ರಸ್ತೆ ಬದಿಯಲ್ಲಿ ಮಲಗುತ್ತಿದ್ದಾರೆ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು; ವೈರಲ್​ ಫೋಟೋ ನೋಡಿ ಕ್ರಮ ಕೈಗೊಂಡ ಉಡುಪಿ ಜಿಲ್ಲಾಡಳಿತ

|

Updated on: Mar 20, 2021 | 6:52 PM

ಸರಿ ಸುಮಾರು 8,000 ಯುವಕರು ಪರೀಕ್ಷೆಗಾಗಿ ಮೈದಾನಕ್ಕೆ ಬಂದಿದ್ದಾರೆ. ಅವರೆಲ್ಲರಿಗೂ ಹಲವು ಕಡೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಆದರೆ ಅದರಲ್ಲಿ ಕೆಲವರು ಅಲ್ಲಿಗೆ ಹೋಗುತ್ತಿಲ್ಲ ಎಂದು ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆ ಉಪನಿರ್ದೇಶಕ ರೋಶನ್​ ಶೆಟ್ಟಿ ತಿಳಿಸಿದ್ದಾರೆ.

ರಸ್ತೆ ಬದಿಯಲ್ಲಿ ಮಲಗುತ್ತಿದ್ದಾರೆ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು; ವೈರಲ್​ ಫೋಟೋ ನೋಡಿ ಕ್ರಮ ಕೈಗೊಂಡ  ಉಡುಪಿ ಜಿಲ್ಲಾಡಳಿತ
ರಸ್ತೆ ಬದಿಯಲ್ಲೇ ಮಲಗಿರುವ ಅಭ್ಯರ್ಥಿಗಳು
Follow us on

ಉಡುಪಿ: ಇಲ್ಲಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ (ಮಾ.17)ದಿಂದ ಪ್ರಾರಂಭವಾಗಿರುವ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳು ರಸ್ತೆ ಬದಿಯಲ್ಲಿ, ಫೂಟ್​ಪಾತ್​ ಮೇಲೆ ಮಲಗಿ ನಿದ್ದಿಸುತ್ತಿರುವ ವಿಡಿಯೋ, ಫೋಟೋ ವೈರಲ್​ ಆಗುತ್ತಿದೆ. ಇದನ್ನು ನೋಡಿ ನೆಟ್ಟಿಗರು ತುಂಬ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್​ ಕೂಡ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ಯಾಗ್ ಮಾಡಿ ಗಮನಸೆಳೆದಿದ್ದಾರೆ.

