ಚಾಮರಾಜನಗರ, ನ.6: ಬಿಜೆಪಿ ಮಾಜಿ ಶಾಸಕರ ಖರೀದಿಗೆ ಜಗದೀಶ್ ಶೆಟ್ಟರ್ (Jagadish Shettar) ಅಂಗಡಿ ತೆರೆದಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಾಗ್ದಾಳಿ ನಡೆಸಿದ್ದಾರೆ. ಮಾಜಿ ಶಾಸಕ ಚಿಕ್ಕನಗೌಡ ನೇತೃತ್ವದಲ್ಲಿ ಕುಂದಗೋಳ ಹಾಗೂ ಶಿಗ್ಗಾವಿಯ ಬಿಜೆಪಿ ಮುಖಂಡರು ಇಂದು ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಬಗ್ಗೆ ಆಕ್ರೋಶ ಹೊರಹಾಕಿದ ಅವರು, ಜಗದೀಶ್ ಶೆಟ್ಟರ್ ಅವರಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಲೂ ಯೋಗ್ಯತೆಯಿಲ್ಲ. ಇಂತಹವರನ್ನು ಬಿಜೆಪಿ ಮುಖ್ಯಮಂತ್ರಿ, ರಾಜ್ಯಾಧ್ಯಕ್ಷ ಹುದ್ದೆ, ವಿರೋಧ ಪಕ್ಷದ ನಾಯಕ, ಸ್ಪೀಕರ್, ಮಂತ್ರಿ ಸೇರಿದಂತೆ ಎಲ್ಲಾ ಹುದ್ದೆ ಕೊಟ್ಟಿದೆ. ಹೀಗಾಗಿ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಶೆಟ್ಟರ್‌ಗೆ ಇಲ್ಲ. ಶೆಟ್ಟರ್‌ರವರೇ ದಯವಿಟ್ಟು ಕಿರಾಣಿ ಅಂಗಡಿ ತೆಗೆದುಕೊಂಡು ಕುಳಿತುಕೊಳ್ಳಿ ಎಂದರು.
ಬಿಜೆಪಿಯಲ್ಲಿ ವಿ.ಸೋಮಣ್ಣ ಅವರನ್ನು ಕಡೆಗಣನೆ ಮಾಡಲಾಗುತ್ತಿದೆ ಎಂಬ ವಿಚಾರವಾಗಿ ಮಾತನಾಡಿದ ಯತ್ನಾಳ್, ಪಕ್ಷದಲ್ಲಿ ಸೋಮಣ್ಣಗೆ ದೊಡ್ಡ ಭವಿಷ್ಯವಿದೆ, ಅವರ ಕೊಡುಗೆ ದೊಡ್ಡದಿದೆ. ಹೀಗಾಗಿ ಹೈಕಮಾಂಡ್ ಬರ ಅಧ್ಯಯನ ತಂಡದಲ್ಲಿ ಅವರಿಗೆ ಸ್ಥಾನ ಕೊಟ್ಟಿಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಿದರೆ ರಾಜ್ಯಾಧ್ಯಕ್ಷ ಆಗಬಹುದು ಎಂದರು.
ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರೆ ಅಂತಾರೆ. ಕಾಂಗ್ರೆಸ್ ತಮ್ಮಲ್ಲಿರುವ 136 ಶಾಸಕರನ್ನು ಸಮಾಧಾನಪಡಿಸಬೇಕಿದೆ. BJP ಬಿಟ್ಟು ಯಾರಾದರೂ ಕಾಂಗ್ರೆಸ್ಗೆ ಹೋದರೆ ಮಣ್ಣು ತಿನ್ನಬೇಕಾಗುತ್ತದೆ ಎಂದರು.
ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಹಗಲಿರುಳು ದುಡಿಯಬೇಕಿದೆ. ಇಸ್ರೇಲ್ನಲ್ಲಿ ಆಗಿರುವ ಹಮಾಸ್ ಮಾದರಿ ದಾಳಿ ಭಾರತದಲ್ಲಿ ಆಗಬಾರದು. 2024ಕ್ಕೆ ನರೇಂದ್ರ ಮೋದಿ ದೇಶಕ್ಕೆ ಮತ್ತೆ ಅವಶ್ಯಕತೆ ಇದೆ ಎಂದರು.
