ಬೀದರ್: ಗಡಿ ಜಿಲ್ಲೆಯ ಕಾಡಲ್ಲಿ ಮುತ್ತುಗದ ಹೂವುಗಳದ್ದೇ ಕಾರು ಬಾರು. ಈ ಹೂವಿನ ಅಂದ ಚಂದಕ್ಕೆ ದಾರಿಹೋಕರು ಫಿದಾ ಆಗಿದ್ದಾರೆ. ಮುತ್ತಗದ ಹೂವು ಬಯಲು ಸೀಮೆ ಬರದ ನಾಡಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಹಿಂದೆಲ್ಲ ಇದೇ ಹೂವಿನಿಂದ ಮಕ್ಕಳು ಬಣ್ಣ ತಯಾರಿಸಿ ಹೋಳಿಯಲ್ಲಿ ಬಣ್ಣ ಎರಚಿಕೊಂಡು ಖುಷಿ ಪಡುತ್ತಿದ್ದರು. ಮುತ್ತುಗದ (ಪಲಾಶ) ಮರದಲ್ಲಿ ಬಿಡುವ ಈ ಹೂವು ಸಾಮಾನ್ಯವಾಗಿ ಪ್ರತಿವರ್ಷ ಶಿವರಾತ್ರಿ ಹಬ್ಬದ ಸಮಯದಲ್ಲಿ ಅರಳುತ್ತದೆ. (Palash – Flame of the forest or Flame tree)
ಮಳೆ ಬೆಳೆಯ ಲೆಕ್ಕಾಚಾರ
ಕೆಲವೊಂದು ವರ್ಷದಲ್ಲಿ ಅತೀ ಹೆಚ್ಚು ಹೂವು ಬಿಟ್ಟರೆ, ಕೆಲವು ವರ್ಷದಲ್ಲಿ ಹೂವಿನ ಫಸಲು ಬಹುತೇಕ ಕಡಿಮೆಯೆಂದೇ ಹೇಳಬಹುದು. ಶಿವನ ಪೂಜೆಗೆ ಬಳಕೆಯಾಗುವ ಮುತ್ತುಗದ ಹೂವನ್ನು ನೋಡಿ ರೈತರು ಮಳೆ, ಬೆಳೆಯ ಲೆಕ್ಕಾಚಾರ ಹಾಕುತ್ತಾರೆ. ಹೂವು ಹೆಚ್ಚಾಗಿ ಬಿಟ್ಟರೆ ಆ ವರ್ಷ ಉತ್ತಮ ಮಳೆ, ಬೆಳೆಯಾಗುತ್ತದೆ ಎಂಬ ನಂಬಿಕೆ ಕೂಡ ಇದೆ.
ಈ ವರ್ಷವಂತೂ ಮುತ್ತುಗದ ಮರಗಳು ಹೂವಿನಿಂದ ತುಂಬಿ ತುಳುಕುತ್ತಿದ್ದು, ಪ್ರಕೃತಿಯ ಸೌಂದರ್ಯವನ್ನು ದುಪ್ಪಟ್ಟು ಮಾಡಿದೆ. ಮುತ್ತುಗದ ಮರ ಶಿವರಾತ್ರಿ ಹಬ್ಬದ ಸಮಯದಲ್ಲಿ ಹೂ ಬಿಡುತ್ತದೆ. ಇದರ ಸೌಂದರ್ಯಕ್ಕೆ ಮಾರು ಹೋಗಿರುವ ಆಸ್ತಿಕರು ಶಿವರಾತ್ರಿ ಹಬ್ಬದಂದು ತಮ್ಮ ನೆಚ್ಚಿನ ದೈವ ಶಿವನಿಗೆ ಮುತ್ತುಗದ ಹೂವನ್ನು ಸಮರ್ಪಿಸಿ ಪೂಜೆ ಸಲ್ಲಿಸುವುದು ಸಾಮಾನ್ಯ.
ಧಾರ್ಮಿಕ ಮಹತ್ವ
ಈ ಮರದ ಚಕ್ಕೆಯನ್ನು ಹೋಮಗಳಲ್ಲೂ ಕೂಡ ಬಳಸುತ್ತಾರೆ. ಹೀಗಾಗಿ ಮುತ್ತುಗದ ಹೂವು ಪ್ರಕೃತಿಯ ಚೆಲುವನ್ನು ಹೆಚ್ಚಿಸಿರುವುದರ ಜೊತೆಗೆ ಧಾರ್ಮಿಕವಾಗಿಯೂ ಮಹತ್ವ ಪಡೆದುಕೊಂಡಿದೆ. ಈ ಮುತ್ತುಗದ ಹೂವಿನಿಂದ ಬಣ್ಣವನ್ನ ತಯಾರಿಸಿ ಮಕ್ಕಳು ಹೋಳಿಯ ಸಮಯದಲ್ಲಿ ಬಣ್ಣವನ್ನು ಎರಚಿಕೊಂಡು ಖುಷಿ ಪಡುತ್ತಾರೆ. ಆದರೆ ಈಗ ಮುತ್ತಗದ ಹೂವಿನ ಬಣ್ಣವನ್ನ ಮಕ್ಕಳು ಬಳಸುವುದನ್ನ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದ್ದು, ಕೆಮಿಕಲ್ ಮಿಶ್ರಿತ ಬಣ್ಣವನ್ನ ಬಳಕೆ ಮಾಡುತ್ತಿದ್ದಾರೆ.
