Myself; ನಾನೆಂಬ ಪರಿಮಳದ ಹಾದಿಯಲಿ: ನದಿಗೊಂದು ಪದವ ತೊಡಿಸುತ್ತ…

Myself; ನಾನೆಂಬ ಪರಿಮಳದ ಹಾದಿಯಲಿ: ನದಿಗೊಂದು ಪದವ ತೊಡಿಸುತ್ತ...
ಡಾ. ಎಂ. ಆರ್. ಮಂದಾರವಲ್ಲಿ

Mother: ‘ನನಗಿನ್ನೂ ಐದಾಗಿರಲಿಲ್ಲ. ಮನೆ ತುಂಬ ಜನ, ಎಲ್ಲರೂ ಅಳುತ್ತಿದ್ದಾರೆ. ಅಪ್ಪ, ಅಜ್ಜಿ ಎಲ್ಲ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ನಾನೂ ಅಳುತ್ತಿದ್ದೆ. ಗೆಳತಿಯೊಬ್ಬಳು ಬಂದು, ‘ಯಾಕೇ ಅಳ್ತಿದ್ದೀಯ’ ಅಂತ ಕೇಳಿದಳು. ‘ಅಮ್ಮ ನನಗೆ ಹಲ್ಲುಪುಡಿ ಕೊಡದೇ ಮಲಗಿಬಿಟ್ಟಿದ್ದಾರೆ’ ಅಂದೆ. ‘ಹೋಗಿ ಕೇಳು, ಕೊಟ್ಟು ಆಮೇಲೆ ಮಲಕ್ಕೊ ಅನ್ನು’ ಅಂದಳು. ನಾನು ಅಮ್ಮನ ಸಮೀಪ ಕುಳಿತು ಕೇಳೇಕೇಳಿದೆ, ‘ಅಮ್ಮ ಹಲ್ಲುಪುಡಿ ಕೊಟ್ಟೇ ಇಲ್ಲ ನೋಡು, ಕೊಡಮ್ಮ’ ಅಂತ.  ಕೆಲವು ದಿನಗಳ ನಂತರ ಗೆಳತಿಯೊಬ್ಬಳು ಶಾಲೆಯಲ್ಲಿ ‘ನಿಮ್ಮಮ್ಮ ತೀರಿಕೊಂಡರಂತೆ’ ಅಂದಳು, ‘ಹಾಗಂದ್ರೆ?’ ಅಂದೆ.’ ಡಾ. ಎಂ.ಆರ್. ಮಂದಾರವಲ್ಲಿ

ಶ್ರೀದೇವಿ ಕಳಸದ | Shridevi Kalasad

|

Feb 17, 2021 | 6:06 PM

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ 

ಮೈಸೂರಿನಲ್ಲಿ ವಾಸವಾಗಿರುವ ಲೇಖಕಿ ಡಾ. ಎಂ.ಆರ್. ಮಂದಾರವಲ್ಲಿ ಅವರು ನದಿಯ ಸುಳಿಯಂತೆ ತಮ್ಮೊಳಗೆ ತಾವೇ ಇಳಿಯುತ್ತ ಹೋಗಿದ್ದಾರೆ.

‘ನಾನು’ ಎಂಬ ಸೋಜಿಗ, ನನ್ನ ಜೀವನಯಾತ್ರೆಯಲ್ಲಿ ಎಷ್ಟೆಲ್ಲ ರೂಪಗಳನ್ನು ತಾಳಿ ಬಂದಿದೆ ಎಂಬುದೇ ಒಂದು ವಿಸ್ಮಯ. ನಾವೆಲ್ಲ ತುಮಕೂರು ಜಿಲ್ಲೆಗೆ ಸೇರಿದ ಅಮೃತ್ತೂರು ಎಂಬ ಹಳ್ಳಿಯಲ್ಲಿ ಬೆಳೆದವರು.  ಅತ್ಯಂತ ದೊಡ್ಡ ಕುಟುಂಬ. ಮನೆ ತುಂಬ ಮಕ್ಕಳು. ಚಿಕ್ಕ ಅರಮನೆಯಂತಹ ಮನೆ. (ಈಗ ಆ ಮನೆಯ ಜಾಗದಲ್ಲಿ ಮೂವತ್ತು ನಲವತ್ತು ಅಡಿಯ ನಲವತ್ತು ಸೈಟುಗಳನ್ನಾಗಿ ಮಾಡಿದ್ದಾರೆ) ಊರಿಗೆಲ್ಲ ಅದೇ ದೊಡ್ಡಮನೆ. ಬೇಕಾದಷ್ಟು ಆಸ್ತಿ, ತೋಟ, ಗದ್ದೆ, ಬೆಳ್ಳಿ, ಬಂಗಾರಗಳಿಗೆ ಲೆಕ್ಕವಿಲ್ಲ. ತೋಟ, ಗದ್ದೆಗಳನ್ನು ನೋಡಿಕೊಳ್ಳಲು, ಮನೆಯ ಮುಂದಿನ ತೋಟ ನೋಡಿಕೊಳ್ಳಲು, ಬಾವಿಯಿಂದ ನೀರು ಸೇದಿ ಗಿಡಗಳಿಗೆ ಹಾಕಲು ಎಲ್ಲದಕ್ಕೂ ಆಳುಗಳು, ಕೊಟ್ಟಿಗೆಯ ತುಂಬ ಹಸುಗಳು. ನೂರು ಹಸುಗಳು, ಕೆಲವು ಎಮ್ಮೆಗಳು. ಇಂತಹ ಮನೆಯಲ್ಲಿ ಮೊಮ್ಮಗಳಾಗಿ ಜನಿಸಿದವಳು ನಾನು. ಒಟ್ಟು ಏಳು ಮಕ್ಕಳು. ನಾನು ಐದನೆಯವಳು.

ನಮ್ಮ ಹಿರಿಯರು ಎಂದೂ ನಮಗೆ ಶ್ರೀಮಂತ ಬದುಕಿನ ಪರಿಚಯ ಮಾಡಿಸಲಿಲ್ಲ ಮತ್ತು ಅತಿಯಾಗಿ ಮುದ್ದಿಸುವುದು, ಕೇಳಿದ್ದನ್ನೆಲ್ಲ ಕೊಡಿಸುವುದು ಇಂತಹ ಯಾವ ಅಭ್ಯಾಸಗಳೂ ಇರಲಿಲ್ಲ. ನಾವೆಲ್ಲರೂ ಕೊಟ್ಟಿಗೆಯಲ್ಲಿ, ತೋಟಗಳಲ್ಲಿ ಕೆಲಸ ಮಾಡುತ್ತಲೇ ಬೆಳೆದವರು. ಜಾತಿ, ಧರ್ಮ, ಅಂತಸ್ತು ಯಾವುದೇ ರೀತಿಯ ವಿಭಜನೆಯೂ ಇಲ್ಲದೆ ಬೆಳೆದವರು. ಶ್ರೀವೈಷ್ಣವ ಸಮುದಾಯಕ್ಕೆ ಸೇರಿದ ನಾವು ಯಾವುದೇ ಸಂಪ್ರದಾಯಗಳ ಕಟ್ಟುಪಾಡಿಗೆ ಒಳಗಾಗಲಿಲ್ಲ. ಬದುಕು ಎಂಬ ಅದ್ಭುತವನ್ನು ಅತ್ಯಂತ ಕೆಳ ಹಂತದಿಂದಲೇ ಗಮನಿಸಿ ತಿಳಿಯಬೇಕೆಂಬ ವಿಶಿಷ್ಟ ರೀತಿಯಲ್ಲಿ ಬೆಳೆದವರು. ಒಂದು ರೀತಿಯಲ್ಲಿ ಸಂಸ್ಕಾರದ ಔನ್ನತ್ಯವನ್ನು ಚಿಕ್ಕ ವಯಸ್ಸಿನಿಂದಲೇ ಕಲಿಯುತ್ತ ಬಂದವರು. ಹಳ್ಳಿಯಲ್ಲಿ ಅಂಗನವಾಡಿಗೆ ನನ್ನನ್ನು ಕಳಿಸಿದರು. ನನ್ನಕ್ಕ ಅಣ್ಣಂದಿರು ಆಗಲೇ ಪ್ರೈಮರಿ, ಮಿಡ್ಲ್ ತರಗತಿಗೆ ಸರ್ಕಾರಿ ಶಾಲೆಗೆ ಹೋಗುತ್ತಿದ್ದರು. ನನಗೆ ಬಹುಶಃ ಮೂರು ವರುಷ ಇರಬಹುದು. ಆ ತನಕ ಕಾಸೆಂಬ ಪದಾರ್ಥವನ್ನು ನಮ್ಮ ಕೈಗೆ ಎಂದೂ ಕೊಟ್ಟಿದ್ದಿಲ್ಲ. ಶಾಲೆಯಲ್ಲಿ ಗೆಳತಿಯೊಬ್ಬಳು ಪೆಪ್ಪರಮೆಂಟ್ ತಿನ್ನುತ್ತಿದ್ದಳು. ಅವಳು ನನಗೆ ಒಂದು ಪೆಪ್ಪರಮೆಂಟ್ ಕೊಟ್ಟು ತಿನ್ನಲು ಹೇಳಿದಳು. ನಾನು ತಿಂದೆ. ನಂತರ ‘ಈಗ ನಿನಗೆ ಕೊಟ್ಟೆನಲ್ಲ ಆ ಪೆಪ್ಪರಮೆಂಟ್ ನನಗೆ ನಾಳೆ ಕೊಡಬೇಕು ಆಯ್ತ!’ ಅಂದಳು. ನಾನು ಹೇಗೆ ಅವಳಿಗೆ ಕೊಡುವುದು? ಅಷ್ಟು ಕೂಡ ತಿಳಿವಳಿಕೆ ಇಲ್ಲದ ನಾನು ಸರಿ ಎಂದೆ. ಮರುದಿನ ಶಾಲೆಗೆ ಹೋಗುವಾಗ ಎಲ್ಲರೂ ಹೋಗುವಂತೆ ಒಂದು ಅಂಗಡಿಗೆ ಹೋಗಿ ‘ಪೆಪ್ಪರಮೆಂಟ್ ಕೊಡಿ’ ಅಂದೆ.  ಅಷ್ಟು ದೊಡ್ಡ ಮನೆಯ ಚಿಕ್ಕ ಹುಡುಗಿ ಮೊದಲ ಬಾರಿಗೆ ಅಂಗಡಿಗೆ ಹೋಗಿ ಈ ರೀತಿ ಕೇಳುತ್ತಿರುವುದು ಅವನಿಗೆ ವಿಸ್ಮಯ ಅನ್ನಿಸಿತೇನೋ. ‘ಅದಕ್ಕೆ ಕಾಸು ತರಬೇಕು ಅಪ್ಪ ಕೊಟ್ಟಿದ್ದಾರಾ?’ ಎಂದು ಕೇಳಿದ. ನಾನು ಅದುವರೆಗೂ ಯಾರ ಜೊತೆಯಲ್ಲಿ ಅಂಗಡಿಗೆ ಹೋದರೂ, ಅಂಗಡಿಯವನು ಕೇಳಿದ ಸಾಮಾನು ಕಟ್ಟಿಕೊಡುವುದನ್ನು ಕಂಡಿದ್ದೆನೇ ಹೊರತು, ಅದಕ್ಕೆ ಬದಲಾಗಿ ಕೊಂಡವರು ಹಣ ನೀಡಿದ್ದು ಗಮನಕ್ಕೆ ಬಂದಿರಲಿಲ್ಲ.

