ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಅಟ್ಟಹಾಸ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಸೂಕ್ತ ಚಿಕಿತ್ಸೆ ಸಿಗದೇ ಅನೇಕರು ಸಾಯುತ್ತಿದ್ದಾರೆ. ಅದರಲ್ಲೂ ಕಲಬುರಗಿ ನಗರದಲ್ಲಿರುವ ಗುಲಬರ್ಗಾ ಮೆಡಿಕಲ್ ಕಾಲೇಜಿನ ಆಸ್ಪತ್ರೆ ವಿರುದ್ದ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ. ಬಡ ರೋಗಿಗಳ ಪಾಲಿಗೆ ಸಂಜೀವಿನಿಯಾಗಬೇಕಿದ್ದ ಜಿಮ್ಸ್ ಆಸ್ಪತ್ರೆ, ಸೂಕ್ತ ಚಿಕಿತ್ಸೆ ಸಿಗದೇ ಅನೇಕ ರೋಗಿಗಳ ಪಾಲಿಗೆ ಸಾವಿನ ಮನೆಯಾಗುತ್ತಿದೆ. ಹೀಗಾಗಿ ಜಿಮ್ಸ್ ಆಸ್ಪತ್ರೆ ವಿರುದ್ದ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದ್ಯಾವ ಮಟ್ಟಿಗೆ ಅಂದ್ರೆ ದಯವಿಟ್ಟು ಯಾರು ಕೂಡಾ ನಿಮ್ಮ ಕುಟುಂಬದವರನ್ನು ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಡಿ. ನೀವು ಕರೆದುಕೊಂಡು ಹೋದರೆ, ಅವರು ಅರಾಮಾಗಿ ಮನೆಗೆ ಬರೋದಿಲ್ಲಾ. ಬದಲಾಗಿ ಸೀದಾ ಸ್ಮಶಾನಕ್ಕೆ ಹೆಣವಾಗಿ ಕಳುಹಿಸುತ್ತಾರೆ ಎಂದು ತಾಯಿಯನ್ನು ಕಳೆದುಕೊಂಡ ಮಗನೋರ್ವ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಲ್ಲಹಂಗರಗಾ ಗ್ರಾಮದ ನಿವಾಸಿಯಾಗಿರುವ ಬಸವರಾಜ್ ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, ಜಿಮ್ಸ್ ಆಸ್ಪತ್ರೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಉಸಿರಾಟದ ಸಮಸ್ಯೆ ಹಿನ್ನೆಲೆ ತಮ್ಮ 65 ವರ್ಷದ ತಾಯಿಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಲ್ಲಿ ಸೂಕ್ತ ಚಿಕಿತ್ಸೆ ನೀಡಲಿಲ್ಲವಂತೆ. ಹೀಗಾಗಿ ಬಸವರಾಜ್ ಅವರ ತಾಯಿ ಮೃತಪಟ್ಟಿದ್ದಾರೆ. ಹೀಗೆ ಅನೇಕರು ಜಿಮ್ಸ್ ಆಸ್ಪತ್ರೆಯಲ್ಲಿ ಸಾಯುತ್ತಿದ್ದಾರೆ. ಜಿಮ್ಸ್ ಸಾವಿನ ಮನೆಯಾಗುತ್ತಿದೆ ಅಂತ ಆಕ್ರೋಶ ವ್ಯಕ್ತಪಡಿಸಿರುವ ಬಸವರಾಜ್, ಜಿಮ್ಸ್ ಆಸ್ಪತ್ರೆಗೆ ರೋಗಿಗಳನ್ನು ಸೇರಿಸಬೇಡಿ ಅಂತ ಮನವಿ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಎಲ್ಲಡೆ ವೈರಲ್ ಆಗಿದೆ.
ಜಿಮ್ಸ್ ನಲ್ಲಿ ಸರಿಯಾಗಿ ಚಿಕಿತ್ಸೆ ನೀಡದೇ ಇರುವುದರಿಂದ ನಾನು ನಮ್ಮ ತಾಯಿಯನ್ನು ಕಳೆದುಕೊಳ್ಳಬೇಕಾಯಿತು. ನಮ್ಮ ಸ್ನೇಹಿತರು ಕೂಡಾ ಕೆಲವರನ್ನು ದಾಖಲಿಸಿದ್ದರು. ಅವರು ಕೂಡಾ ಬದುಕಲಿಲ್ಲಾ. ಜಿಮ್ಸ್ ನಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲಾ. ರೋಗಿಗಳ ಬಗ್ಗೆ ಯಾರಿಗೂ ಕೂಡಾ ಕಾಳಜಿಯಿಲ್ಲ. ಹೀಗಾಗಿ ನೊಂದಿದ್ದೇನೆ. ನನಗೆ ಆದ ಪರಿಸ್ಥಿತಿ ಬೇರೆಯವರಿಗೆ ಆಗಬಾರದು ಅಂತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದೇನೆ ಎಂದು ನೊಂದ ತಾಯಿಯನ್ನು ಕಳೆದುಕೊಂಡ ಬಸವರಾಜ್ ತಿಳಿಸಿದ್ದಾರೆ.