ಡಿಕೆ ಶಿವಕುಮಾರ್ ಅವರನ್ನು ಯಾರು ಕ್ಯಾರೆ ಅಂತಾಯಿಲ್ಲ, ರಾಜ್ಯಾದ್ಯಕ್ಷ ಡಿಸಿಎಂ ಅಂತಯಿಲ್ಲ. ಅವರು ಸಂಪೂರ್ಣ ವೀಕ್ ಆಗಿದ್ದಾರೆ. ಬಂಡೆ ಹೊಡೆದು ಚೂರಾಗಿದೆ ಎಂದು ಯತ್ನಾಳ್ ವ್ಯಂಗ್ಯವಾಡಿದರು. ಕಾಂಗ್ರೆಸ್ ಶಾಸಕರು ಬಂಡೆನ ಹೊಡೆದು ಚೂರ್ ಚೂರು ಮಾಡಿದ್ದಾರೆ. ಅಲ್ಲಿ ಗ್ರ್ಯಾನೆಟ್ ಇಲ್ಲ. ಬಂಡೆ ಹೊಡೆದು ರಸ್ತೆಗೆ ಹಾಕುವ ಜಲ್ಲಿಯಾಗಿದೆ ಎಂದರು.
ಇದನ್ನೂ ಓದಿ: ಡಿಸೆಂಬರ್ ಬಳಿಕ ಸರ್ಕಾರೀ ನೌಕರರಿಗೆ ಸಂಬಳ ನೀಡಲು ಸಹ ಸರ್ಕಾರದ ಬಳಿ ಹಣವಿರಲ್ಲ: ಬಸನಗೌಡ ಪಾಟೀಲ್ ಯತ್ನಾಳ್
ಆರ್ಡಿ ಪಾಟೀಲ್ ಕಾಂಗ್ರೆಸ್ ಕಾರ್ಯಕರ್ತ. ಅವರು ಬಿಜೆಪಿಯವರು ಅಲ್ಲ. ಇಷ್ಟು ದಿನ ಪಿಎಸ್ಐ ಸ್ಕ್ಯಾಮ್ನಲ್ಲಿ ಪ್ರಿಯಾಂಕ ಖರ್ಗೆ ವಾಗ್ದಾಳಿ ಮಾಡುತ್ತಿದ್ದರು. ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಅಂತ ಹಾರಾಡುತ್ತಿದ್ದರು. ಈಗ ಯಾಕೆ ಮಾತಾಡುತ್ತಿಲ್ಲ? ಹಗರಣದಲ್ಲಿ ಪ್ರಿಯಾಂಕ ಖರ್ಗೆ ಶಾಮೀಲಿದೆ ಅಂತ ಮೇಲ್ನೊಟಕ್ಕೆ ಅನಿಸುತ್ತಿದೆ ಎಂದರು.
ಸಿದ್ದರಾಮಯ್ಯ ಅವರಿಗೆ ಧಮ್ ತಾಖತ್ತಿದರೆ ಪಿಎಸ್ಐ ಹಗರಣವನ್ನು ಸಿಬಿಐಗೆ ವಹಿಸಲಿ. ಪಿಎಸ್ಐ ಹಗರಣದಲ್ಲಿ ಬಿಜೆಪಿಯವರನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಈಗ ಕಾಂಗ್ರೆಸ್ ಸರ್ಕಾರನೇ ಇದೆ. ಸಿಬಿಐಗೆ ಕೊಡಿ. ಬಿಜೆಪಿ 40 ಪರ್ಸೆಂಟ್ ಹಗರಣ ಅಂತ ಹೇಳಿದ್ದೀರಿ. ಧಮ್ ತಾಖತ್ತು ಇದರೆ ಸಿಬಿಐಗೆ ತನಿಖೆಗೆ ವಹಿಸಲಿ ಎಂದು ಸವಾಲು ಹಾಕಿದರು.
ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರರು, ರೈತರು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ. ಅದೇ ಗುತ್ತಿಗೆದಾರರು 40 ಪರ್ಸೆಂಟ್ ಅಲ್ಲಾ 90 ಪರ್ಸೆಂಟ್ ಇದೆ ಅಂತ ಹೇಳುತ್ತಿದ್ದಾರೆ. ಬಿಬಿಎಂಪಿಯಲ್ಲಿ ಒಂದೇ ಗುತ್ತಿಗೆದಾರನಿಗೆ ಸಾವಿರಾರು ಕೋಟಿ ಹಣ ರಿಲೀಸ್ ಆಗಿದೆ. ಅಂತಹ ಗುತ್ತಿಗೆದಾರನ ಬಳಿಯಿಂದ ಬಿಬಿಎಂಪಿ ಇಂಚಾರ್ಜ್ ಎಷ್ಟು ಪರ್ಸೆಂಟ್ ಕಮಿಷನ್ ಪಡೆದಿದ್ದಾರೆ ಎಂದು ಕೇಳಿದರು.
ನಮಗೆ ಪೇ ಸಿಎಂ ಅಂತ ಹೇಳುತ್ತಿದ್ದರು. ಈಗ ಪೇ ಡಿಸಿಎಂ ಆಗಿದೆ ಪೇ ಡಿಸಿಎಂ ಆದರೆನೇ ಗುತ್ತಿಗೆದಾರನಿಗೆ ಹಣ ಬಿಡುಗಡೆ ಆಗುತ್ತದೆ. ಒಂದೆಡೆ ಸಿಎಂ ಪೇಟಿಎಂ ಚಾಲ್ತಿಯಿದೆ, ಈ ಕಡೆ ಡಿಸಿಎಂ ಅವರದ್ದು ಚಾಲು ಇದೆ ಎಂದರು.
ಸರ್ಕಾರಕ್ಕೆ ಪಿಎಸ್ಐ ಹಾಗೂ 40 ಪರ್ಸೆಂಟ್ ಕಮಿಷನ್ ವಿಚಾರವನ್ನ ತನಿಖೆ ಮಾಡಲು ಧೈರ್ಯಯಿಲ್ಲ. ನಮ್ಮ ಮೇಲಿರುವ ಆರೋಪದ ತನಿಖೆ ಆಗಲಿ ಗಂಗಾನದಿಯಲ್ಲಿ ಸ್ನಾನ ಮಾಡಿ ಪವಿತ್ರರಾದಂತೆ ನಾವು ಎಲ್ಲಾ ಆರೋಪಗಳಿಂದ ಮುಕ್ತಿ ಹೊಂದುತ್ತೇವೆ. ಲೋಕಸಭಾ ಚುನಾವಣೆ ಮೊದಲೇ ನಮ್ಮ ಮೇಲೆ ತನಿಖೆ ಆದರೆ ಇನ್ನು ಸೂಕ್ತ. ಧಮ್ ಇದ್ದರೆ ತನಿಖೆ ಮಾಡಿ. ಇಲ್ಲ ನಾಲಿಗೆ ಮುಚ್ಕೊಂಡು ಕೂತ್ಕೊಳ್ಳಿ. ಅದು ಬಿಟ್ಟು ಉಗುರು ಹುಲಿ ಉಗುರು ಚಿರತೆ ಬಂತು ಸುಡುಗಾಡು ಮುಖ್ಯಮಂತ್ರಿ ಬದಲಾವಣೆ ಎಲ್ಲ ಅವರೆ ಹೇಳುತ್ತಿದ್ದಾರೆ ಎಂದರು.
ಸರ್ಕಾರದ ಯಾವ ಯೋಜನೆಗಳು ಸಹ ಯಶಸ್ವಿಯಾಗಿಲ್ಲ. ಅದಕ್ಕೆ ಇದೆಲ್ಲ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. ಏನಾದರು ಮಾಡಿ ಈ ಲೋಕಸಭಾ ಚುನಾವಣೆಯನ್ನ ಅವರು ದಾಟಬೇಕಿದೆ. ಲೋಕಸಭೆ ಬಳಿಕ ಕರ್ನಾಟಕ ಸರ್ಕಾರ ದಿವಾಳಿ ಆಗಲಿದೆ. ಬರಗಾಲ ನಿರ್ವಹಣೆಯನ್ನ ಸರಿಯಾಗಿ ಮಾಡುತ್ತಿಲ್ಲ. ಗೌರವಯುತವಾಗಿ ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟರೆ ಸೂಕ್ತ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