ಶಾಲೆಗೆ ಹೋದಾಗ ಗೆಳತಿ. ನನ್ನ ಪೆಪ್ಪರಮೆಂಟ್ ಕೊಡು ಎಂದಳು. ಅದಕ್ಕೆ ಅಂಗಡಿಯವನು ಕಾಸು ಕೇಳ್ತಿದ್ದಾನೆ ಅಂದೆ. ನಿಮ್ಮಪ್ಪನನ್ನು ಕೇಳು ಅಂದಳು. ಅಪ್ಪ ಕೊಡಲ್ಲ ಅಂದೆ. ಸ್ಕೂಲ್ ಫೀಸ್ ಕಟ್ಟಬೇಕು ಅಂತ ಕೇಳು. ಕೊಡ್ತಾರೆ ಅಂದಳು. ಅವಳಿಗೆ ಅಷ್ಟೆಲ್ಲ ಬುದ್ದಿ ಎಲ್ಲಿಂದ ಆ ವಯಸ್ಸಿನಲ್ಲೇ ಬಂದಿತ್ತೋ ಆ ಭಗವಂತನೇ ಬಲ್ಲ. ಮರುದಿನ ಬೆಳಿಗ್ಗೆ ಅಪ್ಪನ ಹಿಂದೆ ಮುಂದೆ ಸುತ್ತಾಡುತ್ತಿದ್ದೆ. ಏನು ಬೇಕು? ಅಂದರು. ಅಪ್ಪನದು ಒಂಥರ ಸೈಗಾಲ್ ಥರದ ಧ್ವನಿ. ಹಾಡುತ್ತಿದ್ದರೆ ಸೈಗಾಲ್ ಹಾಡುತ್ತಿದ್ದಾರೆ ಎಂದೇ ಅಂದುಕೊಳ್ಳುವಷ್ಟು. ನಾನು ‘ಸ್ಕೂಲ್ ಫೀಸ್ ಕಟ್ಟಬೇಕು. ಟೀಚರ್ ಕಾಸು ತೊಗೊಂಡು ಬಾ ಅಂದಿದ್ದಾರೆ’ ಅಂದೆ.  ‘ಹೌದಾ? ನನ್ನನ್ನೇ ಒಂದು ಕ್ಷಣ ದಿಟ್ಟಿಸಿದರು.  ‘ಸರಿ ಎಷ್ಟು ಫೀಸ್?’ ಕೇಳಿದರು. ಇಪ್ಪತ್ತು ಪೈಸ ಅಂದೆ. ಅದನ್ನೂ ಗೆಳತಿಯೇ ಹೇಳಿಕೊಟ್ಟಿದ್ದಳು. ಆಗಿನ ಕಾಲದಲ್ಲಿ ಅದೆಷ್ಟು ದೊಡ್ಡ ಹಣ ಎಂದು ಇವತ್ತು ಯೋಚಿಸಿದಾಗ ಅನ್ನಿಸುತ್ತೆ. ಅಪ್ಪ ಮಾತನಾಡದೇ ಜೇಬಿಂದ ಹಣ ತೆಗೆದುಕೊಟ್ಟರು. ಅವತ್ತು ಗೆಳತಿ ತಾನೇ ಅಂಗಡಿಗೆ ಕರೆದುಕೊಂಡು ಹೋಗಿ ಐದು ಪೈಸಕ್ಕೆ ಪೆಪ್ಪರಮೆಂಟ್ ಕೇಳಿದಳು. ಅವನು ಅವಳಿಗೆ ಬೊಗಸೆ ತುಂಬ ಕೊಟ್ಟ. ಅವಳು ಅದರಲ್ಲಿ ನಾಲ್ಕೈದು ಪೆಪ್ಪರಮೆಂಟ್ ನನಗೆ ಕೊಟ್ಟು ಉಳಿದದ್ದನ್ನು ತಾನು ಮತ್ತು ತನ್ನ ಇತರ ಗೆಳತಿಯರಿಗೆ ಕೊಟ್ಟು ತಿಂದಳು.  ಮತ್ತೆ ಹೇಳಿದಳು, ಹದಿನೈದು ಪೈಸ ಹೀಗೇ ಜೋಪಾನವಾಗಿ ಇಟ್ಟುಕೊ. ಮತ್ತೆ ನಾಳೆ ಪೆಪ್ಪರಮೆಂಟ್ ತೊಗೊಳ್ಳೋಣ ಅಂತ.  ಸರಿ ಅಂದು ಬ್ಯಾಗಿನಲ್ಲಿ ಇಟ್ಟುಕೊಂಡು ಬಂದಿದ್ದೆ.

naanemba parimaladha haadhiyali

ಸೌಜನ್ಯ : ಅಂತರ್ಜಾಲ

ಮನೆಗೆ ಬರುವಾಗಲೇ ಅಪ್ಪ ಸೈಕಲ್ ನಲ್ಲಿ ತೋಟದಿಂದ ಬರುತ್ತಿದ್ದರು. ಫೀಸ್ ಕೊಟ್ಯಾ? ಅಂತ ಕೇಳಿದರು.  ಹೂಂ ಅಂದೆ.  ನನಗೇನು ಗೊತ್ತು, ಅಪ್ಪನಿಗೆ ಆಗಲೇ ಅಂಗಡಿಯವನು, ಟೀಚರ್ ಎಲ್ಲರೂ ನನ್ನ ಕುರಿತು ಮಾಹಿತಿ ನೀಡಿದ್ದಾರೆ ಅಂತ. ನಾನು ಮನೆಗೆ ನಡೆದು ಬರುವ ವೇಳೆಗೆ ಅಪ್ಪ ಊಟದ ಮನೆಯಲ್ಲಿ ನನಗಾಗಿ ಕಾಯುತ್ತಿದ್ದರು. ಅಪ್ಪ ಕರೀತಿದ್ದಾರೆ ಹೋಗಬೇಕಂತೆ ಅಂತ ಅಕ್ಕ ಹೇಳಿದಾಗ ಹೋದೆ. ಊಟದ ಮನೆಯ ಬಾಗಿಲು ಹಾಕಿ ಕೈಯಲ್ಲಿ ಅಡಿಕೆ ಬೆತ್ತ ಹಿಡಿದ ಅಪ್ಪ ಕೇಳಿದರು, ಫೀಸ್ ಟೀಚರ್ ಕೇಳಿದ್ರಾ? ನೀನು ಕೊಟ್ಯಾ? ಅಂತ. ಹೂಂ ಅಪ್ಪ ಅಂದೆ.  ಅಷ್ಟೆ! ರಪ ರಪ ರಪ ಅಂತ ಕಾಲು ಮೇಲೆ. ‘ಸುಳ್ಳು ಹೇಳ್ತೀಯ? ಸುಳ್ಳು ಹೇಳ್ತೀಯ? ಸುಳ್ಳು ಹೇಳ್ತೀಯ?’ ಇದೊಂದೇ ಪದ ನನ್ನ ಕಿವಿಗೆ ಬೀಳುತ್ತಿತ್ತು. ಮತ್ತೆ ಮತ್ತೆ ಹೊಡೆದರು. ಇಲ್ಲಪ್ಪ ತಪ್ಪಾಯ್ತಪ್ಪ ಕೂಗುತ್ತ ಹೇಳಿದೆ. ಹೊರಗೆ ಅಜ್ಜಿ, ತಾತ, ಅಮ್ಮ ಎಲ್ಲ ಬಾಗಿಲ ಬಳಿ ಬಂದಿದ್ದರು. ಬಾಗಿಲು ತೆಗೆದ ಅಪ್ಪ ಕೆಳಗೆ ಕುಳಿತು ನನ್ನನ್ನು ತೊಡೆ ಮೇಲೆ ಕೂರಿಸಿಕೊಂಡು ಕೇಳಿದರು. ನಾನು ಎಲ್ಲ ವಿವರಿಸಿದೆ. ಅಪ್ಪ, ‘ಯಾವುದೇ ಕಾರಣಕ್ಕೂ ನಿನ್ನ ಜೀವನದಲ್ಲಿ ಎಂದಿಗೂ ಸುಳ್ಳು ಹೇಳಬಾರದು ತಿಳೀತಾ? ಹಾಗೇ ಯಾರೇ ಏನೇ ಸುಮ್ಮನೆ ಕೊಟ್ಟರೂ ಅದನ್ನು ತೆಗೆದುಕೊಳ್ಳಬಾರದು’ ಎಂದರು. ಬ್ಯಾಗಿನಲ್ಲಿ ಇಟ್ಟಿದ್ದ ಹದಿನೈದು ಪೈಸೆ ಅಪ್ಪನಿಗೆ ವಾಪಸ್ ಕೊಟ್ಟೆ. ಸುಳ್ಳು ಎಂಬ ಶಬ್ದದ ಅರ್ಥ ತಿಳಿಯುವ ಮೊದಲೇ ಅದು ಅತ್ಯಂತ ಹೀನವಾದದ್ದು ಎಂಬುದನ್ನು ಅಪ್ಪ ನನಗೆ ಹೀಗೆ ತಿಳಿಸಿಬಿಟ್ಟರು. ರಾತ್ರಿ ಅಮ್ಮ ಅಪ್ಪನ ಮಾತು ತುಂಬ ಹೊತ್ತು ನಡೆದಿತ್ತು. ನಾನು ನಿದ್ರಿಸಿದ್ದೆ. ಮರುದಿನ ಶಾಲೆಗೆ ಹೊರಟಾಗ ಅಪ್ಪ ಎರಡು ಪೈಸ ತೆಗೆದುಕೊಟ್ಟರು. ಹೋಗು ಪೆಪ್ಪರಮೆಂಟ್ ತೊಗೊ ಅಂತ. ಏನನ್ನಿಸಿತೋ… ಬೇಡಪ್ಪ ಅಂದು ಗೇಟಿನ ಕಡೆ ಓಡಿಹೋದೆ. ಅಂದಿನಿಂದ ಇಂದಿನವರೆಗೆ ನನ್ನ ಜೀವನದಲ್ಲಿ ಸುಳ್ಳು ಎಂಬ ಶಬ್ದ ಕೊಂಡಿಕಳಚಿಕೊಂಡು ಹೋಗಿದೆ.  ಹೇಳಿದರೆ ಸತ್ಯ ಇಲ್ಲವಾದರೆ ಮೌನ. ಹಣ ಎಂದಿಗೂ ನನ್ನ ಜೀವನದಲ್ಲಿ ಲೋಭ ಅಥವಾ ಮೋಹವಾಗಿ ಬರಲೇ ಇಲ್ಲ.