ಸೇನಾ ರ‍್ಯಾಲಿಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ರಸ್ತೆ ಬದಿಯಲ್ಲಿ ಮಲಗಿದ ಫೋಟೋಗಳನ್ನು ಶೇರ್ ಮಾಡಿದ ಪ್ರಮೋದ್ ಮಧ್ವರಾಜ್, ಇದು ನಿಜಕ್ಕೂ ದುರದೃಷ್ಟಕರ. ಇಂಥ ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಳ್ಳುವವರಿಗೆ ಆಹಾರ ಮತ್ತು ಆಶ್ರಯದಂಥ ಮೂಲ ಸೌಕರ್ಯಗಳನ್ನು ಕೇಂದ್ರ ರಕ್ಷಣಾ ಇಲಾಖೆ ನೀಡಬೇಕು. ಸೈನ್ಯ ಸೇರಿ ದೇಶ ಸೇವೆ ಮಾಡಬೇಕು ಎಂಬ ಆಸೆ ಹೊತ್ತಿರುವ ಈ ಯುವಕರನ್ನು ನಡೆಸಿಕೊಳ್ಳುವ ಕ್ರಮ ಇದಲ್ಲ ಎಂದು ಬರೆದಿದ್ದಾರೆ. ಹಾಗೇ ಇನ್ನೊಂದು ಟ್ವೀಟ್​ನಲ್ಲಿ, ನಾನು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್​ ಅವರೊಂದಿಗೆ ಮಾತನಾಡಿದ್ದೇನೆ. ಈ ಯುವಕರಿಗೆ ಉಳಿಯಲು, ಊಟಕ್ಕಾಗಿ ವಿವಿಧ ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ ಇವರು ಅದನ್ನು ಬಳಸಿಕೊಳ್ಳುತ್ತಿಲ್ಲ ಎಂದು ನನಗೆ ತಿಳಿಸಿದರು. ಇದೀಗ ಯುವಕರಿಗೆ ಸರಿಯಾದ ಮಾರ್ಗದರ್ಶನ ಮಾಡಿ, ವ್ಯವಸ್ಥೆ ಮಾಡಲಾದ ಸ್ಥಳಗಳಿಗೆ ಹೋಗುವಂತೆ ತಿಳಿಸಲು ಪೊಲೀಸರಿಗೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಹಾಗೇ, ಸೇನಾ ನೇಮಕಾತಿ ಶಿಬಿರದಲ್ಲಿ ಪಾಲ್ಗೊಂಡ ಯುವಕರಿಗೆ ಎಲ್ಲ ವ್ಯವಸ್ಥೆಯನ್ನೂ ಸರಿಯಾಗಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್​ ಕೂಡ ಸ್ಪಷ್ಟಪಡಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆ ಉಪನಿರ್ದೇಶಕ ರೋಶನ್​ ಶೆಟ್ಟಿ, ಈ ಸೇನಾ ನೇಮಕಾತಿ ರ‍್ಯಾಲಿ ಯಶಸ್ವಿಯಾಗಬೇಕು. ಇದರಲ್ಲಿ ಪಾಲ್ಗೊಳ್ಳುವವರಿಗೆ ಯಾವುದೇ ಕಷ್ಟವಾಗಬಾದರು ಎಂದು ಕಳೆದ ಹಲವು ದಿನಗಳಿಂದಲೂ ನಾವು ಪ್ರಯತ್ನ ಮಾಡುತ್ತಿದ್ದೇವೆ. ಸರಿ ಸುಮಾರು 8,000 ಯುವಕರು ಪರೀಕ್ಷೆಗಾಗಿ ಮೈದಾನಕ್ಕೆ ಬಂದಿದ್ದಾರೆ. ಅವರೆಲ್ಲರಿಗೂ ಹಲವು ಕಡೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಆದರೆ ಅದರಲ್ಲಿ ಕೆಲವರು ಅಲ್ಲಿಗೆ ಹೋಗುತ್ತಿಲ್ಲ. ಬೆಳಗ್ಗೆ ಬೇಗ ಎದ್ದು, ಆದಷ್ಟು ಬೇಗನೇ ಪರೀಕ್ಷೆಗೆ ಒಳಪಡಬೇಕು ಎಂಬ ಕಾರಣಕ್ಕೆ ಕ್ರೀಡಾಂಗಣದ ಆಸುಪಾಸಿನಲ್ಲೇ ಮಲಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಅಭ್ಯರ್ಥಿಗಳು ರಸ್ತೆ ಬದಿಯಲ್ಲಿ ಮಲಗುತ್ತಿರುವುದು ನಮ್ಮ ಗಮನಕ್ಕೂ ಬಂದಿದ್ದು, ಈ ಬಗ್ಗೆ ಜಿಲ್ಲಾಡಳಿತ ಸಭೆ ಕೂಡ ನಡೆಸಿದೆ. ಇನ್ನಷ್ಟು ವಸತಿ ವ್ಯವಸ್ಥೆ ಮಾಡಲು ನಿರ್ಧರಿಸಿದ್ದೇವೆ. ಇನ್ನು ಯಾರೂ ರಸ್ತೆ ಬದಿ ಮಲಗದಂತೆ ನೋಡಿಕೊಳ್ಳಲು ಪೊಲೀಸರನ್ನೂ ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.