ಹುಬ್ಬಳ್ಳಿ: ಕೊರೊನಾ ಎರಡನೇ ಅಲೆ ಹಿನ್ನೆಲೆ ರಾಜ್ಯಾದ್ಯಂತ ಕರ್ಫ್ಯೂ ವಿಧಿಸಲಾಗಿದ್ದು ನಿಗದಿತ ಅವಧಿಯಲ್ಲಿ ಮಾತ್ರ ದಿನಬಳಕೆ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದಾಗಿರುವುದರಿಂದ ಕೆಲ ಉತ್ಪನ್ನಗಳನ್ನು ಕೊಳ್ಳುವುದು ಕಷ್ಟವಾಗಿದ್ದು, ಗ್ರಾಹಕರ ನಡುವೆ ನಾ ಮುಂದು ತಾ ಮುಂದು ಎಂಬ ಪೈಪೋಟಿ ಏರ್ಪಟ್ಟಿದೆ. ಇದೇ ಸಮಯವನ್ನು ನೋಡಿಕೊಂಡು ಒಂದಷ್ಟು ಕಡೆಗಳಲ್ಲಿ ಅಂಗಡಿಯವರು ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಗುಟ್ಕಾ ಉತ್ಪನ್ನಕ್ಕೆ ಇದೇ ತೆರನಾದ ಬೇಡಿಕೆ ಹುಟ್ಟಿಕೊಂಡಿದ್ದು, ದುಪ್ಪಟ್ಟು ದರಕ್ಕೆ ಗುಟ್ಕಾ ಮಾರುತ್ತಿದ್ದ ಕಾರಣಕ್ಕೆ ಶುರುವಾದ ಮಾತಿನ ಜಗಳ ನಡುಬೀದಿಯಲ್ಲೇ ಹೊಡೆದಾಟಕ್ಕೆ ತಿರುಗಿದ ಘಟನೆ ನಡೆದಿದೆ.
ಲಾಕ್ಡೌನ್ ನಿಮಿತ್ತ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದಾಗಿದ್ದು ಹುಬ್ಬಳ್ಳಿಯಲ್ಲಿ ಗುಟ್ಕಾ ಪದಾರ್ಥಗಳಿಗೆ ಬೇಡಿಕೆ ಜಾಸ್ತಿಯಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ದುಪಟ್ಟು ದರಕ್ಕೆ ಗುಟ್ಕಾ ಮಾರುತ್ತಿದ್ದಾರೆ. ಇಲ್ಲಿನ ಬಾರದಾನ ಸಾಲ್ ಏರಿಯಾದಲ್ಲಿ ಇದೇ ಕಾರಣಕ್ಕೆ ನಾಲ್ಕೈದು ಜನರು ರಸ್ತೆ ಮಧ್ಯದಲ್ಲೇ ಹೊಡೆದಾಡಿಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು ಆರಂಭವಾದ ಗಲಾಟೆ ಹೊಡೆದಾಟಕ್ಕೆ ತಿರುಗಿದ್ದು, ಗುಟ್ಕಾಪ್ರಿಯರ ಬೀದಿ ಕಾಳಗವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಹುಬ್ಬಳ್ಳಿಯ ಘಂಟಿಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಭಾರತದಲ್ಲಿ ಯುದ್ಧಗಳಿಗೆ ಬಲಿಯಾದವರಿಗಿಂತಲೂ ಅಧಿಕ ಮಂದಿ ಕೊರೊನಾದಿಂದ ಸಾವು
ಭಾರತದಲ್ಲಿ ಯುದ್ಧಗಳಲ್ಲಿ ಸತ್ತವರಿಗಿಂತ ಹೆಚ್ಚಿನ ಮಂದಿ ಕೊರೊನಾದಿಂದ ಸಾವಿಗೀಡಾಗುತ್ತಿದ್ದಾರೆ. 1962ರ ಭಾರತ-ಚೀನಾ ಯುದ್ದದಿಂದ ಕಾರ್ಗಿಲ್ ಯುದ್ದದವರೆಗೆ ಎಂಟು ಸಾವಿರ ಯೋಧರು ಹುತಾತ್ಮರಾಗಿದ್ದಾರೆ. ಇನ್ನು, ಕಾಶ್ಮೀರದ ಹಿಂಸಾಚಾರದಿಂದ ಅಂದಾಜು 41 ಸಾವಿರ ಮಂದಿ ಮೃತಪಟ್ಟಿದ್ದಾರೆ. ನಕ್ಸಲ್ ಉಪಟಳದಿಂದ 8,100 ಮಂದಿ ಪ್ರಾಣ ತೆತ್ತಿದ್ದಾರೆ. ಆದರೆ ಈಗ ಕಳೆದೊಂದು ವರ್ಷದಲ್ಲಿ ಕೊರೊನಾ ಸೋಂಕಿನಿಂದ ಎರಡು ಲಕ್ಷಕ್ಕೂ ಅಧಿಕ ಮಂದಿ ಕೊನೆಯುಸಿರೆಳೆದಿದ್ದಾರೆ. ಕೊರೊನಾದಿಂದ ಉದ್ಭವಿಸುತ್ತಿರುವ ಸಾವಿನಿಂದ ಭಾರತ ತತ್ತರಿಸಿದೆ. ಈ ಅನಪೇಕ್ಷಿತ ಬೆಳವಣಿಗೆಗಳ ಸಮ್ಮುಖದಲ್ಲಿ ಆರೋಗ್ಯ ಕ್ಷೇತ್ರದ ಮೇಲೆ ಹೆಚ್ಚಿನ ಹೂಡಿಕೆಯ ಅನಿವಾರ್ಯತೆ ಎದುರಾಗಿದೆ. ಜತೆಗೆ, ಜನಸಾಮಾನ್ಯರು ಸಹ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಕೊರೊನಾ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಸೋಂಕು ನಿಯಂತ್ರಿಸುವತ್ತ ಹೆಚ್ಚಿನ ಗಮನ ನೀಡಬೇಕಿದೆ.
ಇದನ್ನೂ ಓದಿ:
ಕಿಲ್ಲರ್ ಕೊರೊನಾ: ಆ್ಯಂಬುಲೆನ್ಸ್ ಚಾಲಕರಿಂದಲೇ ಅಂತ್ಯಸಂಸ್ಕಾರ, ವಿಡಿಯೋ ನೋಡಿ ವಿದಾಯ ಹೇಳುತ್ತಿರುವ ಕುಟುಂಬಸ್ಥರು
ಕೊರೊನಾ ನೆಗೆಟಿವ್ ಬಂದರೂ ನಿಮ್ಮಲ್ಲಿ ಕೆಲವು ಪ್ರಶ್ನೆಗಳಿರಬಹುದು, ಅವೆಲ್ಲದಕ್ಕೂ ಉತ್ತರ ಇಲ್ಲಿದೆ