ನಾಲ್ಕೂವರೆ ವರ್ಷ ಇರಬೇಕು, ಐದಾಗಿರಲಿಲ್ಲ. ಅಮ್ಮ ಅನಾರೋಗ್ಯದಿಂದಾಗಿ ಶಾಶ್ವತ ನಿದ್ರೆಗೆ ಜಾರಿಬಿಟ್ಟರು. ಬಹುಶಃ ನನ್ನ ಕೊನೆಯ ತಂಗಿಯ ಹೆರಿಗೆಯಲ್ಲಿ ನಂಜು ಎಂದಾಗಿರಬಹುದು. ಸರಿಯಾಗಿ ತಿಳಿಯದು. ಅದಕ್ಕಾಗಿ ತೆಗೆದುಕೊಳ್ಳುತ್ತಿದ್ದ ಔಷಧಿಯ ಪರಿಣಾಮ ಎನ್ನಿಸುತ್ತೆ ನಮ್ಮನ್ನೆಲ್ಲ ಬಿಟ್ಟು ಹೊರಟೇಬಿಟ್ಟರು. ಮನೆ ತುಂಬ ಜನ. ಎಲ್ಲರೂ ಅಳುತ್ತಿದ್ದಾರೆ. ಅಪ್ಪ, ಅಜ್ಜಿ ಎಲ್ಲ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ನಾನೂ ಅಳುತ್ತಿದ್ದೆ. ಗೆಳತಿಯೊಬ್ಬಳು ಬಂದು, ‘ಯಾಕೇ ಅಳ್ತಿದ್ದೀಯ’ ಅಂತ ಕೇಳಿದಳು. ‘ಅಮ್ಮ ನನಗೆ ಹಲ್ಲುಪುಡಿ ಕೊಡದೇ ಮಲಗಿಬಿಟ್ಟಿದ್ದಾರೆ’ ಅಂದೆ. ‘ಹೋಗಿ ಕೇಳು. ಕೊಟ್ಟು ಆಮೇಲೆ ಮಲಕ್ಕೊ ಅನ್ನು.’ ಅಂದಳು. ನಾನು ಅಮ್ಮನ ಸಮೀಪ ಕುಳಿತು ಅದೆಷ್ಟು ಸಲ ಕೇಳಿದೆನೋ… ಅಮ್ಮ ಹಲ್ಲುಪುಡಿ ಕೊಟ್ಟೇ ಇಲ್ಲ ನೋಡು, ಕೊಡಮ್ಮ’ ಅಂತ.  ಕೆಲವು ದಿನಗಳ ನಂತರ ಗೆಳತಿಯೊಬ್ಬಳು ಶಾಲೆಯಲ್ಲಿ ‘ನಿಮ್ಮಮ್ಮ ತೀರಿಕೊಂಡರಂತೆ’ ಅಂದಳು. ‘ಹಾಗಂದ್ರೆ?’ ಅಂದೆ. ಸತ್ತು ಹೋದರಂತೆ ಅಂದಳು. ಹಾಗಂದ್ರೆ? ಅಂದೆ. ಸುಮ್ಮನಾದಳು. ಆಗ ಮತ್ತೊಬ್ಬಳು, ಅವರು ಮತ್ತೆ ಯಾವತ್ತೂ ಬರೋದೇ ಇಲ್ಲ ಅಂತ ಅಂದಳು. ಸತ್ತು ಹೋದವರು ಮತ್ತೆ ಬರೋದೇ ಇಲ್ಲ ಎಂಬ ಸತ್ಯ ಆ ವಯಸ್ಸಿನಲ್ಲಿ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿ ಕುಳಿತಿತೇನೋ. ಅವತ್ತು ಅಪ್ಪನನ್ನು ಕೇಳಿದೆ. ‘ಅಪ್ಪ ಅಮ್ಮ ಸತ್ತು ಹೋದರಾ, ಮತ್ತೆ ಬರೋಲ್ಲವಾ?’ ಅಂತ.  ಅಪ್ಪ ನನ್ನನ್ನು ಬಿಸಿಲು ಮಚ್ಚಿಗೆ ಕರಕೊಂಡು ಹೋಗಿ ಆಕಾಶದಲ್ಲಿರುವ ನಕ್ಷತ್ರ ತೋರಿಸಿ ಹೇಳಿದರು ‘ನೋಡು ನಿಮ್ಮಮ್ಮ ಅವರಮ್ಮನ ಮನೆಗೆ ಹೋಗಿದ್ದಾಳೆ. ಅಲ್ಲಿ ಹೊಳೀತಿದೆಯಲ್ಲ ನಕ್ಷತ್ರ ಅದೇ ಅವಳ ಮನೆ’ ಅಂತ. ‘ಹಾಗಾದ್ರೆ ಅಮ್ಮಂಗೆ ಕಾಗದ ಬರೆದು ಬೇಗ ಬಾ ಅಂತ ಕರಿ’ ಅಂದೆ. ‘ಅಲ್ಲಿಗೆಲ್ಲ ಕಾಗದ ಹೋಗಲ್ಲ. ನಾವು ಮನಸ್ಸಿನಲ್ಲಿ ಅಂದುಕೊಂಡರೆ ಸಾಕು ಅಮ್ಮಂಗೆ ಕೇಳುತ್ತೆ’ ಅಂದಿದ್ದರು. ಮುಂದೆ ಎಷ್ಟೋ ವರ್ಷಗಳ ಕಾಲ ನನ್ನ ಮತ್ತು ನಕ್ಷತ್ರದ ನಡುವೆ ಅಗೋಚರ ಸಂವಾದ ನಡೆಯುತ್ತಲೇ ಇತ್ತು. ಪ್ರತಿನಿತ್ಯವೂ ಆ ನಕ್ಷತ್ರದ ಮನೆಯ ಕಿಟಕಿಯಿಂದ ಅಮ್ಮ ನನ್ನನ್ನ ನೋಡ್ತಿರಬಹುದು ಅಂತಲೇ ಕಾಯುತ್ತಿದ್ದೆ. ನಂತರ ನನ್ನ ಜೀವನದಲ್ಲಿ ಬಂದ ಸಾವುಗಳು ನನಗೆ ಬಹಳ ದೊಡ್ಡ ಪಾಠಗಳಾಗಿಬಿಟ್ಟವು. ಹುಟ್ಟಿದವರೆಲ್ಲ ಸಾಯುತ್ತಾರೆ ಮತ್ತು ಸತ್ತವರು ಮರಳಿ ಬರಲಾರರು ಎಂಬ ಪಾಠ ಚಿಕ್ಕ ವಯಸ್ಸಿನಲ್ಲೇ ದಾಖಲಾಗಿಬಿಟ್ಟಿತು.

ಇದನ್ನೂ ಓದಿ:ನಾನೆಂಬ ಪರಿಮಳದ ಹಾದಿಯಲಿ: ನಾಟಕ್ ಸಾಲಿಗೆ ಸೇರ್ಕೊಂಡಾಳಂತs ಗಂಡಸರ ಜೊತಿ ಕುಣ್ಯಾಕ

ಆ ನಂತರ ಜೀವನದಿ ಹಳ್ಳಿಯ ಬದುಕಿನಿಂದ ಮೈಸೂರು ಎಂಬ ಸಾಂಸ್ಕೃತಿಕನಗರಿಯನ್ನು ಸೇರಿ, ವನಿತಾ ಸದನ, ಕ್ರೈಸ್ತ್ ದ ಕಿಂಗ್ ಕಾನ್ವೆಂಟ್, ಮಹಾರಾಣಿ ಕಾಲೇಜು ಎಂಬ ಅನೇಕ ಕೊಳಗಳಲ್ಲಿ ಅದ್ದಿ ತೆಗೆದು, ಟೈಪ್ ರೈಟಿಂಗ್, ಷಾರ್ಟ್ ಹ್ಯಾಂಡ್ ಎಂದು ಲಭ್ಯವಾದ ಪ್ರತಿಯೊಂದು ಕ್ಷೇತ್ರವನ್ನೂ ಮುಟ್ಟುತ್ತ ಅಲ್ಲೆಲ್ಲ ಪ್ರಥಮ ಅಥವಾ ದ್ವಿತೀಯ ಸ್ಥಾನ ಪಡೆಯುತ್ತ ಹೊರಟಿದ್ದು ಒಂದು ಅಚ್ಚರಿಯೇ. ಏಕೆಂದರೆ ನನ್ನೊಳಗಿನ ‘ನಾನು’ ಕೆಲವು ತಾತ್ಕಾಲಿಕ ಕನಸುಗಳನ್ನು ಮಾತ್ರ ಇಟ್ಟುಕೊಳ್ಳುತ್ತಿತ್ತೇ ಹೊರತು, ಕನಸುಗಳು ನನ್ನ ಬದುಕಿನ ಗುರಿ ಆಗಿರಲೇ ಇಲ್ಲ. ಮಾನಸ ಗಂಗೋತ್ರಿಯಲ್ಲಿ ಮಾಸ್ಟರ್ ಡಿಗ್ರಿ ಮಾಡಿದೆ. ಡೆಹ್ರಾಡೂನಿನ ಪ್ರತಿಷ್ಠಿತ ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಿಜುವಲಿ ಹಾಂಡಿಕ್ಯಾಪ್ಡ್ ಸಂಸ್ಥೆಯಲ್ಲಿ ಹೆಲ್ಲೆನ್ ಕೆಲ್ಲರ್ ಅವಾರ್ಡ್ನ ಸ್ಕಾಲರ್ಷಿಪ್ ದೊರೆಯಿತು. ಅಲ್ಲಿಯೇ ಪಿಎಚ್.ಡಿ ಮಾಡುವ ಉತ್ಕಟ ಆಸೆಯೂ ಇತ್ತು. ಆದರೆ ಅಂತಿಮ ಸಮಯದಲ್ಲಿ ಅದು ಆಗಲಿಲ್ಲ. ಏಕೆಂದರೆ ನಾನು ಅದನ್ನು ಡೆಹ್ರಾಡೂನಿನಲ್ಲಿಯೇ ಮಾಡಬೇಕಿತ್ತು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆ ಸ್ಕಾಲರ್ಷಿಪ್ ಪಡೆದು ಅಧ್ಯಯನ ಮಾಡಲು ಆಗ ಅವಕಾಶ ಇರಲಿಲ್ಲ. (ಆ ನಂತರ ಅದನ್ನು ಬೇರೆ ಬೇರೆ ಕಡೆಯೂ ವಿಸ್ತರಿಸಿದ್ದಾರೆ ಎಂದು ಕೇಳಲ್ಪಟ್ಟೆ). ಮೈಸೂರಿನಿಂದ ಎರಡುಸಾವಿರದ ಐನೂರು ಕಿ.ಮೀ ಗೂ ಅಧಿಕ ದೂರವಿದ್ದ ಅಪರಿಚಿತ ಸ್ಥಳಕ್ಕೆ ಹೋಗಿ ಪಿಎಚ್.ಡಿ. ಮಾಡುವ ಧೈರ್ಯ ನನಗೇ ಇರಲಿಲ್ಲ. ನಂತರ ನನಗೆ ಯುಜಿಸಿ ಫೆಲೋಷಿಪ್ ಸಿಕ್ಕಿತ್ತು. ಭಾರತದಲ್ಲೇ ಮೊದಲ ಅಧ್ಯಯನ ಎಂಬ ಹೆಗ್ಗಳಿಕೆಯೊಂದಿಗೆ ಪಿಎಚ್.ಡಿ ಪದವಿ ಪಡೆದೆ; Cognitive Development In Visually Handicapped-ಅಂಧಮಕ್ಕಳಲ್ಲಿ ಸಂಜ್ಞಾತ್ಮಕ ವಿಕಾಸ.