ಮತ್ತೊಂದೆಡೆ ಕಲಬುರಗಿ ನಾಗರಿಕರ ವೇದಿಕೆ ವತಿಯಿಂದ ಇಂದು ಅನೇಕರು ಮನೆಯಲ್ಲಿಯೇ ಕುಳಿತು ಬೋರ್ಡ್ಗಳನ್ನು ಹಿಡಿದು ಜಿಮ್ಸ್ ಆಸ್ಪತ್ರೆ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಜಿಮ್ಸ್ನಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಕೊರೊನಾ ಸೋಂಕಿತರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಗುಣಮಟ್ಟದ ಚಿಕಿತ್ಸೆ ಕೊರತೆಯಿಂದಾಗಿ ಅನೇಕರು ಸಾಯುತ್ತಿದ್ದಾರೆ. ರೋಗಿಗಳು ಬಿದ್ದು ಒದ್ದಾಡಿದರು ಯಾರು ಕೂಡಾ ಅವರನ್ನು ನೋಡುತ್ತಿಲ್ಲ. ಜಿಮ್ಸ್ ನಲ್ಲಿ ನಿರ್ಲಕ್ಷ್ಯದ ಪರಮಾವದಿ ಹೆಚ್ಚಾಗಿದೆ. ಕಲಬುರಗಿ ಜಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಿ, ಜನರ ಜೀವ ರಕ್ಷಿಸಿ ಎಂದು ಮನೆಯಲ್ಲಿಯೇ ಕುಳಿತು ಕಲಬುರಗಿ ನಾಗರಿಕರ ವೇದಿಕೆಯಿಂದ ಅನೇಕರು ಪ್ರತಿಭಟನೆ ನಡೆಸಿದ್ದಾರೆ.
ಶೌಚಾಲಯದಲ್ಲಿ ಬಿದ್ದು ಸತ್ತರು ಡೋಂಟ್ ಕೇರ್
ಕಲಬುರಗಿ ಜಿಮ್ಸ್ ಆಸ್ಪತ್ರೆಯನ್ನು ಇದೀಗ ಸಂಪೂರ್ಣವಾಗಿ ಕೊವಿಡ್ ಆಸ್ಪತ್ರೆಯನ್ನಾಗಿ ಬದಲಾಯಿಸಲಾಗಿದೆ. ಜಿಮ್ಸ್ನಲ್ಲಿ 400 ಬೆಡ್ಡ್ಗಳಿದ್ದು, ಎಲ್ಲಾ ಬೆಡ್ಗಳು ಭರ್ತಿಯಾಗಿವೆ. ಸರ್ಕಾರಿ ಆಸ್ಪತ್ರೆಯಾಗಿರುವುದರಿಂದ ಜಿಲ್ಲೆಯ ಬಹುತೇಕ ಬಡವರು ಜಿಮ್ಸ್ ಆಸ್ಪತ್ರೆಗೆ ಬರುತ್ತಾರೆ. ಆದ್ರೆ ಜಿಮ್ಸ್ನಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲಾ ಅನ್ನೋದು ಬಹುತೇಕರ ಆರೋಪವಾಗಿದೆ. ಇದೇ ಜಿಮ್ಸ್ ನಲ್ಲಿ ಶೌಚಾಲಯಕ್ಕೆ ಹೋಗಿದ್ದ ವ್ಯಕ್ತಿಯೋರ್ವ, ಶೌಚಾಲಾಯದಲ್ಲಿಯೇ ಬಿದ್ದು ಸತ್ತರು ಕೂಡಾ ಯಾರು ನೋಡಿರಲಿಲ್ಲಾ. ನಾಲ್ಕು ಗಂಟೆ ನಂತರ ಸಾವಿನ ಬಗ್ಗೆ ಗೊತ್ತಾಗಿತ್ತು. ಇದೇ ರೀತಿ ಅನೇಕರು ಶೌಚಾಲಯಕ್ಕೆ ಹೋದಾಗ, ಅಲ್ಲಿಯೇ ಬಿದ್ದು ಸತ್ತರು ಕೂಡಾ ಯಾರು ಕೇರ್ ಮಾಡೋದಿಲ್ಲವಂತೆ. ತಮ್ಮ ಮುಂದೆಯೇ ಅನೇಕ ಸೋಂಕಿತರು ನರಳಿ ನರಳಿ ಸತ್ತರು ಕೂಡಾ ಆಸ್ಪತ್ರೆಯ ಸಿಬ್ಬಂದಿ, ಸೋಂಕಿತರಿಗೆ ಆರೈಕೆ ಮಾಡುವ ಕೆಲಸವನ್ನು, ಅವರನ್ನು ಬದುಕಿಸುವ ಕೆಲಸವನ್ನು ಮಾಡೋದಿಲ್ಲಾವಂತೆ. ಹೀಗಾಗಿ ಅನೇಕರು ಬಹಿರಂಗವಾಗಿಯೇ ಜಿಮ್ಸ್ ಆಸ್ಪತ್ರೆಯ ಸಿಬ್ಬಂದಿ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅನೇಕರ ಸಾವಿಗೆ ಕೊರೊನಾ ಜೊತೆಗೆ ಜಿಮ್ಸ್ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯ ಕೂಡಾ ಇದೆ ಅಂತ ಹೇಳುತ್ತಿದ್ದಾರೆ.
