ಗದಗ: ನಗರದ ಅತೀ ದೊಡ್ಡ ಕಾಲುವೆ ನಿರ್ಮಾಣದಲ್ಲಿ ಬಾರಿ ಗೋಲ್ಮಾಲ್ ನಡೆದಿರುವ ಆರೋಪ ಸದ್ಯ ಕೇಳಿಬಂದಿದ್ದು, ಇಡೀ ನಗರದ ಕೊಳಚೆ ನೀರನ್ನು ಹೊರಗಡೆ ಕಳಿಸುವ ರಾಜಕಾಲುವೆಯನ್ನು ನಗರಸಭೆ ಅಧಿಕಾರಿಗಳು ಸಂಕುಚಿತಗೊಳಿಸಿದ್ದಾರೆ. ಈಗಾಗಲೇ ಒತ್ತುವರಿಯಾಗಿರುವ ಕಾಲುವೆಯನ್ನ ಮತ್ತೆ ಪುನಃ ಒತ್ತುವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಗದಗ ನಗರದಲ್ಲಿ ನಗರೋತ್ಥಾನದಲ್ಲಿ ಮಂಜೂರಾದ ಕಾಲುವೆ ನಿರ್ಮಾಣದಲ್ಲಿ ಅಧಿಕಾರಿಗಳ ಲೋಪ ಎದ್ದು ಕಾಣಿಸಿದ್ದು, 1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಲುವೆ ನಿರ್ಮಾಣದಲ್ಲಿ ದುಡ್ಡು ಹೊಡೆಯುವ ತಂತ್ರ ನಡೆಸಿದ್ದಾರೆ ಎನ್ನುವ ಆರೋಪ ಈಗ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಹೈಕೋರ್ಟ್ ನಿಯಮ ಮೀರಿ ಕಾಲುವೆ ದುರಸ್ಥಿಗೆ ಅಧಿಕಾರಿಗಳು ಗುತ್ತಿಗೆ ಕೊಟ್ಟಿದ್ದು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಗದಗ-ಬೆಟಗೇರಿ ಅವಳಿ ನಗರದ ಜನರು ಆಗ್ರಹಿಸಿದ್ದಾರೆ.
ಗದಗ ನಗರದ ಹಾತಲಗೇರಿ ನಾಕಾದಲ್ಲಿರುವ ರಾಘವೇಂದ್ರ ಸ್ವಾಮಿ ದೇವಸ್ಥಾನದಿಂದ ಹಿಡಿದು ಕಣಗಿನಹಾಳ ರಸ್ತೆಯವರೆಗೆ 1.50 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜಕಾಲುವೆ ದುರಸ್ತಿ ಮಾಡಲಾಗುತ್ತಿದ್ದು, ಒಟ್ಟು 831 ಮೀಟರ್ ಉದ್ದದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಒಟ್ಟು 40 ಅಡಿ ಅಗಲವಾಗಿರುವ ರಾಜಕಾಲುವೆಯಲ್ಲಿ ಕೇವಲ 10 ಅಡಿ ಕಾಲುವೆಯನ್ನ ನಿರ್ಮಾಣ ಮಾಡಿದ್ದಾರೆ. ಉಳಿದ 30 ಅಡಿ ಜಾಗವನ್ನು ಖಾಲಿ ಬಿಟ್ಟಿರುವುದು ಏಕೆ ಎನ್ನುವ ಪ್ರಶ್ನೆ ಮೂಡಿದೆ.
ಅತಿದೊಡ್ಡದಾದ ರಾಜಕಾಲುವೆಯನ್ನ ಸಂಕುಚಿತಗೊಳಿಸಿ ಮತ್ತಷ್ಟು ಅನಾಹುತಗಳಿಗೆ ಅಧಿಕಾರಿಗಳು ಕಾರಣೀಭೂತರಾಗಿದ್ದಾರೆ. ಕೇವಲ 830 ಅಡಿಯ ಉದ್ದದ ಕಾಲುವೆಗೆ ಅದೂ ಕೇವಲ 10 ಅಡಿ ಅಗಲ ಮಾಡಿ ಕಟ್ಟಿ ದುಡ್ಡು ಹೊಡೆಯುವ ತಂತ್ರ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ಕುರಿತು ತನಿಖೆ ಮಾಡುವಂತೆ ಸ್ಥಳೀಯ ನಿವಾಸಿ ಎಸ್.ಎಮ್. ಅಂಗಡಿ ಮಾಲಿಕರು ಒತ್ತಾಯಿಸಿದ್ದಾರೆ.
