ಮುಷ್ಕರದ ಮಧ್ಯೆಯೂ ಕನ್ನಡಿಗರ ಕೈಹಿಡಿದ ಸಾರಿಗೆ ಸಂಸ್ಥೆ; ವಿಜಯಪುರದಿಂದ ಶ್ರೀಶೈಲಕ್ಕೆ ತೆರಳಿದ 100 ಬಸ್​

|

Updated on: Apr 11, 2021 | 9:07 PM

ಎಷ್ಟೆಂದರೂ ಸರ್ಕಾರಿ ಬಸ್​ಗಳ ಮೇಲೆ ಜನಸಾಮಾನ್ಯರಿಗೆ ‘ನಮ್ಮ ಬಸ್​’ ಎಂಬ ಅಭಿಮಾನವಿದೆ. ಬಸ್​ ಬಂದ್​ನಿಂದ ಪರದಾಟದ ನಡುವೆಯೇ ಬಸ್​ ಬಗ್ಗೆ ವಿಜಯಪುರದಿಂದ ಸಕಾರಾತ್ಮಕ ಸುದ್ದಿಯೊಂದು ಹೊರಬಿದ್ದಿದೆ.

ಮುಷ್ಕರದ ಮಧ್ಯೆಯೂ ಕನ್ನಡಿಗರ ಕೈಹಿಡಿದ ಸಾರಿಗೆ ಸಂಸ್ಥೆ; ವಿಜಯಪುರದಿಂದ ಶ್ರೀಶೈಲಕ್ಕೆ ತೆರಳಿದ 100 ಬಸ್​
ಶ್ರೀಶೈಲಕ್ಕೆ ಹೊರಟು ನಿಂತಿರುವ ಸಾರಿಗೆ ಸಿಬ್ಬಂದಿ
Follow us on

ವಿಜಯಪುರ: ಕರ್ನಾಟಕದಲ್ಲಿ ಸಾರಿಗೆ ಸಿಬ್ಬಂದಿ ಮುಷ್ಕರ 5ನೇ ದಿನದಿಂದ 6ನೇ ಕಾಲಿಡುತ್ತಿದೆ. ಜನಸಾಮಾನ್ಯರು ಬಸ್​ಗಳಿಲ್ಲದೇ ಪ್ರಯಾಣ ಮಾಡಲು ಕಷ್ಟಪಡುತ್ತಿದ್ದಾರೆ. ಖಾಸಗಿ ಬಸ್​, ವಾಹನಗಳು ಸೇವೆ ನೀಡುತ್ತಿವೆಯಾದರೂ ಎಷ್ಟೋ ಗ್ರಾಮಾಂತರ ಪ್ರದೇಶಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಎಷ್ಟೆಂದರೂ ಸರ್ಕಾರಿ ಬಸ್​ಗಳ ಮೇಲೆ ಜನಸಾಮಾನ್ಯರಿಗೆ ‘ನಮ್ಮ ಬಸ್​’ ಎಂಬ ಅಭಿಮಾನವಿದೆ. ಬಸ್​ ಬಂದ್​ನಿಂದ ಪರದಾಟದ ನಡುವೆಯೇ ಬಸ್​ ಬಗ್ಗೆ ವಿಜಯಪುರದಿಂದ ಸಕಾರಾತ್ಮಕ ಸುದ್ದಿಯೊಂದು ಹೊರಬಿದ್ದಿದೆ.

ಆಂಧ್ರ ಪ್ರದೇಶದ ಶ್ರೀಶೈಲದ ಮಲ್ಲಿಕಾರ್ಜುನನ ದರ್ಶನಕ್ಕೆ ತೆರಳುವ ಸಾವಿರಾರು ಭಕ್ತರು ಈ ಭಾಗದಲ್ಲಿದ್ದಾರೆ. ಪ್ರತಿಬಾರಿಯೂ ಹೋಳಿ ಹುಣ್ಣಿಮೆಯ ನಂತರ ಮಲ್ಲಯ್ಯನ ಕಂಬಿ ಹೊತ್ತು ಪಾದಯಾತ್ರೆ ಮೂಲಕ ಶ್ರೀಶೈಲ ಕ್ಷೇತ್ರಕ್ಕೆ ಭಕ್ತರು ತೆರಳುತ್ತಾರೆ. ಈ ಬಾರಿಯೂ ಸಂಪ್ರದಾಯದಂತೆ ಪಾದಯಾತ್ರೆ ಮಾಡುತ್ತಾ ಶ್ರೀಶೈಲ ಕ್ಷೇತ್ರವನ್ನು ಭಕ್ತರು ಸೇರಿದ್ದರು. ಆದರೆ ಸಾರಿಗೆ ಮುಷ್ಕರದ ಅರಿವು ಭಕ್ತರಿಗಿರಲಿಲ್ಲ. ಇದೀಗ ಸಾರಿಗೆ ಮುಷ್ಕರ ಆರಂಭವಾಗಿ 5 ದಿನ ಕಳೆದರೂ ಬಸ್ ಸಂಚಾರ ಆರಂಭವಾಗದಿರುವುದು ಇವರೆಲ್ಲರಿಗೂ ಸಂಕಷ್ಟ ತಂದೊಡ್ಡಿತು. ಯಾವಾಗ ನಾವು ಮನೆ ಸೇರುತ್ತೇವೋ ಎಂದು ಕಂಗಾಲಾಗಿ ಕುಳಿತ ಭಕ್ತರನ್ನು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೈಹಿಡಿದಿದೆ.

