Coronavirus: ಬೆಂಗಳೂರಿನ ವಸತಿ ಸಮುಚ್ಛಯದಲ್ಲಿ ಪಾರ್ಟಿ ನಡೆದ ನಂತರ 100ಕ್ಕಿಂತಲೂ ಹೆಚ್ಚು ಮಂದಿಗೆ ಕೊವಿಡ್
Covid 19: ಬಿಳೇಕಹಳ್ಳಿ ಪ್ರದೇಶದಲ್ಲಿ ದಿಢೀರನೆ ಕೊವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಫೆಬ್ರವರಿ 11ಕ್ಕೆ 7 ಪ್ರಕರಣಗಳು ವರದಿಯಾಗಿದ್ದು, ಫೆಬ್ರವರಿ 12ಕ್ಕೆ 17 ಪ್ರಕರಣಗಳು ವರದಿಯಾಗಿವೆ.
ಬೆಂಗಳೂರು: ದಕ್ಷಿಣ ಬೆಂಗಳೂರಿನ ಬಿಳೇಕಹಳ್ಳಿ ಪ್ರದೇಶದಲ್ಲಿರುವ ಎಸ್ಎನ್ಎನ್ ರಾಜ್ ಲೇಕ್ ವ್ಯೂ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿರುವ 103 ಮಂದಿಗೆ ಕೊರೊನಾವೈರಸ್ ಸೋಂಕು ದೃಢಪಟ್ಟಿದೆ. ಈ ವಸತಿ ಸಮುಚ್ಛಯದಲ್ಲಿ ವಿವಾಹ ವಾರ್ಷಿಕೋತ್ಸವದ ಎರಡು ಪಾರ್ಟಿ ನಡೆದಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಇಲ್ಲಿನ ನಿವಾಸಿಗಳನ್ನು ಕೊವಿಡ್ ಪರೀಕ್ಷೆಗೊಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿತ್ತು ಎಂದು ಜಲ್ಲಾಡಳಿತದ ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರದೇಶದಲ್ಲಿ ದಿಢೀರನೆ ಕೊವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಫೆಬ್ರವರಿ 11ಕ್ಕೆ 7 ಪ್ರಕರಣಗಳು ವರದಿಯಾಗಿದ್ದು, ಫೆಬ್ರವರಿ 12ಕ್ಕೆ 17 ಪ್ರಕರಣಗಳು ವರದಿಯಾಗಿವೆ. ಫೆಬ್ರವರಿ 13ಕ್ಕೆ ಬಿಬಿಎಂಪಿ ಅಧಿಕಾರಿಗಳು ಆ ವಸತಿ ಸಮುಚ್ಛಯಕ್ಕೆ ಹೋಗಿ 339 ಮನೆಗಳಲ್ಲಿ ಸೋಂಕು ಪರೀಕ್ಷೆ ನಡೆಸಿದ್ದಾರೆ. ಒಟ್ಟು 1,190 ಮಂದಿಯನ್ನು ಪರೀಕ್ಷೆಗೊಳಪಡಿಸಿದ್ದು 103 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಫೆಬ್ರವರಿ 6 ಮತ್ತು 7ನೇ ತಾರೀಖಿಗೆ ಇಲ್ಲಿ ಎರಡು ಪಾರ್ಟಿ ನಡೆದಿತ್ತು ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಸೋಂಕು ದೃಢಪಟ್ಟವರಲ್ಲಿ ಹೆಚ್ಚಿನವರು 50ವರ್ಷದ ಕೆಳಗಿನವರಾಗಿದ್ದು ಯಾವುದೇ ರೋಗ ಲಕ್ಷಣಗಳಿರಲಿಲ್ಲ ಎಂದು ವೈದ್ಯಕೀಯ ಅಧಿಕಾರಿ ಡಾ.ಕೃಷ್ಣಪ್ಪ ಹೇಳಿದ್ದಾರೆ. ಆ ಅಪಾರ್ಟ್ ಮೆಂಟ್ ಸಂಪೂರ್ಣವಾಗಿ ಸ್ಯಾನಿಟೈಜ್ ಮಾಡಿದ್ದು ಮುಂದಿನ ಸೂಚನೆ ಲಭಿಸುವವರೆಗೆ ನಿವಾಸಿಗಳು ಮನೆಯಲ್ಲಿಯೇ ಐಸೋಲೇಷನ್ ಆಗಿರುವಂತೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಜಂಟಿ ಆಯುಕ್ತ ಬೊಮ್ಮನಹಳ್ಳಿ ರಾಮಕೃಷ್ಣ ಹೇಳಿದ್ದಾರೆ.
ಕಳೆದ ವರ್ಷ ದಿನಕ್ಕೆ ಒಂದು ಲಕ್ಷ ಪ್ರಕರಣ ದಾಖಲಾಗುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿದಿನ 10,000 ಕ್ಕಿಂತಲೂ ಕಡಿಮೆ ಪ್ರಕರಣಗಳು ವರದಿಯಾಗುತ್ತಿವೆ. ಕೇರಳದಲ್ಲಿ ಅತೀ ಹೆಚ್ಚು ಸೋಂಕಿತರಿದ್ದು, ಮಹಾರಾಷ್ಟ್ರ ಎರಡನೇ ಸ್ಥಾನ, ಕರ್ನಾಟಕ ಮೂರನೇ ಸ್ಥಾನದಲ್ಲಿದೆ.
Published On - 7:56 pm, Tue, 16 February 21