ಚಿಕ್ಕಮಗಳೂರು: ಸಾವು-ಬದುಕಿನ ನಡುವೆ ಹೋರಾಟ ಮಾಡ್ತಿದ್ರೂ ಸಹಾಯ ಮಾಡದೆ ಶಾಸಕ ಡಿ.ಎಸ್ ಸುರೇಶ್ ಅಮಾನವೀಯವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್ ಬಳಿ ಅಪಘಾತ ಸಂಭವಿಸಿತ್ತು. ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪಘಾತ ನಡೆದಿತ್ತು. ಘಟನೆಯಲ್ಲಿ ಕೊರೊನಾ ಡ್ಯೂಟಿ ಮುಗಿಸಿ ಬರುತ್ತಿದ್ದ ಹಿರಿಯ ಆರೋಗ್ಯಾಧಿಕಾರಿಗೆ ಅಪಘಾತವಾಗಿದ್ದು ಅವರು ರಕ್ತದ ಮಡುವಿನಲ್ಲಿ ಒದ್ದಾಟ ನಡೆಸುತ್ತಿದ್ದರು. ಅರ್ಧಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲೇ ಒದ್ದಾಡಿದ್ದಾರೆ. ಆದರೆ ಈ ವೇಳೆ ನೋವಿನಿಂದ ಹಿರಿಯ ಆರೋಗ್ಯಾಧಿಕಾರಿ ಬಳಲುತ್ತಿದ್ದರು ತರೀಕೆರೆ ಶಾಸಕ ಡಿ.ಎಸ್ ಸುರೇಶ್ ಕಾರಿನಿಂದ ಕೆಳಗಿಳಿಯದೇ ಸುಮ್ಮನಾಗಿದ್ದಾರೆ.
ಆರೋಗ್ಯಾಧಿಕಾರಿಯ ಜೀವ ರಕ್ಷಿಸುವ ಕೆಲಸ ಮಾಡಿಲ್ಲ. ಅಮಾನವೀಯವಾಗಿ ವರ್ತಿಸಿದ್ದಾರೆ. ಶಾಸಕ ಸುರೇಶ್ರ ಈ ನಡೆಗೆ ಸ್ಥಳದಲ್ಲಿಯೇ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊನೆಗೆ ಆ್ಯಂಬುಲೆನ್ಸ್‌ನಲ್ಲಿ ವೈದ್ಯನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯದಲ್ಲಿಯೇ ವೈದ್ಯ ಡಾ.ರಮೇಶ್ ಕುಮಾರ್ ಸಾವನ್ನಪ್ಪಿದ್ದರು. ಕಣ್ಣ ಮುಂದೆ ಪ್ರಾಣ ಹೋಗ್ತಿದ್ರೂ ಮಾನವೀಯತೆ ತೋರದ ಶಾಸಕನ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ನಾನು ನಿದ್ದೆಗೆ ಜಾರಿದ್ದೆ -ಶಾಸಕ ಸ್ಪಷ್ಟನೆ
ಇನ್ನು ಅಪಘಾತದಲ್ಲಿ ಗಾಯಗೊಂಡು ನರಳಾಡಿ ವೈದ್ಯ ಸಾವು ಘಟನೆಯ ಬಗ್ಗೆ ಬಿಜೆಪಿ ಶಾಸಕ ಡಿ.ಎಸ್.ಸುರೇಶ್ ಸ್ಪಷ್ಟನೆ ನೀಡಿದ್ದಾರೆ. ನನಗೆ ಕಣ್ಣಿನ ನೋವು ಇದ್ದ ಹಿನ್ನೆಲೆಯಲ್ಲಿ ಕಾರಿನಿಂದ ಇಳಿಯಲಿಲ್ಲ. ನಾನು ನಿದ್ದೆಗೆ ಜಾರಿದ್ದೆ, ನನ್ನ ಕಾರು ಚಾಲಕ ನೆರವಿಗೆ ಹೋಗಿದ್ದ. ಕೆಲವೇ ನಿಮಿಷಗಳಲ್ಲಿ ವೈದ್ಯರನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಇದೇ ವೇಳೆ ಕೆಲ ಕಿಡಿಗೇಡಿಗಳು ವಿಡಿಯೋ ಮಾಡಿದ್ದಾರೆ. ನಾನು ಸಹಾಯಕ್ಕೆ ಹೋಗಿಲ್ಲ ಎಂಬಂತೆ ಬಿಂಬಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಘಟನೆಯ ಬಗ್ಗೆ ವಿಡಿಯೋ ಮೂಲಕ ಶಾಸಕ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: Akshay Kumar: ಅಕ್ಷಯ್ ಕುಮಾರ್ ಕಡೆಯಿಂದ ದೊರಕಿತು ಮತ್ತೊಂದು ದೊಡ್ಡ ಸಹಾಯ
Published On - 7:31 am, Thu, 27 May 21