ಬಂಜಾರ ಸಮುದಾಯದವರು ಹೋಳಿ ಹಬ್ಬದಂದು ಹೂವಿನ ಬಣ್ಣವನ್ನ ತಯಾರಿಸಿ ಬಣ್ಣ ಆಡುವುದು ರೂಢಿಯಲ್ಲಿದ್ದು, ಅದಕ್ಕೆ ಬಂಜಾರ ಸಮುದಾಯದವರು ಕೆಸೂಲಾ ಅಂತಾ ಕರೆಯುತ್ತಾರೆ. ಈ ಮುತ್ತಗದ ಹೂವಿನ ಬಗ್ಗೆ ಹೇಳುವುದಾದರೆ ಹೂವುಗಳ ರಚನೆ ಆಕರ್ಷಕ. ಗಿಣಿ ಮೂತಿಯಂತೆಯೂ, ದೋಣಿಯಂತೆಯೂ ಕಾಣುವುದುಂಟು.
ಐದು ಪುಷ್ಪ ಪತ್ರಗಳೂ, ಐದು ದಳಗಳೂ ಇರುತ್ತವೆ. ಕೆಂಪು ಬಣ್ಣದ ಈ ಹೂವು ಜನರನ್ನು ಹೆಚ್ಚು ಆಕರ್ಷಣೆ ಮಾಡುತ್ತದೆ. ಛಾಯಾಗ್ರಾಹಕರಿಗೆ ಅಚ್ಚುಮೆಚ್ಚು. ಹಕ್ಕಿ-ಪಕ್ಷಿಗಳಿಗೂ ಬಲು ಪ್ರೀತಿ. ಮರದ ಬಳಿ ಹೋಗಿ ಕ್ಷಣ ಕಾಲ ನಿಂತಾಗ ಕಿಯೋ ಪಿಯೋ ಎಂಬ ಹಕ್ಕಿಗಳ ಕೂಗೂ, ಜೊಂಯೋ ಎಂಬ ಜೇನು ನೊಣಗಳ ಸದ್ದು ಕಿವಿಗೆ ಬೀಳುತ್ತದೆ.
ಔಷಧಿ ಗುಣವಿದೆ
ರಸ್ತೆ ಬದಿ, ಕಾಡಿನ ನಡುವೆ ಅಡ್ಡಾಡುತ್ತಿದ್ದರೆ ಬೆಂಕಿನ ನಾಲಗೆಗಳಂತೆ ಕಾಣುವ ಹೂ ಹೊತ್ತ ಮರಗಳು ಕಣ್ಣಿಗೆ ಬೀಳುತ್ತವೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಮುತ್ತುಗದ ಹೂವನ್ನು ಅಗ್ನಿದೇವನೆಂದು ಕರೆಯಲಾಗುತ್ತದೆ. ಶಿವರಾತ್ರಿಯಂದು ಇಲ್ಲಿ ಮುತ್ತುಗದ ಹೂವು ವ್ಯಾಪಕವಾಗಿ ಬಳಕೆಯಲ್ಲಿರುವುದು ವಿಶೇಷ.
ದೇಶದ ಹಲವೆಡೆ ಇದರ ಸಣ್ಣ ಕೊಂಬೆಗಳನ್ನು ದರ್ಬೆ, ಅರಳಿ ಇತ್ಯಾದಿಗಳ ಜೊತೆಗೆ ಹೋಮ ಆಚರಣೆಯಲ್ಲಿ ಬಳಸಲಾಗುತ್ತದೆ. ಮುತ್ತುಗದ ಎಲೆಗಳಿಂದ ತಯಾರಿಸಿದ ಊಟದ ತಟ್ಟೆಗಳು, ದೊನ್ನೆಗಳು ಒಂದು ಕಾಲಕ್ಕೆ ಪ್ರಸಿದ್ದ. ಮುತ್ತುಗ ಮರದ ಪ್ರತಿಯೊಂದು ಕಾಂಡ, ಹೂವು, ಅದರ ಎಲೆ ಎಲ್ಲವೂ ಕೂಡಾ ಔಷಧಿ ಗುಣಗಳನ್ನ ಹೊಂದಿದೆ.
