ದ್ವೇಷ ಭಾಷಣ ವಿಧೇಯಕ ರಿಜೆಕ್ಟ್​ ಮಾಡಲು ಸಾಕಾಗಲಿದೆಯಾ ಆ ಒಂದು ಕಾರಣ! ರಾಜ್ಯಪಾಲರಿಗೆ ಸಲ್ಲಿಕೆಯಾದ ಪತ್ರದಲ್ಲೇನಿದೆ?

ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025ಕ್ಕೆ ಮೇಲ್ಮನೆಯಲ್ಲಿ ಅಂಗೀಕಾರ ದೊರೆತಿದೆ. ಆದರೆ, ವಕೀಲ ಗಿರೀಶ್ ಭಾರದ್ವಾಜ್ ಮತ್ತು ಸಚಿವೆ ಶೋಭಾ ಕರಂದ್ಲಾಜೆ ರಾಜ್ಯಪಾಲರಿಗೆ ಪತ್ರ ಬರೆದು, ವಿಧೇಯಕಕ್ಕೆ ಅಂಕಿತ ಹಾಕದಂತೆ ಮನವಿ ಮಾಡಿದ್ದಾರೆ. ಅಲ್ಲದೆ, ವಿಧೇಯಕವನ್ನು ತಿರಸ್ಕರಿಸಲು ಬಲವಾದ ಕಾರಣ (ಸಂವಿಧಾನದ ಸೆಕ್ಷನ್) ಒಂದನ್ನು ಅವರು ಉಲ್ಲೇಖಿಸಿದ್ದಾರೆ. ಅದ್ಯಾವುದು? ಇಲ್ಲಿದೆ ಮಾಹಿತಿ.

ದ್ವೇಷ ಭಾಷಣ ವಿಧೇಯಕ ರಿಜೆಕ್ಟ್​ ಮಾಡಲು ಸಾಕಾಗಲಿದೆಯಾ ಆ ಒಂದು ಕಾರಣ! ರಾಜ್ಯಪಾಲರಿಗೆ ಸಲ್ಲಿಕೆಯಾದ ಪತ್ರದಲ್ಲೇನಿದೆ?
ಸಾಂದರ್ಭಿಕ ಚಿತ್ರ

Updated on: Dec 19, 2025 | 8:22 PM

ಬೆಳಗಾವಿ, ಡಿಸೆಂಬರ್ 19: ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025ಕ್ಕೆ ವಿಧಾನ ಮಂಡಲದ ಮೇಲ್ಮನೆಯಲ್ಲಿ ಅಂಗೀಕಾರ ದೊರೆತಿದೆ. ಆದರೆ, ಮತ್ತೊಂದೆಡೆ ವಿಧೇಯಕದ ವಿರುದ್ಧದ ವಿರೋಧದ ಧ್ವನಿ ರಾಜ್ಯಪಾಲರ ಅಂಗಳ ತಲುಪಿದೆ. ವಕೀಲ ಗಿರೀಶ್ ಭಾರದ್ವಾಜ್ ಎಂಬವರು ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯಪಾಲರಿಗೆ ಪತ್ರ ಬರೆದಿದ್ದು, ವಿಧೇಯಕಕ್ಕೆ ಅಂಕಿತ ಹಾಕಬಾರದು ಎಂದು ಮನವಿ ಮಾಡಿದ್ದಾರೆ.

ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ, 2025ಕ್ಕೆ ಒಪ್ಪಿಗೆ ನೀಡುವುದನ್ನು ತಡೆಹಿಡಿಯುವಂತೆ ಮತ್ತು ಅದನ್ನು ವಿಧಿ 200 ರ ಅಡಿಯಲ್ಲಿ ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸುವಂತೆ ಒತ್ತಾಯಿಸಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಿಗೆ ವಿವರವಾದ ಪ್ರಾತಿನಿಧ್ಯವನ್ನು ಸಲ್ಲಿಸಿದ್ದೇನೆ ಎಂದು ವಕೀಲ ಗಿರೀಶ್ ಭಾರದ್ವಾಜ್ ಎಕ್ಸ್​ನಲ್ಲಿ ಸಂದೇಶ ಪ್ರಕಟಿಸಿದ್ದಾರೆ. ಅಲ್ಲದೆ, ರಾಜ್ಯಪಾಲರಿಗೆ ಬರೆದ ಪತ್ರದ ಪ್ರತಿಯನ್ನೂ ಲಗತ್ತಿಸಿದ್ದಾರೆ.

ವಿಧೇಯಕದ ವಿಭಾಗ 4 ಮತ್ತು 5 ಕಾರ್ಯಾಂಗದಲ್ಲಿ ಅನಿಯಂತ್ರಿತ ಅಧಿಕಾರವನ್ನು ನೀಡುತ್ತವೆ. ಇದು ವಿಧಿ 19(1)(ಎ), ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಿದ ಕಾನೂನು ಮತ್ತು ಮೂಲ ರಚನೆಯನ್ನು ಉಲ್ಲಂಘಿಸುತ್ತವೆ ಎಂದು ಗಿರೀಶ್ ಪ್ರತಿಪಾದಿಸಿದ್ದಾರೆ.

