೂಲಕ ಜಗತ್ತಿಗೆ ಕಂಟಕವಾಗಿರುವ ಮಹಾಮಾರಿ ಕೊರೊನಾವನ್ನು ಮಣಿಸಬಹುದಾಗಿದೆ.
ಇದನ್ನೂ ಓದಿ
ನುಡಿದಂತೆ ನಡೆದ ಸಂಸದೆ ಸುಮಲತಾ; ಮಂಡ್ಯಕ್ಕೆ ಬಂತು 2 ಸಾವಿರ ಲೀಟರ್ ಸಾಮರ್ಥ್ಯದ 20 ಜಂಬೋ ಆಕ್ಸಿಜನ್ ಸಿಲಿಂಡರ್
ಸರ್ಕಾರವೇ ಎಲ್ಲವನ್ನೂ ಮಾಡಲು ಆಗದು- ಜನ ಜಾಗೃತರಾಗಿ ಕೊರೊನಾ ನಿಯಮ ಪಾಲಿಸಬೇಕು: ಸಚಿವ ಜಗದೀಶ್ ಶೆಟ್ಟರ್
(number of coronavirus infections in Mysore is increasing and major reason for this)
Published On - 12:47 pm, Thu, 6 May 21