ಬೆಂಗಳೂರು: ಖಾಸಗಿ ಶಾಲೆಗಳ ಫೀಸ್ ಟಾರ್ಚರ್ ವಿರೋಧಿಸಿ ಇಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಖಾಸಗಿ ಶಾಲೆಗಳಿಂದ ಶುಲ್ಕ ಪಾವತಿಗೆ ಕಿರುಕುಳ ಹೆಚ್ಚಾಗಿದೆ. ನಮ್ಮ ಬಳಿಯಿದ್ದ ಚಿನ್ನವನ್ನೆಲ್ಲಾ ಮಾರಿ ಶುಲ್ಕ ಪಾವತಿಸಿದ್ದೇನೆಂದು ಇದೇ ವೇಳೆ ಪೋಷಕರೊಬ್ಬರು ಕಿಡಿಕಾರಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿಂದೆ ಕೂಡ ಫ್ರೀಡಂಪಾರ್ಕ್ನಲ್ಲಿ ಪೋಷಕರು ಧರಣಿ ನಡೆಸಿದ್ದರು. ಆ ವೇಳೆ ಪೋಷಕರ ಮನವಿಗೆ ಶಿಕ್ಷಣ ಇಲಾಖೆ ಸ್ಪಂದಿಸಿರಲಿಲ್ಲ. ಹೀಗಾಗಿ ರೊಚ್ಚಿಗೆದ್ದ ಪೋಷಕರು ಇಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಪ್ರತಿಭಟನೆ ನಡೆಸಲಿದ್ದಾರೆ. ಜನವರಿ 1ರಿಂದ ಶಾಲೆ ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದ್ದು ಇದೇ ಬೆನ್ನಲ್ಲೇ ಪೋಷಕರಿಂದ ಪ್ರತಿಭಟನೆ ಕಿಚ್ಚು ಹೊತ್ತಿಕೊಂಡಿದೆ.
ಖಾಸಗಿ ಶಾಲೆಗಳಿಂದ ಪೂರ್ಣ ಶುಲ್ಕ ಪಾವತಿಗೆ ಒತ್ತಡ
ಇನ್ನು ಖಾಸಗಿ ಶಾಲೆಗಳು ಪೂರ್ಣ ಶುಲ್ಕ ಪಾವತಿಗೆ ಒತ್ತಡ ಹಾಕ್ತಿವೆ. ನಮ್ಮ ಬಳಿ ಮೊದಲ ಕಂತಿನ ಶುಲ್ಕ ಪಾವತಿಗೇ ಹಣವಿಲ್ಲ. ಇನ್ನು ಪೂರ್ಣ ಶುಲ್ಕ ಪಾವತಿಸುವುದು ಹೇಗೆಂದು ಪ್ರತಿಭಟನಾನಿರತ ಪೋಷಕರ ಆಕ್ರೋಶ ಹೊರಹಾಕಿದ್ದಾರೆ.
ಬಂಗಾರ ಮಾರಾಟ ಮಾಡಿ ಫೀಸ್ ಕಟ್ಟಿದ ಪೋಷಕರು!
ಖಾಸಗಿ ಶಾಲೆ ಫೀಸ್ ಟಾರ್ಚರ್ಗೆ ಪೋಷಕರು ಕಂಗಾಲಾಗಿದ್ದಾರೆ. ಕೊರೊನಾ ಬಂದಾಗಿನಿಂದ ನನಗೆ ಕೆಲಸ ಇಲ್ಲ. ಕೆಲಸದಿಂದ ತೆಗೆದಿದ್ದಾರೆ, ಮರಳಿ ಕೆಲಸಕ್ಕೆ ಸೇರಿಸಿಕೊಂಡಿಲ್ಲ. ಆದ್ರೆ, ಖಾಸಗಿ ಶಾಲೆಯವರು ಫುಲ್ ಫೀಸ್ ಕಟ್ಟಿ ಅಂತಿದ್ದಾರೆ. ಇದ್ರಿಂದಾಗಿ, ನಾನು ಮಕ್ಕಳನ್ನ ಓದಿಸೋಕೆ ಕಷ್ಟ ಪಡುವಂತಾಗಿದೆ. ಮೊದಲನೇ ಕಂತಿನ ಫೀಸ್ ಕಟ್ಟೋಕೆ ಒಡವೆ ಮಾರಿದ್ದೇನೆ. ಈಗ ಮತ್ತೆ ಎರಡನೇ ಕಂತು ಕಟ್ಟಿ ಅಂತಿದ್ದಾರೆ. ಮಕ್ಕಳ ಫೀಸ್ ಕಟ್ಟೋಕೆ ಆಸ್ತಿ ಮಾರುವ ಸ್ಥಿತಿ ಉಂಟಾಗಿದೆ ಎಂದು ಖಾಸಗಿ ಶಾಲೆ ವಿರುದ್ಧ ಮಹಿಳೆಯೊಬ್ಬರು ಹರಿಹಾಯ್ದಿದ್ದಾರೆ.