ವಕೀಲ ಗಿರೀಶ್ ಭಾರದ್ವಾಜ್ ಎಕ್ಸ್ ಸಂದೇಶ


ವಾಕ್ ಸ್ವಾತಂತ್ರ್ಯ ಹಕ್ಕಿನ ಉಲ್ಲಂಘನೆ: ಶೋಭಾ ಕರಂದ್ಲಾಜೆ ಆಕ್ಷೇಪ, ರಾಜ್ಯಪಾಲರಿಗೆ ಪತ್ರ

ಸಂವಿಧಾನದ 200ನೇ ವಿಧಿಯ ಅಡಿಯಲ್ಲಿ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳು (ತಡೆಗಟ್ಟುವಿಕೆ) ಮಸೂದೆ, 2025ಕ್ಕೆ ಒಪ್ಪಿಗೆ ನೀಡುವುದನ್ನು ತಡೆಹಿಡಿಯಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ದ್ವೇಷ ಭಾಷಣವನ್ನು ನಿಗ್ರಹಿಸುವ ಗುರಿಯನ್ನು ಹೊಂದಿರುವ ಈ ಮಸೂದೆಯು ಕಾರ್ಯಾಂಗಕ್ಕೆ ಅತಿಯಾದ ಮತ್ತು ಅಸ್ಪಷ್ಟ ಅಧಿಕಾರವನ್ನು ನೀಡುತ್ತದೆ, 19(1)(a) ವಿಧಿಯ ಅಡಿಯಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಬೆದರಿಕೆ ಹಾಕುತ್ತದೆ ಮತ್ತು ಸ್ಪಷ್ಟ ವ್ಯಾಖ್ಯಾನಗಳನ್ನು ಹೊಂದಿಲ್ಲ ಎಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಶೋಭಾ ಕರಂದ್ಲಾಜೆ ಪ್ರತಿಪಾದಿಸಿದ್ದಾರೆ.

ಏತನ್ಮಧ್ಯೆ, ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025ಕ್ಕೆ ವಿಧಾನ ಮಂಡಲದ ಮೇಲ್ಮನೆಯಲ್ಲಿ ಅಂಗೀಕಾರ ದೊರೆತಿದೆ. ಇದರೊಂದಿಗೆ, ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ಕಾನೂನಾಗಿ ರೂಪುಗೊಳ್ಳುವುದು ಬಹುತೇಕ ಖಚಿತವಾಗಿದೆ. ಇನ್ನು ರಾಜ್ಯಪಾಲರ ಅಂಕಿತ ಬಿದ್ದ ಬೆನ್ನಲ್ಲೇ ಕಾನೂನಾಗಿ ಅಸ್ತಿತ್ವಕ್ಕೆ ಬರಲಿದೆ. ವ್ಯಕ್ತಿ, ವ್ಯಕ್ತಿಗಳ ಸಮೂಹ, ಸಂಸ್ಥೆಗಳ ವಿರುದ್ಧ ಸಮಾಜದಲ್ಲಿ ಅಸಾಮರಸ್ಯ ದ್ವೇಷವನ್ನುಂಟು ಮಾಡುವ ದ್ವೇಷಭಾಷಣದ ಪ್ರಸರಣೆ, ಪ್ರಕಟಣೆ ಅಥವಾ ಪ್ರಚಾರವನ್ನು ಹಾಗೂ ಅಪರಾಧಗಳನ್ನು ತಡೆಗಟ್ಟಲು ಮತ್ತು ಪ್ರತಿಬಂಧಿಸಲು, ಅಂಥ ಅಪರಾಧಗಳಿಗೆ ದಂಡನೆಯನ್ನು ಉಪಬಂಧಿಸಲು ಹಾಗೂ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಕಷ್ಟು ಪರಿಹಾರವನ್ನು ಒದಗಿಸಲು ಶಾಸನವನ್ನು ಅಧಿನಿಯಮಿಸುವುದು ಅವಶ್ಯಕವೆಂದು ಪರಿಗಣಿಸಿ ಈ ವಿಧೇಯಕ ಜಾರಿ ಮಾಡಲಾಗುತ್ತಿದೆ ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಸದನಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಏನಿದು ದ್ವೇಷ ಅಪರಾಧಗಳ ಮಸೂದೆ? ದ್ವೇಷಾಪರಾಧಕ್ಕೆ ಶಿಕ್ಷೆಯೇನು? ಇಲ್ಲಿದೆ ಮಾಹಿತಿ

ಸುಧೀರ್ಘ ಅವಧಿಯ ಚರ್ಚೆಯ ನಂತರ ಪ್ರಸ್ತಾವವನ್ನು ಸಭಾಪತಿಯವರು ಧ್ವನಿಮತಕ್ಕೆ ಹಾಕಿದರು. ಸದಸ್ಯರ ಸಹಮತದೊಂದಿಗೆ ವಿಧೇಯಕಕ್ಕೆ ಅಂಗೀಕಾರ ದೊರೆಯಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:16 pm, Fri, 19 December 25