naanemba parimaladha haadhiyali

ಸೌಜನ್ಯ : ಅಂತರ್ಜಾಲ

ಹೆಸರಾಗಲೀ, ಕೀರ್ತಿಯಾಗಲಿ, ಹಣವಾಗಲಿ, ಶ್ರೀಮಂತಿಕೆಯಾಗಲೀ ಎಂದೆಂದೂ ನಮ್ಮ ಬದುಕಿನಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆಯಲೇ ಇಲ್ಲ. ಇವತ್ತು ಕುಟುಂಬಗಳಲ್ಲಿ ಹಣಕ್ಕಾಗಿ, ಸ್ಥಾನಕ್ಕಾಗಿ ಸುಲಭವಾಗಿ ಮೀರ್ಸಾಧಕರುಗಳು ಹುಟ್ಟಿಕೊಂಡುಬಿಡುತ್ತಾರೆ. ಆಗೆಲ್ಲ ನಾವು ಆಶ್ಚರ್ಯ ಪಟ್ಟಿದ್ದೇವೆ, ಹೀಗೆಲ್ಲಾ ಉಂಟೇ? ಎಂದು. ನನ್ನ ಪಿಎಚ್.ಡಿ. ಸ್ಕಾಲರ್ಷಿಪ್ ಹಣ ೨೨೦೦ ರೂ.ಗಳು ತಿಂಗಳಿಗೆ. ಅದೆಲ್ಲವನ್ನೂ ನಮ್ಮ ತಾತನವರ ಬಳಿಯಲ್ಲಿ ಕೊಡಬೇಕು. ತಾತ ನನಗೆ ಐದು ರೂಪಾಯಿಯನ್ನು ಪಾಕೆಟ್ ಮನಿ ಎಂದು ಕೊಡುತ್ತಿದ್ದರು. ಇದು ಕೇವಲ ನನಗೆ ಅಂತ ಅಲ್ಲ. ನಾವು ಯಾರೇ ಸಂಪಾದನೆ ಮಾಡಿದರೂ ಎಲ್ಲ ಹಣವನ್ನೂ ಅವರ ಬಳಿಯಲ್ಲೇ ಕೊಡಬೇಕು ಮತ್ತು ಅವರು ಎಲ್ಲರಿಗೂ ಐರು ರೂಪಾಯಿಯಷ್ಟೇ ಕೊಡುತ್ತಿದ್ದರು. ತಿಂಗಳ ಕೊನೆಯಲ್ಲಿ ನಾವು ಆ ಐದು ರೂಪಾಯಿಗೆ ಲೆಕ್ಕ ಒಪ್ಪಿಸಬೇಕು.  ಇಲ್ಲವಾದರೆ ಮುಂದಿನ ತಿಂಗಳ ಪಾಕೆಟ್ ಮನಿ ಖೋತ. ನನಗೆ ಖರ್ಚಿನ ಲೆಕ್ಕ ಸರಿಯಾಗಿ ನೆನಪಿರುತ್ತಿರಲಿಲ್ಲ. ಅದನ್ನು ಪ್ರತಿ ಖರ್ಚು ಮಾಡಿದಾಗಲೂ ಪುಸ್ತಕದಲ್ಲಿ ಬರೆಯಬೇಕಿತ್ತು. ನಾನು ಆ ಶಿಸ್ತನ್ನು ಪಾಲಿಸುತ್ತಿರಲಿಲ್ಲ. ಗೆಳತಿಯರೊಟ್ಟಿಗೆ ಕ್ಯಾಂಟೀನ್ಗೆ ಹೋಗಿ ಟೀ ಕುಡಿದದ್ದಕ್ಕೆ ನಲವತ್ತು ಪೈಸ ಆಗಿರುತ್ತಿತ್ತು. ಎಷ್ಟು ಸಲ ಕುಡಿದೆನೊ ಯಾರಿಗೆ ಗೊತ್ತು. ಒಂದು ವಡೆ ತಿಂದರೆ ಎಂಬತ್ತು ಪೈಸೆ. ಅಂತೂ ಮೂರು ರೂಪಾಯಿ ಲೆಕ್ಕ ಕೊಟ್ಟರೂ ಎರಡು ರೂಪಾಯಿ ಸಿಗುತ್ತಿರಲಿಲ್ಲ. ಸುಮ್ಮನೆ ಅಂತೂ ಬರೆಯಲು ಬರುತ್ತಿರಲಿಲ್ಲ. ತಿಂಗಳ ಕೊನೆಯಲ್ಲಿ ದಿನಪೂರ್ತಿ ತಾತನ ಹಿಂದೆ ಮುಂದೆ ಸುತ್ತುತ್ತ ಕ್ಷಮೆ ಕೇಳುವುದು ಒಂದು ಅಭ್ಯಾಸವೇ ಆಗಿಬಿಟ್ಟಿತು.

ಒಂದು ಸಲ  ನನ್ನ ಕೊನೆಯ ತಂಗಿ ಹೇಳಿದಳು. ಹೇಗೋ ಬರೆದು ಕೊಡೇ, ಸುಮ್ನೆ ಅದನ್ನೇ ಏನು ದೊಡ್ಡದು ಮಾಡ್ತೀಯ? ಅಂತ. ನನಗೆ ಸುಮ್ಮನೆ ಬರೆಯಲು ಬರೋದೇ ಇಲ್ಲವೇ! ಕೊನೆಗೆ ತಾತನ ಮುಂದೆ ನಿಲ್ಲುತ್ತಿದ್ದೆ. ಆ ಸಲ ಎಂದಿನಂತೆ ಹೇಳಿದೆ, ತಾತ ಎರಡು ರೂಪಾಯಿ ಲೆಕ್ಕ ಸಿಗ್ತಿಲ್ಲ. ತಾತ ಸ್ವಲ್ಪ ಹೊತ್ತು ಸುಮ್ಮನಿದ್ದರು.  ನಂತರ ಹೇಳಿದರು. ‘ಬಾವಿಗೆ ಸುರಿದೆ ಅಂತ ಬರೆ’  ‘ತಾತ..!’ ‘ಹೂಂ ಬರಿ’ ಅಂದರು. ಸರಿ ಬರೆದೆ. ‘ಈಗ ಲೆಕ್ಕ ಹಾಕು, ಐದು ರೂಪಾಯಿಯಲ್ಲಿ ಎರಡು ರೂಪಾಯಿ ಬಾವಿಗೆ ಸುರಿದರೆ, ಸಾವಿರ ರೂಪಾಯಿಯಲ್ಲಿ ಎಷ್ಟು ಸುರಿದೆ ಅಂತ ಹೇಳು ಅಂದರು. ‘ತಾತ ಏನು ತಾತ ಇದು! ಐದು ರೂಪಾಯಿಗೆ, ಸಾವಿರ ರೂಪಾಯಿ ಲೆಕ್ಕನಾ?’  ಅಂದೆ. ‘ಐದು ರೂಪಾಯಿ ಲೆಕ್ಕ ಮಾಡಲು ಗೊತ್ತಾಗದೆ ಇದ್ದವಳು ಸಾವಿರ ರೂಪಾಯಿ ಹೇಗೆ ಲೆಕ್ಕ ಹಾಕ್ತೀಯ, ನಿನಗ್ಯಾಕೆ ಎರಡುಸಾವಿರ ರೂಪಾಯಿ ತಿಂಗಳಿಗೆ ನೀವೆಲ್ಲ ಓದಿ ಪಿಎಚ್.ಡಿ. ಮಾಡೋವ್ರು ದಂಡಕ್ಕೆ!’ ತಾತ ತಿರಸ್ಕಾರದಿಂದ ಹೇಳಿದರು. ಅಂದೇ ಕೊನೆ. ಮತ್ತೆ ಒಂದು ದಿನವೂ ಲೆಕ್ಕ ತಪ್ಪಲಿಲ್ಲ. ಪ್ರತಿ ಲೆಕ್ಕನೂ ಬರೀತಿದ್ದೆ. ತಾತನ ನಿಧನದ ನಂತರ ಇಡೀ ಮನೆಯ ಲೆಕ್ಕವನ್ನು ನನ್ನ ವಿವಾಹದವರೆಗೂ ಅಚ್ಚುಕಟ್ಟಾಗಿ ನಿಭಾಯಿಸಿದೆ.