ರಾಜ್ಯ ಸರ್ಕಾರದ ಎಡಬಿಡಂಗಿ ನಿಲುವಿನಿಂದ ಗೊಂದಲ ಸೃಷ್ಟಿ:
ಖಾಸಗಿ ಶಾಲೆಗಳ ಫೀಸ್ ಟಾರ್ಚರ್ ವಿರೋಧಿಸಿ ನಡೆಯುತ್ತಿರುವ ಪೋಷಕರ ಪ್ರತಿಭಟನೆ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಸರ್ಕಾರದ ನಿಲುವಿನಿಂದ ವಿದ್ಯಾರ್ಥಿಗಳು, ಪೋಷಕರು, ಶಾಲಾ ಆಡಳಿತ ಮಂಡಳಿ ಎಲ್ಲರೂ ಬೀದಿಗಿಳಿಯುವಂತಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.
ರಾಜ್ಯ ಸರ್ಕಾರ ತಕ್ಷಣ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರ ಬಿಕ್ಕಟ್ಟು ಬಗೆಹರಿಸಲು ಮುಂದಾಗಬೇಕು. ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿನ ಈಗಿನ ಬಿಕ್ಕಟ್ಟಿಗೆ ಸಿಎಂ BSY, ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ನೇರ ಹೊಣೆಗಾರರಾಗಿದ್ದಾರೆ. ಖಾಸಗಿ ಶಾಲೆಗಳ ಆಡಳಿತ ಮಂಡಳಿ, ಪೋಷಕರ ಮಧ್ಯೆ ಜಗಳ ತಂದಿಟ್ಟು ವೈಫಲ್ಯ ಮುಚ್ಚಿಕೊಳ್ಳುವ ಯತ್ನ ಮಾಡ್ತಿದ್ದಾರೆ. ಖಾಸಗಿ ಶಾಲೆಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣವೇ ಇಲ್ಲ. ತರಗತಿ ನಡೆಯದೇ ಇದ್ದರೂ ನಿಗದಿತ ಪೂರ್ಣ ಶುಲ್ಕ ಪಾವತಿಸುವಂತೆ ಒತ್ತಡ ಹೇರುತ್ತಿದ್ದಾರೆ.
ಖಾಸಗಿ ಶಾಲೆಗಳು ಆನ್‌ಲೈನ್ ತರಗತಿ ಬಂದ್ ಮಾಡಿವೆ. ಈ ರೀತಿ ಪೋಷಕರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿವೆ. ಆದರೆ ಶಿಕ್ಷಣ ಸಚಿವರು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ. ಖಾಸಗಿ ಶಾಲೆಗಳು ಸರ್ಕಾರದ ಪೊಳ್ಳು ಬೆದರಿಕೆಗೆ ಜಗ್ಗುತ್ತಿಲ್ಲ. ಇವರ ಜೊತೆ ಸರ್ಕಾರ ಶಾಮೀಲಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಖಾಸಗಿ ಶಾಲೆಗಳಿಂದ ಶುಲ್ಕ ಟಾರ್ಚರ್: ಸಿಡಿದೆದ್ದ ಪೋಷಕರಿಂದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಭಾನುವಾರ ಪ್ರತಿಭಟನೆ
Published On - 11:37 am, Sun, 20 December 20