ಮಾವು ಬೆಳೆಗಾರರ ಮೊಗದಲ್ಲಿ ಮಂದಹಾಸ: ಬೀದರ್ ಜಿಲ್ಲೆಯ ಮಾವಿನ ತೋಟದಲ್ಲಿ ಭರಪೂರ ಹೂವು
ಬೀದರ್ ಜಿಲ್ಲೆಯಲ್ಲಿ ಮಾವು ಬೆಳೆಗೆ ಉತ್ತಮವಾದ ಮಣ್ಣು ಹಾಗೂ ಉತ್ತಮ ಹವಾಮಾನ ಇರುವುದರಿಂದ ಇಲ್ಲಿ ಮಾವು ಬೆಳೆಯುವುದೇ ಉತ್ತಮ ಎಂದು ಇಲ್ಲಿನ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಬೀದರ್: ಈ ವರ್ಷ ಎದುರಾದ ಅತಿವೃಷ್ಟಿ ಗಡಿ ಜಿಲ್ಲೆ ಬೀದರ್ ರೈತರನ್ನ ಹೈರಾಣು ಮಾಡಿದೆ. ಅಕಾಲಿಕವಾಗಿ ಸುರಿದ ಭಾರಿ ಮಳೆಯಿಂದಾಗಿ ಹೊಲದಲ್ಲಿ ಬಿತ್ತಿದ ಬೆಳೆಗಳೆಲ್ಲ ಕೊಚ್ಚುಕೊಂಡು ಹೋಗಿ ರೈತರ ಬದುಕನ್ನ ಬೀದಿಗೆ ತಳ್ಳಿದೆ. ಆದರೇ ಮಾವು ಬೆಳೆದ ರೈತರ ಮೊಗದಲ್ಲಿ ಮಾತ್ರ ಮಂದಹಾಸ ಮೂಡಿದ್ದು, ಮಾವಿನ ಮರದಲ್ಲಿ ಹೂವು, ಕಾಯಿಗಳು ತುಂಬಿವೆ. ಈ ಬಾರಿ ಅಕ್ಟೋಬರ್- ಸೆಪ್ಟಂಬರ್ ತಿಂಗಳಿನಲ್ಲಿ ವಾಡಿಕೆಗಿಂತಲೂ ಅಧಿಕ ಮಳೆಯಾಗಿದ್ದು, ಮಾವಿನ ಬೆಳೆಗೆ ಅನುಕೂಲವಾಗಿದ್ದರ ಪರಿಣಾಮ ಮಾವಿನ ಗಿಡಗಳು ಉತ್ತಮವಾಗಿ ಹೂ ಬಿಟ್ಟಿವೆ. ಈಗಿರುವ ಹೂವಿನ ಪ್ರಮಾಣದಷ್ಟೇ ಕಾಯಿ ಬಿಡುತ್ತದೆ ಎಂದು ಅಂದಾಜು ಮಾಡಲಾಗಿದ್ದು, ಈ ಬಾರಿ ಮಾವಿನ ಗಿಡಗಳಲ್ಲಿ ಯಥೇಚ್ಛ ಹೂವು ಬಿಟ್ಟಿರುವುದರಿಂದ ಉತ್ತಮ ಫಸಲು ಬರುವ ನಿರೀಕ್ಷೆ ಹುಟ್ಟಿಸಿದೆ.