ಇನ್ನು ಮಳೆಗಾಲದಲ್ಲಿ ಇಡೀ ರಾಜಕಾಲುವೆ ಪ್ರವಾಹ ಬಂದು ಸಾಕಷ್ಟು ಅವಾಂತರಗಳನ್ನು ಸೃಷ್ಟಿ ಮಾಡುತ್ತದೆ. ಪಕ್ಕದ ಮನೆಗಳಿಗೆ ನೀರು ನುಗ್ಗುವ ಭೀತಿಯೂ ಕೂಡ ಇರಲಿದ್ದು, ರಸ್ತೆಗೆ ಅಡ್ಡಲಾಗಿ ಪ್ರವಾಹ ಬಂದು ಸಂಚಾರಕ್ಕೆ ಅಡತಡೆ ಮಾಡುತ್ತದೆ. ಜೊತೆಗೆ ಕಳೆದ ವರ್ಷ ಓರ್ವ ವ್ಯಕ್ತಿ ಈ ಕಾಲುವೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಸಾಕಷ್ಟು ಬೈಕ್ಗಳು, ವಾಹನಗಳು ಕೊಚ್ಚಿಕೊಂಡು ಹೋಗಿವೆ. ಆದರೆ ಇಷ್ಟೊಂದು ದುರಂತಗಳನ್ನ ತಪ್ಪಿಸುವುದಕ್ಕೆ ಹಾಕಿಕೊಂಡಿರುವ ಈ ಯೋಜನೆ ಕೇವಲ ನೆಪಮಾತ್ರಕ್ಕೆ ಎಂದೆನಿಸಿದೆ.
ಇದರ ಜೊತೆಗೆ ಕಾಲುವೆ ಒತ್ತುವರಿ ಮಾಡಿಕೊಳ್ಳುವ ಭೂಗಳ್ಳರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಾಗಿದೆ. ಹೀಗಾಗಿ ಇದರಲ್ಲಿ ಅಕ್ರಮ ನಡೆದಿರುವ ಬಗ್ಗೆ ಅನುಮಾನ ಮೂಡಿದ್ದು ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜನ ಒತ್ತಾಯಿಸಿದ್ದಾರೆ.
ಇನ್ನು ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಅವರು ಹೇಳುವುದೇ ಬೇರೆ ಮುಳ್ಳು ಕಂಟಿಗಳು ತುಂಬಿ ಪ್ರವಾಹ ಬರ್ತಿದೆ. ಆದರೆ ನೀರು ಸರಾಗವಾಗಿ ಹೋಗುವುದಕ್ಕೆ10 ಅಡಿ ಅಗಲ ಕಾಲುವೆ ಸಾಕು. ಹೀಗಾಗಿ ಇಷ್ಟೇ ನಿರ್ಮಿಸುತ್ತಿದ್ದೇವೆ. ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಮುಂದೆ ಆಗುವ ದೊಡ್ಡ ದುರಂತಗಳಿಗೆ ದೀರ್ಘವಾದ ಪರಿಹಾರವನ್ನು ಮೊದಲೆ ಕೈಗೊಂಡರೆ ಅಧಿಕಾರಿಗಳು ಮಾಡಿರುವ ಕೆಲಸ ಸಾರ್ಥಕವಾಗಬಹುದು. ಆದರೆ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಕೇವಲ ತೋರಿಕೆಗೆ ಕೆಲಸ ಮಾಡಿಸುತ್ತಿರುವುದು ಈ ರಾಜಕಾಲುವೆಯನ್ನು ಒಮ್ಮೆ ಗಮನಿಸಿದರೆ ತಿಳಿಯುತ್ತದೆ.
Published On - 6:13 pm, Sat, 6 February 21