ನಾಲ್ಕುವರ್ಷದ ಅವಧಿಯ ಪಿಎಚ್.ಡಿ ಅಧ್ಯಯನದ ಸಮಯದಲ್ಲಿ ನಾನು ಮತ್ತು ರವೀಂದ್ರ ವಿವಾಹ ಆಗುವ ಕುರಿತ ಮಾತುಕತೆಗಳು ನಡೆದಿದ್ದವು. ನಮ್ಮ ಮದುವೆ ತೊಂಬತ್ತರ ಮೇ ತಿಂಗಳ ಒಳಗೆ ಆಗಬೇಕು ಎಂಬ ತೀರ್ಮಾನ ಆಗಿಬಿಟ್ಟಿತ್ತು. ನನ್ನ ಪಿಎಚ್.ಡಿ ಪ್ರಬಂಧ ಕುರಿತ ಸಿನಾಪ್ಸಿಸ್ ಎಲ್ಲ ನೋಡಿದ್ದ ದೆಹಲಿಯ ಎನ್.ಸಿ.ಇ.ಆರ್.ಟಿ ಮುಖ್ಯಸ್ಥರಾಗಿದ್ದ ನರೇಂದ್ರ ವೈದ್ಯ ಅವರು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಬಂದು ನನ್ನನ್ನು ಕಾಣಲೇಬೇಕು ಎಂದು ಆಗ್ರಹಿಸಿದ್ದರು. ಆ ಕುರಿತು ಒಂದು ಪತ್ರವನ್ನೂ ಬರೆದಿದ್ದರು. ನಾನು ಅದೇ ಸಮಯದಲ್ಲಿ ವಿಪರೀತ ಜ್ವರ ಬಂದು ನಾಲ್ಕು ದಿನ ಡಿಪಾರ್ಟ್ಮೆಂಟ್ಗೆ ಹೋಗಿರಲಿಲ್ಲ. ಅವರು ಕಾದು ಕಾದು ಸಾಕಾಗಿ ಕೊನೆಗೆ ನನ್ನ ಫೋನ್ ನಂಬರ್ ತೊಗೊಂಡು ತಾವೇ ಮನೆಗೆ ಫೋನ್ ಮಾಡಿ, ತಕ್ಷಣ ಬಂದು ಕಾಣು ಎಂದಿದ್ದರು. ಸಂಜೆ ಆರುಗಂಟೆ ಆಗಿತ್ತು. ಅಣ್ಣನೊಂದಿಗೆ ಅವರು ಉಳಿದುಕೊಂಡಿದ್ದ ಗೆಸ್ಟ್​ ಹೌಸ್​ ಗೆ ಹೋದೆ. ನನ್ನ ಕಂಡಕೂಡಲೇ ಯಾರೊಂದಿಗೋ ಮಾತನಾಡುತ್ತಿದ್ದವರು ಎದ್ದು ಬಂದು ಕೈ ಕುಲುಕಿ ಆತ್ಮೀಯವಾಗಿ ಮಾತನಾಡಿಸಿದರು. ಜ್ಞಾನದಿಂದಲೂ, ಹುದ್ದೆಯಿಂದಲೂ, ವಯಸ್ಸಿನಿಂದಲೂ ಸಾಕಷ್ಟು ಹಿರಿಯರಾಗಿದ್ದರು.

ಎರಡು ಮೂರು ಮಾತುಗಳ ನಂತರ, ‘ಕೆನಡಾಗೆ ಹೋಗುತ್ತೀಯ? ಅಲ್ಲಿ ವಿಶ್ವವಿದ್ಯಾಲಯದಲ್ಲಿ ನಿನಗಾಗಿ ನೌಕರಿ ಕಾಯುತ್ತಿದೆ (The post is waiting for you)’ ಅಂದರು.  ಒಂದು ಕ್ಷಣ ದಿಗ್ಭ್ರಮೆ ಆಯಿತು. ನನ್ನದಿನ್ನೂ ಪಿಎಚ್.ಡಿ. ಸಬ್ಮಿಟ್ ಆಗಿಲ್ಲ ಟೈಪಿಂಗ್ ಹಂತದಲ್ಲಿದೆ ಅಂದೆ. ‘ಅದೆಲ್ಲ ಇರಲಿ ನಾನು ನೋಡಿಕೊಳ್ಳುತ್ತೀನಿ. ಕೆನಡಾಕ್ಕೆ ಹೊರಡಲು ಸಿದ್ದತೆ ಮಾಡಿಕೊ’ ಅಂದರು. ‘ನನ್ನ ವಿವಾಹ ಕೂಡ ನಿಗದಿ ಆಗಿದೆ ಈಗ ತಕ್ಷಣ ನಿರ್ಧರಿಸಲು ಆಗುವುದಿಲ್ಲ’ ಎಂದೆ.  ಅಷ್ಟರಲ್ಲೇ ಅಣ್ಣನ ಜೊತೆ ಅವರ ಪಿ.ಎ. ಮಾತನಾಡುತ್ತಿದ್ದ. ಅವನು ಹೇಳಿದ, ‘ಈ ಅವಕಾಶ ಲಕ್ಷದಲ್ಲಿ ಒಬ್ಬರಿಗೆ ಸಿಗುವುದು ಕಷ್ಟ. ನಿಮ್ಮ ತಂಗಿಯನ್ನು ಈ ಅವಕಾಶದಿಂದ ತಪ್ಪಿಸಬೇಡಿ’ ಅಣ್ಣನಿಗೂ ಹಾಗೇ ಅನ್ನಿಸಿತು. ‘ವಿವಾಹ ಬೇಕಿದ್ದರೆ ಮುಂದೂಡೋಣ. ನಾನು ರವೀಂದ್ರ ಹತ್ತಿರ ಮಾತನಾಡುತ್ತೇನೆ ನೀನು ಒಪ್ಪಿಕೊ’ ಅಂದ. ನರೇಂದ್ರ ವೈದ್ಯ ನನ್ನ ಮುಂದೆ ಕಾಗದಗಳನ್ನು ಇಟ್ಟುಕೊಂಡು ಕುಳಿತಿದ್ದರು. ‘ಭಾರತದಿಂದ ಒಬ್ಬ ಅತ್ಯಂತ ಸಮರ್ಥಳಾದ ಮಹಿಳೆಯನ್ನು ಅಲ್ಲಿಗೆ ಕಳಿಸಿದ ಹೆಮ್ಮೆ ನನ್ನದಾಗುತ್ತೆ ಒಪ್ಪಿಕೊ. ಇದರಲ್ಲಿ ಸಹಿ ಮಾಡು ಸಾಕು. ಉಳಿದ ವಿವರಗಳನ್ನು ನಾನೇ ಭರ್ತಿ ಮಾಡಿಕೊಳ್ಳುತ್ತೇನೆ’ ಅಂದರು. ಕತ್ತಲಾಗುತ್ತಿತ್ತು. ಜ್ವರದ ಬಾಧೆ, ಹೀಗೆ ಬಂದಿರುವ ಅವಕಾಶ, ಜೊತೆಗೇ ಇದಿರಿನಲ್ಲಿ ಇರುವವರು ಅತ್ಯಂತ ಪ್ರತಿಷ್ಠಿತ ಸ್ಕಾಲರ್ ಮತ್ತು ಉನ್ನತ ಹುದ್ದೆಯಲ್ಲಿರುವವರು. ಒಂದೇ ಕ್ಷಣದಲ್ಲಿ ನಿರ್ಧರಿಸಿದ್ದೆ. ‘ಇಲ್ಲ ಸರ್. ಐ ಕಾಂಟ್. ಕೆನಡಾ ಈಸ್ ನಾಟ್ ಮೈ ಪ್ಲೇಸ್. ಪ್ಲೀಸ್ ಫರ್ಗಿವ್ ಮಿ.’ ಅವರು ಅಣ್ಣನ ಮುಖ ನೋಡಿದರು. ಅವನು ಮಾತಿಲ್ಲದವನಾಗಿದ್ದ. ಮನೆಗೆ ಬಂದ ಮೇಲೆ ಮತ್ತೊಂದು ವಾರ ಜ್ವರ ಕಾಡಿಸಿಬಿಟ್ಟಿತು.

naanemba parimaladha haadhiyali

ಸಂಗಾತಿ ಜಿ.ಕೆ. ರವೀಂದ್ರಕುಮಾರ್ ಮಗ ಅನನ್ಯ ವಾಸುದೇವ್ ಅವರೊಂದಿಗೆ ಮಂದಾರವಲ್ಲಿ.

ವಿವಾಹ ಆದ ಮೇಲೆ ಒಂದು ದಿನ ರವೀಂದ್ರ ಹೇಳಿದರು. ‘ನೀನು ಕೆನಡಾ ಬಿಟ್ಟು ನನ್ನನ್ನೇ ಆಯ್ಕೆ ಮಾಡಿಕೊಂಡೆಯಲ್ಲ ಆಗ ನಿನಗೇನನ್ನಿಸಿತು ಆಕ್ಷಣದಲ್ಲಿ?’ ‘ಗೊತ್ತಿಲ್ಲ ರವೀಂದ್ರ. ಒಟ್ಟಿನಲ್ಲಿ ನಿಮ್ಮನ್ನು ಬಿಟ್ಟ ಜಗತ್ತಿನ ಯಾವುದೇ ಸ್ವರ್ಗವೂ ನನಗೆ ಆಪ್ತವಾಗುವುದಿಲ್ಲ. ನನಗೆ ಗೊತ್ತಿದ್ದುದು ಇಷ್ಟೆ.’  ಆಮೇಲೆಲ್ಲ ಮಾತು ಬಂದಾಗ ಹೇಳುತ್ತಿದ್ದೆ, ‘ಜಗತ್ತಿಗೆ ಕೆನಡಾ ಮಹತ್ತಾಗೆ ಕಾಣುತ್ತೆ. ಆದರೆ ನನ್ನ ಮಹತ್ತು ರವೀಂದ್ರ. ಈ ಮಹತ್ತಿನ ಮುಂದೆ ಯಾವ ಕೆನಡಾ, ಯಾವ ಅಮೆರಿಕಾ? ಅಂತ. ಈಗಲೂ ರವೀಂದ್ರ ನಿರ್ಗಮಿಸಿದ ಮೇಲೂ ಕೂಡ ನನ್ನ ಅವತ್ತಿನ ತೀರ್ಮಾನ ತಪ್ಪು ಎಂಬ ಮಾತನ್ನು ನನ್ನ ಡಿಪಾರ್ಟ್ಮೆಟ್​ ಕೆಲವರು ಹೇಳುತ್ತಾರೆ.’ ಎಂಥ ಅವಕಾಶ ಬಿಟ್ಟುಬಿಟ್ಟೆ ವಲ್ಲಿ, ಸ್ವಲ್ಪ ಟೈಂ ತೊಗೊಬೇಕಿತ್ತು’ ಅಂತ. ನಾನು ಹೇಳುತ್ತೇನೆ, ‘ಟೈಂ ನಮ್ಮನ್ನ ಪರೀಕ್ಷೆ ಮಾಡುತ್ತೆ. ಗಾಜು ಮತ್ತು ವಜ್ರವನ್ನು ಮುಂದೆ ಇಟ್ಟಾಗ ಹೊಳೆಯುತ್ತೆ ಅಂತ ಗಾಜನ್ನ ಸ್ವೀಕರಿಸಿದರೆ ವಜ್ರ ಕಳೆದುಕೊಳ್ಳಬೇಕಾಗುತ್ತೆ. ನಾನು ಆರಿಸಿದ್ದು ವಜ್ರವನ್ನ ಅಂತ ನನಗೆ ಮಾತ್ರ ಗೊತ್ತು’ ಅಂತ. ಕೆಲವರು ಹೇಳಿದ್ದಾರೆ , ನಿಮ್ಮದು ದೊಡ್ಡ ತ್ಯಾಗ ಅಂತ. ಇದರಲ್ಲೆಲ್ಲ ನನಗೆ ನಂಬಿಕೆ ಇಲ್ಲ. ತ್ಯಾಗ, ಬಲಿದಾನ ಎಲ್ಲವೂ ಕೇವಲ ಅಲಂಕಾರಿಕ ಶಬ್ದಗಳು. ಅವು ನನ್ನ ದೃಷ್ಟಿಯಲ್ಲಿ ಎಂದೂ ಮಹತ್ವ ಪಡೆದುಕೊಂಡಿಲ್ಲ. ನಾವು ಏನೇ ಮಾಡಿದ್ದರೂ ಅದರಲ್ಲಿ ನಮ್ಮ ಪ್ರೀತಿ ಮಾತ್ರ ಇರುತ್ತದೆ. ಅಷ್ಟೆ. ಅದಕ್ಕೆ ಬೇರೆ ಬೇರೆ ಬಣ್ಣಗಳನ್ನು ಬಳಿದು ನೋಡುವ ಅಭ್ಯಾಸ ನನ್ನದಲ್ಲ. ಅವರಿಗೂ ಕೂಡ ಇದನ್ನೇ ಹೇಳಿರುತ್ತೇನೆ. ಆದರೆ ಅದನ್ನು ಒಪ್ಪುವುದು ಬಿಡುವುದು ಅವರವರ ಶಕ್ತಿಗೆ ಬಿಟ್ಟಿದ್ದು.

