ಚಿತ್ರದುರ್ಗ: ಪಟ್ಟಣದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸುಸಜ್ಜಿತ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ ಆಗಿದೆ. ಕ್ಷೇತ್ರದ ಶಾಸಕರೇ ಸಾರಿಗೆ ನಿಗಮದ ಅಧ್ಯಕ್ಷರೂ ಆಗಿದ್ದಾರೆ. ಆದರೆ ಬಸ್ ನಿಲ್ದಾಣ ನಿರ್ಮಾಣವಾಗಿ ವರ್ಷವೇ ಕಳೆದರೂ ಬಸ್ ನಿಲ್ದಾಣ ಮಾತ್ರ ಸಾರ್ವಜನಿಕ ಸೇವೆಗೆ ಲಭ್ಯವಾಗದೆ ಪಾಳು ಬಿದ್ದಿದೆ. ಈ ಬಗ್ಗೆ ತಲೆಕಡೆಸಿಕೊಳ್ಳುವವರು ಗತಿಯಿಲ್ಲದಂತಾಗಿದೆ.
ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಅನೇಕ ವರ್ಷಗಳಿಂದ ಈ ಪಟ್ಟಣದಲ್ಲಿ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ ಆಗಬೇಕೆಂಬ ಕನಸು ನನಸಾಗಿದೆ. ಆದರೆ 10 ಕೋಟಿ ರೂ. ವೆಚ್ಚದಲ್ಲಿ ಸಾರಿಗೆ ಬಸ್ ನಿಲ್ದಾಣ ನಿರ್ಮಾಣವಾಗಿ ವರ್ಷವೇ ಕಳೆದರೂ ಉದ್ಘಾಟನೆ ಭಾಗ್ಯ ಮಾತ್ರ ಕಂಡಿಲ್ಲ. ಹೊಳಲ್ಕೆರೆಯ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಅವರೇ ಸದ್ಯ ಸಾರಿಗೆ ನಿಗಮದ ಅಧ್ಯಕ್ಷರಾಗಿದ್ದರೂ ಬಸ್ ನಿಲ್ದಾಣ ಸಾರ್ವಜನಿಕ ಸೇವೆಗೆ ಲಭ್ಯವಾಗದೇ ಪಾಳು ಬಿದ್ದಿದೆ. ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಿನ ಸ್ವ ಪ್ರತಿಷ್ಠೆಯಿಂದಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಬಸ್ ನಿಲ್ದಾಣ ಸೇವೆಗೆ ಸಿಗದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಹೊಳಲ್ಕೆರೆ ಬಿಜೆಪಿ ಶಾಸಕ, ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಅವರನ್ನು ಕೇಳಿದರೆ 10ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಿದೆ. ಪುರಸಭೆಗೆ ಸೇರಿದ ಜಾಗವನ್ನು ಬಸ್ ನಿಲ್ದಾಣಕ್ಕಾಗಿ ಸಾರಿಗೆ ಇಲಾಖೆಗೆ ನೀಡಲಾಗಿದೆ. ಆದರೆ ಕೆಲ ಕಾಂಗ್ರೆಸ್ ಮುಖಂಡರು ಈ ಬಗ್ಗೆ ಹೈಕೋರ್ಟ್ನಲ್ಲಿ ಪಿಟಿಷನ್ ಹಾಕಿದ್ದರು. ಹೀಗಾಗಿ ಬಸ್ ನಿಲ್ದಾಣ ಉದ್ಘಾಟನೆ ವಿಳಂಬವಾಗಿದೆ. ಇತ್ತೀಚೆಗಷ್ಟೇ ಅವರು ಹಾಕಿದ ಕೇಸು ವಜಾ ಆಗಿದ್ದು, ಶೀಘ್ರದಲ್ಲೇ ಸಾರಿಗೆ ಮಂತ್ರಿ ಲಕ್ಷ್ಮಣ್ ಸವದಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲುರವರನ್ನು ಕರೆಸಿ ಬಸ್ ನಿಲ್ದಾಣ ಸೇರಿ ಇತರೆ ಕಾಮಗಾರಿಗಳ ಉದ್ಘಾಟನೆ ಮಾಡುತ್ತೇವೆ ಎಂದು ತಿಳಿಸುತ್ತಿದ್ದಾರೆ.
ಕೋಟೆನಾಡು ಚಿತ್ರದುರ್ಗದಲ್ಲಿ ರಾಜಕೀಯ ಜಿದ್ದಾಜಿದ್ದಿನಿಂದಾಗಿ ಸಾರಿಗೆ ನಿಗಮದ ಅಧ್ಯಕ್ಷರ ತವರು ಕ್ಷೇತ್ರ ಹೊಳಲ್ಕೆರೆಯಲ್ಲೇ ಬಸ್ ನಿಲ್ದಾಣ ಉದ್ಘಾಟನೆ ಕಾರ್ಯ ನೆನೆಗುದಿಗೆ ಬಿದ್ದಿದೆ. ಹೀಗಾಗಿ ಹೊಳಲ್ಕೆರೆಯ ಜನ ನಿತ್ಯ ಹಿಡಿಶಾಪ ಹಾಕುವಂತಾಗಿದೆ.
ಇದನ್ನು ಓದಿ
ಹಾವೇರಿ ಜಿಲ್ಲೆಯಲ್ಲಿ ಪಾಳುಬಿದ್ದ ಎರಡು ಗರಡಿಮನೆಗಳು; ಕಸರತ್ತಿಗೆ ಬಳಸುತ್ತಿದ್ದ ಪರಿಕರಗಳೆಲ್ಲ ಮಾಯ