ಹೌದು ಗಡಿ ಜಿಲ್ಲೆ ಬೀದರ್ ಎಂದರೆ ಸಾಕು ಮೊದಲಿಗೆ ನೆನಪಿಗೆ ಬರುವುದು ಬರ. ಸದಾ ಸಂಕಷ್ಟದಲ್ಲಿ ಬದುಕು ಸಾಗಿಸುವ ಇಲ್ಲಿನ ರೈತರ ಗೋಳು ಹೇಳತೀರದು. ಜೊತೆಗೆ ಆಗಾಗ ಸಾಲದ ಬಾಧೆಗೆ ನೇಣಿಗೆ ಕೊರಳು ಕೋಡುವ ಇಲ್ಲಿನ ರೈತರ ಕಷ್ಟ ಮಾತ್ರ ಜನಪ್ರತಿಧಿನಿಧಿಗಳಿಗೆ ಕೇಳಿಸುವುದೇ ಇಲ್ಲ. ಇನ್ನೂ ಈ ವರ್ಷ ಸುರಿದ ಅಕಾಲಿಕ ಮಳೆಯಿಂದಾಗಿ ಹೊಲದಲ್ಲಿ ಬಿತ್ತಿದ ಬೆಳೆಗಳೆಲ್ಲ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಬಿತ್ತಲಿಕ್ಕೆ ಮಾಡಿದ ಖರ್ಚು ಕೂಡ ರೈತರಿಗೆ ಬಾರದೆ ರೈತ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇಂತಹ ಹತ್ತಾರು ಸಮಸ್ಯೆಯ ನಡುವೆಯೂ ಮಾವು ರೈತರನ್ನ ಕೈ ಹಿಡಿದಿದೆ. ಮಾವಿನ ಮರದಲ್ಲಿ ಹೂವು ಬಿಟ್ಟು ನಳನಳಿಸುತ್ತಿದ್ದು, ಮಾವಿನ ಮರದಲ್ಲೀಗ ಮಾವಿನ ಕಾಯಿಗಳು ಬಂದಿದೆ. ಒಂದು ಗಿಡದಲ್ಲಿ 200 ಕಾಯಿವರೆಗೂ ಮಾವು ಬಂದಿದ್ದು, ಇನ್ನೂ ಹೆಚ್ಚಿನ ರೈತರ ತೋಟದಲ್ಲಿನ ಮಾವಿನ ಮರಗಳಲ್ಲಿ ಸಾವಿರಾರು ಗಟ್ಟಲೇ ಮಾವು ಬಂದಿದ್ದು, ರೈತರು ಖುಷಿಯಾಗಿದ್ದಾರೆ.
ಬರಕ್ಕೆ ಹೆಸರಾದ ಜಿಲ್ಲೆಯಲ್ಲಿ ಅಂದಾಜು 5000ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ತೋಟಗಳಿದ್ದು, ಬಹುತೇಕರು ಲಾಭದ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿ ಮಾವಿನ ಗಿಡಗಳಲ್ಲಿ ಯಥೇಚ್ಛ ಹೂವು ಬಿಟ್ಟಿರುವುದರಿಂದ ಉತ್ತಮ ಫಸಲು ಬರುವ ನಿರೀಕ್ಷೆ ಹುಟ್ಟಿಸಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಜಿಲ್ಲೆಯ ಬಹುತೇಕ ಭಾಗದಲ್ಲಿ ರೈತರು ಒಂದು ಎಕರೆಯಷ್ಟಾದರೂ ಮಾವು ಬೆಳೆ ಬೆಳೆಯಲಾಗುತ್ತಿದ್ದು, ಈ ಬಾರಿ ಉತ್ತಮ ಮಾರುಕಟ್ಟೆ ಮತ್ತು ಬೆಲೆ ಸಿಗುವ ಲಕ್ಷಣಗಳು ಕಂಡುಬಂದಿವೆ.
ರೋಗ ನಿಯಂತ್ರಣ ನಿರ್ವಹಣೆ ಅತಿ ಮುಖ್ಯ ಇನ್ನು ಹೂವು ಬಿಟ್ಟು ಕಾಯಿಯಾಗುವ ಸಮಯದಲ್ಲಿ ಮಾವಿನ ಮರಕ್ಕೆ ಬೂದಿ ರೋಗ ಬರುತ್ತದೆ. ದಿನ ಬಿಟ್ಟು ದಿನ ಗಿಡಗಳಿಗೆ ಔಷಧ ಸಿಂಪಡಿಸಿ ಸಮರ್ಪಕ ನಿರ್ವಹಣೆ ಮಾಡಿದರೆ ಬೂದಿ ರೋಗ ನಿಯಂತ್ರಿಸಿ, ಸಮೃದ್ಧ ಫಸಲು ಪಡೆಯಲು ಸಾಧ್ಯ. ಸಮರ್ಪಕ ನಿರ್ವಹಣೆಯಿಂದ ಅಧಿಕ ಮಾವಿನ ಇಳುವರಿ ಕಾಣಬಹುದು. ಕೆಲವರು ಸರಿಯಾಗಿ ಪೋಷಿಸದ ಕಾರಣ ತೋಟಗಳಲ್ಲಿ 8 ತಿಂಗಳಲ್ಲೇ ಉತ್ತಮ ಹೂವು ಬಿಟ್ಟಿದೆ. ಈ ಗಿಡಗಳಿಗೆ ಕಾಲಕಾಲಕ್ಕೆ ನೀರು, ಗೊಬ್ಬರ ಸೇರಿದಂತೆ ಸರಿಯಾದ ನಿರ್ವಹಣೆ ಮಾಡಿದ್ದರಿಂದ ಈ ವರ್ಷ ಉತ್ತಮ ಫಸಲಿನೊಂದಿಗೆ ಲಾಭ ಗಳಿಸಲು ಸಾಧ್ಯವಾಗಲಿದೆ ಎಂಬುದು ರೈತರ ಲೆಕ್ಕಾಚಾರವಾಗಿದೆ.