ಇದನ್ನೂ ಓದಿ: ನಾನೆಂಬ ಪರಿಮಳದ ಹಾದಿಯಲಿ: ಸ್ವಾವಲಂಬನೆಗಿಂತ ದೊಡ್ಡ ಸುಖವುಂಟೆ?

ಬರೆವಣಿಗೆ ನನ್ನ ಕ್ಷೇತ್ರವಲ್ಲ. ಬರೆಹಗಾರ್ತಿ ಆಗುವ ಬಯಕೆಯಾಗಲೀ, ಆಸಕ್ತಿಯಾಗಲೀ ನನ್ನಲ್ಲಿ ಎಂದೂ ಇರಲಿಲ್ಲ. ಆದರೆ ನನ್ನ ಜೀವನ ನದಿ ಹೊರಳಿಕೊಳ್ಳುತ್ತಲೇ ಸಾಗುವ ಒಂದು ನಿಯಮ ಹಾಕಿಕೊಂಡಿದೆ. ವರ್ಗಾವಣೆಯ ಹುದ್ದೆಯಲ್ಲಿದ್ದ ರವೀಂದ್ರನ ಜೊತೆ ಹರಿಯುತ್ತಲೇ ಹೋದ ನನ್ನ ಜೀವನದಿಗೆ ಸುಮ್ಮನೆ ಇರುವ ಜಾಯಮಾನ ಇರಲಿಲ್ಲ. ಆದ್ದರಿಂದ ಆಕಾಶವಾಣಿಯಲ್ಲಿ ಹಂಗಾಮಿ ಉದ್ಘೋಷಕಿಯಾಗಿ ಕೆಲಸ ಮಾಡುತ್ತಿದ್ದೆ, ನಂತರ ವಾರ್ತಾವಾಚಕಿ ಆಗಿ ಕಾರ್ಯ ನಿರ್ವಹಿಸಿದೆ.  ಜೊತೆಗೆ ಟೈಪಿಂಗ್ ಕೆಲಸಗಳು, ಟೈಲರಿಂಗ್, ಎಂಬ್ರಾಯ್ಡರಿ ಹೀಗೆ ಅನೇಕ ಹೊರಳುಗಳು ಜೊತೆಜೊತೆಗೇ ಸಾಗಿದವು. ಎಲ್ಲ ಕ್ಷೇತ್ರಗಳೂ ನನಗೆ ವಿಪುಲವಾದ ಅನುಭವಗಳನ್ನು ಕೊಡುತ್ತಲೇ ಹೋದವು. ನಂತರ ಪ್ರಾಣಚೈತನ್ಯ ಚಿಕಿತ್ಸೆ, ಗಾಯತ್ರಿ ಯೋಗ ಇವುಗಳ ಮೂಲಕ ಕಣ್ಣಿಗೆ ಕಾಣದ ಚೈತನ್ಯವಲಯಗಳ ಅದ್ಭುತ ವಿಜ್ಞಾನದ ಲೋಕ ನನ್ನ ಮುಂದೆ ತೆರಕೊಂಡಿತು. ರವೀಂದ್ರ ನನಗೆ ಬರೆಯಲು ಹೇಳಿದರು. ಅನ್ನಿಸಿದ್ದನ್ನೆಲ್ಲ ಬರೆಯುತ್ತ ಹೋಗು ನಿನಗೇ ತಿಳಿಯುತ್ತೆ ಅಂತ. ಹೀಗೆ ಬರೆದ ಮೊದಲ ಪ್ರಬಂಧವೇ ‘ಗೊಂದಲಗಳ ನಾಡಿನಲ್ಲಿ’ ಅದು ಪ್ರಕಟವಾದದ್ದು ಚಂದ್ರಶೇಖರ ಪಾಟೀಲರ ಸಂಕ್ರಮಣ ಪತ್ರಿಕೆಯಲ್ಲಿ. ನಂತರ ನನಗೆ ಸ್ವಲ್ಪ ಸ್ಫೂರ್ತಿ ಬಂದು ಕೆಲವು ವೈಚಾರಿಕ ಲೇಖನಗಳು, ಕಥೆಗಳು,  ಹಾಸ್ಯ ಬರೆಹ ಹೀಗೆ ಕಸ್ತೂರಿ, ತುಷಾರ, ಉದಯವಾಣಿ, ಕನ್ನಡ ಪ್ರಭ ಮುಂತಾದೆಡೆ ಪ್ರಕಟವಾದವು. ಆದರೂ ನನಗೆ ಬರವಣಿಗೆ ಪ್ರೀತಿಯಾದ ಆಯ್ಕೆ ಆಗಲಿಲ್ಲ. ಎಷ್ಟೋ ಸಲ ಯಾರಾದರೂ ಕೇಳಿದಾಗ ಮುಂದೂಡುತ್ತಿದ್ದೆ. ರವೀಂದ್ರ ಹೇಳುತ್ತಿದ್ದರು, ‘ಬರಿ, ಬರಿ, ಬರಿ’ ಒಂದು ಸಲ ಅಂತೂ ಜಗಳ ಆಡಿದ್ದೆ, ಅದೇನು ಬರಿ ಅಂತ ಫೋರ್ಸ್ ಮಾಡ್ತೀರ? ನನಗೆ ಇಷ್ಟ ಇಲ್ಲದ್ದನ್ನೇ ಮಾಡಬೇಕ’ ಅಂತ. ಆದರೆ ನನ್ನ ಕಥೆಗಳನ್ನು, ಲೇಖನಗಳನ್ನು ಓದಿ ಅನೇಕ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದಾಗ ಅಯೋಮಯವಾಗಿ ನಿಲ್ಲುತ್ತಿದ್ದೆ. ಗೌರೀಶ್ ಕಾಯ್ಕಿಣಿ ದಂಪತಿ ಪತ್ರ ಬರೆದು ಮೆಚ್ಚುಗೆ ತಿಳಿಸುತ್ತಿದ್ದರು. ಇನ್ನು ಸಾಮಾನ್ಯ ಓದುಗರು ಅವರ ಬದುಕಿನ ನ್ಯೂನತೆಗೆ ಮನಸ್ಸಿನ ಗೊಂದಲಗಳಿಗೆ ನನ್ನ ಲೇಖನ, ಕತೆಗಳಲ್ಲಿ ಉತ್ತರ ದೊರಕಿದೆ ಅದನ್ನು ಅಳವಡಿಸಿಕೊಂಡಿದ್ದೇವೆ ಅಂತ ಹೇಳುತ್ತಿದ್ದರು. ಆಗೆಲ್ಲ ರವೀಂದ್ರ ಹೇಳುತ್ತಿದ್ದರು, ‘ಬರೆಯುವುದು ಪ್ರಶಸ್ತಿಗೆ ಅಲ್ಲ. ಮನಸ್ಸಿನ ಭಾವನೆ ಹೊರಗೆ ಹಾಕೋದಕ್ಕೂ ಅಲ್ಲ. ಅದನ್ನು ಕರ್ತವ್ಯವಾಗಿ ನೋಡು. ಅಕ್ಷರ ಕಲಿತವರು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು. ನಿನಗೆ ಈಗ ಸಿಕ್ಕಿರುವ ಜ್ಞಾನ ಕೂಡ ಬೇರೆಯವರು ಬರೆದಿರೋದರಿಂದ ತಾನೇ? ಕಾರಂತರು, ಕಾರ್ನಾಡರು ಎಲ್ಲರೂ ಬರವಣಿಗೆಯ ಮೂಲಕ ಲಕ್ಷಾಂತರ ಜನರಿಗೆ ಮಾರ್ಗದರ್ಶನ ನೀಡಿದರು. ತಿಳಿವಳಿಕೆ ಮತ್ತು ಅಕ್ಷರಜ್ಞಾನ ಇದ್ದಾಗ ಬರೆಯುವ ಜವಾಬ್ದಾರಿ ತೆಗೆದುಕೊಳ್ಳಬೇಕು’ ಅಂತ. ಪುಸ್ತಕ ಬರಿ ಅನ್ನುತ್ತಿದ್ದರು. ಕಾದಂಬರಿ ಬರಿ ಅನ್ನುತ್ತಿದ್ದರು.