ಮದುವೆ, ಸಭೆ, ಸಮಾರಂಭಗಳಲ್ಲಿ ಊಟ ಮುತ್ತುಗದ ಎಲೆಯಲ್ಲೇ ಆಗುತ್ತಿತ್ತು. ಹಿರಿಯರು ಎಲೆಗಳನ್ನು ತಂದು ಹಂಚಿ ಕಡ್ಡಿಯಲ್ಲಿ ಎಲೆಗಳನ್ನು ಜೋಡಿಸಿ ಇಡುತ್ತಿದ್ದರು. ಇದು ಎಷ್ಟು ದಿನವಾದರೂ ಬಳಸಲು ಯೋಗ್ಯವಾಗಿರುತ್ತಿತ್ತು. ಅಷ್ಟೇ ಅಲ್ಲದೆ ಇದು ಆಯುರ್ವೇದ, ಕೃಷಿ ಕಾರ್ಯಗಳಿಗೂ ಬಳಕೆಯಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಭರಾಟೆಯಿಂದಾಗಿ ಮುತ್ತುಗ, ವೃಕ್ಷ ರಾಜ, ದೇವರ ಮರ ಎಂದು ಕರೆಸಿಕೊಳ್ಳುವ ಈ ಮರ ಅಲ್ಲೊಂದು ಇಲ್ಲೊಂದು ಕಂಡು ಬಂದರೂ, ವಿನಾಶದ ಅಂಚಿಗೆ ತಲುಪಿರುವುದು ವಿಷಾದನೀಯ.
ಆರ್ಯುವೇದ ಗ್ರಂಥದಲ್ಲಿ ಮುತ್ತುಗದ ಮರದ ಉಪಯೋಗಗಳನ್ನು ಆನೇಕ ವಿಧದಲ್ಲಿ ಉಲ್ಲೇಖಿಸಲಾಗಿದೆ. ಇದು ಒಗರು, ಖಾರ, ಕಹಿ ಮೂರು ರಸಗಳಿಂದ ಕೂಡಿದೆ. ಮುರಿದಿರುವ ಮೂಳೆ ಕೂಡಿಸಲು ಇದು ಹೆಸರುವಾಸಿ. ಮುತ್ತುಗದ ಬೇರು ಕಣ್ಣಿನ ರೋಗಗಳಿಗೆ ವಿಶೇಷ ಗುಣಕಾರಿ. ಇದರ ಅಂಟು ಲವಣ ಬಾಯಿಯೊಳಗಿನ ರೋಗ, ಕೆಮ್ಮು, ಬೆವರನ್ನು ದೂರ ಮಾಡುತ್ತದೆ. ಇದರ ಬೀಜವು ಹಾವು ಮತ್ತಿತರ ಪ್ರಾಣಿಗಳ ವಿಷವನ್ನೂ ನಿವಾರಣೆ ಮಾಡುತ್ತದೆ.
ಈ ಮರದ ಎಲೆಗಳನ್ನು ಇತ್ತೀಚಿನವರೆಗೂ ಊಟದ ಎಲೆಗಳಿಗಾಗಿ ಉಪಯೋಗಿಸಲಾಗುತ್ತಿತ್ತು. ನಗರ ಪ್ರದೇಶಗಳಲ್ಲಿ ಎಲೆಗಳಿಗೆ ಹೆಚ್ಚಿನ ಬೇಡಿಕೆಯಿತ್ತು. ಸಾಕಷ್ಟು ಮಹಿಳೆಯರು ಜೀವನಾಧಾರಕ್ಕಾಗಿ ಊಟದ ಎಲೆ ತಯಾರಿಸುವ ಕಾಯಕ ಮಾಡುತ್ತಿದ್ದರು. ಪ್ಲಾಸ್ಟಿಕ್, ಸ್ಟೀಲ್, ಅಡಕೆ ತಟ್ಟೆ, ಪೇಪರ್ ಅನ್ವೇಷಣೆಯಿಂದಾಗಿ ಇದರ ಬೇಡಿಕೆ ಕುಸಿಯಿತು.
ಇದನ್ನೂ ಓದಿ
ಮಾವು ಬೆಳೆಗಾರರ ಮೊಗದಲ್ಲಿ ಮಂದಹಾಸ: ಬೀದರ್ ಜಿಲ್ಲೆಯ ಮಾವಿನ ತೋಟದಲ್ಲಿ ಭರಪೂರ ಹೂವು
Rose Day ನಾಳೆಯ ರೋಸ್ ಡೇಗೆ ಗುಲಾಬಿ ಹೂವು ಕೊಟ್ಟರೆ ಸಾಕು ಎಂದುಕೊಳ್ಳಬೇಡಿ.. ಹೇಗೆಲ್ಲ ಪ್ಲ್ಯಾನ್ ಮಾಡಬಹುದು ನೋಡಿ !