ಬಸ್ ಮುಷ್ಕರ ಮಧ್ಯೆಯೇ ವಿಜಯಪುರ ವಿಭಾಗದಿಂದ ನಿತ್ಯ 10 ಬಸ್​ಗಳನ್ನು ಶ್ರೀಶೈಲಕ್ಕೆ ಬಿಡಲಾಗುತ್ತಿತ್ತು. ಇದೇ 10 ಬಸ್​ಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಪ್ರಯಾಣ ಮಾಡಿ ಬಂದಿದ್ದರು. ಆದರೂ ಬಸ್​ಗಳ ಸಂಖ್ಯೆ ಸಾಕಾಗದೇ ಶ್ರೀಶೈಲದಿಂದ ವಾಪಸ್ ಬರಲು ಬಸ್​ಗಳು ಇಲ್ಲದೇ ಪರದಾಡುತ್ತಿರುವ ವಿಷಯ ನಮ್ಮ ವಿಜಯಪುರ Tv9 ಸುದ್ದಿವಾಹಿನಿ ತಂಡದ ಗಮನಕ್ಕೆ ಬಂದಿತ್ತು. ಈ ವಿಚಾರವಾಗಿ ನಮ್ಮ ವಿಜಯಪುರ ಜಿಲ್ಲಾ ಟಿವಿ9 ಬಳಗವು ಈಶಾನ್ಯ ಕರ್ನಾಟಕ ಸಾರಿಗೆಯ ವಿಜಯಪುರ ವಿಭಾಗಾಧಿಕಾರಿ ನಾರಾಯಣಪ್ಪ ಕುರುಬರ್ ಅವರ ಗಮನ ಸೆಳೆದಿತ್ತು.

ಈ ವಿಷಯ ಅರಿತ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗ ಸಾರಿಗೆ ಬಂದ್ ನಡುವೆಯೂ ಕನ್ನಡಿಗರ ಸಹಾಯಕ್ಕೆ ಧಾವಿಸಿದರು. ವಿಜಯಪುರ ವಿಭಾಗಾಧಿಕಾರಿ ನಾರಾಯಣಪ್ಪ ಕುರುಬರ್ ಸಾರಿಗೆ ಸಿಬ್ಬಂದಿ ಮನವೊಲಿಸಿ 100 ಬಸ್​ಗಳನ್ನು ಶ್ರೀಶೈಲಕ್ಕೆ ಕಳುಹಿಸಿದರು. ಒಂದು ಬಸ್​ಗೆ ಮೂವರು ಸಿಬ್ಬಂದಿಗಳ ನಿಯೋಜಿಸಿ ‘ಆಂಧ್ರ ಪ್ರದೇಶದಲ್ಲಿ ಸಿಲುಕಿರುವ ನಮ್ಮ ಕನ್ನಡಿಗರನ್ನು ಮರಳಿ ಕರೆತನ್ನಿ’ ಎಂದು ಕಳಿಸಿದರು. ಮುಷ್ಕರದ ನಡುವೆಯೂ ಕನ್ನಡಿಗರ ನೆರವಿಗೆ ಧಾವಿಸಿದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದ 300 ಸಿಬ್ಬಂದಿ 100 ಬಸ್​ಗಳಲ್ಲಿ ಭಕ್ತರನ್ನು ಕರೆ ತರಲು ಹೊರಟಿದ್ದಾರೆ.