ನಾನು ಎಂಬ ಒಳಜಗತ್ತೇ ನನಗೆ ಸವಾಲು ಹೊರತು, ಹೊರಜಗತ್ತು, ವ್ಯಕ್ತಿ, ಘಟನೆಗಳು ನನಗೆ ಸವಾಲು ಅಂತ ಅನ್ನಿಸಿಲ್ಲ. ಕಷ್ಟಗಳನ್ನೆಲ್ಲ ಸವಾಲು ಎಂಬ ಲಿಸ್ಟಿಗೆ ಹಾಕುವುದು ನನ್ನ ಜಾಯಮಾನವಲ್ಲ. ನಾನು ನನ್ನ ಜೀವನದಲ್ಲಿ ಎಂದೂ ಕೋಪಿಸಿಕೊಂಡವಳೇ ಅಲ್ಲ. ಏನಾದರೂ ಬೇಸರ ಆದರೆ ಮನೆಯಲ್ಲಿರುವ ಪಾತ್ರೆಗಳನ್ನೆಲ್ಲ ಮತ್ತೆ ಮತ್ತೆ ತೊಳೆದು ಹೊಳಪು ಮಾಡಿಬಿಡುತ್ತಿದ್ದೆ. ನಮ್ಮನೆಯಲ್ಲಿ ವಿಪರೀತ ಹಿತ್ತಾಳೆ ಹಂಡೆಗಳು, ದೊಡ್ಡದೊಡ್ಡ ಪಾತ್ರೆಗಳು ಇರುತ್ತಿದ್ದವು.  ಅದೆಲ್ಲವನ್ನೂ ಅಟ್ಟದಿಂದ ಇಳಿಸಿ ಚೆನ್ನಾಗಿ ಹುಣಿಸೆ ಹಣ್ಣು ಹಾಕಿ ತಿಕ್ಕಿ ಶುಭ್ರ ಮಾಡಿ ಇಡುತ್ತಿದ್ದೆ. ಅಕ್ಕ ಹೇಳುತ್ತಿದ್ದಳು, ಮಂದಾರಿಗೆ ಕೋಪ ಬಂದರೆ ಅಟ್ಟ ಎಲ್ಲ ಕ್ಲೀನ್ ಆಗುತ್ತೆ ಅಂತ. ಅದಕ್ಕೆ ಕೋಪ ಎಂದು ಕರೆಯಬೇಕೆ? ತಿಳಿಯದು. ಆದರೆ, ಅನನ್ಯ ಹುಟ್ಟಿದ ಮೇಲೆ ಬಹುಶಃ ಅವನಿಗೆ ಎರಡು ವರ್ಷ ಆಗಿರಬೇಕು. ನನಗೆ ಕೋಪದ ಅನುಭವ ಆಗತೊಡಗಿತು.  ಒಳಗೊಳಗೇ ಕೋಪ. ವ್ಯಕ್ತ ಮಾಡದಿದ್ದರೂ ನನಗೆ ಗೊತ್ತಿತ್ತು, ಕೋಪ ಎಂದರೆ ಇದೇ ಅಂತ. ಒಂದು ದಿನ ರವೀಂದ್ರಂಗೆ ಹೇಳಿದೆ, ‘ಒಳಗೆ ತುಂಬ ಕೋಪ ಬರುತ್ತೆ. ಯಾಕೆ ಅಂತ ತಿಳೀತಿಲ್ಲ’ ಅಂತ. ‘ಕಾರಣ ಹುಡುಕುತ್ತಾ ಹೋಗು ನಿನಗೇ ತಿಳಿಯುತ್ತೆ’ ಅಂದರು. ಅದೂ ಕೆಲವು ದಿನ ನಡೆಯಿತು. ಮಕ್ಕಳಾದ ಮೇಲೆ ಹಾರ್ಮೋನ್ ಏರಿಳಿತದಿಂದ ಹೀಗೆಲ್ಲ ಆಗುವ ಸಾಧ್ಯತೆ ಇರುತ್ತೆ ಎಂಬ ಅಭಿಪ್ರಾಯ ಕೂಡ ಬಂದಿತು. ಆದರೆ ಕೋಪ ಬಂದರೆ ಮತ್ತೇನು? ಮತ್ತೆ ಮನೆ ಕ್ಲೀನ್, ಕ್ಲೀನ್, ಕ್ಲೀನ್!

ನಮ್ಮ ಮನೆಯಲ್ಲಿ ಸುಮಾರು ನೂರರಷ್ಟು ಹೂಕುಂಡಗಳಿದ್ದವು. ಅವುಗಳಿಗೆಲ್ಲ ಕೆಂಪಗಿನ ಬಣ್ಣ ಬಳೆಯೋದು, ಹೀಗೆ ಹುಚ್ಚುಚ್ಚು ಕೆಲಸಗಳನ್ನು ನಾನೇ ಅಂಟಿಸಿಕೊಂಡು ಮಾಡುತ್ತಿದ್ದೆ. ರವೀಂದ್ರಂಗೆ ಬಂದ ಪ್ರಶಸ್ತಿ ಫಲಕಗಳನ್ನೆಲ್ಲ ಪಾಲಿಶ್ ಮಾಡುತ್ತಿದ್ದೆ ಒಂದಿನಿತೂ ಬೇಸರವಿಲ್ಲದೆ, ಖುಷಿಯಾಗಿ. ಆದರೂ ಕೋಪದ ತೀವ್ರತೆ ಒಳಗೊಳಗೇ ಬಾಧಿಸುತ್ತಿತ್ತು. ‘ಇದು ನಾನಲ್ಲ’ ಎಂದು ಸ್ಪಷ್ಟವಾಗಿ ಅನ್ನಿಸುತ್ತಿತ್ತು. ಒಂದು ದಿನ ರವೀಂದ್ರ ಹೇಳಿದರು, ‘ಬೇಕಿದ್ರೆ ಒಬ್ಬ ಸೈಕಿಯಾಟ್ರಿಸ್ಟ್ ಬಳಿ ಹೋಗೋಣ.’ ಸರಿ ಎಂದು ತಕ್ಷಣ ಒಪ್ಪಿಕೊಂಡೆ.  ಆನಂತರ ಅದಕ್ಕಾಗಿ ಮೂರು ಗಂಟೆ ಪ್ರಯಾಣ ಮಾಡಬೇಕು ಮತ್ತು ವಾರ ವಾರ ಹೋಗಿ ಬರಬೇಕು. ಸಾಧ್ಯವೇ ಎಂಬ ಪ್ರಶ್ನೆ.  ಅದು ಒಂದು ದಿನದ ಭೇಟಿ ಅಲ್ಲ ಅಂತ ಖಾತರಿ ಆಯಿತು.

naanemba parimaladha haadhiyali

ಸೌಜನ್ಯ : ಅಂತರ್ಜಾಲ

ಒಂದು ದಿನ ಕೃಷ್ಣನಿಗೆ ಹೇಳಿದೆ. ‘ನೋಡು ಎಲ್ಲ ಗೊತ್ತು ನಿನಗೆ. ಈ ಕೋಪದ ತೀವ್ರತೆಯಿಂದ ಹೊರಗೆ ಬರಬೇಕು ನಾನು. ಅದೇನು ಮಾಡ್ತೀಯೋ ಮಾಡು ಅಷ್ಟೆ.’  ಅದಾದ ಕೆಲವು ದಿನಗಳ ನಂತರ ಕದ್ರಾದ ಹೈಡ್ರೋ ಎಲೆಕ್ಟ್ರಿಕಲ್ ಪವರ್ ಪ್ರಾಜೆಕ್ಟ್​ನ ಚೀಫ್ ಎಂಜಿನಿಯರ್ ಹರಿಹರನ್ ಅಯ್ಯರ್ ಆಕಾಶವಾಣಿಗೆ ಕಾರ್ಯಕ್ರಮ ಕೊಡಲು ಬಂದಿದ್ದರು. ರವೀಂದ್ರ ಅವರನ್ನು ಮಧ್ಯಾಹ್ನ ಊಟಕ್ಕೆ ನಮ್ಮ ಮನೆಗೆ ಕರೆತಂದರು. ಪ್ರಾಣಚೈತನ್ಯ ಚಿಕಿತ್ಸೆ ನೀಡುತ್ತಿದ್ದ ಅವರ ಬಳಿ ರವೀಂದ್ರ ನನ್ನ ಕೋಪದ ಸಮಸ್ಯೆಯ ಬಗ್ಗೆ ಹೇಳಿದರು. ಅದಕ್ಕೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ. ಅವರು ‘ಖಂಡಿತ ಸಾಧ್ಯ ಅದನ್ನು ಓಡಿಸಿಬಿಡಬಹುದು’ ಅಂದರು. ಅವರು ನನಗೆ ಚಿಕಿತ್ಸೆ ಕೂಡ ಕೊಟ್ಟರು. ‘ಕಣ್ಣಿಗೆ ಕಾಣದ ಕೋಪವನ್ನ ತೆಗೀತೀನಿ’ ಅಂತೀರಿ ಅದೆಲ್ಲ ಹೇಗೆ ಎಂದು ಕೇಳಿದೆ. ಆಗ ಆ ಅಗೋಚರ ಚೈತನ್ಯ ಸಿದ್ಧಾಂತಗಳು, ಅದರ ವಲಯಗಳು, ಅದರ ಚಲನೆ ನಿಯಮಗಳು ಎಲ್ಲದರ ಕುರಿತು ಮಾತನಾಡಿದ ಅವರು, ‘ನಿಮಗೆ ಕೋಪ ಇಲ್ಲ ಅಂತ ನೀವು ತಿಳಿದಿರುತ್ತೀರಿ. ಆದರೆ ಸುಪ್ತಮನಸ್ಸಿನಲ್ಲಿ ಎಲ್ಲವೂ ಇರುತ್ತದೆ.  ಪ್ರತಿಯೊಬ್ಬ ಒಳ್ಳೆಯ ವ್ಯಕ್ತಿಯ ಒಳಗೆ ಒಬ್ಬ ಕ್ರೂರಿ ಇರುತ್ತಾನೆ ಮತ್ತು ಪ್ರತಿಯೊಬ್ಬ ಕ್ರೂರಿಯ ಒಳಗೆ ಒಬ್ಬ ಒಳ್ಳೆ ವ್ಯಕ್ತಿ ಇರುತ್ತಾನೆ. ಅಂಡರ್ ವಾಟರ್ ಕರೆಂಟ್​ ಯಾವಾಗಲೂ ವಿರುದ್ಧ ದಿಕ್ಕಿನಲ್ಲೇ ಹರಿಯುವುದು. ಕೋರ್ಸ್ ನಲ್ಲಿ ನಿಮಗೆ ಈ ಕುರಿತ ಅನೇಕ ವಿವರಗಳು, ತಂತ್ರಗಳು ಎಲ್ಲವೂ ತಿಳಿಯುತ್ತವೆ. ನಿಮ್ಮ ಸುಪ್ತಮನಸ್ಸನ್ನು ನೀವೇ ಶುದ್ಧ ಮಾಡಿಕೊಳ್ಳಬೇಕು. ನಿಮ್ಮ ಮನೆ ಸ್ವಚ್ಛಗೊಳಿಸುತ್ತೀರಲ್ಲ ಹಾಗೆ’ ಅಂದರು. ನನಗೆ ಅತ್ಯಂತ ಆಪ್ತವಾದ ಮತ್ತು ಪ್ರಿಯವಾದ ವಿಚಾರ ಅದು. ತಕ್ಷಣ ಒಪ್ಪಿಕೊಂಡೆ.