ಬೌನ್ಸರ್ಗಳ ವಿರುದ್ಧ ಹೆಚ್ಚಾಗುತ್ತಿರುವ ಆಕ್ರೋಶ
ಇನ್ನು ಜಿಮ್ಸ್ನಲ್ಲಿ ಬೌನ್ಸರ್ಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳ ಸಂಬಂಧಿಗಳು ವಿನಾಕಾರಣ ಒಳಗಡೆ ಹೋಗಬಾರದು. ಆಸ್ಪತ್ರೆಯ ಸಿಬ್ಬಂದಿ ಮೇಲೆ ಆಗಾಗ ಆಗುತ್ತಿದ್ದ ಹಲ್ಲೆಗಳನ್ನು ತಡೆಯುವ ಉದ್ದೇಶದಿಂದ ಜಿಮ್ಸ್ನಲ್ಲಿ ವರ್ಷದ ಹಿಂದೆಯೇ ಬೌನ್ಸರ್ ಗಳ ನೇಮಕ ಮಾಡಿಕೊಳ್ಳಲಾಗಿದೆ. ಇದೀಗ ಅವರನ್ನು ಕೊರೊನಾ ಚಿಕಿತ್ಸೆ ನೀಡುವ ಟ್ರಾಮಾ ಕೇರ್ ಸೆಂಟರ್, ಜಿಮ್ಸ್ ಹೊಸ ಕಟ್ಟಡದ ಮುಂದೆ ಕೂಡಾ ನಿಯೋಜಿಸಲಾಗಿದೆ. ಬೌನ್ಸರ್ ಗಳು ಸೋಂಕಿತರ ಸಂಬಂಧಿಗಳ ಜೊತೆ ಅನುಚಿತವಾಗಿ ವರ್ತಿಸುವುದು, ಅವರ ಮೇಲೆ ಹಲ್ಲೆ ಮಾಡುವುದನ್ನು ಮಾಡುತ್ತಿದ್ದಾರಂತೆ. ಸೋಂಕಿತರಿಗೆ ಬೇಕಾದ ವಸ್ತುಗಳನ್ನು ಕೊಡಲು ಕೂಡಾ ಒಳಗಡೆ ಬಿಡ್ತಾಯಿಲ್ಲಾವಂತೆ. ಹೀಗಾಗಿ ಬೌನ್ಸರ್ ಗಳು ಕೂಡಾ ಗುಂಡಾ ವರ್ತನೆ ತೋರಿಸುತ್ತಿದ್ದಾರೆ. ಮೊದಲು ಬೌನ್ಸರ್ ಗಳನ್ನು ಬದಲಾಯಿಸಬೇಕು ಅನ್ನೋ ಆಗ್ರಹ ಕೂಡಾ ಹೆಚ್ಚಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೂಡಾ ಅನೇಕರು ದೂರು ನೀಡಿದ್ದಾರೆ.
ಜಿಮ್ಸ್ ನಲ್ಲಿ ಸೂಕ್ತ ಚಿಕಿತ್ಸೆ ಸಿಗ್ತಾಯಿಲ್ಲಾ ಅನ್ನೋದರ ಬಗ್ಗೆ ಅನೇಕರು ದೂರುಗಳನ್ನು ನೀಡಿದ್ದಾರೆ. ಕೆಲ ಸೋಮಾರಿ ವೈದ್ಯರು ಕೆಲಸ ಮಾಡದೇ ಇರಬಹುದು. ಆದ್ರೆ ಇನ್ನು ಅನೇಕರು ಹೆಚ್ಚಿನ ಕೆಲಸ ಮಾಡುತ್ತಿದ್ದಾರೆ. ಆದ್ರೂ ಕೂಡಾ ಜಿಮ್ಸ್ ನಲ್ಲಿರುವ ಅವ್ಯವಸ್ಥೆಯನ್ನು ಆದಷ್ಟು ಬೇಗನೆ ಬಗೆಹರಿಸಲಾಗುತ್ತದೆ. ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ಸಿಗುವಂತಹ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಇದನ್ನೂ ಓದಿ: ಜಿಮ್ಸ್ ಆಸ್ಪತ್ರೆಯ ಪ್ರಮುಖ ಗೇಟ್‌ಗಳಲ್ಲಿ ಬೌನ್ಸರ್‌ಗಳ ನೇಮಕ
(people express anger against kalaburagi gims hospital and post goes viral )
Published On - 6:37 pm, Tue, 18 May 21