ಬಾದಾಮಿ, ಸೇಂದೂರ, ನೀಲಂ, ಮಲ್ಲಿಕಾ, ಮಲಗೋಬ, ತೋತಾಪುರಿ ತಳಿಯ ಮಾವಿನ ತೋಟಗಳಲ್ಲಿ ಉತ್ತಮ ಹೂವಾಗಿದೆ. ಆದರೂ ಹೂ ಪೀಚಾಗುವವರೆಗೂ ಆತಂಕ ಇದ್ದೇ ಇರುತ್ತದೆ. ಕಳೆದ ಬಾರಿ ಉತ್ತಮವಾಗಿದ್ದ ಮಾವು ಫಸಲು ರೋಗ ಬಾಧೆ ಹಾಗೂ ಕೋವಿಡ್ ವೈರಸ್‌ನಿಂದ ಕನಿಷ್ಠ ಬೆಲೆಗೆ ಮಾವು ಮಾರಾಟ ಮಾಡಲಾಯಿತು. ಇದರಿಂದ ಬೇಸತ್ತ ವ್ಯಾಪಾರಸ್ಥರು ಮಾವಿನ ತೋಟದ ಕಡೆಗೆ ಸುಳಿಯಲಿಲ್ಲ. ಇನ್ನು ಮಾವು ಬೆಳೆಗಾರರು ಅನೇಕ ಕಡೆ ಫಸಲಿನ ಮರಗಳನ್ನು ಕಡಿದು ಹಾಕಿದ್ದು, ಕಳೆದ ಬಾರಿಯ ನಷ್ಟ ಊಹಿಸಿದರೆ ಮಾವಿನ ಬೆಳೆಯ ಸಹವಾಸವೇ ಬೇಡ ಎನ್ನುತ್ತಾರೆ ಮಾವು ಬೆಳೆಗಾರ ರೈತರು.
ನೈಸರ್ಗಿಕ ಮಾವಿನ ಮರದಲ್ಲಿಯೂ ಬರ್ಜರಿ ಹೂವು, ಕಾಯಿ! ಕೆಲವು ಹಳ್ಳಿಗಳಲ್ಲಿ ನೈಸರ್ಗಿಕವಾಗಿ ಮಾವಿನ ಮರಗಳು ಬೆಳೆದು ನಿಂತಿವೆ. ಗಿಡಗಳು ಜನವರಿ ಕೊನೆ ಹಾಗೂ ಫೆಬ್ರವರಿ ಆರಂಭದಲ್ಲಿ ಉತ್ತಮ ಹೂ ಬಿಟ್ಟಿದ್ದವೂ ಆದರೀಗ ಆ ಮಾವಿನ ಗಿಡದಲ್ಲಿ ಕಾಯಿ ಅಷ್ಟೇ ಪ್ರಮಾಣದಲ್ಲಿ ಬಂದಿದೆ. ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಅನೇಕ ವರ್ಷಗಳ ಹಿಂದೆ ಹಿರಿಯರು ನೆಟ್ಟು ಬೆಳೆಸಿದ್ದ ಹಾಗೂ ನೀರು ನಿರ್ವಹಣೆ ಬಯಸದ ಮಾವಿನ ಮರಗಳು ಕಾಯಿ ಬಿಟ್ಟು ವಾರ್ಷಿಕ ಲಾಭ ಮಾಡಿಕೊಡಲು ಸಜ್ಜಾಗಿವೆ. ಮಾವಿನ ತೋಟಗಳಲ್ಲಿ ನೀರಿನ ಕೊರತೆ ಇದ್ದಾಗ ನೈಸರ್ಗಿಕ ಮರಗಳು ಕೈ ಹಿಡಿಯುತ್ತಿರುವುದು ವಿಶೇಷವಾಗಿದೆ.