ಈ ಕೋರ್ಸಿನಲ್ಲಿ ನನಗೆ ಅತ್ಯಂತ ಹೆಚ್ಚು ಪ್ರಿಯವಾದದ್ದು ಸ್ಕ್ಯಾನಿಂಗ್​. ಈ ತಂತ್ರ ನನ್ನನ್ನು ಎಷ್ಟು ಆವರಿಸಿದೆ ಎಂದರೆ ಒಂದೊಂದು ಅನುಭವಗಳೂ ಅಮೋಘ. ನನ್ನೊಳಗಿನ ಪ್ರಾಮಾಣಿಕತೆ ಮತ್ತದರ ಪ್ರಮಾಣ ಎಷ್ಟು ಹೇಗೆ ಅದನ್ನು ಶುದ್ಧೀಕರಿಸುವುದು, ಹೇಗೆ ಅದನ್ನು ದೀರ್ಘಗೊಳಿಸಿಕೊಳ್ಳುವುದು ಅಲ್ಲಿ ಎಲ್ಲವೂ ನನ್ನದೇ ನಿರ್ಧಾರ. ಹೀಗೆ ಪ್ರಾಣಚೈತನ್ಯ ಚಿಕಿತ್ಸೆಯಲ್ಲಿ ಅನೇಕ ಹಂತಗಳ ಪದವಿ ಪಡೆದೆ. ಪ್ರತಿಯೊಂದರಲ್ಲೂ ಶುದ್ಧೀಕರಣಕ್ಕೇ ಪ್ರಾಧಾನ್ಯ. ಈ ಗಡಿಬಿಡಿಗಳಲ್ಲಿ ಕೋಪವೆನ್ನುವುದು ಯಾವ ಮಾಯೆಯಲ್ಲಿ ಕರಗಿ ಹೋಯಿತೋ, ನೆನಪೇ ಇಲ್ಲ. ಈ ಅನ್ವೇಷಣೆ ನಮ್ಮ ಮನಸ್ಸಿನ ವಲಯದೊಳಗೇ ನಡೆಯುತ್ತವೆ ಆದ್ದರಿಂದ ನಾನು ಎಂದರೆ ಏನು ಎಂಬ ಅನೇಕ ಪ್ರಶ್ನೆಗಳಿಗೆ ನೇರ ಉತ್ತರಗಳು ದೊರೆಯುತ್ತವೆ. ಸ್ವೀಕರಿಸಲು ಸಾಕಷ್ಟು ಸಾಮರ್ಥ್ಯ ಮತ್ತು ಗುರುವಿನ ಮಾರ್ಗದರ್ಶನದ ಅಗತ್ಯ ಬೀಳುತ್ತದೆ. ಈ ರೀತಿ ಮನದೊಳಗಿನ ಅನ್ವೇಷಣೆಯಲ್ಲಿ ಕೆಲವು ವರ್ಷಗಳು ಬರೆಯುವುದನ್ನೇ ಬಿಟ್ಟುಬಿಟ್ಟೆ. ಅದೊಂದು ರೀತಿ ನನಗೆ ಅತ್ಯಂತ ಆನಂದವಾದ ಸಮಯ.  ಆ ಸಮಯದಲ್ಲಿ ದೊರೆತ ಗುರು ಪರಂಪರೆಗಳು ಮತ್ತು ಗುರುಮುಖೇನವೇ ಕಲಿತ ಪಾಠಗಳು ಅಪಾರ. ಉಪನಿಷತ್ತುಗಳು, ಭಗವದ್ಗೀತೆ, ಲಲಿತಾ ಸಹಸ್ರನಾಮ ಒಂದೇ ಎರಡೇ! ನನಗೆ ದೊರೆತ ಗುರು ವೇದಬ್ರಹ್ಮ ಎಂದು ಕರೆಯಲ್ಪಟ್ಟವರು. ‘ಪಿತಾ ಜ್ಞಾನಂ’ ಅವರು ನನಗೆ ತಂದೆ ಆಗಿದ್ದವರು. ಮೊಗೆಮೊಗೆದು ಜ್ಞಾನ ನೀಡಿದರು.  ಒಂದಿಷ್ಟು ಬೇಸರಿಸದೆ ಹಿಡಿದಿಟ್ಟುಕೊಳ್ಳದೆ ಪ್ರತಿ ಸಂಶಯಗಳಿಗೂ ಅನುಭವದ ಉತ್ತರಗಳನ್ನೇ ಹುಡುಕಲು ಹೇಳುತ್ತಿದ್ದರು. ಅವರು, ಮಗುವಿನಂತೆ ಹೇಳುತ್ತಿದ್ದರು ಮೌನ ಸಾಧಿಸಲು ಪ್ರಯತ್ನಿಸುತ್ತಾ ಇದ್ದೀನಮ್ಮಾ ಆದರೆ ಈ ಜನ ಬಿಡುತ್ತಿಲ್ಲ, ಮೌನದ ಆನಂದವೇ ಬೇರೆ.

ಹೌದು. ನಾನು ಹೆಚ್ಚು ಮಾತಿನ ಪ್ರಿಯೆ ಅಲ್ಲ. ರವೀಂದ್ರ ಕೂಡ ಅಷ್ಟೆ. ಆಡಂಬರದ ಮಾತುಗಳು, ಉಪಚಾರದ ಮಾತುಗಳು ನಮಗೆ ಬರುವುದಿಲ್ಲ. ನಾನು ರವೀಂದ್ರ ಗಂಟೆಗಟ್ಟಲೇ ಮೌನವಾಗಿ ಇರುತ್ತಿದ್ದೆವು. ಆರು ಗಂಟೆ ಪ್ರಯಾಣ ಇದ್ದರೂ, ಮೌನ ಅಥವಾ ಕೆಲವು ಸಾಹಿತ್ಯಕ ವಿಚಾರಗಳಿದ್ದರೆ ಅದನ್ನು ಅವರು ಹೇಳುತ್ತಿದ್ದರು. ಆಧ್ಯಾತ್ಮಿಕ ವಿಚಾರಗಳಿದ್ದರೆ ನಾನು ಹೇಳುತ್ತಿದ್ದೆ. ಒಂದು ಅರ್ಧಗಂಟೆ ಅಬ್ಬಬ್ಬ ಅಂದ್ರೆ… ಅಲ್ಲಿಗೆ ಮಾತು ಮುಗಿಯುತ್ತಿತ್ತು. ಮುಂದೆ ಬರೀ ಮೌನ. ಈ ಮೌನವನ್ನು ನಾನು ಅವರು ಇಬ್ಬರೂ ಎಷ್ಟು ಪ್ರೀತಿಸುತ್ತಿದ್ದೆವು ಅಂದರೆ, ಹೊರಗೆ ವಾಕ್ ಹೋದಾಗ, ಮರದ ಕೆಳಗೆ ಕುಳಿತಾಗ, ದೇವಾಲಯದ ಕಟ್ಟೆಯ ಮೇಲೆ ಕುಳಿತಾಗ, ಮನೆಯಲ್ಲಿ ಕುಳಿತಾಗ, ಬಾಲ್ಕನಿಯಲ್ಲಿ ಕುಳಿತಾಗ, ಕೈಯಲ್ಲಿ ಕಾಫಿ ಅಥವಾ ಲೆಮನ್ ಟೀ ಹಿಡಿದು ರಾತ್ರಿ ಒಂಬತ್ತಾದರೂ ಕೂಡ. ಬಹುಶಃ ನಾವಿದ್ದ ಮನೆಗಳಿಗೆ ನಂತರ ಬಂದವರು ಕೂಡ ಆ ಮೌನವನ್ನು ಅನುಭವಿಸಿಬಿಟ್ಟಿರಬಹುದು. ಈಗ ಒಂದು ವರ್ಷದಿಂದ ಏನನ್ನೂ ಬರೆದಿಲ್ಲ. ಬಹುಶಃ ನನಗೆ ಅತ್ಯಂತ ಆಪ್ತವಾದ ಮೌನದಲ್ಲಿ ರವೀಂದ್ರರೊಂದಿಗೇ ಇದ್ದೀನೇನೋ. ಈ ಇರವು ನನ್ನೊಳಗನ್ನು ಹೆಚ್ಚು ಶ್ರೀಮಂತಗೊಳಿಸುತ್ತಿದೆ. ಹೆಚ್ಚುಹೆಚ್ಚು ಆಂತರಿಕ ಶೋಧದಲ್ಲಿ ಮುಳುಗಿದ್ದೇನೆ. ವಿಚಾರಗಳಲ್ಲಿ ಮತ್ತಷ್ಟು ನಿಖರತೆ ಬೆಳೆದು ಗಟ್ಟಿಯಾಗುತ್ತಿದ್ದೇನೆ. ನೋವು, ಸಂಕಟ, ಕಷ್ಟ, ತಲ್ಲಣ, ಕಣ್ಣೀರು, ದುಃಖ, ಗದ್ಗದವಾದ ಮನಸ್ಸು, ಎಲ್ಲವನ್ನೂ ಹೊತ್ತು ಸಾಗಬಲ್ಲೆ ಆದರೆ ಎಲ್ಲವನ್ನೂ ಹೊರಚೆಲ್ಲಿಯೇ ನಡೆಯಬೇಕೆಂಬ ಒತ್ತಡವಿಲ್ಲ. ಯಾವುದೂ ಭಾರವೆನಿಸುತ್ತಿಲ್ಲ. ಅವುಗಳ ಒಳಗೆ ಮತ್ತೇನೋ ಕಾಣಿಸುತ್ತಿದೆ. ಜ್ಞಾನ ವಿಸ್ತಾರಗೊಳ್ಳುತ್ತಿದೆ.

Follow us on

Most Read Stories

Click on your DTH Provider to Add TV9 Kannada