
ಬೆಂಗಳೂರು, ಅಕ್ಟೋಬರ್ 20: ಬೆಂಗಳೂರಲ್ಲಿ ಓಲಾ ಕಂಪನಿ ಸಿಬ್ಬಂದಿ ಅನಾಮಾನಸ್ಪದ ಸಾವು ಪ್ರಕರಣ ಸಂಬಂಧ ಓಲಾ (Ola) ಎಲೆಕ್ಟ್ರಿಕ್ ಕಂಪನಿ ಸಿಇಒ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಿಇಒ ಭವೇಶ್, ಹಿರಿಯ ಅಧಿಕಾರಿ ಸುಬ್ರತ್ ಕುಮಾರ್ ದಾಸ್, ಭವೀಶ್ ವಿರುದ್ಧ ಕೇಸ್ ದಾಖಲಾಗಿದೆ. ಕಂಪನಿಯ ಹೋಮೋಲೋಗೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೆ.ಅರವಿಂದ್, ಸೆಪ್ಟೆಂಬರ್ 28ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ಸಂಬಂಧ ಸಹಜವಾಗಿ ಪೊಲೀಸರು ಯುಡಿಆರ್ ದಾಖಲಿಸಿಕೊಂಡಿದ್ದರು. ಆದರೆ ಅರವಿಂದ್ ಸಾವಿನ ಎರಡು ದಿನಗಳ ನಂತರ ಅವರ ಖಾತೆಗೆ ಕಂಪನಿಯಿಂದ 17 ಲಕ್ಷ 46 ಸಾವಿರ ಹಣ ಜಮೆ ಆಗಿತ್ತು. ಈ ಬಗ್ಗೆ ಅನುಮಾನದಿಂದ ಕಂಪನಿಯವರನ್ನು ಕುಟುಂಬ ಪ್ರಶ್ನಿಸಿದ್ದು, ಆ ವೇಳೆ ಕಂಪನಿಯ ಹೆಚ್ಆರ್ ಸೇರಿದಂತೆ ಕೆಲ ಸಿಬ್ಬಂದಿಯಿಂದ ಅಸ್ಪಷ್ಟ ಮಾಹಿತಿ ಸಿಕ್ಕಿತ್ತು. ಹೀಗಾಗಿ ಕುಟುಂಬಸ್ಥರು ಮನೆಯಲ್ಲಿ ಪರಿಶೀಲಿಸಿದಾಗ ಡೆತ್ ನೋಟ್ ಪತ್ತೆಯಾಗಿತ್ತು.
ಆತ್ಮಹತ್ಯೆ ವಿಚಾರವಾಗಿ ಅರವಿಂದ್ ಬರೆದಿದ್ದ 28 ಪುಟಗಳ ಡೆತ್ ನೋಟ್ ನಲ್ಲಿ ಕೆಲಸದ ವಿಚಾರವಾಗಿ ಸುಬ್ರತ್ ಕುಮಾರ್, ಸಿಇಒ ಭವೀಶ್ ಅಗರ್ವಾಲ್ ಇಬ್ಬರೂ ನನಗೆ ತೀವ್ರ ಒತ್ತಡ ನೀಡುತ್ತಿದ್ದಾರೆ. ಭತ್ಯೆ ಮತ್ತು ವೇತನ ನೀಡದೆ ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಉಲ್ಲೇಖಿಸಿದ್ದರು. ಡೆತ್ ನೋಟ್ ಆಧಾರದಲ್ಲಿ ಅರವಿಂದ್ ಕುಟುಂಬಸ್ಥರು ದೂರು ನೀಡಿದ್ದು, ಈ ಬಗ್ಗೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದರ ಅನ್ವಯ ಸುಬ್ರತ್ ಕುಮಾರ್ ದಾಸ್, ಭವೀಶ್ ಅಗರ್ವಾಲ್, ಓಲಾ ಎಲೆಕ್ಟ್ರಿಕ್ ಕಂಪನಿಯನ್ನ ಆರೋಪಿಗಳನ್ನಾಗಿ ಮಾಡಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.