“ಶ್ರೀಶೈಲದಲ್ಲಿ ರಾಜ್ಯದ ಬಸ್​ಗಳು ಇಲ್ಲದ ಕಾರಣ ವಾಪಸ್ ಬರಲು ಕನ್ನಡಿಗರು ಪರದಾಡುವಂತಾಗಿದೆ ಎಂಬ ಮಾಹಿತಿಯನ್ನು‌ ಟಿವಿ9 ತಂಡ ಹಾಗೂ ಭಕ್ತರು ನಮ್ಮ ಗಮನಕ್ಕೆ ತಂದರು. ರಾಜ್ಯದಲ್ಲಿ ಬಸ್ ಸೇವೆ ಸ್ಥಗಿತವಾಗಿದ್ದಾಗಲೂ ನಾವು‌ ಶ್ರೀಶೈಲದಲ್ಲಿ ರಾಜ್ಯದ ಹಾಗೂ‌ ವಿಜಯಪುರ ಜಿಲ್ಲೆಯ ಜನರಿಗೆ ತೊಂದರೆ ಆಗಬಾರದೆಂದು ನಿತ್ಯ ಹತ್ತು ಬಸ್ ಗಳನ್ನು ಬಿಡುತ್ತಿದ್ದೆವು.‌ ಆದರೆ ಇಲ್ಲಿಗೆ ಆಗಬೇಕಿರುವ ಪ್ರಯಾಣಿಕರಿಗೆ ಹೆಚ್ಚಿನ ಬಸ್ ಗಳ ಅವಶ್ಯಕತೆಯನ್ನು ಪರಿಗಣಿಸಿ ನೂರು ಬಸ್ ಗಳನ್ನು ಬಿಟ್ಟಿದ್ದೇವೆ. ಇಲ್ಲಿನ ಸಾರಿಗೆ ಸಿಬ್ಬಂದಿಗಳ ಮನವೊಲಿಸಿ ಒಂದು ಬಸ್ ಗೆ ಮೂರು ಸಿಬ್ಬಂದಿಗಳಂತೆ ಮೂರು ನೂರು ಸಿಂಬ್ಬದಿಗಳನ್ನು ‌ನೂರು ಬಸ್ ಗಳೊಂದಿಗೆ ಶ್ರೀಶೈಲಕ್ಕೆ ಕಳುಹಿಸಲಾಗಿದೆ. ಅಲ್ಲಿಯ ಅವಶ್ಯಕತೆಗಳ ಪ್ರಕಾರ ಬಸ್ ಗಳನ್ನು ಬಿಡಲಾಗುತ್ತದೆ. ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ವಾಪಸ್ ಪ್ರಯಾಣ ಬೆಳೆಸಲಿವೆ” ಎಂದು ವಿಜಯಪುರ ‌ವಿಭಾಗಾಧಿಕಾರಿ ನಾರಾಯಣಪ್ಪ ಕುರುಬರ್ ಪ್ರತಿಕ್ರಿಯೆ ನೀಡಿದರು.

ಪ್ರಯಾಣಿಕರ ಅಗತ್ಯತೆಗೆ ತಕ್ಕಂತೆ ಶ್ರೀಶೈಲದಿಂದ ಪ್ರಯಾಣಿಕರನ್ನು ಈ ಬಸ್​ಗಳು ಕರೆತರಲಿವೆ.  ಹೀಗೆ  ಮುಷ್ಕರದ ನಡುವೆಯೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕನ್ನಡಿಗರ ಕೈಹಿಡಿದಿದೆ.

ಇದನ್ನೂ ಓದಿ: Ugadi 2021: ಯುಗಾದಿ ಹಬ್ಬ, ಸಾರಿಗೆ ಸಿಬ್ಬಂದಿ ಮುಷ್ಕರ: ಸಾರ್ವಜನಿಕರ ನೆರವಿಗೆ ನೈರುತ್ಯ ರೈಲ್ವೆಯಿಂದ 20 ವಿಶೇಷ ರೈಲು

ನಾಳೆಯಿಂದ ಎಂದಿನಂತೆ ಬಸ್​ಗಳು ಸಂಚರಿಸಲಿವೆ: ಕೆಎಸ್‌ಆರ್‌ಟಿಸಿ ಮುಖ್ಯ ವ್ಯವಸ್ಥಾಪಕ ಪ್ರಭಾಕರ್‌ ರೆಡ್ಡಿ ವಿಶ್ವಾಸ

(NWKRTC send 100 buses and 300 workers to Andhra Pradesh Srisaila to save Kannadigas among Karnataka Bus Strike)