ಜಿಲ್ಲೆಯಲ್ಲಿ ಮಾವು ಬೆಳೆಗೆ ಉತ್ತಮವಾದ ಮಣ್ಣು ಹಾಗೂ ಉತ್ತಮ ಹವಾಮಾನ ಇರುವುದರಿಂದ ಇಲ್ಲಿ ಮಾವು ಬೆಳೆಯುವುದೇ ಉತ್ತಮ ಎಂದು ಇಲ್ಲಿನ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಪ್ರತಿವರ್ಷ ಕಾಡುತ್ತಿದ್ದ ಮ್ಯಾಂಗೋ ಹ್ಯಾಪರ್, ಹಾಗೂ ಬೂದಿರೋಗ ಈ ಬಾರಿ ಕಾಣಿಸಿಕೊಂಡಿಲ್ಲ. ಜಿಲ್ಲೆಯಲ್ಲಿ ಮಾವು ಬೆಳೆ ಬೆಳೆಯಲು ಸೂಕ್ತವಾದ ವಾತಾವರಣ ಅದಕ್ಕೆ ಬೇಕಾದ ಕೆಂಪು ಮಿಶ್ರಿತ ಮಣ್ಣು ಇಲ್ಲಿ ಇರುವುದರಿಂದ ರೈತರು ಮಾವು ಬೆಳೆದು ಬದುಕು ಹಸನಾಗಿಸಿಕೊಳ್ಳಬಹುದೆಂದು ತೋಟಗಾರಿಗೆ ಇಲಾಖೆಯ ಅಧಿಕಾರಿಗಳು ರೈತರಿಗೆ ಸಲಹೇ ನೀಡುತ್ತಿದ್ದಾರೆ.
ಎಕರೆಗೆ 30 ರಿಂದ 40 ಕ್ವಿಂಟಾಲ್ ಇಳುವರಿ ಬರುವ ನಿರೀಕ್ಷೆ ಇದ್ದು, ಸದ್ಯ ಭರಪೂರ ಲಾಭ ತಂದುಕೊಂಡುವ ಇಳುವರಿ ಬಂದರು ಸೂಕ್ತ ಮಾರುಕಟ್ಟೆ ಕೊರತೆಯೂ ಕೂಡ ರೈತರನ್ನ ಕಾಡುತ್ತಿದ್ದು, ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾವಿನ ಮಾರಾಟ ವ್ಯವಸ್ಥೆ ಇಲ್ಲದೆ ಇರುವುದರಿಂದಾಗಿ ದುಬಾರಿ ಸಾಗಣೆಕೆ ವೆಚ್ಚ ಭರಿಸಬೇಕಾದ ಪ್ರಮೇಯ ರೈತರಿಗೆ ಎದುರಾಗಬಹುದು. ಸರ್ಕಾರ ಪ್ರತಿ ವರ್ಷ ತೋಟಗಾರಿಕೆ ಬೆಳೆಗಾರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ಜಾರಿಗೆ ತಂದಿದೆ. ಆದರೆ ಸ್ವಯಂ ಪ್ರೇರಣೆಯಿಂದ ಬರಡು ನೆಲದಲ್ಲಿಯೂ ಬಂಪರ್ ಬೆಳೆ ಬೆಳೆಯುತ್ತಿರುವ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಿ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುವುದು ಈ ಭಾಗದ ರೈತರ ಕೋರಿಕೆಯಾಗಿದೆ.
ಇದನ್ನೂ ಓದಿ: ಮಾವು ಬೆಳೆಗಾರರಲ್ಲಿ ಸಂತಸ: ಕಳೆದ ಬಾರಿಗಿಂತ ಈ ಬಾರಿ ಇಳುವರಿ ಹೆಚ್ಚಾಗುವ ಸಾಧ್ಯತೆ