ರಾಮ ಜನ್ಮಭೂಮಿ ಟ್ರಸ್ಟ್ ಬೇನಾಮಿ ಸಂಸ್ಥೆ ಅಲ್ಲ; ವಿಹೆಚ್​ಪಿ ಪುಂಡುಪೋಕರಿಗಳ ಸಂಸ್ಥೆಯಲ್ಲ: ಪೇಜಾವರ ಶ್ರೀ

| Updated By: ganapathi bhat

Updated on: Apr 06, 2022 | 8:04 PM

ದೇಣಿಗೆ ಸಂಗ್ರಹ ವಿಚಾರದಲ್ಲಿ ಖಂಡಿತವಾಗಿಯೂ ಪಾರದರ್ಶಕತೆ ಬೇಕು. ಆದರೆ, ಲೆಕ್ಕ ಪರಿಶೋಧನೆ ಬಳಿಕ ಪುರಾವೆ ಕೊಡಲು ಸಾಧ್ಯವಿದೆ ಎಂದು ಪೇಜಾವರಶ್ರೀಗಳು ಹೇಳಿದ್ದಾರೆ.

ರಾಮ ಜನ್ಮಭೂಮಿ ಟ್ರಸ್ಟ್ ಬೇನಾಮಿ ಸಂಸ್ಥೆ ಅಲ್ಲ; ವಿಹೆಚ್​ಪಿ ಪುಂಡುಪೋಕರಿಗಳ ಸಂಸ್ಥೆಯಲ್ಲ: ಪೇಜಾವರ ಶ್ರೀ
ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀ
Follow us on

ಉಡುಪಿ: ರಾಮ ಜನ್ಮಭೂಮಿ ಟ್ರಸ್ಟ್ ಬೇನಾಮಿ ಸಂಸ್ಥೆ ಅಲ್ಲ. ಅದೊಂದು ನೋಂದಣಿಯಾಗಿರುವ ಸಂಸ್ಥೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನಶ್ರೀಗಳು ತಿಳಿಸಿದ್ದಾರೆ. ನೋಂದಣಿಗೆ ಅದರದ್ದೇ ಆದ ನೀತಿ ನಿಯಮಾವಳಿಗಳು ಇದೆ. ದೇಣಿಗೆ ಸಂಗ್ರಹ ಮಾಡಲು ಅದರದ್ದೇ ಆದ ಕಾನೂನು ಇದೆ. ನಮಗೆ ಸಂವಿಧಾನವೇ ಅಧಿಕಾರ ಕೊಟ್ಟಿದೆ. ಸಂಶಯಗಳನ್ನು ಮುಂದೆ ಇಟ್ಟರೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿ ಮುಚ್ಚು ಮರೆಯ ಯಾವುದೇ ವಿಷಯಗಳು ನಡೆಯುದಿಲ್ಲ ಎಂದು ಶ್ರೀಗಳು ಮಾಹಿತಿ ನೀಡಿದ್ದಾರೆ.

ದೇಣಿಗೆ ಸಂಗ್ರಹ ವಿಚಾರದಲ್ಲಿ ಖಂಡಿತವಾಗಿಯೂ ಪಾರದರ್ಶಕತೆ ಬೇಕು. ಆದರೆ, ಲೆಕ್ಕ ಪರಿಶೋಧನೆ ಬಳಿಕ ಪುರಾವೆ ಕೊಡಲು ಸಾಧ್ಯವಿದೆ. ಈಗ ವಿಹೆಚ್​ಪಿ​ ಕಾರ್ಯಕರ್ತರು ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ. ವಿಶ್ವ ಹಿಂದೂ ಪರಿಷತ್​ನ ಕಾರ್ಯರ್ತರಿಗೆ ದೇಣಿಗೆ ಸಂಗ್ರಹ ದ ಜವಾಬ್ದಾರಿ ನೀಡಲಾಗಿದೆ. ಹಿರಿಯ, ಮುಂದಾಳುಗಳ ನೇತೃತ್ವದಲ್ಲಿ ನಿಧಿ ಸಂಗ್ರಹಿಸುತ್ತಾರೆ ಎಂದು ಶ್ರೀಗಳು ತಿಳಿಸಿದ್ದಾರೆ.

ಸಂಶಯವಿದೆ ಎಂದು ಪ್ರಶ್ನೆ ಮಾಡಿದರೆ ಉತ್ತರ ಸಿಗುತ್ತದೆ. ಹಾಗಾಗಿ ಯಾವುದೆ ಸಂಶಯಗಳನ್ನು ಇಟ್ಟು ಆರೋಪ ಮಾಡುವುದು ಸೂಕ್ತವಲ್ಲ ಎಂದು ಉಡುಪಿಯಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನಶ್ರೀ ಪ್ರತಿಕ್ರಿಯೆ ನೀಡಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ದೇಣಿಗೆ ಸಂಗ್ರಹಿಸಲಾಗಿದ್ದು, ದೇಣಿಗೆ ನೀಡದವರನ್ನು ಆರ್​ಎಸ್​ಎಸ್​ ಪ್ರತ್ಯೇಕವಾಗಿ ಗುರುತಿಸುತ್ತಿದೆ (Marking). ದೇಣಿಗೆ ನೀಡದವರ ಮನೆಗೆ ಪ್ರತ್ಯೇಕವಾಗಿ ಗುರುತು ಹಾಕುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ ಕಿಡಿಕಾರಿದ್ದರು.

ಜರ್ಮನಿಯಲ್ಲಿ ನಾಜಿಗಳು ಅನುಸರಿಸಿದ ನಡೆಯನ್ನೇ ಆರ್​ಎಸ್​ಎಸ್​ ಅನುಸರಿಸುತ್ತಿದೆ.  ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರಕ್ಕೆ ದೇಣಿಗೆ ನೀಡಿದ ಮತ್ತು ನೀಡದವರ ಮನೆಗಳನ್ನು ಪ್ರತ್ಯೇಕವಾಗಿ ಗುರುತು ಹಾಕುತ್ತಿದೆ ಎಂದು ಆರೋಪಿಸಿದ್ದರು. ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಜವಾಬ್ದಾರಿ ಟ್ವೀಟ್ ಮಾಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್​ನ (VHP) ಸಂಘಟನಾ ಕಾರ್ಯದರ್ಶಿ ಬಸವರಾಜ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ರಾಮಮಂದಿರ ನಿಧಿ ಸಂಗ್ರಹ ಅಭಿಯಾನಕ್ಕೆ ಟೀಕೆ: ಎಚ್​.ಡಿ.ಕುಮಾರಸ್ವಾಮಿ ಟ್ವೀಟ್​ಗೆ ವಿಎಚ್​ಪಿ ಖಂಡನೆ

Published On - 5:42 pm, Wed, 17 February 21